ಬುಧವಾರ, ಏಪ್ರಿಲ್ 14, 2021
24 °C

ನೀರಾವರಿ ಆಶ್ರಿತ ಬೆಳೆಗೆ ಬಾಧೆ: ಈರುಳ್ಳಿಗೆ ನೇರಳೆ ಮಚ್ಚೆ ರೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನೀರಾವರಿ ಆಶ್ರಯದಲ್ಲಿ ಬೆಳೆದಿರುವ ಈರುಳ್ಳಿ ಬೆಳೆಗೆ ನೇರಳೆ ಮಚ್ಚೆ ರೋಗ ಕಾಣಿಸಿಕೊಂಡಿದ್ದು, ರೋಗದ ಹತೋಟಿಗೆ ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.ಈರುಳ್ಳಿ ಬೆಳೆಗೆ ಮೋಡಗಟ್ಟಿದ ವಾತಾವರಣ ಮತ್ತು ತೇವಾಂಶ ಹೆಚ್ಚಾದಾಗ ನೇರಳೆ ಮಚ್ಚೆ ರೋಗ ಕಾಣಿಸಿಕೊಳ್ಳುತ್ತದೆ. ಹಳೆ ತೊಪ್ಪಲಿನ ಮೇಲೆ ಬಿಳಿ ಮತ್ತು ನೇರಳೆ ಬಣ್ಣದ ಮಚ್ಚೆಗಳು ಕಂಡುಬಂದು, ಅವು ಒಂದಕ್ಕೊಂದು ಕೂಡಿ ಮಚ್ಚೆಗಳ ಮೇಲೆ ಶಿಲೀಂದ್ರ ಬೆಳೆಯುತ್ತದೆ. ಈ ರೋಗದ ಹಾವಳಿಯಿಂದ ಎಲೆಗಳು ಬಾಡಿ ಕೆಳಗೆ ಬೀಳುತ್ತವೆ. ತೇವಾಂಶ ಹೆಚ್ಚಾದರೆ ಎಲೆಗಳು ಕೊಳೆತು ಮುರಿದಂತೆ ಬಾಡುತ್ತವೆ. ಕೆಲವೊಮ್ಮೆ ಸಣ್ಣ ಸಸಿಗಳಲ್ಲೂ ಈ ರೋಗ ಕಂಡು ಬರುವುದುಂಟು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.ಹತೋಟಿ: ರೋಗದ ಲಕ್ಷಣಗಳು ಕಂಡುಬಂದರೆ 2 ಗ್ರಾಂ, ಮ್ಯಾಂಕೋಜೆಟ್ ಅಥವಾ 2 ಗ್ರಾಂ, ಕ್ಲೋರೋಥ್ಯಾಲೋನಿಲ್ ಶಿಲೀಂದ್ರ ನಾಶಕವನ್ನು ಒಂದು ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಥ್ರಿಪ್ಸ್ ಬಾಧೆ ಕಂಡುಬಂದಲ್ಲಿ 1.7 ಮಿ.ಲೀ. ಡೈಮಿಥೋಯೇಟ್ 30 ಇ.ಸಿ. ಅಥವಾ 0.5 ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. ಕೀಟನಾಶಕಗಳನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ಮಾಡಿದ್ದಾರೆ.ದೇಗುಲ ಅಭಿವೃದ್ಧಿಗೆ ಕ್ರಮ

ಕೊಲ್ಲಾಪುರದಮ್ಮ, ದುರುಗಮ್ಮ ದೇಗುಲಗಳ ಅಭಿವೃದ್ಧಿಗೆ ರೂ 8 ಲಕ್ಷ ಅನುದಾನ ನೀಡಲಾಗಿದ್ದು, ಆದಷ್ಟು ಬೇಗ ಈ ದೇಗುಲಗಳ ಅಭಿವೃದ್ಧಿ ಕಾರ್ಯವನ್ನು ಮುಗಿಸಬೇಕು ಎಂದು ಶಾಸಕ ಡಿ. ಸುಧಾಕರ್ ಕರೆ ನೀಡಿದರು.

