ಶನಿವಾರ, ಮೇ 8, 2021
20 °C

ಪಡಿತರ ಅಕ್ರಮ ಮಾರಾಟ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಸರ್ಕಾರಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಸರಬರಾಜು ಮಾಡುವ ಅಕ್ಕಿ, ಬೇಳೆ, ಅಡುಗೆ ಎಣ್ಣೆಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ ಎಂದು ತಾ.ಪಂ. ಅಧ್ಯಕ್ಷ ಟಿ.ಶ್ರೀಧರ್ ಆರೋಪಿಸಿದರು.  ಸೋಮವಾರ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಾಲೆಗಳಿಗೆ ವಿತರಿಸುತ್ತಿರುವ ಅಕ್ಕಿ, ಬೇಳೆ ತೂಕದಲ್ಲಿ ಮೋಸ ನಡೆಯುತ್ತಿದೆ. ಕಳಪೆ ಗುಣಮಟ್ಟದ ಬೇಳೆ ವಿತರಿಸಲಾಗುತ್ತಿದೆ. ಟೆಂಡರ್‌ನಲ್ಲಿ ನಮೂದಿಸಿರುವ ಅಡುಗೆ ಎಣ್ಣೆ ಕೊಡುವ ಬದಲು ಕಡಿಮೆ ದರ್ಜೆಯ ಎಣ್ಣೆ ಸರಬರಾಜು ಮಾಡಲಾಗುತ್ತಿದೆ.ತಾಲ್ಲೂಕಿನ ಚಿಕ್ಕಅಂಕನಹಳ್ಳಿ ಶಾಲೆಗೆ ಧಾನ್ಯ, ಎಣ್ಣೆ, ಅಡುಗೆ ಅನಿಲ ಸಮರ್ಪಕವಾಗಿ ಸರಬರಾಜು ಮಾಡುತ್ತಿಲ್ಲ. 5 ಕಿ.ಮೀ. ವ್ಯಾಪ್ತಿಯ ಗ್ರಾಹಕರಿಗೆ ಸಾಗಣೆ ವೆಚ್ಚ ಇಲ್ಲದೆ ಅಡುಗೆ ಸಿಲಿಂಡರ್ ವಿತರಿಸಬೇಕು ಎಂಬ ನಿಯಮವನ್ನು ಉಲ್ಲಂಘಿಸಿ ಗ್ರಾಹಕರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೇದಾರ್ ಪುಟ್ಟಸ್ವಾಮಿ ಅವರಿಗೆ ತಾಕೀತು ಮಾಡಿದರು.ತಾಲ್ಲೂಕಿನಲ್ಲಿ ಅನಧಿಕೃತ ಶಾಲೆಗಳು ತಲೆ ಎತ್ತುತ್ತಿದ್ದು ಅವುಗಳನ್ನು ಬಂದ್ ಮಾಡಿಸಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಶಾಲೆ ಬಿಟ್ಟ ಹಾಗೂ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಗದೀಶ್ ಅವರಿಗೆ ಸೂಚಿಸಿದರು.

 

ಕಸಬಾ ಹೋಬಳಿ ನಗುವನಹಳ್ಳಿ, ಬ್ರಹ್ಮಪುರ, ಬೊಮ್ಮೂರು ಅಗ್ರಹಾರ ಇತರ ಕಡೆಗಳಲ್ಲಿ ತೆಂಗಿನ ಮರಗಳಿಗೆ ಕಪ್ಪುತಲೆ ಹುಳು ಬಾಧೆ ಕಾಣಿಸಿಕೊಂಡಿದೆ. ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಚೆಕ್ ಡ್ಯಾಂ ನಿರ್ಮಿಸಲು ಅವಕಾಶ ಇದ್ದರೂ ಇದುವರೆಗೆ ತಾಲ್ಲೂಕಿನಲ್ಲಿ ಚೆಕ್ ಡ್ಯಾಂ ಏಕೆ ನಿರ್ಮಿಸಿಲ್ಲ ಎಂದು ಇಓ ಅಮರನಾಥ್ ಜಲಾನಯನ ಅಧಿಕಾರಿಗಳನ್ನು ಪ್ರಶ್ನಿಸಿದರು.ಜಿ.ಪಂ. ಎಇಇ ಹನುಮಂತಯ್ಯ, ಬಿಇಓ ಜಗದೀಶ್, ಸಹಾಯಕ ಕೃಷಿ ನಿರ್ದೇಶಕಿ ಎಚ್.ಎನ್.ಮಮತಾ, ಸಿಡಿಪಿಓ ಬಸವರಾಜು ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.1 ಕೋಟಿ ವೆಚ್ಚಕ್ಕೆ ಅನುಮೋದನೆ: ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಸೋಮವಾರ ಸಂಜೆ ನಡೆದ ತುರ್ತು ಸಭೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಸ್ಮಶಾನ, ಅರಣ್ಯ, ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳನ್ನು ರೂ.ಒಂದು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ, ದುರಸ್ತಿ ಮಾಡಲು ಅಧ್ಯಕ್ಷ, ಸದಸ್ಯರನ್ನು ಒಳಗೊಂಡ ಸಭೆ ಅನುಮೋದನೆ ನೀಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.