ಭಾನುವಾರ, ಮೇ 16, 2021
26 °C
ಹಳೆಯ ಬಡಾವಣೆಯಲ್ಲಿ ಬದಲಿ ನಿವೇಶನ

ನಿಯಮ ಉಲ್ಲಂಘಿಸಿ ನಿವೇಶನ ಹಂಚಿದ ಬಿಡಿಎ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಬದಲಿ ನಿವೇಶನ ಹಂಚಿಕೆಯ ನಿಯಮಗಳನ್ನು ಗಾಳಿಗೆ ತೂರಿ ಬನಶಂಕರಿ ಮೂರನೇ ಹಂತದಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಹಲಸೂರಿನ ಜೋಗುಪಾಳ್ಯದ ಪ್ರೇಮಾವತಿ ಎಂಬುವರಿಗೆ ಹೊಸದಾಗಿ ಅಭಿವೃದ್ಧಿಯಾದ ಬಡಾವಣೆಯಿಂದ ಹಳೆಯ ಬಡಾವಣೆಯಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಬಿಡಿಎ ನಿವೇಶನ ಹಂಚಿಕೆ ನಿಯಮಗಳನ್ನು ಗಾಳಿಗೆ ತೂರಿ ಈ ಬದಲಿ ನಿವೇಶನ ಮಂಜೂರು ಮಾಡಲಾಗಿದೆ.ಬನಶಂಕರಿ ನಿವಾಸಿ ಹನುಮಂತಪ್ಪ ಎಂಬುವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ದಾಖಲೆಗಳಿಂದ ಈ ಮಾಹಿತಿ ಬಯಲಾಗಿದೆ. 1980ರಲ್ಲಿ ನಿರ್ಮಾಣವಾದ ಎಚ್.ಬಿ.ಆರ್ ಬಡಾವಣೆ 1ನೇ ಹಂತ, 4ನೇ ಬ್ಲಾಕ್‌ನಲ್ಲಿ ಪ್ರೇಮಾವತಿ ಅವರಿಗೆ `1243' ಸಂಖ್ಯೆ ನಿವೇಶನವನ್ನು ಮಂಜೂರು ಮಾಡಲಾಗಿತ್ತು. ಈ ನಿವೇಶನದ ಬದಲಿಗೆ ಬದಲಿ ನಿವೇಶನವನ್ನು ನೀಡಬೇಕು ಎಂದು ಅವರು ಬಿಡಿಎಗೆ ಮನವಿ ಸಲ್ಲಿಸಿದ್ದರು. ಈ ಮನವಿಯ ಆಧಾರದ ಮೇಲೆ ಬಿಡಿಎ ಅಧಿಕಾರಿಗಳು ಎಚ್.ಆರ್.ಬಿ.ಆರ್ ಬಡಾವಣೆಯ 1ನೇ ಬ್ಲಾಕ್‌ನ `5ಎಸಿ-902/ಎ' ಸಂಖ್ಯೆಯ ನಿವೇಶನವನ್ನು 2012ರಲ್ಲಿ ಬದಲಿ ನಿವೇಶನವಾಗಿ ಮಂಜೂರು ಮಾಡಿದ್ದರು. ಆದರೆ, ಮರು ಹಂಚಿಕೆ ಮಾಡಿದ ನಿವೇಶನ ಮೂಲೆ ನಿವೇಶನವಾಗಿದ್ದು, ಇದರ ಬದಲಿಗೆ ಬನಶಂಕರಿ 3ನೇ ಹಂತ, 3ನೇ ಘಟ್ಟ, 6ನೇ ಬ್ಲಾಕ್‌ನ `6/ಎ' ಸಂಖ್ಯೆ ನಿವೇಶನ ಮಂಜೂರು ಮಾಡುವಂತೆ ಪುನಃ ಬಿಡಿಎಗೆ ಮನವಿ ಸಲ್ಲಿಸಿದ್ದರು.