ಶನಿವಾರ, ಮಾರ್ಚ್ 6, 2021
25 °C

ಪ್ರಗತಿ ಕಾಣದ ಕ್ರೀಡಾಂಗಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಗತಿ ಕಾಣದ ಕ್ರೀಡಾಂಗಣ

ಗುಲ್ಬರ್ಗ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯ 20 ವರ್ಷ ಕಳೆದರೂ ಪೂರ್ಣಗೊಂಡಿಲ್ಲ.ಇದಕ್ಕೆ ಹಿಂದಿನ ಕುಲಪತಿಗಳು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಎರಡು ದಶಕದ ಕಾರ್ಯ ಈಗಲಾದರೂ ಪೂರ್ಣಗೊಳ್ಳುವುದೇ..?ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ  ಅಂತರರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣವನ್ನು ಅಭಿವೃದ್ಧಿ ಮಾಡುವ ಕೆಲಸ 1990ರಿಂದ ಇಂದಿನವರಿಗೆ ನೆನೆಗುದಿಗೆ ಬಿದ್ದಿದೆ.

 

ಖುದ್ದು ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿದ್ದ ವಿಶ್ವವಿದ್ಯಾಲಯದ ಅಂದಿನ ಕುಲಪತಿ ಪ್ರೊ. ಎನ್ ರುದ್ರಯ್ಯನವರ ಕನಸಿನ ಕೂಸು ಒಳ ಕ್ರೀಡಾಂಗಣ ಸಂಪೂರ್ಣವಾಗಿ ಪ್ರಗತಿಯಾಗಬೇಕು ಎನ್ನುವುದಾಗಿತ್ತು. ಆ ಕನಸು ಕಳೆದ ಎರಡು ದಶಕಗಳಿಂದಲೂ ಕನಸಾಗಿಯೇ ಉಳಿದಿದೆ.ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿರುವ ಒಳ ಕ್ರೀಡಾಂಗಣಕ್ಕೆ ಕಳೆದ 19 ವರ್ಷಗಳಿಂದ ಸೂಕ್ತವಾದ ಕಾಯಕಲ್ಪ ದೊರೆಯದೆ ನಿರ್ಮಾಣ ಕಾರ್ಯ ಆಮೆ ವೇಗದಲ್ಲಿ ಸಾಗುತ್ತಿರುವುದು ವಿಭಾಗದ ಕ್ರೀಡಾಪಟುಗಳಲ್ಲಿ ಹಾಗೂ ಕ್ರೀಡಾ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.ಆದರೆ, ಒಂದೇ ಸೂರಿನಡಿ ಎಲ್ಲ ಕ್ರೀಡಾ ಅಂಕಣಗಳನ್ನು ಹೊಂದಿರುವ  ಕ್ರೀಡಾಂಗಣ ನಿರ್ಮಾಣ ಕಾರ್ಯಕ್ಕೆ ಆರಂಭದಲ್ಲಿ ಸಾಕಷ್ಟು ವಿಘ್ನಗಳು ಎದುರಾದವು.  ಕುಲಪತಿಯಾಗಿದ್ದ ಪ್ರೊ.ರುದ್ರಯ್ಯನವರ ಅಧಿಕಾರ ಅವಧಿ ಮುಗಿದ ನಂತರ ಕ್ರೀಡಾಂಗಣ ಪ್ರಗತಿ ಕಾರ್ಯಕ್ಕೆ ಹಿನ್ನಡೆಯಾಯಿತು.ಬಾರಿ ಪ್ರಚಾರ ಪಡೆದುಕೊಂಡಿದ್ದ ಒಳ ಕ್ರೀಡಾಂಗಣ ನಿರ್ಮಾಣ ಕಾರ್ಯ ದೀರ್ಘಕಾಲ ಕಳೆದರೂ, ಕಾರ್ಯರೂಪಕ್ಕೆ ಬರುವಲ್ಲಿ ಒಂದಿಲ್ಲೊಂದು ಕಾರಣದಿಂದ ವಿಫಲವಾಗುತ್ತಲೇ ಇತ್ತು.ಹೈದರಾಬಾದ್ ಕರ್ನಾಟಕ ಪ್ರದೇಶ ಕೇವಲ ಅಭಿವೃದ್ಧಿಯಲ್ಲಿ ಮಾತ್ರ ಹಿನ್ನಡೆ ಅನುಭವಿಸಿಲ್ಲ. ಕ್ರೀಡಾ ಕ್ಷೇತ್ರದ ಅಭಿವೃದ್ಧಿಯಲ್ಲೂ ಹಿಂದೆ ಬಿದ್ದಿದೆ ಎನ್ನುವುದಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಇನ್ನು  ನಿರ್ಮಾಣ ಹಂತದಲ್ಲಿರುವ ಒಳ ಕ್ರೀಡಾಂಗಣವೇ ಉತ್ತಮ ಉದಾರಹಣೆ ಎನ್ನುವುದು ಸಾರ್ವಜನಿಕರ ಆರೋಪ.ಕ್ರೀಡಾಂಗಣ ನಿರ್ಮಾಣ ಕಾರ್ಯವನ್ನು ಪೂರ್ಣ ರೂಪಕ್ಕೆ ತರಲು ಮಾಜಿ ಕುಲಪತಿಗಳಾದ ಡಾ. ಎಂ. ಮುನಿಯಮ್ಮ, ಡಾ. ಎಂ.ವಿ. ನಾಡಕರ್ಣಿ, ಪ್ರೊ. ಕುಟಿನೋ, ಪ್ರೊ. ಬಿ.