ಬುಧವಾರ, ಜನವರಿ 29, 2020
27 °C

ಪರಿಸರಸ್ನೇಹಿ ಕಾಫಿ ಪಲ್ಪಿಂಗ್ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ಜಿಲ್ಲೆಯಲ್ಲಿ ಕಾಫಿ ಕುಯ್ಲು ಪ್ರಾರಂಭವಾದೊಡನೆ ಪರಿಸರ ಮಾಲಿನ್ಯದ ಕೂಗು ಎಲ್ಲೆಡೆ ಕೇಳಿಬರುತ್ತದೆ. ಕಾಫಿ ಸಂಸ್ಕರಣೆಯ ತ್ಯಾಜ್ಯವನ್ನು ನಿರ್ವಹಣೆ ಮಾಡುವುದೇ ಬಹುದೊಡ್ಡ ಸಮಸ್ಯೆಯಾಗಿ ರೈತರನ್ನು ಕಾಡುತ್ತದೆ.ಆದರೆ, ಇತ್ತೀಚೆಗೆ ನವೀನ ಮಾದರಿಯ ಪರಿಸರ ಸ್ನೇಹಿ ತಂತ್ರಜ್ಞಾನ ಬಂದಿರುವುದರಿಂದ ದೊಡ್ಡ ದೊಡ್ಡ ಕಾಫಿ ಬೆಳೆಗಾರರು ಸಮಸ್ಯೆಯಿಂದ ಕೈತೊಳೆದುಕೊಂಡಿದ್ದಾರೆ. ಕಾಫಿ ಸಂಸ್ಕರಣೆಯಲ್ಲಿ ನೀರಿನ ಬಳಕೆಯನ್ನು ಕಡಿಮೆ ಮಾಡಿ ಅದನ್ನು ಪುನರ್ಬಳಕೆ ಮಾಡುವ ಬ್ರೆಜಿಲ್ ತಂತ್ರಜ್ಞಾನದ ನೂತನ ಮಾದರಿಯ ಕಾಫಿ ಪಲ್ಪಿಂಗ್ ಘಟಕ ಎರಡು ವರ್ಷಗಳಿಂದ ಸೋಮವಾರಪೇಟೆ ಸಮೀಪದ ಬೇಳೂರು ಮುರುಘರಾಜೇಂದ್ರ ಮಠದ ಕಾಫಿತೋಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಈ ಭಾಗದ ಬೆಳೆಗಾರರಿಗೆ ವರದಾನವಾಗಿದೆ.ಪಲ್ಪಿಂಗ್‌ನಲ್ಲಿ ಕಾಫಿ ಹಣ್ಣಿನ ಸಿಪ್ಪೆ ತೆಗೆಯಲು ಹಾಗೂ ಕಾಫಿ ಬೇಳೆಯನ್ನು ತೊಳೆಯುವ ಕಾರ್ಯಕ್ಕೆ ಸಾಂಪ್ರದಾಯಿಕ ಕ್ರಮ ಅನುಸರಿಸಿದರೆ ಹೆಚ್ಚಿನ ನೀರು, ಕಾರ್ಮಿಕರು ಬೇಕಾಗುತ್ತದೆ. ಸಂಸ್ಕರಣೆಯ ನಂತರ ಹೊರಬರುವ ತ್ಯಾಜ್ಯ ನೀರನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ಅದು ಸುತ್ತಲಿನ ಪರಿಸರವನ್ನು ಮಲಿನಗೊಳಿಸಿ ಜನ ಮತ್ತು ಜಾನುವಾರುಗಳಿಗೆ ಮಾರಕವಾಗುತ್ತದೆ.