ಪ್ರೇಮಾವತಿ ಅವರ ಮನವಿಯ ಮೇರೆಗೆ ಅವರು ಕೋರಿದ್ದ ಬನಶಂಕರಿಯ ನಿವೇಶನವನ್ನು ಬಿಡಿಎ ಅಧಿಕಾರಿಗಳು ಇದೇ ಏಪ್ರಿಲ್‌ನಲ್ಲಿ ಮಂಜೂರು ಮಾಡಿದ್ದಾರೆ. ಆದರೆ, ಬನಶಂಕರಿ 3ನೇ ಹಂತ, 3ನೇ ಘಟ್ಟ, 6ನೇ ಬ್ಲಾಕ್‌ನಲ್ಲಿ `6/ಎ' ನಿವೇಶನ ಸಂಖ್ಯೆಯೇ ಇಲ್ಲವೆಂದು ಬಿಡಿಎ ಉಪಕಾರ್ಯದರ್ಶಿ-2 ಅವರು 2010ರ ಏಪ್ರಿಲ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೇ 1973ರಲ್ಲಿ ನಿರ್ಮಾಣವಾದ ಈ ಹಳೆಯ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಿ ಪ್ರಾಧಿಕಾರವು ನಿಯಮ ಉಲ್ಲಂಘಿಸಿದೆ.ನಿಯಮಬಾಹಿರ: `ಇಲ್ಲದೇ ಇರುವ ನಿವೇಶನ ಸಂಖ್ಯೆಯನ್ನು ಅಕ್ರಮವಾಗಿ ಸೃಷ್ಟಿಸಿ ಅಧಿಕಾರಿಗಳು ಬದಲಿ ನಿವೇಶನ ನೀಡಿದ್ದಾರೆ. ಪ್ರೇಮಾವತಿ ಅವರಿಂದ ಹಣ ಪಡೆದು ಹಳೆ ಬಡಾವಣೆಯಾದ ಬನಶಂಕರಿ 3ನೇ ಹಂತ, 3ನೇ ಘಟ್ಟ, 6ನೇ ಬ್ಲಾಕ್‌ನ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಾಗಿದೆ. ಆದರೆ, ಎಚ್.ಬಿ.ಆರ್ ಮತ್ತು ಎಚ್.ಆರ್.ಬಿ.ಆರ್ ಬಡಾವಣೆಗಳು ನಿರ್ಮಾಣವಾಗಿರುವುದು 1980ರ ನಂತರ. ಹೊಸ ಬಡಾವ ನಿವೇಶನದ ಬದಲಿಗೆ ಹಳೆಯ ಬಡಾವಣೆಯಲ್ಲಿ    ಬದಲಿ ನಿವೇಶನ ನೀಡಿರುವುದು ನಿಯಮ ಬಾಹಿರ' ಎಂದು ಹನುಮಂತಪ್ಪ ಆರೋಪಿಸಿದ್ದಾರೆ.`ಬನಶಂಕರಿಯಲ್ಲಿ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ಭೂಮಿ ಸ್ವಾಧೀನ ಪಡಿಸಿಕೊಂಡಿರುವ ಕತ್ತರಿಗುಪ್ಪೆ ಸರ್ವೆ ನಂ. 92 ಮತ್ತು 93/3ರ ಜಮೀನಿನ ವಿಚಾರವು ಹೈಕೋರ್ಟ್‌ನಲ್ಲಿದೆ. ನ್ಯಾಯಾಲಯದಿಂದ ವಿಷಯ ಇತ್ಯರ್ಥವಾಗುವ ಮುನ್ನವೇ ಇದೇ ಸರ್ವೆ ನಂಬರ್‌ಗಳಲ್ಲಿರುವ ನಿವೇಶನವನ್ನು ಬಿಡಿಎ ಅಧಿಕಾರಿಗಳು ಪ್ರೇಮಾವತಿ ಅವರಿಗೆ ಬದಲಿ ನಿವೇಶನವಾಗಿ ಮಂಜೂರು ಮಾಡುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ. ನಿವೇಶನ ಮರು ಹಂಚಿಕೆಯ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು. ಬಿಡಿಎಯಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಬೇಕು' ಎಂದು ಅವರು ಒತ್ತಾಯಿಸಿದ್ದಾರೆ.ನಿಯಮ ಉಲ್ಲಂಘಿಸಿದ್ದರೆ ಹಂಚಿಕೆ ರದ್ದು

