ಬುಧವಾರ, ಜನವರಿ 22, 2020
22 °C

ಪಟ್ಟು ಬಿಡದ ವಿವಿ: ವಿಸ್ತರಣೆ ಯೋಜನೆ ಕೈಬಿಟ್ಟ ‘ಸಾಯ್‌’

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

ಉತ್ತರ ಕರ್ನಾಟಕದ ಯುವ ಕ್ರೀಡಾಪಟುಗಳ ಭರವಸೆಯಾಗಿರುವ ‘ಸಾಯ್‌’ (ಭಾರತೀಯ ಕ್ರೀಡಾ ಪ್ರಾಧಿಕಾರ) ಧಾರವಾಡ ಕೇಂದ್ರದ ಅಭಿವೃದ್ಧಿ ಮತ್ತು ವಿಸ್ತರಣೆ ಯೋಜನೆಗೆ ಸಂಬಂಧಿಸಿದ ಹೋರಾಟ ಇದೀಗ ಫಲ ಕಾಣದೆ ಅಂತ್ಯಗೊಳ್ಳುವ ಹಂತಕ್ಕೆ ಬಂದಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ನಡೆಸಿದ ಪತ್ರ ವ್ಯವಹಾರ, ಮನವಿಗಳಿಗೆ ಫಲ ಸಿಗದ ಕಾರಣ ಯೋಜನೆಯನ್ನು ಉದ್ದೇಶಿತ ಸ್ಥಳದಲ್ಲಿ ಅನುಷ್ಠಾನಗೊಳಿಸುವ ಕಾರ್ಯದಿಂದ ಸಾಯ್‌ ಹಿಂಜರಿದಿದೆ. ಖಾಸಗಿಯವರು ಕೈಹಿಡಿಯಬಹುದು ಎಂಬ ನಿರೀಕ್ಷೆಯೊಂದೇ ಈಗ ಅದರ ಮುಂದೆ ಉಳಿದಿರುವ ಭರವಸೆ.1991ರಲ್ಲಿ ಧಾರವಾಡದ ಕರ್ನಾಟಕ ವಿವಿ ಸಮೀಪದ ಉದಯ ಹಾಸ್ಟೆಲ್‌ ಬಳಿ ಸಾಯ್‌ ತರಬೇತಿ ಕೇಂದ್ರ ಆರಂಭಗೊಂಡಿತು. ಮಡಿಕೇರಿ ಮತ್ತು  ಬೆಂಗಳೂರಿನ ದಕ್ಷಿಣ ಪ್ರಾದೇಶಿಕ ಕೇಂದ್ರದಲ್ಲಿರುವ ತರಬೇತಿ ಕೇಂದ್ರ ಬಿಟ್ಟರೆ ರಾಜ್ಯದ ಮೂರನೇ ಸಾಯ್‌ ಕೇಂದ್ರ ಇದು.ಈ ಕೇಂದ್ರದಲ್ಲಿ ತರಬೇತಿ ನೀಡಲು ಸಾಕಷ್ಟು ಜಾಗ ಇಲ್ಲದ ಕಾರಣ ವಿಸ್ತರಣೆಗೆ 1999ರಲ್ಲೇ ಪ್ರಯತ್ನ ಆರಂಭವಾಯಿತು. ಧಾರವಾಡ ವಿವಿಯ ರಾಣಿ ಚನ್ನಮ್ಮ ಕ್ರೀಡಾಂಗಣದ ಸಮೀಪ ಇರುವ ವಿಶಾಲ, ಖಾಲಿ ಜಾಗವನ್ನು ಸಾಯ್‌ಗಾಗಿ ಒದಗಿಸುವಂತೆ ವಿಶ್ವವಿದ್ಯಾಲಯವನ್ನು ಕೋರಲಾಯಿತು.ನಂತರ ನಿರಂತರವಾಗಿ ನಡೆದ ಪತ್ರ ವ್ಯವಹಾರ, ಮಾತುಕತೆ, ಓಡಾಟದ ಕೊನೆಯಲ್ಲಿ ಸಾಯ್‌ಗೆ ದಕ್ಕಿದ್ದು ನಿರಾಶೆ ಮಾತ್ರ. ಕ್ರೀಡಾ ಚಟುವಟಿಕೆ ವಿಸ್ತರಣೆಗಾಗಿ ನೀಡುವ ಭೂಮಿಗೆ ವಿಶ್ವವಿದ್ಯಾಲಯ ನಿಗದಿ ಮಾಡಿದ ಮೌಲ್ಯ ಹಾಗೂ ಷರತ್ತು ಒಪ್ಪಿಕೊಳ್ಳಲು ಸಾಯಿಗೆ ಸಾಧ್ಯವಾಗಲಿಲ್ಲ. ಆದರೂ ಪಟ್ಟು ಬಿಡದೆ ಮಾಡಿದ ಪ್ರಯತ್ನ ಕೊನೆಗೂ ಫಲಿಸಲೇ ಇಲ್ಲ.

