ಶನಿವಾರ, ಜನವರಿ 18, 2020
26 °C

ನಿರುದ್ಯೋಗ ಹತಾಶೆ: ಯುವಕ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಲಸ ಸಿಗಲಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಸಹೋದರರಲ್ಲಿ ಒಬ್ಬ ಸಾವನ್ನಪ್ಪಿ ಮತ್ತೊಬ್ಬ ಅಸ್ವಸ್ಥಗೊಂಡಿರುವ ಘಟನೆ ನಗರ ರೈಲು ನಿಲ್ದಾಣದ ರೈಲ್ವೆ ಸ್ಟೋರ್ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದಿದೆ.ಅಸ್ಸಾಂ ಮೂಲದ ಸಂತಾನು ಸೇಥಿಯ (28) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ತಮ್ಮ ಇಂದೂಸನ್ ಸೇಥಿಯ (24) ಅಸ್ವಸ್ಥಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕೆಲಸ ಹುಡುಕಿಕೊಂಡು ಜ.19ರಂದು ನಗರಕ್ಕೆ ಬಂದಿದ್ದ ಅವರಿಬ್ಬರು ಕಾಟನ್‌ಪೇಟೆಯ ವಸತಿಗೃಹದಲ್ಲಿ ಉಳಿದುಕೊಂಡಿದ್ದರು. ಹಲವೆಡೆ ಪ್ರಯತ್ನ ನಡೆಸಿದ್ದರೂ ಅವರಿಗೆ ಕೆಲಸ ಸಿಕ್ಕಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಅವರು ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಬಿನ್ನಿ ಮಿಲ್ ಸಮೀಪದ ರೈಲ್ವೆ ಸ್ಟೋರ್ ಪ್ರದೇಶಕ್ಕೆ ಬಂದು ಬ್ಲೇಡ್‌ನಿಂದ ಕೈ ಕೊಯ್ದುಕೊಂಡಿದ್ದಾರೆ. ಆ ನಂತರ ಸಂತಾನು ಅವರು ಸಮೀಪದಲ್ಲೇ ಇದ್ದ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಎಡಗೈ ಕೊಯ್ದುಕೊಂಡು ಅಸ್ವಸ್ಥಗೊಂಡಿದ್ದ ಇಂದೂಸನ್ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲಸ ಸಿಗದ ಕಾರಣ ಮನನೊಂದು ಸಹೋದರನ ಜತೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಗಿ ಇಂದೂಸನ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ನಗರ ರೈಲು ನಿಲ್ದಾಣ ಪೊಲೀಸ್ ಠಾಣೆ ಎಸ್‌ಐ ಸುಬ್ಬಣ್ಣ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದೆ.ಯುವಕನ ಕೊಲೆ

ಯುವಕನಿಗೆ ಆತನ ಸ್ನೇಹಿತರೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಾಯಂಡಹಳ್ಳಿ ಸಮೀಪದ ಪಂತರಪಾಳ್ಯ ಕೊಳೆಗೇರಿಯಲ್ಲಿ ಶನಿವಾರ ರಾತ್ರಿ ನಡೆದಿದೆ.ಪಂತರಪಾಳ್ಯ ಕೊಳೆಗೇರಿ ನಿವಾಸಿ ರಾಜೇಶ್ (22) ಕೊಲೆಯಾದ ಯುವಕ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದ ರಾಜೇಶ್ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಡಕಾಯಿತಿ ಯತ್ನ ಮತ್ತು ಜೇಬುಗಳ್ಳತನ ಪ್ರಕರಣಗಳು ದಾಖಲಾಗಿದ್ದವು. ಜೇಬುಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಗೇರಿ ಪೊಲೀಸರು 2010ರ ಅಕ್ಟೋಬರ್‌ನಲ್ಲಿ ಆತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು. ನ್ಯಾಯಾಲಯದಲ್ಲಿ ಆ ಪ್ರಕರಣದ ವಿಚಾರಣೆ ನಡೆದು ಇತ್ತೀಚೆಗಷ್ಟೇ ಆತ ಖುಲಾಸೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ರಾಜೇಶ್ ಮತ್ತು ಆತನ ಸ್ನೇಹಿತ ಎಬೆಲ್ ಎಂಬಾತನ ನಡುವೆ ರಾತ್ರಿ ವಾಗ್ವಾದ ನಡೆದು ಜಗಳವಾಗಿತ್ತು. ಇದರಿಂದ ಕೋಪಗೊಂಡ ಎಬೆಲ್ ತನ್ನ ಸ್ನೇಹಿತರ ಜತೆ ಸೇರಿ ರಾಜೇಶ್‌ನ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.`ಎಬೆಲ್ ಸಹ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು, ಆತನ ವಿರುದ್ಧ ಜೇಬುಗಳ್ಳತನ ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ಬಗ್ಗೆ ಮಾಹಿತಿ ಇದ್ದು, ಶೀಘ್ರವೇ ಅವರನ್ನು ಬಂಧಿಸಲಾಗುತ್ತದೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳವು


