ಮಂಗಳವಾರ, ಏಪ್ರಿಲ್ 20, 2021
27 °C

ನೇಪಾಳ ಮಾಜಿ ಪ್ರಧಾನಿ ಭಟ್ಟಾರಾಯ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಠ್ಮಂಡು (ಐಎಎನ್‌ಎಸ್): ಬ್ರಿಟಿಷರ ವಿರುದ್ಧ ‘ಕ್ವಿಟ್ ಇಂಡಿಯಾ’ ಚಳವಳಿ ಬೆಂಬಲಿಸಿದ್ದ, ನೇಪಾಳದ ಕಳಂಕ ರಹಿತ ಮಾಜಿ ಪ್ರಧಾನಿ ಕೃಷ್ಣ ಪ್ರಸಾದ್ ಭಟ್ಟಾರಾಯ್ (87) ಶುಕ್ರವಾರ ತಡರಾತ್ರಿ ನಿಧನರಾದರು.ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದ ಕಾರಣ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ ಭಟ್ಟಾರಾಯ್, ಬುಧವಾರದಿಂದ ಕೋಮಾ ಸ್ಥಿತಿಯಲ್ಲಿದ್ದರು. ವಿವಿಧ ಅಂಗಗಳ ವೈಫಲ್ಯದಿಂದ ಶುಕ್ರವಾರ ರಾತ್ರಿ 11.46ರ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.ಬಿಹಾರದ ರಾಮನಗರ ಗ್ರಾಮದಲ್ಲಿ ಜನಿಸಿದ್ದ ಅವರು ತಮ್ಮ 18ನೇ ವಯಸ್ಸಿನಲ್ಲಿಯೇ 1942ರಲ್ಲಿ ನಡೆದ ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಭಾರತದ ವಿವಿಧ ಸೆರೆಮನೆಗಳಲ್ಲಿ ಕಾಗೃಗೃಹವಾಸವನ್ನೂ ಅನುಭವಿಸಿದ್ದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಿಂದ ಪ್ರಭಾವಿತರಾದ ಇವರ ಹಾಗೂ ಇತರರು, ನೇಪಾಳದಲ್ಲಿನ ರಾಣಾ ಅವರ ನಿರಂಕುಶ ಪ್ರಭುತ್ವದ ವಿರುದ್ಧ ಸಮರ ಸಾರುವ ಕನಸು ಕಂಡರು.1950ರಲ್ಲಿ ನೇಪಾಳಿ ಕಾಂಗ್ರೆಸ್ ಪಕ್ಷವನ್ನು ಕೋಲ್ಕತ್ತದಲ್ಲಿ ಸ್ಥಾಪಿಸಲಾಯಿತು. ನಂತರ ನೇಪಾಳದ ನಿರಂಕುಶ ಪ್ರಭುತ್ವದ ವಿರುದ್ಧ ಹೋರಾಟ ಆರಂಭಿಸಿದರು. ನೇಪಾಳಕ್ಕೆ ಹಿಂತಿರುಗಿದ ಅವರನ್ನು ಸುಮಾರು 14 ವರ್ಷ ಜೈಲಿಗೆ ಹಾಕಲಾಯಿತು.ಆದರೆ 1990ರಲ್ಲಿ ಪ್ರಜಾಪ್ರಭುತ್ವದ ಪರ ಚಳವಳಿ ಆರಂಭವಾದ ಮೇಲೆ ರಾಜಕೀಯ ಪಕ್ಷಗಳ ಮೇಲೆ ಹೇರಿದ್ದ ನಿಷೇಧವನ್ನು ತೆಗೆದುಹಾಕಲಾಯಿತು.ಆಗ ಅಸ್ಥಿತ್ವಕ್ಕೆ ಬಂದ ಮಧ್ಯಂತರ ಸರ್ಕಾರದಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ನಂತರ 1999ರಲ್ಲಿ ಪುನಃ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು. 2003ರ ನಂತರ ಸಕ್ರಿಯ ರಾಜಕಾರಣದಿಂದ ಭಟ್ಟಾರಾಯ್ ನಿವೃತ್ತರಾದರು.ಭಾರತದ ಮುಖಂಡರಾದ ಮಹಾತ್ಮಾ ಗಾಂಧಿ, ಜವಹರಲಾಲ್ ನೆಹರು, ಜಯಪ್ರಕಾಶ್ ನಾರಾಯಣ್ ಅವರಿಂದ ಪ್ರಭಾವಿತರಾಗಿದ್ದ ಭಟ್ಟಾರಾಯ್ ಅವಿವಾಹಿತರಾಗಿದ್ದರು. ಸರ್ಕಾರ ನೀಡಿದ್ದ ಸಾಧಾರಣ ಮನೆಯಲ್ಲಿಯೇ ಅವರು ತಮ್ಮ ಕೊನೆಯ ದಿನಗಳನ್ನು ನೆಲೆಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.