ಆರಂಭದ ಹೆಜ್ಜೆ...ಸಾಯ್‌ ಕೇಂದ್ರ ಧಾರವಾಡದಲ್ಲಿ ಆರಂಭಗೊಂಡದ್ದು ಕ್ರೀಡಾ ಇಲಾಖೆಯ ಜಾಗದಲ್ಲಿ. ಆರಂಭದಲ್ಲಿ ಜೂಡೋ, ಕುಸ್ತಿ, ಫುಟ್‌ಬಾಲ್‌, ವಾಲಿಬಾಲ್‌ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದ್ದ ಕೇಂದ್ರದಲ್ಲಿ ಎರಡು ವರ್ಷಗಳ ಬಳಿಕ ಕುಸ್ತಿ, ಜೂಡೋ ಮತ್ತು ಫುಟ್‌ಬಾಲ್‌ ‘ಕಲಿಕೆ’ ನಿಲ್ಲಿಸಿ  ಬ್ಯಾಸ್ಕೆಟ್‌ಬಾಲ್‌ ಮತ್ತು ಅಥ್ಲೆಟಿಕ್ಸ್‌ ವಿಷಯಗಳನ್ನು ಸೇರ್ಪಡೆಗೊಳಿಸಲಾಯಿತು.ನಂತರ ವಾಲಿಬಾಲ್‌ ತರಬೇತಿಯನ್ನೂ ನಿಲ್ಲಿಸಲಾಯಿತು. 1993ರಲ್ಲಿ ಈ ಜಾಗವನ್ನು ಇಲಾಖೆ ಸಾಯ್‌ಗೇ ಬಿಟ್ಟುಕೊಟ್ಟಿತು. 1995ರಲ್ಲಿ ಧಾರವಾಡದವರೇ ಆದ ಅಥ್ಲೆಟಿಕ್‌ ಕೋಚ್‌ ಎಸ್‌.ಎಸ್‌.ಅಗಡಿ ಅವರು ಕೇಂದ್ರದ ಮುಖ್ಯಸ್ಥರಾಗಿ ಬಂದ ನಂತರ ಕುಸ್ತಿ, ಕಬಡ್ಡಿ, ಜಿಮ್ನಾಸ್ಟಿಕ್ಸ್‌ ಹಾಗೂ ಟೇಕ್ವಾಂಡೋ ಬಂತು. 1997ರಲ್ಲಿ ಅಗಡಿ ಅವರು ಕೇಂದ್ರದ ಆಡಳಿತಾಧಿಕಾರಿ ಆದ ನಂತರ ಕೇಂದ್ರಕ್ಕೆ ಕಾಯಕಲ್ಪ ಲಭಿಸಿತು. ಅನೇಕ ಸೌಲಭ್ಯಗಳು ಬಂದವು.ಆದರೆ ಉತ್ತಮ ಟ್ರ್ಯಾಕ್‌, ಫೀಲ್ಡ್‌, ಒಳಾಂಗಣ ಕ್ರೀಡಾಂಗಣ ಇತ್ಯಾದಿ ಸೌಕರ್ಯಗಳಿಗಾಗಿ ವಿಶಾಲವಾದ ಜಾಗ ಬೇಕಾಗಿತ್ತು. ವಿಶ್ವವಿದ್ಯಾಲಯದ ಮೈದಾನದ ಬಳಿ ಇರುವ ಗಿಡಗಂಟಿ ಬೆಳೆದು ನಿಂತ ಸುಂದರ ಜಾಗ ಸಾಯ್‌ ಅಧಿಕಾರಿಗಳ ಕಣ್ಣಿಗೆ ಬಿತ್ತು. ಈ ಜಾಗವನ್ನು ಮೈದಾನ ನಿರ್ಮಿಸಲು ಕೊಡಬೇಕಾಗಿ ಕೋರಿ ವಿವಿಯನ್ನು ಸಂಪರ್ಕಿಸಿದಾಗ ಪೂರಕ ಪ್ರತಿಕ್ರಿಯೆ ಸಿಕ್ಕಿದರೂ ಸ್ಪಷ್ಟವಾದ ಮಾಹಿತಿ  ಬರಲಿಲ್ಲ.