ಗುರುವಾರ , ಮೇ 13, 2021
39 °C

ನೀರಿಗಾಗಿ ಮಹಿಳೆಯರಿಂದ ನಗರಸಭೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಗರದ ಎಂಟನೇ ವಾರ್ಡ್‌ಗೆ (ಹೊಸ ಬಸ್ ನಿಲ್ದಾಣ ಬಡಾವಣೆ) ಸಮರ್ಪಕವಾಗಿ ನೀರು ಪೂರೈಸುವಂತೆ ಒತ್ತಾಯಿಸಿ ವಾರ್ಡ್‌ನ ನಿವಾಸಿಗಳು ಬುಧವಾರ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಬಿಂದಿಗೆ, ಪೊರಕೆಗಳನ್ನು ಹಿಡಿದು ನಗರದ ಎಂಟನೇ ವಾರ್ಡ್‌ನಿಂದ ನಗರಸಭೆ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡರು. ಕಳೆದ ಒಂಬತ್ತು ತಿಂಗಳಿನಿಂದ ಸಮರ್ಪಕವಾಗಿ ನೀರು ಪೂರೈಸದ ನಗರಸಭೆಯವರು ಜನರಿಗೆ ತೊಂದರೆ ಕೊಡುತ್ತಿದ್ದಾರೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಈಶ್ವರಮ್ಮ ಮಾತನಾಡಿ, ಹದಿನೈದು ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ನೀರು ಪೂರೈಸಲಾಗುತ್ತದೆ. ಕೆಲವೊಮ್ಮೆ ಆ ನೀರನ್ನು ಸಹ ಸರಿಯಾಗಿ ಪೂರೈಕೆ ಮಾಡುವುದಿಲ್ಲ. ನಾವೇ ಹಣ ಖರ್ಚು ಮಾಡಿ ಟ್ಯಾಂಕರ್ ನೀರು ತರಿಸಿಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.ನೀರಿನ ಅವ್ಯವಸ್ಥೆಗೆ ನಗರಸಭೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಲಲಿತಾ, ಅತ್ತ ಜಕ್ಕಲಮಡಗು ಜಲಾಶಯದಿಂದಲೂ ನೀರು ಪೂರೈಸದೆ, ಇತ್ತ ಕೆಟ್ಟಿರುವ ಕೊಳವೆಬಾವಿಗಳನ್ನು ದುರಸ್ತಿಗೊಳಿಸದ ನಗರಸಭೆಯವರು ಇಲ್ಲಸಲ್ಲದ ನೆಪಗಳನ್ನು ಹೇಳಿ ಕಾಲ ದೂಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನೀರಿನ ಸಮಸ್ಯೆ ಶೀಘ್ರ ಬಗೆಹರಿಸದಿದ್ದರೆ ನಗರಸಭೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರೂ ನಗರಸಭೆಯವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಮಸ್ಯೆ ಇದೇ ರೀತಿ ಮುಂದುವರಿದರೆ ಜೀವನ ಮಾಡುವುದಾದರೂ ಹೇಗೆ? ಟ್ಯಾಂಕರ್ ನೀರನ್ನು ಸೇವಿಸಿ ಸಾಂಕ್ರಾಮಿಕ ಜ್ವರ ಬಂದರೆ, ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.ಬಡಾವಣೆ ನಿವಾಸಿಗಳಾದ ಪ್ರಕಾಶ್, ದಾಕ್ಷಾಯಿಣಿ, ಆಂಜನಮ್ಮ, ಲತಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.