ಭಾನುವಾರ, ಮೇ 9, 2021
18 °C

ನಿತ್ಯದ ಬದುಕಿಗೊಂದು ಬಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾಕೃತಿಯೊಂದು ಕುಡಿಯುವ ಕಾಫಿಕಪ್ ಮೇಲೆ ಕುಳಿತರೆ? ಪೆನ್ನುಗಳನ್ನಿಡುವ ಬಟ್ಟಲಿನ ಸುತ್ತ ಗೆರೆಗಳು ಇರುವಂತಿದ್ದರೆ? ಮೇಜಿನ ವಸ್ತ್ರದ ತುಂಬ ಬಣ್ಣದ ಲೋಕ ಮೇಜವಾನಿ ಮಾಡುವಂತಿದ್ದರೆ?

ಕಲೆ ನಮ್ಮ ಸುತ್ತಲಿನ ಪರಿಸರವನ್ನು ಆವರಿಸಿಕೊಳ್ಳಬೇಕು, ನಿತ್ಯದ ಬದುಕಿನಲ್ಲಿ ಒಂದಾಗಬೇಕು. ಇಂಥ ಕನಸಿನೊಂದಿಗೆ ಕುಂಚ ಹಿಡಿದವರು ಕಲಾವಿದೆ ಸಂಗೀತಾ ಘೋಷಾಲ್. ನಗರದ ನಂದಿದುರ್ಗ ರಸ್ತೆಯಲ್ಲಿರುವ `ಅಂಡರ್ ದ ಟ್ರೀ ಗ್ಯಾಲರಿ~ಯಲ್ಲಿ ಅವರ ವಿಶಿಷ್ಟ ಕಲಾಕೃತಿಗಳ ಪ್ರದರ್ಶನ ಶುಕ್ರವಾರದಿಂದ ಆರಂಭವಾಗಿದೆ. ಗೃಹ ಬಳಕೆಯ ವಸ್ತುಗಳ ಮೇಲೆ ಅವರು ಕುಂಚ ಓಡಿಸಿದ್ದಾರೆ, ಬಣ್ಣಗಳೊಂದಿಗೆ ಆಟವಾಡಿದ್ದಾರೆ.

ಸಂಗೀತಾ ಹುಟ್ಟೂರು ಕೋಲ್ಕತ್ತಾ. ಪತಿಯ ಜತೆ ಬೆಂಗಳೂರಿಗೆ ಬಂದಾಗ ಅವರಿಗೆ ಕನ್ನಡ ಗೊತ್ತಿರಲಿಲ್ಲ. ಜಾಹೀರಾತು ಏಜೆನ್ಸಿಯೊಂದನ್ನು ತೆರೆದ ಅವರಿಗೆ ಕನ್ನಡದ ಒಡನಾಟ ಹೆಚ್ಚಿತು. ಕೋಲ್ಕತ್ತಾಕ್ಕೆ ಹೋದಾಗ ಬಂಗಾಳಿ, ಬೆಂಗಳೂರಿನಲ್ಲಿದ್ದಾಗ ಕನ್ನಡ ಇನಿದನಿಯಾಯಿತು. ಸುಮಾರು 25 ವರ್ಷಗಳ ಹಿಂದೆ ಕಲಾಭ್ಯಾಸ. ಕಲೆಯಲ್ಲಿ ಡಿಪ್ಲೊಮಾ ಪದವಿ. ಲಾಲೂ ಪ್ರಸಾದ್ ಸಾವ್, ಸುಹಾಸ್ ರಾಯ್, ಧರ್ಮನಾರಾಯಣ್ ದಾಸ್‌ಗುಪ್ತಾ, ಕಾರ್ತಿಕ್ ಪೈನೆ ಮುಂತಾದ ಕಲಾವಿದರಿಂದ ಕಲಿಕೆ. 