ವರ್ಷಗಳು ಉರುಳಿದವು. ಅರ್ಧ ದಶಕದ ನಂತರ ಈ ಭಾಗದ ಸಂಸದರು, ಶಾಸಕರು ರಂಗಕ್ಕೆ ಇಳಿದರು. ಹೀಗಾಗಿ ಪ್ರಯತ್ನ ಚುರುಕು ಪಡೆಯಿತು. ಆದರೆ ವಿವಿಯ ಒಳಗೆ ಕೆಲವರಿಂದ ವಿರೋಧ ವ್ಯಕ್ತವಾಯಿತು. ಸಾಯ್‌ ಕಡೆಯಿಂದ ಮತ್ತಷ್ಟು ಪ್ರಯತ್ನ ನಡೆದಾಗ ಕುಲಪತಿಗಳಿಂದ ಒಪ್ಪಿಗೆ ಸಿಕ್ಕಿತು.  ಮುಂದಿನ ಸಿಂಡಿಕೇಟ್‌ ಸಭೆಯಲ್ಲಿ ಯೋಜನೆಗೆ ಅನುಮತಿಯೂ ಲಭಿಸಿತು.2010ರಲ್ಲಿ ಉನ್ನತ ಶಿಕ್ಷಣ ಸಚಿವರಿಂದಲೂ ಜಾಗ ನೀಡಲು ಅನುಮತಿ ಲಭಿಸಿತು. ಮಡಿಕೇರಿ ಮತ್ತು ಬೆಂಗಳೂರಿನಲ್ಲಿರುವ ಸಾಯಿ ತರಬೇತಿ ನಡೆಯುವಂತೆ ಇಲ್ಲಿಯೂ ಜಾಗವನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಅಭಿವೃದ್ಧಿಪಡಿಸುವುದು ಸಾಯ್‌ ಯೋಜನೆ ಹಾಗೂ ಯೋಚನೆ ಆಗಿತ್ತು. ಆದರೆ ಈ ವಿಷಯದಲ್ಲಿ ವಿವಿ ಮತ್ತು ಸಾಯ್‌ ನಡುವೆ ಗೊಂದಲ ಉಂಟಾದ ಕಾರಣ ಅಭಿವೃದ್ಧಿ ಯೋಜನೆಯ ಕನಸು ನನಸಾಗಲೇ ಇಲ್ಲ.2012ರಲ್ಲಿ ಯೋಜನೆಗೆ ಸಂಬಂಧಿಸಿ ಒಡಂಬಡಿಕೆಗೆ ಸಹಿ ಮಾಡಲು ನಿರ್ಣಯಿಸಲಾಯಿತು. ಆದರೆ ವಿವಿ ಮುಂದಿಟ್ಟ ಷರತ್ತುಗಳನ್ನು ಒಪ್ಪಿಕೊಳ್ಳಲು ಸಾಯ್‌ಗೆ ಸಾಧ್ಯವಾಗಲಿಲ್ಲ. ಪ್ರತಿ ಎಕರೆಗೆ ತಲಾ ರೂ. 70,000ದಂತೆ ಐದು ಎಕರೆಗೆ ವಾರ್ಷಿಕ ರೂ. 3.5 ಲಕ್ಷ  ನೀಡಬೇಕೆಂಬುದು ವಿವಿಯ ಬೇಡಿಕೆಯಾಗಿತ್ತು. ಎಕರೆಗೆ ರೂ. 5,000 ನೀಡಲು ಮಾತ್ರ ಸಾಧ್ಯ ಎಂದು ಸಾಯ್‌ ಹೇಳಿತು. ಮಡಿಕೇರಿಯಲ್ಲಿರುವ ತರಬೇತಿ ಕೇಂದ್ರಕ್ಕೆ ಕಡಿಮೆ ದರದಲ್ಲಿ ಭೂಮಿ ಲಭಿಸಿದೆ. ಬೆಂಗಳೂರಿನಲ್ಲಿ ಇರುವ ಕೇಂದ್ರಕ್ಕೆ ಬೆಂಗಳೂರು ವಿವಿ 90 ಎಕರೆ ಜಾಗ ಒದಗಿಸಿದೆ. ಇಲ್ಲಿ ಮಾತ್ರ ಭೂಮಿಗಾಗಿ ದೊಡ್ಡ ಮೊತ್ತ ಕೊಡುವುದು ಯಾಕೆ ಎಂಬುದು ಅಧಿಕಾರಿಗಳನ್ನು ಕಾಡಿದ ಪ್ರಶ್ನೆ.