ಶುಕ್ರವಾರ, ಜೂಲೈ 3, 2020
22 °C

ಪ್ಯಾಕ್‌ಮನ್ ನೆಬ್ಯುಲಾ

ಬಿ.ಎಸ್. ಶೈಲಜಾ Updated:

ಅಕ್ಷರ ಗಾತ್ರ : | |

ಪ್ಯಾಕ್‌ಮನ್ ನೆಬ್ಯುಲಾ

ನಕ್ಷತ್ರಗಳ ಉಗಮಸ್ಥಾನವೆಂದರೆ ನೆನಪಾಗುವುದು ಮಹಾವ್ಯಾಧ ಪುಂಜದ ಒರೈಯನ್ ನೆಬ್ಯುಲಾ. ಅಲ್ಲಿ ಪ್ರಕಾಶಮಾನವಾದ ಅನಿಲದ ಮೋಡವೇ ಕಾಣುತ್ತದೆ. ಆದರೆ ಇನ್ನೂ ಪ್ರಕಾಶವನ್ನು ಬೀರಲು ಆರಂಭಿಸಿರದ ಮೋಡಗಳೂ ಇರಬೇಕು ಎಂಬ ಸಂಗತಿಯನ್ನು 40ರ ದಶಕದಲ್ಲಿ ಬಾರ್ಟ್ ಬಾಕ್ ಎಂಬ ವಿಜ್ಞಾನಿ ಮೊದಲು ಪ್ರತಿಪಾದಿಸಿದ ಮೇಲೆ ಅದನ್ನು ಹುಡುಕುವ ವಿಧಾನಗಳನ್ನು ಪರಿಶೀಲಿಸಲಾಯಿತು.ಅವಕೆಂಪು ಕಿರಣಗಳನ್ನು ಇವು ಹೊರಸೂಸುತ್ತಿರಬೇಕು ಆದರೆ ಬೆಳಕನ್ನಲ್ಲ ಎಂಬ ಸಂಗತಿ ತಿಳಿದು ಬಂದಿತು. ಹಾಗಾದರೆ ಇವು ಕಪ್ಪಗೆ ಕಾಣುತ್ತಿರಬೇಕು ಎಂದು ನೆಬ್ಯುಲಾಗಳನ್ನು ಶೋಧಿಸಿದಾಗ ಊಹಿಸಿದಂತೆಯೇ ಅವು ಕಂಡು ಬಂದವು. ಅವುಗಳಿಗೆ ಬಾಕ್ ಗ್ಲಾಬ್ಯೂಲ್ ಹೆಸರು.ಮುಂದೆ ಅವಕೆಂಪು ಕಿರಣಗಳ ಸಂವೇದಕಗಳನ್ನು ಪರಿಷ್ಕರಿಸಿ ಆಕಾಶದ ಈ ಭಾಗಗಳನ್ನು ಅಭ್ಯಸಿಸಿದಾಗ ಅಲ್ಲಿ ಬೃಹತ್ ಗಾತ್ರದ ಅನಿಲದ ಮೋಡ ನಕ್ಷತ್ರ ರಚನೆಯ ಸನ್ನಾಹ ನಡೆಸಿರುವುದು ಖಚಿತವಾಯಿತು. ಇಂತಹ ಒಂದು ಮೋಡ ಕುಂತಿ (ಕೆಸಿಯೋಪಿಯಾ) ಪುಂಜದಲಿದೆ. ನಮ್ಮ ಆಕಾಶಗಂಗೆ ಗೆಲಾಕ್ಸಿಯ ಸುರುಳಿಗಳಲ್ಲಿ ಒಂದಾದ ಪಾರ್ಥ (ಪರ್ಸಿಯುಸ್) ಸುರುಳಿಯಲ್ಲಿದೆ.  ಇದಕ್ಕೆ ಎನ್‌ಜಿಸಿ 281 ಎಂಬ ನಮೂದು ಇದೆ. ಈ ಭಾಗದಲ್ಲಿರುವ ಅನೇಕ ಕಪ್ಪು ಅನಿಲದ ಮುದ್ದೆಗಳು ಸುಮಾರು 60 ಜ್ಯೋತಿರ್ವರ್ಷಗಳಷ್ಟು ವಿಸ್ತಾರವಾಗಿವೆ.