ಜಿ. ಮೂಲಿಮನಿ ಕೂಡಾ ಶ್ರಮಿಸಿದ್ದರು. ಆದರೆ, ಕಾರ್ಯ ಮಾತ್ರ ಪೂರ್ಣ ಪ್ರಮಾಣದಲ್ಲಿ ಪ್ರಗತಿ ಕಾಣಲಿಲ್ಲ.ಕುಲಪತಿ ಪ್ರೊ. ರುದ್ರಯ್ಯ ಅವರು ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ವಿಶೇಷ ಆಸಕ್ತಿ ವಹಿಸಿದ್ದರು. ಅದಕ್ಕಾಗಿ ಅಂದು 50 ಲಕ್ಷ ರೂಪಾಯಿಗಳ ಯೋಜನೆಯನ್ನು ಸಹ ರೂಪಿಸಿದ್ದರು. ನಿರ್ಮಾಣ ಕಾರ್ಯವು ಚುರುಕಾಗಿ ನಡೆಯುತ್ತಿತ್ತು.ಯುಜಿಸಿ ಅಡಿಯಲ್ಲಿನ ಧನ ಸಹಾಯದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ 20 ಲಕ್ಷ ರೂಪಾಯಿಗಳ ಅನುದಾನ ಸಹ ಬಿಡುಗಡೆಯಾಗಿತ್ತು.ಈ ಒಳ ಕ್ರೀಡಾಂಗಣದಲ್ಲಿ  ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ಟೇಬಲ್ ಟೆನಿಸ್, ಹ್ಯಾಂಡ್‌ಬಾಲ್, ಜಿಮ್ನಾಸ್ಟಿಕ್, ಕುಸ್ತಿ ಅಂಕಣ ಹಾಗೂ 1500 ಪ್ರೇಕ್ಷಕರು ಕುಳಿತುಕೊಳ್ಳುವ ಗ್ಯಾಲರಿ. 864 ಚದರ್ ಮೀಟರ್ ಪ್ಲೇಯಿಂಗ್ ಪ್ರದೇಶವಿದೆ. ಕ್ರೀಡಾಪಟುಗಳಿಗೆ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಬಳಕೆಗೆ ಯೋಗ್ಯವಾಗಿಲ್ಲ ಎನ್ನುವುದು ಇಲ್ಲಿನ ಕೆಲ ವಿದ್ಯಾರ್ಥಿಗಳ ಆರೋಪ.ಆದರೆ, ಇದ್ಯಾವುದೆ ಅನುಕೂಲಗಳನ್ನು ಕ್ರೀಡಾ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತಿಲ್ಲ. ನಿರ್ಮಾಣವಾಗಿರುವ ಅಂಕಣ, ವಸತಿ ಗೃಹಗಳು ತಮ್ಮ ಮೂಲ ಸ್ವರೂಪವನ್ನು ಮರೆಮಾಚುತ್ತಿವೆ.ಕಟ್ಟಡದ ಮೇಲ್ಚಾವಣಿಗೆ ಹಾಕಿರುವ ಪ್ಲಾಸ್ಟಿಕ್ ಹಾಸು ಬಿರು ಬಿಸಿಲಿಗೆ ಸುಟ್ಟು ಹೋಗಿದೆ. ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದರೂ, ನಿರ್ಮಾಣ ಕಾರ್ಯ ಪೂರ್ಣವಾಗಿಲ್ಲ. ಒಳ ಕ್ರೀಡಾಂಗಣ ನಿರ್ಮಾಣಕ್ಕೆ ಅಂದು ಒಟ್ಟು 50 ಲಕ್ಷ ರೂಪಾಯಿಗಳ ಖರ್ಚಾಗಬಹುದು ಎಂಬ ಅಂದಾಜು ವೆಚ್ಚದ ನೀಲಿ ನಕ್ಷೆ ರೂಪಿಸಲಾಗಿತ್ತು.ಆದರೆ, ಇಂದು ಬರೊಬ್ಬರಿ ಎರಡು ಕೋಟಿ ರೂಪಾಯಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಇದೀಗ ವಿಶ್ವವಿದ್ಯಾಲಯ ಧನಸಹಾಯ ಆಯೋಗವೂ 11ನೇ ಹಣಕಾಸು ಯೋಜನೆಯಡಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 40 ಲಕ್ಷ ರೂಪಾಯಿಗಳ ಅನುದಾನ ನೀಡಿದೆ.  ಕ್ರೀಡಾಂಗಣದ ಉನ್ನತೀಕರಣಕ್ಕಾಗಿ ಟೆಂಡರ್ ಸಹ ಕರೆಯಲಾಗಿದೆ.ಟೆಂಡರ್ ಕರೆದು ಆರು ತಿಂಗಳು ಕಳೆದರೂ ಇನ್ನೂ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ಯುಜಿಸಿ ಬಿಡುಗಡೆ ಮಾಡಿರುವ ಅನುದಾನದಲ್ಲಿ ಕ್ರೀಡಾಂಗಣಕ್ಕೆ ಪಿವಿಸಿ ನೆಲಹಾಸು ನಿರ್ಮಾಣ ಕಾರ್ಯ, ಉತ್ತಮ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವ ಯೋಜನೆಯನ್ನು ವಿಶ್ವವಿದ್ಯಾಲಯ, ದೈಹಿಕ ಶಿಕ್ಷಣ ವಿಭಾಗ ರೂಪಿಸುತ್ತಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.ಕುಲಪತಿಗಳ ವಿಶ್ವಾಸ

`ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಒಳ ಕ್ರೀಡಾಂಗಣವನ್ನು ಬರುವ ಶೈಕ್ಷಣಿಕ ವರ್ಷಕ್ಕೆ ಪೂರ್ಣಗೊಳಿಸಲಾಗುತ್ತದೆ. ಯುಜಿಸಿಯು ಈ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಲು ಅನುದಾನ ಬಿಡುಗಡೆ ಮಾಡಿದೆ.ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಪ್ರಕ್ರಿಯೆ ಪ್ರಸ್ತಾವವನ್ನು  ಸಿಂಡಿಕೇಟ್ ಖರೀದಿ ಸಮಿತಿಗೆ ಕಳಿಸಲಾಗಿದೆ~ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ `ಪ್ರಜಾವಾಣಿ~ಗೆ ತಿಳಿಸಿದರು.`ಒಂದೇ ವೇದಿಕೆಯಲ್ಲಿ ಎಲ್ಲಾ ಕ್ರೀಡಾ ಅಂಕಣವನ್ನು ಹೊಂದಿರುವ ಕ್ರೀಡಾಂಗಣವನ್ನು ಪೂರ್ಣವಾಗಿ ಪ್ರಗತಿ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಶೀಘ್ರವೇ ಕಾಮಗಾರಿ ಚುರಕುಗೊಳಿಸಲಾಗುತ್ತದೆ~ ಎಂದು ಅವರು ಹೇಳಿದರು.`ವಿಭಾಗದ ಹಾಗೂ ಈ ಭಾಗದ ಕ್ರೀಡಾಪಟುಗಳ ನಿರೀಕ್ಷೆಗೆ ಅನುಗುಣವಾಗಿ ನಿರ್ಮಿಸಲಾಗುತ್ತಿರುವ ಒಳ ಕ್ರೀಡಾಂಗಣ ಕಾರ್ಯ ಬೇಗನೆ ಪೂರ್ಣಗೊಂಡರೆ ರಾಜ್ಯದಲ್ಲಿಯೇ ಪ್ರಥಮ ಅಂತರರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣವನ್ನು ಹೊಂದಿರುವ  ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಗುಲ್ಬರ್ಗ ವಿಶ್ವವಿದ್ಯಾಲಯ ಭಾಜನವಾಗಲಿದೆ~ ಎಂದು ವಿ.ವಿ.ಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರತಾಪ ಸಿಂಗ್ ತಿವಾರಿ ಹೇಳಿದರು.1990ರಿಂದ 2011ವರೆಗೆ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗ ವಿಶ್ವವಿದ್ಯಾಲಯದ ಒಳ ಕ್ರೀಡಾಂಗಣ ಕಾರ್ಯಕ್ಕೆ ವಿಶ್ವವಿದ್ಯಾಲಯ ಮುಂದಾಗುವುದೆ? ಈ ಭಾಗದ ವಿದ್ಯಾರ್ಥಿಗಳ, ಮಾಜಿ ಕುಲಪತಿಗಳ ಎರಡು ದಶಕದ ಕನಸು ನನಸಾಗುವುದೇ ಎನ್ನುವುದನ್ನು ಕಾದು ನೋಡಬೇಕಿದೆ.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.