ಪಲ್ಪಿಂಗ್ ನೀರು ಬೆರಕೆಯಾದ ಹೊಳೆಯ ನೀರಿನಲ್ಲಿ ಜಲಚರಗಳು ಹಾಗೂ ಜಾನುವಾರುಗಳು ನೀರನ್ನು ಕುಡಿದು ಸತ್ತ ಹಲವು ಘಟನೆಗಳು ನಡೆದಿವೆ. ಈ ಕಲುಷಿತ ನೀರಿನಿಂದ ಮನುಷ್ಯರಿಗೂ ವಾಂತಿ ಭೇದಿಯಂತಹ ಕಾಯಿಲೆಗಳು ಬರುತ್ತವೆ. ತ್ಯಾಜ್ಯ ನೀರನ್ನು ಮಣ್ಣಿನಲ್ಲೂ ಇಂಗಿಸುವ ಹಾಗಿಲ್ಲ.ಆದ್ದರಿಂದ ಪಲ್ಪಿಂಗ್ ಘಟಕದವರು ತಾಜ್ಯ ನೀರನ್ನು ಸರಿಯಾದ ಕ್ರಮದಲ್ಲಿ ವಿಲೇವಾರಿ ಮಾಡುವ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವರ್ಷಕ್ಕೊಮ್ಮೆ ಪರಿಶೀಲನೆ ಮಾಡಬೇಕೆಂಬ ನಿಯಮವೂ ಇದೆ. ಆದರೆ, ನೀರನ್ನು ಪುನರ್ಬಳಕೆ ಮಾಡುವ ಮೂಲಕ ಇದರಿಂದ ಹೊರಬರುವ ತ್ಯಾಜ್ಯ ನೀರಿನ ಪ್ರಮಾಣ ಕಡಿಮೆಯಾಗುವಂತೆ ಮಾಡುವುದು ಹೊಸ ಮಾದರಿಯ ಪಲ್ಪಿಂಗ್ ಘಟಕಗಳ ಮುಖ್ಯ ಯೋಜನೆಯಾಗಿದೆ.ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿ ಅತ್ಯಧಿಕವಾಗಿ ಅರೇಬಿಕಾ ಕಾಫಿಯನ್ನು ಬೆಳೆಯಲಾಗುತ್ತಿದ್ದು, ಇದಕ್ಕೆ ಉತ್ತಮ ಮಾರುಕಟ್ಟೆ ಹಾಗೂ ದರ ಸಿಗಲು ಸರಿಯಾದ ಕ್ರಮದಲ್ಲಿ ಪಲ್ಪಿಂಗ್ ಮಾಡುವುದು ಅನಿವಾರ್ಯ.ಆದ್ದರಿಂದ ಉತ್ತಮ ಗುಣಮಟ್ಟದ ಪಲ್ಪಿಂಗ್ ಘಟಕವನ್ನು ಸ್ಥಾಪಿಸಲು ಹಲವರು ಮುಂದಾಗಿದ್ದಾರೆ. ಹೀಗಾಗಿ ಕಾಫಿ ಮಂಡಳಿ ಕೂಡಾ ಆಯ್ದ ಕೆಲವು ಗ್ರಾಮಗಳಲ್ಲಿ ಆಧುನಿಕ ಕಾಫಿ ಪಲ್ಪಿಂಗ್ ಘಟಕ ನಿರ್ಮಿಸಲು ಧನ ಸಹಾಯ ನೀಡುವ ಯೋಜನೆಯನ್ನು ಕೂಡಾ ಹಾಕಿಕೊಂಡಿತು.

ಬೇಳೂರಿನಲ್ಲಿ ಸ್ಥಾಪಿಸಿರುವ ನೂತನ ಪಲ್ಪಿಂಗ್ ಘಟಕಕ್ಕೆ ₨ 40 ಲಕ್ಷ ವೆಚ್ಚವಾಗಿದ್ದು, ಇದರಲ್ಲಿ ಯಂತ್ರೋಪಕರಣಕ್ಕೆ ಸುಮಾರು ₨ 20 ಲಕ್ಷ ಖರ್ಚಾಗಿದೆ. ಅತ್ಯಂತ ವ್ಯವಸ್ಥಿತವಾಗಿ ನಿರ್ಮಾಣವಾಗಿರುವ ಈ ಘಟಕದಲ್ಲಿ ಶೇ 90ರಷ್ಟು ಕೆಲಸವನ್ನು ಯಂತ್ರಗಳಿಂದಲೇ ನಿರ್ವಹಿಸಲಾಗುತ್ತದೆ. ಹೀಗಾಗಿ ಕಾರ್ಮಿಕರ ಮೇಲಿನ ಅವಲಂಬನೆಯೂ ಕಡಿಮೆ.ಹಣ್ಣನ್ನು ತೊಳೆದು ಕಲುಷಿತಗೊಂಡ ನೀರನ್ನು 5ನೆಯ ತೊಟ್ಟಿಯಲ್ಲಿ ಸಂಗ್ರಹಿಸಿ, ಪುನಃ ಇದನ್ನು ಬಳಸಲಾಗುವ ವ್ಯವಸ್ಥೆ ಇದರಲ್ಲಿದೆ. ಪ್ರತಿ ಗಂಟೆಗೆ 3,500 ಕೆ.ಜಿ. ಕಾಫಿ ಹಣ್ಣನ್ನು ಸಂಸ್ಕರಿಸುವ ಸಾಮರ್ಥ್ಯ ಇರುವುದರಿಂದ ಕೆಲಸವೂ ತ್ವರಿತವಾಗುತ್ತದೆ.

ಡಿ.ಪಿ. ಲೋಕೇಶ್

ಪ್ರತಿಕ್ರಿಯಿಸಿ (+)