ಸೋಮವಾರ, ಜನವರಿ 20, 2020
18 °C

ಪರಿಶಿಷ್ಟ ದೌರ್ಜನ್ಯ ಕಾಯ್ದೆ ದುರ್ಬಳಕೆ ತಡೆಯಲು ಹಕ್ಕೊತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆ ಆಗುತ್ತಿದ್ದು, ಒಕ್ಕಲಿಗ ಸಮುದಾಯದ ಮೇಲೆ ದೌರ್ಜನ್ಯಕ್ಕೆ ಬಳಕೆಯಾಗುತ್ತಿದೆ. ಇದನ್ನು ತಡೆಯಬೇಕು, ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಆಗ್ರಹಪಡಿಸಿ ನಗರದಲ್ಲಿ ಶುಕ್ರವಾರ ಒಕ್ಕಲಿಗರು ಬಲಪ್ರದರ್ಶನ ನಡೆಸಿದರು.`ನಾವೆಲ್ಲರೂ ಒಂದೇನಮ್ಮ ಹೋರಾಟಕ್ಕೆ ಜಯವಾಗಲಿ. ಕೆಣಕಿದರೆ ಸುಮ್ಮನಿರೆವು~ ಎಂಬ ಘೋಷಣೆಗಳಿದ್ದ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಪ್ರದರ್ಶನಕಾರರು, ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆ ದುರ್ಬಳಕೆ ಸಂದರ್ಭದಲ್ಲಿ ಸಮುದಾಯದ ಜನರು ಭಯ ಬೀಳುವುದು ಬೇಡ, ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಸಂದೇಶವನ್ನು ಬೃಹತ್ ಪ್ರತಿಭಟನೆಯ ಮೂಲಕ ಸಮುದಾಕ್ಕೆ ರವಾನಿಸಿತು.ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಮೆರವಣಿಗೆಯಲ್ಲಿ ತೆರಳಿದ, ಮಹಿಳೆಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಒಕ್ಕಲಿಗರು, ದೌರ್ಜನ್ಯ ಆರೋಪಗಳ ಬಂದಾಗ ಅಧಿಕಾರಿಗಳು ಕೂಡಾ ಕೂಲಂಕುಷವಾಗಿ ವಸ್ತುಸ್ಥಿತಿ ಪರಿಶೀಲನೆ ನಡೆಸಬೇಕು. ಬಹುತೇಕ ಸಂದರ್ಭದಲ್ಲಿ ಈ ಕಾಯ್ದೆಯು ದುರ್ಬಳಕೆ ಆಗುತ್ತಿದೆ. ಇದರಿಂದಾಗಿ ಒಕ್ಕಲಿಗರು, ಇತರೆ ಜನಾಂಗದವರು ಮಾನಸಿಕ ನೋವಿನಿಂದ ಬಳಲುವಂತಾಗಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ವರದಿಯಾದ ಅಬಲವಾಡಿ ಪ್ರಕರಣ ಉಲ್ಲೇಖಿಸಿದ ಪ್ರತಿಭಟನಾ ಕಾರರು, ಕೆಲ ಸಂಘಟನೆಗಳು ಈ ಘಟನೆಯನ್ನು ತಮಗೆ ಬೇಕಾದಂತೆ ಬಳಸುತ್ತಿವೆ. ಮೃತ ಸುವರ್ಣಾ ಮತ್ತು ಅದಕ್ಕೂ ಹಿಂದೆ ಆಕೆಯ ಸೋದರ ಸುನೀಲ್ ಅವರ ಅಸಹಜ ಸಾವಿಗೆ ಆಕೆಯ ಪ್ರಿಯಕರ ಎಂದು ಹೇಳಿಕೊಳ್ಳುತ್ತಿರುವ ಗೋವಿಂದರಾಜು, ಮತ್ತವರ ಕುಟುಂಬವೇ ಕಾರಣ. ಈ ಬಗೆಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಜರುಗಿಸಬೇಕು ಎಂದು ಹಕ್ಕೊತ್ತಾಯವನ್ನು ಮಂಡಿಸಿದವು.ಈ ಕುರಿತು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರಿಗೆ ಮನವಿಯನ್ನು ಸಲ್ಲಿಸಿದ ಪ್ರತಿಭಟನಾಕಾರರು, ಶಾಂತಿಪ್ರಿಯರಾದ ಒಕ್ಕಲಿಗ ಸಮುದಾಯದ ಮೇಲೆ ವ್ಯವಸ್ಥಿತವಾಗಿ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿರುವ ವ್ಯಕ್ತಿಗಳು, ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದವರು.`ದೌರ್ಜನ್ಯ ತಡೆಯಲು ಸಂಬಂಧಿತ ಕಾಯ್ದೆಗೆ ತಿದ್ದುಪಡಿ ತರಬೇಕು~

ಈ ಸಮುದಾಯದ ಕುಂದುಕೊರತೆ ನಿವಾರಣೆಗಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿ ತಿಂಗಳು ಪರಿಶಿಷ್ಟರ ಕುಂದುಕೊರತೆ ಆಲಿಸಲು ಸಭೆ ನಡೆಸುವಂತೆ, ಒಕ್ಕಲಿಗರ ಕುಂದುಕೊರತೆ ಆಲಿಸಲೂ ಸಭೆಯನ್ನು ಕರೆಯಬೇಕು ಎಂದು ಆಗ್ರಹಪಡಿಸಿದರು. ಇದು ಸೇರಿದಂತೆ ಐದು ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲಾಯಿತು.ಈ ಕುರಿತ ಹೋರಾಟಕ್ಕೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸ್ವಾಭಿಮಾನಿ ಒಕ್ಕಲಿಗರ ಸೇವಾ ಒಕ್ಕೂಟದ  ಲೋಕೇಶ್‌ಬಾಬು, ನಾಗಣ್ಣ ಬಾಣಸವಾಡಿ, ಹೊನ್ನೇಶ್, ಮಲ್ಲಿಕಾರ್ಜುನ ಅಲ್ಲದೆ, ಹನಕೆರೆ ಶಶಿಕುಮಾರ್, ಟಿ.ಎಸ್. ಸತ್ಯಾನಂದ, ಜಯಕರ್ನಾಟಕದ ಜಯರಾಂ, ಪಡಿತರ ವಿತರಕರ ಸಂಘದ ಕೃಷ್ಣಪ್ಪ, ನಾರಾಯಣ್, ಕೆ.ಎಸ್.ಶ್ರೀಕಂಠಸ್ವಾಮಿ, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎಚ್.ಎಲ್. ಶಿವಣ್ಣ, ರವಿಕುಮಾರ್, ಚಿಕ್ಕೋನಹಳ್ಳಿ ತಮ್ಮಯ್ಯ, ನಾಗಮಂಗಲದ ಟಿ.ಕೆ.ರಾಮೇಗೌಡ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)