ಸೂರ್ಯನ 40 ಪಟ್ಟು ದ್ರವ್ಯ ರಾಶಿ ಇಲ್ಲಿ ಅಡಗಿದೆ. ಸಮೀಪದಲ್ಲಿಯೇ ಒಂದು ಎಳೆಯ ವಯಸ್ಸಿನ ನಕ್ಷತ್ರಪುಂಜವೂ ಇದೆ. ಐಸಿ 1590 ಎಂಬ ನಮೂದಿನದು. ಅದರ ನೀಲಿ ನಕ್ಷತ್ರಗಳು ಈ ಅನಿಲ ಮೋಡಕ್ಕೆ ಶಾಖವನ್ನು ತಲುಪಿಸುತ್ತಿವೆ. ಇದನ್ನು ಹೀರಿಕೊಂಡು ಮೋಡದ ಅನಿಲಗಳು ಅವಕೆಂಪು ಕಿರಣಗಳನ್ನು ಬಿಡುಗಡೆ ಮಾಡುತ್ತಿವೆ.ಈ ನೆಬ್ಯುಲದ ಸಮೀಪದಲ್ಲಿ ಜೋಡಿ ನಕ್ಷತ್ರವೊಂದಿದೆ - ಎಚ್‌ಡಿ 5005 ಎಂಬ ಅಂಕಿತ ಇದಕ್ಕಿದೆ. ಇತ್ತೀಚಿನ ಅಧ್ಯಯನಗಳಿಂದ ಇಲ್ಲಿ ಮೂರಕ್ಕೂ ಹೆಚ್ಚು ನಕ್ಷತ್ರಗಳು ಯಮಳಗಳಂತೆ ಗುರುತ್ವ ಬಿಂದುವಿನ ಸುತ್ತ ಸುತ್ತುತ್ತಿವೆ ಎಂದು ತಿಳಿದು ಬಂದಿದೆ.ಇತ್ತೀಚಿನ ದಿನಗಳಲ್ಲಿ ಅವಕೆಂಪು ಕಿರಣಗಳ ಅಧ್ಯಯನಕ್ಕಾಗಿ ವಿಶೇಷ ದೂರದರ್ಶಕಗಳು ನಿರ್ಮಾಣವಾಗಿವೆ. ರಾಜಸ್ಥಾನದ ಮೌಂಟ್ ಅಬು ಮತ್ತು ಹಿಮಾಲಯದಲ್ಲಿ ಲಡಾಕ್ ಪ್ರಾಂತದಲ್ಲಿ ಈ ಬಗೆಯ ದೂರದರ್ಶಕಗಳು ಇವೆ. ಇವಲ್ಲದೆ 1983ರರಲ್ಲಿ ಹಾರಿದ ಅವಕೆಂಪು ಕಿರಣಗಳ ಅಧ್ಯಯನಕ್ಕೆ ಮೀಸಲಾದ ಐರಸ್ ಎಂಬ ಬಾಹ್ಯಾಕಾಶ ನೌಕೆ ಹೊಸ ಅಧ್ಯಾಯವನ್ನೇ ತೆರೆಯಿತು. ಮುಂದೆ ಇನ್ನೂ ಅನೇಕ ಬಾಹ್ಯಾಕಾಶ ನೌಕೆಗಳು ಹಾರಿ ಹೊಸ ಹೊಸ ಬಾಕ್ ಗ್ಲಾಬ್ಯೂಲ್‌ಗಳನ್ನು ತೋರಿಸಿಕೊಟ್ಟವು.‘ಎನ್‌ಜಿಸಿ 281’ ಅನ್ನು 1883ರಲಿ ್ಲವೀಕ್ಷಕ ಬರ್ನಾರ್ಡ್ ಮೊದಲ ಬಾರಿ ಗುರುತಿಸಿದ್ದನು. ಅದರ ಪಕ್ಕದ ನಕ್ಷತ್ರ ಗುಚ್ಛವನ್ನೂ ಗುರುತಿಸಿದ್ದನು. ಸುಮಾರು 60000 ಜ್ಯೋತಿರ್ವರ್ಷಗಳಷ್ಟು ದೂರ ಇರುವ ಇದು ಈಗ ದೀರ್ಘ ಅಧ್ಯಯನಕ್ಕೆ ಒಳಪಟ್ಟಿದೆ. ಸಣ್ಣ ದೂರದರ್ಶಕಗಳಿಂದ ಇದನ್ನು ಗುರುತಿಸಬಹುದು. ಇದಕ್ಕೆ ಪ್ಯಾಕ್ ಮನ್ ನೆಬ್ಯುಲಾ ಎಂಬ ಅಡ್ಡ ಹೆಸರಿದೆ. (ಇದು ಮಕ್ಕಳ ವೀಡಿಯೋ ಗೇಮ್ಸ್‌ನ ಒಂದು ಪಾತ್ರದ ಹೆಸರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.