ತಾಲ್ಲೂಕಿನ ಐಮಂಗಲ ಹೋಬಳಿಯ ಕಲ್ಲಹಟ್ಟಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕೊಲ್ಲಾಪುರದಮ್ಮ, ದುರುಗಮ್ಮ, ಗೌರಸಂದ್ರ ಮಾರಮ್ಮದೇವಿಯ ದೇಗುಲಗಳ ಜೀರ್ಣೋದ್ಧಾರ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಐಮಂಗಲ ಹೋಬಳಿಯ ಹಳ್ಳಿಗಳ ಜನ ದಶಕಗಳಿಂದ ಫ್ಲೋರೈಡ್‌ಯುಕ್ತ ನೀರು ಸೇವಿಸುತ್ತಿದ್ದು, ಇದಕ್ಕೆ ಮಂಗಳ ಹಾಡಲು ಹೋಬಳಿಯ 39 ಗ್ರಾಮಗಳಿಗೆ ವಾಣಿ ವಿಲಾಸ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಮಾಡಲು ಸಮೀಕ್ಷೆ ಕಾರ್ಯ ನಡೆದಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಅವರು ಹೇಳಿದರು.ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಚಂದ್ರಪ್ಪ ಮಾತನಾಡಿ, ಸುಧಾಕರ್ ಅವರ ಜನಪರ ಕಾಳಜಿಯಿಂದ ದೇವರಕೊಟ್ಟ ಗ್ರಾಮದಲ್ಲಿ ನೂರು ಎಕೆರೆ ವಿಸ್ತೀರ್ಣದಲ್ಲಿ ಮೊರಾರ್ಜಿ ದೇಸಾಯಿ ವಸತಿ ಸಮುಚ್ಛಯ ಪ್ರಾರಂಭವಾಗಿದೆ. ತೋಟಗಾರಿಕೆ ಕಾಲೇಜು, ಐಟಿಐ ಕಾಲೇಜು, ಶಾಲಾ-ಕಾಲೇಜುಗಳಿಗೆ ಮೂಲ ಸೌಲಭ್ಯ ಕಲ್ಪಿಸಿದ್ದಾರೆ. ಐಮಂಗಲ ಹೋಬಳಿಗೆ ವಾಣಿವಿಲಾಸ ನೀರು ಪೂರೈಕೆ ಮಾಡುವುದು ಇತಿಹಾಸದ ಪುಟಗಳಲ್ಲಿ ನೆನಪಿಡುವ ಘಟನೆಯಾಗಲಿದೆ ಎಂದರು.ನಿವೃತ್ತ ಉಪ ತಹಶೀಲ್ದಾರ್ ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರಾದ ಕೆ. ದ್ಯಾಮೇಗೌಡ, ಪ್ರಕಾಶ್, ತಾ.ಪಂ. ಸದಸ್ಯೆ ಮಹೇಶ್ವರಿ ಸಿದ್ದಪ್ಪ, ಬಿ.ವಿ. ಮಾಧವ, ಕಂದಿಕೆರೆ ಸುರೇಶ್‌ಬಾಬು, ಈರಲಿಂಗೇಗೌಡ, ಐಮಂಗಲ ಗ್ರಾ.ಪಂ. ಅಧ್ಯಕ್ಷ ಬಿ.ಎಚ್. ಹನುಮಂತಪ್ಪ, ಆರ್. ಹರೀಶ್‌ಕುಮಾರ್, ಎಲ್. ತಿಪ್ಪೇಸ್ವಾಮಿ, ಕೆ.ಟಿ. ಕೆಂಚಪ್ಪ, ಜಿ. ನಿಂಗಮ್ಮ, ಮಂಜುನಾಥ, ಶಿವಲಿಂಗಮ್ಮ, ಸೌಭಾಗ್ಯಮ್ಮ, ಸಿ. ತಿಪ್ಪೇಸ್ವಾಮಿ, ಡಿ. ರಾಮಚಂದ್ರಪ್ಪ, ವೈ.ಕೆ. ನಾಗಲಿಂಗಪ್ಪ, ಕೆ. ತಿಪ್ಪೇಸ್ವಾಮಿ, ದುರುಗಪ್ಪ, ಕದುರಪ್ಪ, ಆರ್. ಲೋಕೇಶ್, ಭಾರತಮ್ಮ, ಟಿ. ರಾಜಪ್ಪ ಹಾಜರಿದ್ದರು.ಎಲ್. ತಿಪ್ಪೇಸ್ವಾಮಿ ಸ್ವಾಗತಿಸಿದರು. ಎಸ್.ಜಿ. ರಂಗಸ್ವಾಮಿ ಸಕ್ಕರ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.