ಶನಿವಾರ, ಮೇ 28, 2022
30 °C

ಪವರ್ ಪ್ಲೇ ನಿಯಮದಲ್ಲಿ ಬದಲಾವಣೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಐಸಿಸಿ ಕ್ರಿಕೆಟ್ ಸಮಿತಿಯು ಏಕದಿನ ಕ್ರಿಕೆಟ್‌ನಲ್ಲಿ `ಪವರ್ ಪ್ಲೇ~ ನಿಯಮದಲ್ಲಿ ಬದಲಾವಣೆಗೆ ಶಿಫಾರಸು ಮಾಡಿದೆ. 16 ರಿಂದ 40ನೇ ಓವರ್‌ನ ಒಳಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ಲೇಗಳನ್ನು ತೆಗೆದುಕೊಳ್ಳಬೇಕೆಂಬ ನಿಯಮದಲ್ಲಿ ಮತ್ತೆ ಬದಲಾವಣೆ ಉಂಟಾಗುವ ಸಾಧ್ಯತೆಯಿದೆ.ಈಗ ಇರುವ `ಡಕ್ವರ್ಥ್ ಲೂಯಿಸ್~ ನಿಯಮವನ್ನೇ ಮುಂದುವರಿಸಲು ಮೇ 30 ಹಾಗೂ 31 ರಂದು ಲಾರ್ಡ್ಸ್‌ನಲ್ಲಿ ನಡೆದ ಸಭೆಯಲ್ಲಿ ಸಮಿತಿಯು ನಿರ್ಧರಿಸಿದೆ.ಐಸಿಸಿ ಕ್ರಿಕೆಟ್ ಸಮಿತಿಯು ಕಳೆದ ವರ್ಷ ಏಕದಿನ ಕ್ರಿಕೆಟ್‌ನ ನಿಯಮಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ ಪವರ್ ಪ್ಲೇಗಳನ್ನು 16 ರಿಂದ 40ರ ಒಳಗಿನ ಓವರ್‌ಗಳಲ್ಲಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂಬುದು ಇದರಲ್ಲಿ ಪ್ರಮುಖವಾಗಿತ್ತು. ಮಧ್ಯದ ಓವರ್‌ಗಳಲ್ಲಿ ಪಂದ್ಯಕ್ಕೆ ಹೆಚ್ಚಿನ ರೋಚಕತೆ ತರುವ ನಿಟ್ಟಿನಲ್ಲಿ ಈ ಬದಲಾವಣೆ ತರಲಾಗಿತ್ತು.ಆದರೆ ಇದರಿಂದ ಪಂದ್ಯಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂಬುದನ್ನು ಲಾರ್ಡ್ಸ್‌ನಲ್ಲಿ ನಡೆದ ಸಭೆಯಲ್ಲಿ ಕಂಡುಕೊಳ್ಳಲಾಗಿದೆ. ಹೊಸ ನಿಯಮದಂತೆ ಮೊದಲ 10 ಓವರ್‌ಗಳ ಕಡ್ಡಾಯ `ಪವರ್ ಪ್ಲೇ~ ಎಂದಿನಂತೆ ಮುಂದುವರಿಯಲಿದೆ. ಬ್ಯಾಟಿಂಗ್ ಮಾಡುವ ತಂಡ ಆ ಬಳಿಕ 40 ನೇ ಓವರ್‌ನ ಒಳಗಾಗಿ ಐದು ಓವರ್‌ಗಳ `ಬ್ಯಾಟಿಂಗ್ ಪವರ್‌ಪ್ಲೇ~ ತೆಗೆದುಕೊಳ್ಳಬಹುದು. ಈಗ ಇರುವಂತಹ `ಬೌಲಿಂಗ್ ಪವರ್‌ಪ್ಲೇ~ಯನ್ನು ರದ್ದುಮಾಡಲಾಗುವುದು.`ಪವರ್ ಪ್ಲೇ~ ಅಲ್ಲದ ಓವರ್‌ಗಳಲ್ಲಿ 30 ಯಾರ್ಡ್ ಸರ್ಕಲ್‌ನಿಂದ ಹೊರಗೆ ನಾಲ್ಕು ಮಂದಿ ಫೀಲ್ಡರ್‌ಗಳಿಗೆ ಮಾತ್ರ ನಿಲ್ಲಲು ಅವಕಾಶವಿದೆ. ಈಗ ಇರುವ ನಿಯಮದಂತೆ ಐವರು ಕ್ಷೇತ್ರರಕ್ಷಕರಿಗೆ ನಿಲ್ಲಬಹುದು. ಕ್ವಾಲಾಲಂಪುರದಲ್ಲಿ ಈ ತಿಂಗಳ ಕೊನೆಯಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ಒಪ್ಪಿಗೆ ದೊರೆತರೆ ಹೊಸ ನಿಯಮ ಜಾರಿಯಾಗಲಿದೆ.ಹಲವು ಬಾರಿ ವಿವಾದಕ್ಕೆ ಒಳಗಾಗಿರುವ `ಡಕ್ವರ್ಥ್ ಲೂಯಿಸ್~ ನಿಯಮವನ್ನು ಮುಂದುವರಿಸುವುದು ಐಸಿಸಿಯ ಉದ್ದೇಶ. ಭಾರತದ ವಿ. ಜಯದೇವನ್ ಅವರು ಹೊಸ ಲೆಕ್ಕಾಚಾರದಲ್ಲಿ `ವಿಜೆಡಿ~ ನಿಯಮವನ್ನು ಐಸಿಸಿಯ ಮುಂದಿಟ್ಟಿದ್ದರು. ಸಭೆಯಲ್ಲಿ `ವಿಜೆಡಿ~ ನಿಯಮದ ಬಗ್ಗೆ ಚರ್ಚೆ ನಡೆಯಿತಾದರೂ, ಅವಿರೋಧವಾಗಿ ಅದನ್ನು ತಿರಸ್ಕರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.