ಅಮೂರ್ತ ಕಲೆಯನ್ನೇ ಧ್ಯಾನಿಸಿದವರು ಅವರು. ಬಾಲ್ಯ ಮತ್ತು ಯೌವನದಲ್ಲಿ ಕಂಡ ಬದುಕು ಅವರ ಕಲಾಕೃತಿಗಳನ್ನು ಆವರಿಸಿದೆ. ಅವರದು ಕೂಡು ಕುಟುಂಬ. 20 ಕೋಣೆಗಳಿರುವ ದೊಡ್ಡಮನೆಯೇ ಅವರ ಕಲಾನೆಲೆ. ಹಿತ್ತಲು, ಹಸಿರು, ಹೂ ಹಣ್ಣಗಳ ಜಗತ್ತು ಅವರಿಗೆ ಮಾಂತ್ರಿಕ ಲೋಕವನ್ನು ಪರಿಚಯಿಸಿತು.

ಪ್ರದರ್ಶನಕ್ಕೆ ಇವರು ನೀಡಿರುವ ಹೆಸರು `ಕಲರ್ಸ್‌ ಆಫ್ ಲೈಫ್~. ಮಗ್‌ಗಳು, ಗೋಡೆಯ ಅಂದ ಹೆಚ್ಚಿಸುವ ಹ್ಯಾಂಗಿಂಗ್ ಕಲಾಕೃತಿಗಳ ಮೂಲಕ ಕಲೆಯನ್ನು ಸಹೃದಯರ ಸಮೀಪಕ್ಕೆ ತರುವ ಯತ್ನ ಅವರದು. ಪ್ರದರ್ಶನದಲ್ಲಿ  `ಸನ್ ಸೆಟ್ ಇನ್ ದ ವಾಟರ್~, `ಫೋರ್ ಮೆನ್ ಇನ್ ದ ಪೂಲ್~, `ಮಾರ್ಷ್‌ಮಲೋ ಡ್ರೀಮ್ಸ~ ಹಾಗೂ `ಪಿಕೆಟ್ ಫೆನ್ಸಸ್~ ಹೀಗೆ ನಾಲ್ಕು ಪೇಂಟಿಂಗ್‌ಗಳನ್ನೂ ಕಾಣಬಹುದು.

ಗೃಹ ಬಳಕೆಯ ವಸ್ತುಗಳೇ ನಿಮ್ಮ ಕ್ಯಾನ್‌ವಾಸ್ ಆದದ್ದು ಹೇಗೆ ಎಂಬ ಪ್ರಶ್ನೆಗೆ ಅವರ ಉತ್ತರ: ಕಲೆ ಕೇವಲ ದಂತಗೋಪುರದಲ್ಲಿರಬಾರದು. ಅನೇಕ ಕಲಾಕೃತಿಗಳು ಜನ ಸಾಮಾನ್ಯರಿಗೆ ತಲುಪದೇ ಇರಲು ಕಾರಣ ಅವುಗಳ ವಿಪರೀತ ಬೆಲೆ. ಹಾಗಾಗಿ ಕಡಿಮೆ ಬೆಲೆಗೆ ಸಿಗುವ ನಿತ್ಯ ಬಳಕೆಯ ವಸ್ತುಗಳನ್ನು ಬಳಸಿಕೊಂಡಿದ್ದೇನೆ.

ಶುಕ್ರವಾರದಿಂದ ಮೂರು ದಿನಗಳ ಕಾಲ ಪ್ರದರ್ಶನ ನಡೆಯಲಿದೆ. ವಿಳಾಸ: ದ ಟ್ರೀ ಗ್ಯಾಲರಿ, ಮೊದಲನೇ ಮಹಡಿ, (ನೀಲಾದ್ರಿ ಮಹಲ್ ಅಪಾರ್ಟ್‌ಮೆಂಟ್ ಎದುರು), 27/34, ನಂದಿದುರ್ಗ ರಸ್ತೆ. ಸಮಯ: ಬೆಳಿಗ್ಗೆ 10.30ರಿಂದ ಸಂಜೆ 7.30

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.