‘ವಿಶ್ವವಿದ್ಯಾಲಯದವರಿಗೆ ಭೂಮಿಯ ಬೆಲೆ ಮೇಲೆ ಕಣ್ಣು. ಅಲ್ಲಿ ಸಾಯ್‌ ನಿರ್ಮಿಸಲಿರುವ ಕ್ರೀಡಾ ಸೌಲಭ್ಯಗಳ ಬಗ್ಗೆ ಮತ್ತು ಈ ಭಾಗದ ಕ್ರೀಡಾಭಿವೃದ್ಧಿಗೆ ಅದರಿಂದ ಸಿಗುವ ಲಾಭದ ಬಗ್ಗೆ ಅವರು ಯೋಚಿಸುವುದಿಲ್ಲ. ಆದ್ದರಿಂದ ನಮ್ಮ ಪ್ರಯತ್ನಕ್ಕೆ ಹಿನ್ನಡೆಯಾಯಿತು’ ಎಂಬುದು ಸಾಯ್‌ ಅಧಿಕಾರಿಗಳ ಹೇಳಿಕೆ.ಆದರೆ ವಿಶ್ವವಿದ್ಯಾಲಯದವರಿಗೂ ಅವರದ್ದೇ ಆದ ಸಮರ್ಥನೆ ಇದೆ. ‘ಇದು ಕೊಡು–ಕೊಳ್ಳುವಿಕೆ ಕಾರ್ಯ. ಭೂಮಿ ಕೊಡಲು ನಾವು ಸಿದ್ಧ. ಆದರೆ ಅದಕ್ಕೊಂದು ಬೆಲೆ ನಿಗದಿ ಆಗಬೇಕು. ಜೊತೆಗೆ ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಿಕೊಡಬೇಕು ಎಂದು ಕೇಳಿದ್ದೇವೆ. ನಮ್ಮ ಯಾವ ಬೇಡಿಕೆಗೂ ಸ್ಪಂದಿಸಲು ಅವರು ಸಿದ್ಧ ಇಲ್ಲ. ಆದ್ದರಿಂದ ನಾವಾಗಿ ಮತ್ತೆ ಮಾತನಾಡಲು ಹೋಗಲಿಲ್ಲ’ ಎನ್ನುತ್ತಾರೆ ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಪ್ರತಾಪ್‌ ಸಿಂಗ್‌ ತಿವಾರಿ.ಪತ್ರಗಳು–ಆದೇಶಗಳು

ಸಾಯ್‌ ಕೇಂದ್ರದ ವಿಸ್ತರಣೆಗೆ ಸಂಬಂಧಪಟ್ಟು ಹದಿನಾಲ್ಕು ವರ್ಷಗಳಿಂದ ಸಾಕಷ್ಟು ಪತ್ರ ವ್ಯವಹಾರ ನಡೆದಿವೆ. ಅನೇಕ ಸಂದರ್ಭದಲ್ಲಿ ಪೂರಕ ಉತ್ತರವೂ ಲಭಿಸಿದೆ. ಆದರೆ ಯೋಜನೆ ಮಾತ್ರ ಕಾರ್ಯಗತವಾಗಲಿಲ್ಲ.ಹಿಂದೆ ಭಾರತ ಕ್ರೀಡಾ ಪ್ರಾಧಿಕಾರಕ್ಕೆ  ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ  ಎಂ.ಪಿ. ಗಣೇಶ 1999ರಲ್ಲಿ ಧಾರವಾಡ ವಿವಿ ಕುಲಪತಿಗಳಿಗೆ ಪತ್ರ ಬರೆದು ಯೋಜನೆಯನ್ನು ವಿವರಿಸಿ ಜಾಗ ಒದಗಿಸುವಂತೆ ಕೋರಿದ್ದರು. ಜಾಗ ನೀಡಿದರೆ ಅಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುವುದು, ಅದನ್ನು ವಿವಿಯ ಪ್ರತಿಭಾವಂತ ಕ್ರೀಡಾಪಟುಗಳು ಕೂಡ ಬಳಸಿಕೊಳ್ಳಬಹುದು.