ಭಾನುವಾರ, ಮೇ 16, 2021
27 °C

ಪೊಲೀಸ್ ಬಲವೃದ್ಧಿಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ/ಐಎಎನ್‌ಎಸ್): ಪೊಲೀಸ್ ಪಡೆಗಳು ನಾಗರಿಕ ಆಡಳಿತ ಮತ್ತು ಶಾಂತಿಪಾಲನೆಯ ಬೆನ್ನೆಲುಬಾಗಿದ್ದು, ಪೊಲೀಸರಿಗೆ ಯಶಸ್ವಿ ಕಾರ್ಯನಿರ್ವಹಣೆಗಾಗಿ ಉತ್ತಮ ತರಬೇತಿ ಮತ್ತು ಸಾರ್ವಜನಿಕರರೊಂದಿಗೆ ವ್ಯವಹರಿಸುವಾಗ ಒಳ್ಳೆಯ ನಡವಳಿಕೆ ತೋರಲು ಸೂಕ್ತ ಸಲಹೆಗಳನ್ನು ನೀಡಬೇಕಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರ ಇಲ್ಲಿ ನುಡಿದರು.ಗುಪ್ತಚರ ದಳ ಏರ್ಪಡಿಸಿದ್ದ ದೇಶದ ಡಿಜಿಪಿ, ಐಜಿಪಿ ಮತ್ತಿತರ ಉನ್ನತ ಪೊಲೀಸ್ ಅಧಿಕಾರಿಗಳ ಮೂರು ದಿನಗಳ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, `ಪೊಲೀಸ್ ಪಡೆಗಳ ಆಧಾರ ಸ್ತಂಭವಾಗಿರುವ ಪೊಲೀಸರು, ಇಲಾಖೆಯ ಒಟ್ಟಾರೆ ಬಲದಲ್ಲಿ ಶೇ 87ರಷ್ಟು ಸಂಖ್ಯೆಯಲ್ಲಿದ್ದಾರೆ~ ಎಂದರು.`ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ವಿಶ್ವಾಸ ಮೂಡಿಸುವ ಅಗತ್ಯವಿದೆ. ಉತ್ತಮ ಮೂಲಸೌಕರ್ಯಗಳ ಕೊರತೆಯ ನಡುವೆಯೂ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಕೆಲಸವನ್ನು ಗೌಣವಾಗಿ ಪರಿಗಣಿಸುವಂತಹದ್ದಲ್ಲ. ಇವರಲ್ಲಿ ಹಲವರು ಕೊಳೆಗೇರಿಗಳಲ್ಲಿ ವಾಸಿಸುತ್ತಾ ಕಷ್ಟದ ಜೀವನ ಸಾಗಿಸುತ್ತಿದ್ದಾರೆ.ಮಹಿಳಾ ಪೊಲೀಸರಿಗೆ ನಮ್ಮ ಎಲ್ಲ ಠಾಣೆಗಳು ಸೂಕ್ತ ಸೌಲಭ್ಯ ಒದಗಿಸುತ್ತಿಲ್ಲ. ನಮ್ಮ ಪುರುಷ ಮತ್ತು ಮಹಿಳಾ ಪೊಲೀಸರ ವಾಸ ಮತ್ತು ಕೆಲಸದ ವಾತಾವರಣವನ್ನು ಸುಧಾರಣೆ ಮಾಡದಿದ್ದಲ್ಲಿ, ಅವರಿಂದ ಉನ್ನತ ಮಟ್ಟದ ದಕ್ಷ ಸೇವೆಯನ್ನು ನಿರೀಕ್ಷಿಸಲಾಗದು~ ಎಂದು ಅವರು ಹೇಳಿದರು.`ಪೊಲೀಸ್ ಸಿಬ್ಬಂದಿಯ ವೃತ್ತಿ ಕೌಶಲ್ಯ ಮತ್ತು ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ವಿಧಾನವನ್ನು ಸುಧಾರಿಸಲು ಸೂಕ್ತ ತರಬೇತಿ ನೀಡಬೇಕಾಗಿದೆ. ಇಂದಿನ ಭದ್ರತಾ ಪರಿಸ್ಥಿತಿಯಲ್ಲಿ ಕೆಳಹಂತದ ಮಾಹಿತಿ ಮತ್ತು ಗುಪ್ತಚರ ಸಂಗ್ರಹ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಲು ಪೊಲೀಸ್ ಸಂಪರ್ಕ ಮತ್ತು ತಪಾಸಣಾ ಜಾಲವನ್ನು ಹೆಚ್ಚಿಸಬೇಕಾಗಿದೆ~ ಎಂದು ಅವರು ತಿಳಿಸಿದರು.ಭದ್ರತಾ ಅನಿಶ್ಚಿತತೆ: `ದೇಶದಲ್ಲಿನ ಭದ್ರತಾ ವ್ಯವಸ್ಥೆಯು ಅನಿಶ್ಚಿತತೆಯಲ್ಲೇ ಮುಂದುವರಿದಿದ್ದು, ಉಗ್ರರ ಗಡಿ ನುಸುಳುವಿಕೆಯ ಶಿಬಿರಗಳು ಸಕ್ರಿಯವಾಗುತ್ತಿವೆ. ಇತ್ತೀಚೆಗೆ ಮುಂಬೈ ಮತ್ತು ದೆಹಲಿಯಲ್ಲಿ ನಡೆದ ಭಯೋತ್ಪಾದನಾ ದಾಳಿಗಳು ರಾಷ್ಟ್ರೀಯ ಭದ್ರತೆಗೆ ಉಗ್ರಗಾಮಿಗಳು ಒಡ್ಡಿರುವ ಸವಾಲನ್ನು ಪುನರ್‌ಮನನ ಮಾಡಿಸುತ್ತವೆ.