`ಪ್ರೇಮಾವತಿ ಅವರಿಗೆ ಬದಲಿ ನಿವೇಶನ ನೀಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಕತ್ತರಿಗುಪ್ಪೆ ಸರ್ವೆ ನಂ.92 ಮತ್ತು 93/3ರ ಜಮೀನಿನ ವಿಷಯ ನ್ಯಾಯಾಲಯದಲ್ಲಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘನೆಯಾಗಿದ್ದರೆ ಹಂಚಿಕೆ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು'

- ಶ್ಯಾಮ್ ಭಟ್, ಆಯುಕ್ತರು,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಜಮೀನು ಹಂಚಿಕೆಯಲ್ಲಿ ಭಾರಿ ಅವ್ಯವಹಾರ: ಆರೋಪ

ಬೆಂಗಳೂರು:
`ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪ್ರಾಧಿಕಾರದ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಹಂಚಿಕೆ ಮಾಡಲಾದ ಜಮೀನಿಗೆ ಸಂಬಂಧಿಸಿದಂತೆ ಭಾರಿ ಮೊತ್ತದ ಅವ್ಯವಹಾರ ನಡೆದಿದೆ. ಈ ಕುರಿತು ತನಿಖೆ ನಡೆಸಬೇಕು' ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಬಿ.ಎಂ. ಶಿವಕುಮಾರ್ ಒತ್ತಾಯಿಸಿದರು.ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಎ ಆಯುಕ್ತರು ಮೇ 27 ರಂದು ನೀಡಿರುವ ಆದೇಶದ ಅನ್ವಯ ಜೂನ್ 4ರಂದು ಬಿಡಿಎ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ 2 ಎಕರೆ 35 ಗುಂಟೆ ಭೂಮಿಯನ್ನು ನೋಂದಾವಣೆ ಮಾಡಲಾಗಿದೆ ಎಂದರು.  ಬನಶಂಕರಿ ಐದನೇ ಹಂತದ ಬಡಾವಣೆಯಲ್ಲಿ ನೂರು ಕೋಟಿ ಮೌಲ್ಯದ 2 ಎಕರೆ 35 ಗುಂಟೆ (11,599 ಚದರ ಅಡಿ) ಭೂಮಿಯನ್ನು ಕೇವಲ ಕೇವಲ ರೂ8.60 ಲಕ್ಷಕ್ಕೆ ನೋಂದಣಿ ಮಾಡಲಾಗಿದೆ. ಒಂದು ಚದರ ಅಡಿಗೆ ಮಾರುಕಟ್ಟೆ ಬೆಲೆ ಸುಮಾರು  ರೂ7 ಸಾವಿರ ಬೆಲೆ ಬಾಳುವ ಭೂಮಿಯನ್ನು ರೂ6.87 ರಂತೆ ಹಂಚಿಕೆ ಮಾಡಲಾಗಿದೆ.ಇದರಿಂದಾಗಿ ಪ್ರಾಧಿಕಾರಕ್ಕೆ ನೂರು ಕೋಟಿಗೂ ಅಧಿಕ ನಷ್ಟವಾಗಿದೆ ಎಂದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೌಕರರ ಕ್ಷೇಮಾಭಿವೃದ್ಧಿ ಸಂಘದಲ್ಲಿ 712 ಮಂದಿ ನೌಕರರಿದ್ದಾರೆ. 