ಸಾಯ್‌ ಕೇಂದ್ರದಲ್ಲಿರುವ ಕೋಚ್‌ಗಳ ಬಳಿ ಉನ್ನತ ಮಟ್ಟದ ತರಬೇತಿ ಪಡೆಯುವುದಕ್ಕೂ ಅವರಿಗೆ ಅವಕಾಶ ಸಿಗುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿತ್ತು. ಆದರೆ ಇದಕ್ಕೆ ಸೂಕ್ತ ಸ್ಪಂದನೆ ಸಿಗಲಿಲ್ಲ. ಒಂದು ವರ್ಷದ ನಂತರ ಬರೆದ ಮತ್ತೊಂದು ಪತ್ರಕ್ಕೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಕೇಳಿತ್ತು. ನಂತರ ವಿವಿ ತೋರಿದ ನಿರಾಸಕ್ತಿಯಿಂದ ಬೇಸತ್ತ ಎಂ.ಪಿ.ಗಣೇಶ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು.‘ವಿವಿ ಆಧೀನದಲ್ಲಿರುವ 14 ಎಕರೆ ಭೂಮಿಯನ್ನು ಸಾಯ್‌ ಅಭಿವೃದ್ಧಿ ಕಾರ್ಯಗಳಿಗಾಗಿ ಒದಗಿಸುವಂತೆ ಕೋರಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವಿವಿ ಸ್ಪಷ್ಟನೆ ಕೇಳಿತ್ತು. ಆ ಪತ್ರಕ್ಕೆ ಉತ್ತರ ಕೊಟ್ಟರೂ ಭೂಮಿ ನೀಡಲು ವಿವಿ ಮುಂದಾಗುತ್ತಿಲ್ಲ. ಆದ್ದರಿಂದ ಕುಲಾಧಿಪತಿಗಳು ಮಧ್ಯಪ್ರವೇಶಿಸಿ ಭೂಮಿ ಒದಗಿಸುವಂತೆ ಸೂಚಿಸಬೇಕು ಎಂದು ಪತ್ರದಲ್ಲಿ ಕೋರಲಾಗಿತ್ತು.ಈ ಎಲ್ಲ ಪ್ರಯತ್ನಗಳ ಫಲವಾಗಿ ಐದು ಎಕರೆ ಜಾಗವನ್ನು ಸಾಯ್‌ಗೆ ನೀಡಲು ಉನ್ನತ ಶಿಕ್ಷಣ ಇಲಾಖೆ ವಿವಿಗೆ 2010ರಲ್ಲಿ ಅನುಮತಿ ನೀಡಿತ್ತು. ಜಾಗವನ್ನು 30 ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಅಭ್ಯಂತರವಿಲ್ಲ ಎಂದು ಇಲಾಖೆ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿತ್ತು. ಆದರೂ ಪ್ರಸಂಗಕ್ಕೆ ಅಂತ್ಯ ಹಾಡಲು ಸಾಧ್ಯವಾಗಲಿಲ್ಲ.