ಭಾನುವಾರ, ಜೂಲೈ 5, 2020
22 °C

ಪಾಠ ಬಿಟ್ಟು ಹೊಲದತ್ತ ಚಿಣ್ಣರ ಓಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ಪರಿಣಾಮ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಈಚೆಗೆ ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಮಕ್ಕಳ ಗಣತಿ ಕಾರ್ಯ ಪೂರ್ಣಗೊಳಿಸಲಾಗಿದೆ. ಮನೆ ಮನೆಗೆ ತೆರಳಿ ಶಿಕ್ಷಣ ಇಲಾಖೆ ಸಿಬ್ಬಂದಿ ಮತ್ತು ಶಿಕ್ಷಕರು ಸಮೀಕ್ಷೆ ನಡೆಸಿದ್ದಾರೆ. ಅದರನ್ವಯ ಜಿಲ್ಲೆಯಲ್ಲಿ 6ರಿಂದ 14ವರ್ಷ ವಯೋಮಾನದ 2,602 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂಬುದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಕಿ-ಅಂಶ.ಆದರೆ, ಸ್ವಯಂಸೇವಾ ಸಂಸ್ಥೆಗಳು ಇಲಾಖೆಯ ಈ ಮಾಹಿತಿ ಒಪ್ಪಲು ಸಿದ್ಧವಿಲ್ಲ. ಈ ಸಂಖ್ಯೆಗಿಂತಲೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎನ್ನುವುದು ಅವರ ವಾದ. ಪ್ರಸ್ತುತ ಶಿಕ್ಷಣ ಇಲಾಖೆಯಿಂದ ಇಲ್ಲಿಯವರೆಗೆ ಶಾಲೆಬಿಟ್ಟ ಮಕ್ಕಳಲ್ಲಿ 428 ಚಿಣ್ಣರನ್ನು ವಿವಿಧ ಕಾರ್ಯಕ್ರಮದಡಿ ಶಾಲೆಗಳಿಗೆ ದಾಖಲಿಸಲಾಗಿದೆ. 255 ಮಕ್ಕಳಿಗೆ ವಸತಿಯುತ ಮತ್ತು ವಸತಿರಹಿತ ಸೇತುಬಂಧ ಶಿಕ್ಷಣ ಕಾರ್ಯಕ್ರಮದಡಿ ಶಿಕ್ಷಣ ನೀಡಲಾಗುತ್ತಿದೆ. ಇವರನ್ನು ಹೊರತುಪಡಿಸಿದರೆ ಉಳಿದ ಮಕ್ಕಳಿಗೆ ಮಾತ್ರ ಕಲಿಕೆಯ ಭಾಗ್ಯವಿಲ್ಲ.ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಜ್ಞಾನ ದೇಗುಲದತ್ತ ಕರೆತರಲು ಸರ್ಕಾರ ಹಲವು ಯೋಜನೆ ರೂಪಿಸಿದೆ. ಆದರೆ, ಶಾಲೆ ಬಿಡುವವರ ಸಂಖ್ಯೆಗೆ ಮಾತ್ರ ಕಡಿವಾಣ ಬಿದ್ದಿಲ್ಲ. ಪ್ರತಿ ಸೋಮವಾರದಂದು ದಾಖಲಾತಿ ಆಂದೋ ಲನದ ಮೆರವಣಿಗೆ ಗ್ರಾಮಗಳಲ್ಲಿ ನಡೆಯುತ್ತಿದೆ. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಎಂಬ ಘೋಷಣೆಯೊಂದಿಗೆ ಶಾಲೆಯೊಳಗಿರುವ ಮಕ್ಕಳು ಭಿತ್ತಿಪತ್ರ ಹಿಡಿದು ಊರಿನ ಬೀದಿಗಳಲ್ಲಿ ಜಾಥಾ ನಡೆಸುತ್ತಾರೆ. ಆದರೆ, ಫಲಶ್ರುತಿ ಮಾತ್ರ ಶೂನ್ಯ. ಜತೆಗೆ, ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಪುನಃ ಕರೆತರಲು ಶಿಕ್ಷಕರನ್ನೇ ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಲಾಗು ತ್ತದೆ. ಉದಾಹರಣೆಗೆ ಶಾಲೆಯೊಂದರಲ್ಲಿ 12 ಮಕ್ಕಳು ಶಾಲೆ ಬಿಟ್ಟಿದ್ದರೆ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಮಕ್ಕಳನ್ನು ಹಂಚಿಕೆ ಮಾಡಿ ಜವಾಬ್ದಾರಿ ವಹಿಸಲಾಗುತ್ತದೆ.