ಭಾನುವಾರ, ಆಗಸ್ಟ್ 9, 2020
21 °C

ಪ್ಯಾರಾಲಿಂಪಿಕ್ಸ್‌ನಲ್ಲಿ ಕನ್ನಡಿಗರು...

ಪ್ರಮೋದ್ ಜಿ.ಕೆ. Updated:

ಅಕ್ಷರ ಗಾತ್ರ : | |

ಪ್ಯಾರಾಲಿಂಪಿಕ್ಸ್‌ನಲ್ಲಿ ಕನ್ನಡಿಗರು...

ಕೇವಲ ನಾಲ್ಕು ದಿನ ಕಳೆದರೆ ಸಾಕು ಲಂಡನ್ ಒಲಿಂಪಿಕ್ಸ್ ಆರಂಭ. ಅದಕ್ಕಾಗಿ ಜಗತ್ತಿನ ಕೋಟ್ಯಂತರ ಕ್ರೀಡಾಪ್ರೇಮಿಗಳು ಕಾದು ಕುಳಿತಿದ್ದಾರೆ. ಯಾವ ಸ್ಪರ್ಧಿಗಳು ಪದಕ ಗೆಲ್ಲುತ್ತಾರೆ, ನಮ್ಮ ದೇಶಕ್ಕೆ ಎಷ್ಟು ಪದಕ ಬರಲಿವೆ ಎನ್ನುವ ನಿರೀಕ್ಷೆ ಅವರದು. ಆದರೆ, ಈ ಒಲಿಂಪಿಕ್ಸ್ ಸಂಭ್ರಮದಲ್ಲಿ ಪ್ಯಾರಾಲಿಂಪಿಕ್ ಕ್ರೀಡಾಕೂಟದ ನೆನಪನ್ನೇ ಮರೆತು ಹೋದಂತಿದೆ.ಆಗಸ್ಟ್ 12ಕ್ಕೆ ಒಲಿಂಪಿಕ್ಸ್ ಮುಗಿದ ನಂತರ ಲಂಡನ್‌ನಲ್ಲಿ ಕ್ರೀಡಾ ಹುಮ್ಮಸ್ಸು ಕಡಿಮೆಯಾಗುವುದಿಲ್ಲ. ಇದಕ್ಕೆ ಕಾರಣ ಆಗಸ್ಟ್ 29ರಿಂದ ಸೆಪ್ಟಂಬರ್ 9ರ ವರೆಗೆ ನಡೆಯಲಿರುವ ಪ್ಯಾರಾಲಿಂಪಿಕ್.ಲಂಡನ್‌ನಲ್ಲಿಯೇ ನಡೆಯಲಿರುವ ಪ್ಯಾರಾಲಿಂಪಿಕ್‌ನಲ್ಲೂ ಪದಕ ಜಯಿಸುವ ಭಾರತದ ಭರವಸೆಯ ಸ್ಪರ್ಧಿಗಳಿದ್ದಾರೆ. ಒಟ್ಟು ಹತ್ತು ಸದಸ್ಯರ ಭಾರತ ತಂಡ ಲಂಡನ್‌ಗೆ ತೆರಳಲಿದೆ. ಅದರಲ್ಲಿ ಮೂರು ಮಂದಿ ಸ್ಪರ್ಧಿಗಳು ಕರ್ನಾಟಕದವರು. ಫರ್ಮಾನ್ ಬಾಷಾ (ಪವರ್ ಲಿಫ್ಟಿಂಗ್), ಶರತ್ ಗಾಯಕ್‌ವಾಡ್ (ಈಜು) ಮತ್ತು ಎಚ್.ಎನ್. ಗಿರೀಶ್ (ಹೈಜಂಪ್) ಭಾರತ ತಂಡದಲ್ಲಿರುವ ಕರ್ನಾಟಕದ ಸ್ಪರ್ಧಿಗಳು.ಈ ಸಲದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸುವ ಮಹತ್ವದ ಜವಾಬ್ದಾರಿ ಫ್ರಾನ್ಸ್‌ಗೆ ಲಭಿಸುವ ಸಾಧ್ಯತೆಯಿತ್ತು. ಆದರೆ, ಈ ಅವಕಾಶ ಕೊನೆಗೆ ಗಳಿಗೆಯಲ್ಲಿ ಲಂಡನ್ ಪಾಲಾಯಿತು. ಇದಕ್ಕಾಗಿ ಲಂಡನ್ ಸಹ ಸಜ್ಜುಗೊಂಡಿದೆ. ಶೂಟಿಂಗ್ (1), ಅಥ್ಲೆಟಿಕ್ಸ್ (5), ಈಜು (1) ಹಾಗೂ ಪವರ್ ಲಿಫ್ಟಿಂಗ್ (3) ಸ್ಪರ್ಧಿಗಳು ಈ ಸಲದ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಕನಸುಗಳಿಗೆ ಕಾವಲಾಗಿದ್ದಾರೆ.2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಕೇವಲ ಐದು ಜನ ಕ್ರೀಡಾಳುಗಳಿಗೆ ಮಾತ್ರ ಅವಕಾಶವಿತ್ತು. ಆದರೆ, ಈ ಸಲ ಆ ಸಂಖ್ಯೆ ದುಪ್ಪಟ್ಟಾಗಿದೆ. ಒಟ್ಟು 73 ದೇಶಗಳು ಈ ಸಲ ಪಾಲ್ಗೊಳ್ಳಲಿವೆ. ಫರ್ಮಾನ್ ಬಾಷಾ ಚೀನಾದ ಗುವಾಂಗ್ ಜೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ 48 ಕೆ.