‘ಭೂಮಿ ನೀಡಲು ಯಾವುದೇ ಅಭ್ಯಂತರವಿಲ್ಲ. ಆದರೆ ಪ್ರತಿಫಲವಾಗಿ ವಿವಿಗೆ ಸಿಗಬೇಕಾದ ಸೌಲಭ್ಯಗಳನ್ನು ಪಟ್ಟಿ ಮಾಡಿ ಕೊಡಲಾಗಿದೆ. ಮುಖಾಮುಖಿ ಕುಳಿತು ಮಾತನಾಡಲು ಯಾರೂ ತಯಾರಿಲ್ಲದ ಕಾರಣ ಸಮಸ್ಯೆ ಬಗೆಹರಿಯಲಿಲ್ಲ’ ಎಂದು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರತಾಪ್‌ ಸಿಂಗ್‌ ತಿವಾರಿ ಹೇಳುತ್ತಾರೆ.‘ಈ ಯೋಜನೆ ಅನುಷ್ಠಾನಗೊಂಡರೆ ಅದರಿಂದ ಹೆಚ್ಚು ಪ್ರಯೋಜನವಾಗುವುದು ವಿವಿಗೆ. ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸೌಲಭ್ಯಗಳು, ತರಬೇತುದಾರರು ಇಲ್ಲಿ ಸಿಗಲು ಸಾಧ್ಯ. ಗುತ್ತಿಗೆ ಅವಧಿ ಮುಗಿದ ನಂತರ ಇಲ್ಲಿ ಸ್ಥಾಪಿಸಿದ ಎಲ್ಲ ಮೂಲಸೌಲಭ್ಯಗಳನ್ನು ಕೂಡ ಬಿಟ್ಟು ಹೋಗಲಾಗುತ್ತದೆ.ಇಂಥ ಸುಸಂದರ್ಭದ ಲಾಭ ಪಡೆದುಕೊಳ್ಳಲು ಮುಂದಾಗುವುದನ್ನು ಬಿಟ್ಟು ವಿವಿ ಕೇವಲ ಜಾಗಕ್ಕೆ ಬೆಲೆ ಕಟ್ಟಲು ನೋಡುತ್ತಿದೆ. ಆದ್ದರಿಂದ ಇದನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ’ ಎಂಬುದು ಸಾಯ್‌ ಕೇಂದ್ರದ ಉಸ್ತುವಾರಿ ಗಣೇಶ ವಾಡ್ಕರ್‌ ಅವರ ಹೇಳಿಕೆ.ಏನೇನು ಸೌಲಭ್ಯ ಬರಲಿದೆ?

ಸಾಯ್‌ ವಿಸ್ತರಣೆ ಯೋಜನೆಗೆ ಕಡಿಮೆ ದರಕ್ಕೆ ಭೂಮಿ ನೀಡಲು ಯಾರಾದರೂ ಮುಂದೆ ಬಂದರೆ ಅಲ್ಲಿ ಅತ್ಯುತ್ತಮ ಕ್ರೀಡಾ ಸೌಲಭ್ಯ ಸಿಗಲಿದೆ. ಸಿಂಥೆಟಿಕ್‌ ಟ್ರ್ಯಾಕ್‌್, ಮೂರು ಬ್ಯಾಸ್ಕೆಟ್‌ ಬಾಲ್‌ ಅಂಗಣ, ಆಸ್ಟ್ರೋ ಟರ್ಫ್‌ ಹಾಕಿ ಮೈದಾನ, ಜಿಮ್ನಾಸ್ಟಿಕ್ಸ್‌, ಕುಸ್ತಿ ಮತ್ತು ಟೇಕ್ವಾಂಡೋ ಅಭ್ಯಾಸಕ್ಕೆ ಅನುಕೂಲ ಹಾಗೂ ಮಲ್ಟಿ ಜಿಮ್‌ ಇತ್ಯಾದಿ ಸೌಲಭ್ಯಗಳು ಇಲ್ಲಿಗೆ ಬರಲಿವೆ. 

ಪ್ರತಿಕ್ರಿಯಿಸಿ (+)