 

ಕಳೆದ ಕೆಲವು ವರ್ಷಗಳಿಂದ ಎಡಪಂಥೀಯ ಉಗ್ರಗಾಮಿಗಳು ಅನೇಕ ನಿರಪರಾಧಿ ಜನರು ಮತ್ತು ಪೊಲೀಸ್ ಸಿಬ್ಬಂದಿಯ ಜೀವವನ್ನು ತೆಗೆಯುತ್ತಿದ್ದಾರೆ. ಉಗ್ರರ ಹೊಸ ತಂಡಗಳನ್ನು ದೇಶದೊಳಕ್ಕೆ ನುಸುಳುವಂತೆ ಮಾಡುತ್ತಿರುವ ವರದಿಗಳು ಬರುತ್ತಿವೆ~ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಗಸ್ತು ಪೊಲೀಸರು: ಉಗ್ರರ ದಾಳಿಯ ವಿಧಾನ ಮತ್ತು ಜಾಲಗಳನ್ನು ನಾಶಪಡಿಸುವಲ್ಲಿ ಗಸ್ತು ಪೊಲೀಸರ ಪಾತ್ರ ಪ್ರಮುಖವಾಗಿದ್ದು, ಸಾಂಪ್ರದಾಯಿಕ ಮಾದರಿಯಲ್ಲಿ ಗುಪ್ತಚರ ಮಾಹಿತಿ ಸಂಗ್ರಹಿಸುವ ವಿಧಾನ ಈಗ ಅಪ್ರಸ್ತುತವಾಗಿದೆ. ಈ ನಿಟ್ಟಿನಲ್ಲಿ ದೇಶದ ಮಾನವ ಗುಪ್ತಚರ ಸಾಮರ್ಥ್ಯವನ್ನು ಬಲಪಡಿಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.ಪೊಲೀಸ್ ಕಾಯ್ದೆಗೆ 150 ವರ್ಷ: ದೇಶದ ಪೊಲೀಸ್ ಕಾರ್ಯನಿರ್ವಹಣೆ, ಕರ್ತವ್ಯ ಹಾಗೂ ಹೊಣೆಗಾರಿಕೆಯನ್ನು ನಿಯಂತ್ರಿಸಲು 1861ರಲ್ಲಿ ಬ್ರಿಟಿಷ್ ಆಡಳಿತ ಅವಧಿಯಲ್ಲಿ ಶಾಸನವಾಗಿ ಮಾಡಿದ ಪೊಲೀಸ್ ಕಾಯ್ದೆಯ 150ನೇ ವರ್ಷಾಚರಣೆಯನ್ನು ಸರ್ಕಾರ ಆಚರಿಸಲಿದೆ. ಈ ಸಂದರ್ಭದಲ್ಲಿ ನಾಗರಿಕರ ರಕ್ಷಣೆಗಾಗಿ ಹೋರಾಡಿ ಮಡಿದ ಹುತಾತ್ಮ ಪೊಲೀಸರನ್ನು ನಾವು ಸ್ಮರಿಸಿ, ಗೌರವಿಸಬೇಕಾಗಿದೆ ಎಂದು ಅವರು ತಿಳಿಸಿದರು.ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಸಲ್ಲ

ನವದೆಹಲಿ (ಪಿಟಿಐ):
ಭದ್ರತಾ ಸಂಸ್ಥೆಗಳು ಕೆಲವೊಮ್ಮೆ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯದಿಂದ ನೋಡುವುದನ್ನು ನಿಲ್ಲಿಸಲು ತುರ್ತು ಕ್ರಮ ಕೈಗೊಳ್ಳಬೇಕಿದ್ದು, ಇಲ್ಲದಿದ್ದರೆ ಹಗೆತನ ಬೆಳೆದು ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅಡ್ಡಿಯುಂಟಾಗುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರ ಇಲ್ಲಿ ಕಿವಿಮಾತು ಹೇಳಿದರು.ಕೇಂದ್ರ ಗುಪ್ತಚರ ದಳ ಏರ್ಪಡಿಸಿದ್ದ ಮೂರು ದಿನಗಳ ಡಿಜಿಪಿ, ಐಜಿಪಿ ಹಾಗೂ ಇತರ ಉನ್ನತ ಪೊಲೀಸ್ ಅಧಿಕಾರಿಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂತಹ ಅನುಭವಗಳನ್ನು ಎಲ್ಲಿದ್ದರೂ ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಇತ್ತೀಚೆಗೆ ನಡೆದ ರಾಷ್ಟ್ರೀಯ ಸಮನ್ವಯ ಮಂಡಳಿ ಸಭೆ (ಎನ್‌ಐಸಿ)ಯಲ್ಲಿ `ಕಾನೂನು ಜಾರಿ ಮತ್ತು ತನಿಖಾ ಸಂಸ್ಥೆಗಳು ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಧೋರಣೆ ಅನುಸರಿಸುತ್ತಿರುವ ದೂರುಗಳು ಕೇಳಿಬಂದಿದ್ದು, ಇದರಿಂದ ಪರಿಣಾಮಕಾರಿ ಕೆಲಸಕ್ಕೆ ತೊಂದರೆ ಉಂಟಾಗುವುದು. ಇದನ್ನು ನಿವಾರಣೆ ಮಾಡಲು ಸಮಾಜದ ಎಲ್ಲ ವರ್ಗಗಳ ವಿಶ್ವಾಸ ಮತ್ತು ಸಹಕಾರವನ್ನು ಗಳಿಸಿ, ಕಾರ್ಯನಿರ್ವಹಿಸುವ ಅವಶ್ಯಕತೆ ಇದೆ~ ಎಂದು ಅವರು ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.