ಶುಕ್ರವಾರ, ಮೇ 7, 2021
20 °C

ನೌಕರರಿಗೆ ಸರ್ಕಾರದ ನೆರಳು

ವಿಶೇಷ ವರದಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಬರದ ಛಾಯೆಯಲ್ಲಿ ನಲಗುತ್ತಿರುವ ಜಿಲ್ಲೆಯಲ್ಲಿ ಸೋಮವಾರ (ಏ.2)ದಿಂದ ಸರ್ಕಾರಿ ಕಚೇರಿಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಲಿದ್ದು, ಜಿಲ್ಲೆಯ ರೈತರು, ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಒಂದೆಡೆ ಬರಗಾಲ ಆವರಿಸಿದ್ದು, ಜಿಲ್ಲೆಯ ಸುಮಾರು 248 ಹಳ್ಳಿಗಳಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ಇಂತಹ ಪರಿಸ್ಥಿತಿಯಲ್ಲೂ ನೌಕರರ ಹಿತಕ್ಕೆ ಸರ್ಕಾರ ಆದ್ಯತೆ ನೀಡಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಅಲ್ಲದೇ ಇದುವರೆಗೂ ಬರ ಪರಿಹಾರ ಕಾಮಗಾರಿಯೂ ಪ್ರಾರಂಭವಾಗಿಲ್ಲ. ಜನರಿಗೆ ಅಷ್ಟಿಷ್ಟು ಉದ್ಯೋಗ ನೀಡುತ್ತಿದ್ದ ಖಾತರಿ ಯೋಜನೆಯೂ ಕುಂಟುತ್ತ ಸಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳೂ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ಕೆಲಸ ನಿರ್ವಹಿಸಿದರೆ, ಜಿಲ್ಲೆಯ ಜನರ ಗೋಳನ್ನು ಕೇಳುವವರು ಯಾರು ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ.ಕಳೆದ ನಾಲ್ಕೈದು ವರ್ಷಗಳಿಂದ ಗುಲ್ಬರ್ಗ ವಿಭಾಗದ ಜಿಲ್ಲೆಗಳು ಹಾಗೂ ಬೆಳಗಾವಿ ವಿಭಾಗದ ವಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ಹಿಂದೆ ವೇಳಾಪಟ್ಟಿ ಬದಲಾವಣೆ ಮಾಡಿದ್ದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಈ ಬಾರಿ ಜಿಲ್ಲೆಯಲ್ಲಿ ಬರದ ಸ್ಥಿತಿ ಇದೆ. ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗಿದೆ. ಇಂತಹ ಸಂದರ್ಭದಲ್ಲಿಯೂ ವೇಳಾಪಟ್ಟಿ ಬದಲಾವಣೆ ಮಾಡುವುದು ಸರಿಯಲ್ಲ ಎಂಬ ಮಾತನ್ನು ರೈತ ಮುಖಂಡರು ಹೇಳುತ್ತಿದ್ದಾರೆ.ರೈತನ ಬೆವರಿಗೆ ಬೆಲೆ ಇಲ್ಲವೇ?: ಹಗಲು ರಾತ್ರಿ ಎನ್ನದೇ ರೈತರು ಹೊಲದಲ್ಲಿ ದುಡಿಯುತ್ತಾರೆ. ಕುವೆಂಪು ಅವರು ಹೇಳಿದಂತೆ ರಾಜ್ಯಗಳು ಅಳಿಯಲಿ, ರಾಜ್ಯಗಳು ಉಳಿಯಲಿ ಅದರ ಪರಿವೇ ಇಲ್ಲದೇ ರೈತರು ಛಲದಿಂದಲೇ ಹೊಲದಲ್ಲಿ ದುಡಿಯುತ್ತಾರೆ. ಬಿಸಿಲು, ಚಳಿ, ಮಳೆಗಾಲವೆನ್ನದೇ ಉತ್ತಿ, ಬಿತ್ತಿ ನಾಡಿಗೆ ಅನ್ನವನ್ನು ಉಣಬಡಿಸುತ್ತಾರೆ.ರೈತರೂ ಬಿಸಿಲು ಹೆಚ್ಚಾಗಿದೆ ಎಂದು ನಿತ್ಯವೂ ಅರ್ಧ ದಿನ ಹೊಲದಲ್ಲಿ ದುಡಿದರೆ ನಡೆದೀತೆ? ರೈತರು ಹರಿಸುವ ಬೆವರಿಗೆ ಬೆಲೆಯೇ ಇಲ್ಲವೇ ಎಂದು ರೈತ ಸಂಘದ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಸತ್ಯಂಪೇಟ್ ಖಾರವಾಗಿ ಪ್ರಶ್ನಿಸುತ್ತಾರೆ.ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ಸರ್ಕಾರಿ ಕಚೇರಿಗಳು ನಡೆಯಲಿವೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ಬಹುತೇಕ ನೌಕರರು ಗುಲ್ಬರ್ಗದಲ್ಲಿಯೇ ಮನೆ ಮಾಡಿದ್ದು, ಅಲ್ಲಿಂದಲೇ ನಿತ್ಯವೂ ಓಡಾಟ ಮಾಡುತ್ತಾರೆ. ಹಾಗಾಗಿ ಬಹಳಷ್ಟು ನೌಕರರು ಬೆಳಿಗ್ಗೆ 8 ಗಂಟೆಗೆ ಕಚೇರಿಗಳಿಗೆ ಬರುವುದು ಸಾಧ್ಯವಿಲ್ಲ. ನೌಕರರು ಕಚೇರಿಗೆ ಬರುವುದು ಬೆಳಿಗ್ಗೆ 10-11 ಗಂಟೆಗೆ. ಇರುವ ಎರಡು ಮೂರು ಗಂಟೆಯನ್ನೂ ಎಸಿ ಇರುವ ಕಚೇರಿಯಲ್ಲಿ ಕಳೆಯುತ್ತಾರೆ.