ಮನೆಯ ಬಾಗಿಲು ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಚಿನ್ನದ ಸರ ಕಳವು ಮಾಡಿರುವ ಘಟನೆ ಕೆ.ಆರ್.ಪುರ ಸಮೀಪದ ಅಕ್ಷಯನಗರದಲ್ಲಿ ನಡೆದಿದೆ.ಅಕ್ಷಯನಗರ 10ನೇ ಮುಖ್ಯರಸ್ತೆ ನಿವಾಸಿ ಶ್ರೀಧರನ್ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ. ಅವರು ಜ.20ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸದಸ್ಯರೊಂದಿಗೆ ಸಂಬಂಧಿಕರ ಊರಿಗೆ ಹೋಗಿದ್ದರು.ದುಷ್ಕರ್ಮಿಗಳು ಈ ಸಂದರ್ಭದಲ್ಲಿ ಅವರ ಮನೆಗೆ ನುಗ್ಗಿ 18 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಚಿನ್ನಾಭರಣ ವಶ


ನಗರದ ಎಚ್‌ಬಿಆರ್ ಲೇಔಟ್ ಸಮೀಪ ಆಟೊದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಬೆನ್ನಟ್ಟಿದ ಕಾಡುಗೊಂಡನಹಳ್ಳಿ ಪೊಲೀಸರು ನಗದು ಸೇರಿದಂತೆ ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಕಾಡುಗೊಂಡನಹಳ್ಳಿ ಠಾಣೆಯ ಕಾನ್‌ಸ್ಟೇಬಲ್‌ಗಳಾದ ದಾದಾಪೀರ್ ಹಾಗೂ ಕೃಷ್ಣಮೂರ್ತಿ ಎಚ್‌ಬಿಆರ್ ಲೇಔಟ್‌ನಲ್ಲಿ ಭಾನುವಾರ ನಸುಕಿನಲ್ಲಿ ಗಸ್ತು ತಿರುಗುತ್ತಿದ್ದರು. ಅದೇ ವೇಳೆಗೆ ಅಲ್ಲಿಗೆ ಆಟೊದಲ್ಲಿ ಬಂದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ವರ್ತಿಸಲಾರಂಭಿಸಿದ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಆತನ ಆಟೊವನ್ನು ಬೆನ್ನಟ್ಟಿದರು. ಸಿಬ್ಬಂದಿಯನ್ನು ಕಂಡು ಆತಂಕಗೊಂಡ ಆಟೊ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.ಸಿಬ್ಬಂದಿ ಆಟೊದ ಬಳಿ ಹೋಗಿ ಪರಿಶೀಲಿಸಿದಾಗ ವಾಹನದಲ್ಲಿ ಚಿನ್ನದ ಎರಡು ಸರಗಳು, ಎರಡು ಬಳೆಗಳು, ನಾಲ್ಕು ಉಂಗುರ, ಬೆಳ್ಳಿ ವಸ್ತುಗಳು, ಪಾನ್ ಕಾರ್ಡ್ ಹಾಗೂ 10,500 ರೂಪಾಯಿ ಹಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆಟೊವನ್ನು ಬೆನ್ನಟ್ಟಿ ಹಿಡಿದ ದಾದಾಪೀರ್ ಮತ್ತು ಕೃಷ್ಣಮೂರ್ತಿ ಅವರಿಗೆ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ಐದು ಸಾವಿರ ನಗದು ಬಹುಮಾನ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)