ಅಂಥ ಶಿಕ್ಷಕರು ಆ ಮಕ್ಕಳ ಮನೆಗಳಿಗೆ ತೆರಳಿ ಪೋಷಕರ ಮನವೊಲಿಸಬೇಕಿದೆ. ಎಸ್‌ಡಿಎಂಸಿ ಸದಸ್ಯರ ನೆರವು ಪಡೆದುಕೊಳ್ಳಲು ಅವಕಾಶವಿದೆ. ಯಾವುದೇ, ಮಗು ಶಾಲೆ ಬಿಡಲು ನಿರ್ದಿಷ್ಟ ಕಾರಣ ಪತ್ತೆ ಹಚ್ಚಬೇಕಿದೆ. ಶಿಕ್ಷಣದ ಮಹತ್ವ ಕುರಿತು ಅರಿವು ಮೂಡಿಸಿ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವುದು ಶಿಕ್ಷಕರ ಜವಾಬ್ದಾರಿ.ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕೆಂಬ ಅರಿವು ಪೋಷಕರಲ್ಲಿ ಕಡಿಮೆ ಯಿದೆ. ಹೀಗಾಗಿ, ಹೊಲದ ಕೆಲಸಗಳಿಗೆ ಮಕ್ಕಳನ್ನು ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚಿದೆ. ಈ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ. ಪೋಷಕರಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದರೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗಲಿದೆ ಎನ್ನುತ್ತಾರೆ ಶಿಕ್ಷಕರು.‘ಜಿಲ್ಲೆಯಲ್ಲಿ ಶಾಲೆ ಬಿಟ್ಟಿರುವ 2,602 ಮಕ್ಕಳಲ್ಲಿ 14ವರ್ಷ ಮೀರಿದ 300 ಮಕ್ಕಳಿದ್ದಾರೆ. ಅವರನ್ನು ವರದಿಯಿಂದ ಕೈಬಿಡ ಲಾಗುತ್ತದೆ. ಈ ತಿಂಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕಡ್ಡಾಯವಾಗಿ ಪುನಃ ಶಾಲೆಗೆ ದಾಖಲಿಸುವ ಬಗ್ಗೆ ಸಿಆರ್‌ಪಿಗಳಿಗೆ ಸೂಚಿಸಲಾಗಿದೆ. ಮುಖ್ಯಶಿಕ್ಷಕರೊಂದಿಗೆ ಚರ್ಚಿಸಿ ಯಾವುದೇ ಮಗು ಶಾಲೆಯಿಂದ ಹೊರಗುಳಿ ಯಲು ಕಾರಣವಾಗಿರುವ ಅಂಶದ ಬಗ್ಗೆ ಇಲಾಖೆಗೆ ವರದಿ ನೀಡಲು ತಿಳಿಸಲಾಗಿದೆ’ ಎಂಬುದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾ ಖೆಯ ಉಪ ನಿರ್ದೇಶಕ ಬಿ.ಎ. ರಾಜಶೇಖರ್ ಅವರ ವಿವರಣೆ.‘ಈ ತಿಂಗಳ ಅಂತ್ಯದೊಳಗೆ ಎಲ್ಲಾ ಮಕ್ಕಳನ್ನು ಶಾಲೆಗೆ ದಾಖಲಿಸಲಾಗುವುದು. ಅರ್ಧದಲ್ಲೇ ಶಿಕ್ಷಣ ವಂಚಿತರಾಗಿರುವ ಮಕ್ಕಳಿಗೆ ಚಿಣ್ಣರ ಅಂಗಳ ಕಾರ್ಯಕ್ರಮದಡಿ ದಾಖಲಿಸಿ ಅವರ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಲಾಗುತ್ತದೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.