 

ಆದರೆ ರೈತರು ಮನೆಯಲ್ಲಿನ ಕೆಲಸ ಮುಗಿಸುವಷ್ಟರಲ್ಲಿಯೇ ಮಧ್ಯಾಹ್ನ ಆಗುತ್ತದೆ. ಮಧ್ಯಾಹ್ನದ ವೇಳೆಗೆ ಕಚೇರಿಗಳಿಗೆ ಬಾಗಿಲು ಮುಚ್ಚುತ್ತವೆ. ಇಂತಹ ಸ್ಥಿತಿಯಲ್ಲಿಯೇ ರೈತರ ಯಾರ ಮುಂದೆ ಗೋಳು ತೋಡಿಕೊಳ್ಳಬೇಕು.ಬರ ಪರಿಹಾರ ಹಾಗೂ ಕುಡಿಯುವ ನೀರಿನ ಪೂರೈಕೆ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ನೌಕರರೇ ಮಾಡಬೇಕು. ಅವರೂ ಮಧ್ಯಾಹ್ನ 1.30 ಕ್ಕೆ ಬಾಗಿಲು ಮುಚ್ಚಿದರೇ ಗ್ರಾಮಸ್ಥರು ಏನು ಮಾಡಬೇಕು ಎಂದು ಕೇಳುತ್ತಾರೆ.ಎಸಿ ಕೋಣೆಗಳಲ್ಲಿ ಕುಳಿತುಕೊಳ್ಳುವ ನೌಕರರಿಗೆ ಮಾತ್ರ ಬಿಸಿಲು ಹತ್ತುತ್ತಿದೆ. ಮೊದಲೇ ಬರಗಾಲದ ಸ್ಥಿತಿ ಇದ್ದು, ಇಂಥದ್ದರಲ್ಲಿಯೂ ಸರ್ಕಾರಿ ನೌಕರರಿಗೆ ಬಿಸಿಲಿನ ಝಳ ತಾಗುತ್ತಿದೆ. ಈ ಸಂದರ್ಭದಲ್ಲಾದರೂ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಸರ್ಕಾರ ನಿರ್ದೇಶನ ನೀಡಬೇಕಿತ್ತು. ರೈತರ ಬವಣೆಯನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಹೇಳುತ್ತಾರೆ.ಜನರಿಗೂ ಅನುಕೂಲ: ರಾಜ್ಯ ಸರ್ಕಾರಿ ಕಚೇರಿಗಳ ವೇಳಾಪಟ್ಟಿ ಬದಲಾವಣೆ ಮಾಡಿವುದರಿಂದ ಕೇವಲ ನೌಕರರಿಗಷ್ಟೇ ಅಲ್ಲ, ಜನರಿಗೂ ಅನುಕೂಲ ಆಗಲಿದೆ ಎಂದು ಹೇಳುತ್ತಾರೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಚೋಟಿಸ್ವಾಮಿ ಎಣ್ಣಿ.ಕಳೆದ ಮೂರ‌್ನಾಲ್ಕು ವರ್ಷಗಳಿಂದ ಈ ಪದ್ಧತಿ ಅಳವಡಿಸಲಾಗಿದೆ. ಜನರಿಗೂ ಈ ಬಗ್ಗೆ ಮಾಹಿತಿ ಇದೆ. ಹಾಗಾಗಿ ಕೆಲಸವಿದ್ದವರು ಬೇಗನೇ ಕಚೇರಿಗಳಿಗೆ ಬರುತ್ತಾರೆ. ಇದರಿಂದ ಜನರು ಬಿಸಿಲಿನಲ್ಲಿ ಕಚೇರಿಗಳಿಗೆ ಬರುವುದು ತಪ್ಪುತ್ತದೆ. ಇನ್ನೊಂದೆಡೆ ಬಿಸಿಲು ಹೆಚ್ಚಾಗುತ್ತಿದ್ದು, ನೌಕರರ ದೃಷ್ಟಿಯಿಂದ ವೇಳಾಪಟ್ಟಿ ಬದಲಾವಣೆ ಮಾಡುವುದು ಸಮಂಜಸವಾಗಿದೆ ಎಂದು ಅಭಿಪ್ರಾಯಪಡುತ್ತಾರೆ.ಒಂದೆಡೆ ರಾಜ್ಯ ಸರ್ಕಾರಿ ನೌಕರರು ಮಧ್ಯಾಹ್ನದ ವೇಳೆಗೆ ಮನೆ ಸೇರಿಕೊಳ್ಳುವ ಸಂತಸದಲ್ಲಿದ್ದರೆ, ಕೇಂದ್ರ ಸರ್ಕಾರಿ ಕಚೇರಿಗಳಾದ ಅಂಚೆ ಇಲಾಖೆ, ಬ್ಯಾಂಕ್‌ಗಳು ಹಾಗೂ ರೈಲ್ವೆ ಇಲಾಖೆಯ ನೌಕರರು ಮಾತ್ರ ಎಂದಿನ ಗೋಳು ನಮಗೆ ತಪ್ಪಿದ್ದಲ್ಲ ಎಂದು ಹೇಳುತ್ತಿದ್ದಾರೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.