ಜಿ. ವಿಭಾಗದಲ್ಲಿ ಕಂಚು ಜಯಿಸಿದ್ದರು. 2004ರಲ್ಲಿ 10ನೇ ಸ್ಥಾನ ಪಡೆದಿದ್ದ ಈ ಪವರ್ ಲಿಫ್ಟರ್ ಪ್ರತಿ ಬಾರಿಯೂ ಪ್ರದರ್ಶನದಲ್ಲಿ ಸುಧಾರಣೆ ಕಾಣುತ್ತಿದ್ದಾರೆ.ಬೀಜಿಂಗ್‌ನಲ್ಲಿ ನಾಲ್ಕನೇ ಸ್ಥಾನ ಪಡೆದದ್ದೇ ಇದಕ್ಕೊಂದು ಉದಾಹರಣೆ. ಆದ್ದರಿಂದ ಈ ಸಲ ಪದಕದ ಭರವಸೆ ಹೆಚ್ಚಿದೆ. ಈ ಕಾರಣಕ್ಕಾಗಿಯೇ ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್‌ಎಐ) ಅವರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.`ಮುಖ್ಯವಾಗಿ ನೈಜೀರಿಯಾ, ಈಜಿಪ್ಟ್ ದೇಶಗಳ ಸವಾಲು ಅತ್ಯಂತ ಕಷ್ಟ. ಅವರು ನಮಗಿಂತಲೂ ಹೆಚ್ಚು ಬಲಿಷ್ಠರಾಗಿದ್ದಾರೆ. ಕಳೆದ ಸಲದ ಪ್ಯಾರಾಲಿಂಪಿಕ್ಸ್‌ನಲ್ಲಿ ಕೊಂಚದರಲ್ಲಿಯೇ ಕಂಚು ಜಯಿಸುವ ಅವಕಾಶ ತಪ್ಪಿಸಿಕೊಂಡೆ. ಈ ಸಲ ಪದಕ ಗೆಲ್ಲುವ ವಿಶ್ವಾಸವಿದೆ~ ಎಂದು `ಪ್ರಜಾವಾಣಿ~ ಜೊತೆ ಬಾಷಾ ಅನಿಸಿಕೆ ಹಂಚಿಕೊಂಡರು.ಎರಡೂ ಕಾಲುಗಳಿಲ್ಲದಿದ್ದರೂ ಬಾಷಾ ಸಾಕಷ್ಟು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದುಕೊಂಡಿದ್ದಾರೆ. ಸದಾ ಕ್ರಿಯಾಶೀಲರಾಗಿರುತ್ತದೆ. ಇದರ ಗುಟ್ಟೇನು ಎಂದು ಪ್ರಶ್ನಿಸಿದಾಗ, `ನಾನು ಯಾವತ್ತಿಗೂ ಅಂಗವಿಕಲ ಎನ್ನುವ ಹಾಗೆ ಬದುಕಲಿಲ್ಲ. ಕಾಲುಗಳಿಲ್ಲ ಎನ್ನುವ ಕೊರಗೂ ಕಾಡಲಿಲ್ಲ. ಎಲ್ಲರಂತೆ ಬೆಳೆದೆ. ಪಾಲಕರು ಹಾಗೂ ಪತಿ ಇದಕ್ಕೆ ಬೆಂಬಲವಾಗಿ ನಿಂತರು. ಎಲ್ಲಕ್ಕಿಂತ ಮುಖ್ಯವಾಗಿ ಉತ್ತಮ ತರಬೇತಿ ಸಿಕ್ಕಿತು~ ಎಂದು ಬಾಷಾ ಹೇಳಿದರು.ಪ್ಯಾರಾಲಿಂಪಿಕ್ಸ್‌ನ ಹೈಜಂಪ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕದ ಎಚ್.ಎನ್. ಗಿರೀಶ್ ಗ್ರಾಮೀಣ ಪ್ರತಿಭೆ. ಹಾಸನ ಜಿಲ್ಲೆಯ ಹೊಸನಗರದವರಾದ ಗಿರೀಶ್ ಕುವೈತ್‌ನಲ್ಲಿ ನಡೆದ ಓಪನ್ ಪ್ಯಾರಾಲಿಂಪಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಂಡಿದ್ದರು.