2006ರಲ್ಲಿ ಸುವರ್ಣ ಕರ್ನಾಟಕ ಯೋಜನೆ ಅಡಿಯಲ್ಲಿ ದೊಡ್ಡಬಿದರಕಲ್ಲು ಮತ್ತು ಲಿಂಗದೀರನಹಳ್ಳಿಯಲ್ಲಿ  42 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಈ ಜಮೀನಿನಲ್ಲಿ ಸಾವಿರ ನಿವೇಶನಗಳನ್ನು ನಿರ್ಮಿಸಲಾಗಿದೆ. ನಿವೇನಗಳನ್ನು 712 ನೌಕರರಿಗೆ ಹಂಚಿದರೂ 250ಕ್ಕೂ ಅಧಿಕ ನಿವೇಶನಗಳು ಉಳಿಯಬೇಕಿತ್ತು. ಈ ನಿವೇಶನಗಳನ್ನು ಖಾಸಗಿ ವ್ಯಕ್ತಿಗಳಿಗೆ ಸಂಘದ ಅಧಿಕಾರಿಗಳು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ ಎಂದರು.ಅವ್ಯವಹಾರ ನಡೆದಿಲ್ಲ: `ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೌಕರರ ಸಂಘಕ್ಕೆ ಹೊಸದಾಗಿ ಯಾವುದೇ ಜಮೀನು ಮಂಜೂರಾಗಿಲ್ಲ. 2006 ರಲ್ಲಿ ಮಂಜೂರಾದ ಜಮೀನನ್ನು ಈಗ ನೋಂದಣಿ ಮಾಡಿಕೊಳ್ಳಲಾಗಿದೆ. ಸಂಘದ ನೌಕರರಿಗೆ ಆದ್ಯತೆ ಮೇರೆಗೆ ನಿವೇಶನವನ್ನು ಹಂಚಿಕೆ ಮಾಡಲಾಗುತ್ತಿದೆ. ಈ ಸಂಬಂಧ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬೆಟ್ಟೇಗೌಡ ಸ್ಪಷ್ಟಪಡಿಸಿದ್ದಾರೆ.ಪ್ರಾಧಿಕಾರಕ್ಕೆ ನಷ್ಟವಾಗಿಲ್ಲ

`ಬಿಡಿಎ ನೌಕರರ ಸಂಘಕ್ಕೆ 2006ರಲ್ಲಿ 45 ಎಕರೆ ಜಮೀನನ್ನು ಮಂಜೂರು ಮಾಡಲಾಗಿತ್ತು. ಒಂದೇ ಭಾಗದಲ್ಲಿ ಅಷ್ಟು ಭೂಮಿ ಲಭ್ಯವಾಗದ ಕಾರಣ ಹಂತ ಹಂತವಾಗಿ ಜಮೀನನ್ನು ಹಂಚಿಕೆ ಮಾಡಲಾಗಿದೆ. 2006ರ ನವೆಂಬರ್‌ನಲ್ಲಿ 27 ಎಕರೆ, 2007ರ ಜೂನ್‌ನಲ್ಲಿ 7 ಎಕರೆ, 2007ರ ನವೆಂಬರ್‌ನಲ್ಲಿ 5 ಎಕರೆ, 2011ರ ಜೂನ್‌ನಲ್ಲಿ 3 ಎಕರೆ ಮತ್ತು ಈ ವರ್ಷದ ಜೂನ್‌ನಲ್ಲಿ 2 ಎಕರೆ, 35 ಗುಂಟೆ ಜಮೀನನ್ನು ನಗರದ ವಿವಿಧ ಕಡೆ ಮಂಜೂರು ಮಾಡಲಾಗಿದೆ. ಅಲ್ಲದೆ ಪ್ರತಿ ಎಕರೆಗೆ ರೂ2.80 ಲಕ್ಷದಂತೆ, 45 ಎಕರೆಗೆ ರೂ1.26 ಕೋಟಿ ಹಣವನ್ನು 2006ರಲ್ಲಿ ಅಂದಿನ ಮಾರುಕಟ್ಟೆಯ ಅಂದಾಜು ಬೆಲೆಗೆ ಕಟ್ಟಿಸಿಕೊಳ್ಳಲಾಗಿತ್ತು.ಇದರಿಂದಾಗಿ ಪ್ರಾಧಿಕಾರಕ್ಕೆ ಯಾವುದೇ ನಷ್ಟವಾಗಿಲ್ಲ' ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಶ್ಯಾಮ್‌ಭಟ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.