ಮಂಗಳವಾರ, ಮೇ 24, 2022
24 °C

ನಾಮಫಲಕದಲ್ಲಿ ಹೆಸರು ಅಳಿಸಿದ ಕಿಡಿಗೇಡಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಪಟ್ಟಣದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಚ್ಚಲು ಶಿವರಾಜು ಅವರ ಹೆಸರನ್ನು ಶಾಲಾ ಕಟ್ಟಡದ ಉದ್ಘಾಟನೆಯ ನಾಮಫಲಕದಿಂದ ಅಳಿಸಿ ಹಾಕಿರುವ ಘಟನೆ ತಾಲ್ಲೂಕಿನ ಸಾತನೂರು ಹೋಬಳಿ ಅಚ್ಚಲು ಗ್ರಾಮದಲ್ಲಿ ನಡೆದಿದೆ.ಈ ಕುರಿತಂತೆ ಶಾಲೆಯ ಮುಖ್ಯ ಶಿಕ್ಷಕ ಹೊನ್ನೇಗೌಡ ಅವರು ಸಾತನೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶಾಲೆಯ ಕಟ್ಟಡ ಪ್ರಾರಂಭವಾಗಿ ನಾಲ್ಕು ತಿಂಗಳಾಗಿದೆ. ಕಟ್ಟಡ ಉದ್ಘಾಟನೆಯ ನಾಮಫಲಕದಲ್ಲಿ ಶಿವರಾಜು ಹೆಸರನ್ನು ಅಂದು ಶಿಷ್ಟಾಚಾರದ ಪ್ರಕಾರ ಸೇರಿಸಲಾಗಿತ್ತು. ಆದರೆ ಶುಕ್ರವಾರ ರಾತ್ರಿ ಈ ಹೆಸರನ್ನು ಫಲಕದಿಂದ ಒಡೆದು ಹಾಕಲಾಗಿದೆ.

ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹ`ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿರುವ ನನ್ನ ಹೆಸರನ್ನು ನಾಮಫಲಕದಿಂದ ತೆಗೆದು ಹಾಕಿರುವುದು ನನ್ನ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ' ಎಂದು ಅಚ್ಚಲು ಶಿವರಾಜು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.`ರಾಜಕೀಯ ವೈಷಮ್ಯವೇ ಈ ಘಟನೆಗೆ ಕಾರಣ. ಅಚ್ಚಲು ಗ್ರಾಮದವರೇ ಆದ ನಟೇಶ್ ಎಂಬುವವರು ನಾಮಫಲಕದಲ್ಲಿ ನನ್ನ ಹೆಸರು ಹಾಕದಂತೆ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಮನೋಹರ್ ಮತ್ತು ಶಾಲೆಯ ಮುಖ್ಯ ಶಿಕ್ಷಕ ಹೊನ್ನೇಗೌಡ ಅವರ ಮೇಲೆ ಆವತ್ತೇ ಒತ್ತಡ ಹೇರಿದ್ದರು. ಒಂದು ವೇಳೆ ಹೆಸರು ಮುದ್ರಿಸಿದರೆ ಹೆಸರನ್ನು ಒಡೆದು ಹಾಕುವುದಾಗಿ ಅವರು ಎಚ್ಚರಿಸಿದ್ದರು. ಆದ್ದರಿಂದಲೇ ಕಟ್ಟಡ ಉದ್ಘಾಟನೆಗೊಂಡು ಮೂರು ತಿಂಗಳಾದರೂ ನಾಮಫಲಕ ಹಾಕಿರಲಿಲ್ಲ. ನಾನೇ ಹೇಳಿದ ಮೇಲೆ ಇತ್ತೀಚೆಗೆ ನಾಮಫಲಕದಲ್ಲಿ ನನ್ನ ಹೆಸರು ಮುದ್ರಿಸಿ ಹಾಕಲಾಗಿತ್ತು. ಇದನ್ನು ಸಹಿಸದ ನಟೇಶ್ ಹೆಸರನ್ನು ಒಡೆದು ಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಟೇಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಶಿವರಾಜು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.