`ಇದು ನನಗೆ ಮೊದಲ ಒಲಿಂಪಿಕ್ಸ್.ಕೆಲ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ಕಾರಣ ಆತಂಕವೇನಿಲ್ಲ. ಆದರೆ, ಬದುಕಿನ ಕನಸೊಂದು ನನಸಾಗುವ ಖುಷಿಯಲ್ಲಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಆಡಬೇಕೆನ್ನುವುದು ಪ್ರತಿ ಕ್ರೀಡಾಪಟುವಿನ ಕನಸು~ ಎಂದು ಸಂತಸ ಹಂಚಿಕೊಂಡರು.ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿಯೇ ಈಜು ಸ್ಪರ್ಧೆಯಲ್ಲಿ ಭಾರತಕ್ಕೆ ಅವಕಾಶ ಲಭಿಸಿದ್ದು ಇದೇ ಮೊದಲು. ಅದು ಕರ್ನಾಟಕದ ಶರತ್ ಅವರಿಗೆ. ಮನೆಯಲ್ಲಿ ಸಾಕಷ್ಟು ಸಂಕಷ್ಟಗಳಿದ್ದರೂ, ಅದೆಲ್ಲವನ್ನೂ ಮೀರಿ ತಂದೆಯ ಬೆಂಬಲದ ಜೊತೆ ಈ ಸಾಧನೆಯ ಶಿಖರವನ್ನೇರಿದ್ದಾರೆ ಶರತ್. 2010ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದರು. ಆದ್ದರಿಂದ ಚೊಚ್ಚಲ ಅವಕಾಶದಲ್ಲಿ ಭಾರತದ ಈಜು ಸ್ಪರ್ಧಿ ಹೇಗೆ ಪ್ರದರ್ಶನ ನೀಡುತ್ತಾರೆ ಎನ್ನುವ ಕುತೂಹಲವಿದೆ.ಲಂಡನ್ ಒಲಿಂಪಿಕ್ಸ್ ಮುಗಿದ ಕೆಲ ದಿನಗಳಲ್ಲಿಯೇ ಪ್ಯಾರಾಲಿಂಪಿಕ್ಸ್‌ನ ಸಂಭ್ರಮ ಶುರು. ಇಲ್ಲೂ ಭಾರತದ ಸ್ಪರ್ಧಿಗಳು ಪದಕ ಗೆದ್ದರೆ ಅದು ಕ್ರೀಡಾಲೋಕದಲ್ಲೊಂದು ಹೊಸ ಉನ್ನತಿಗೆ ಕಾರಣವಾಗುತ್ತದೆ. ಈ ಎಲ್ಲಾ ಸಂಭ್ರಮ, ಸಂತಸ, ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲು ಕಾದು ನೋಡಬೇಕು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.