ಮಂಗಳವಾರ, ಜೂಲೈ 7, 2020
22 °C

ಪ್ರದರ್ಶನದಿಂದ ಮನ ಗೆಲ್ಲಬೇಕು: ರವಿ ಬೋಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರದರ್ಶನದಿಂದ ಮನ ಗೆಲ್ಲಬೇಕು: ರವಿ ಬೋಪಾರ

ಚೆನ್ನೈ: ತಮ್ಮ ಪುತ್ರ ಮುಂದೊಂದು ದಿನ ಇಂಗ್ಲೆಂಡ್ ಪರ ಆಡಬಹುದು ಎಂದು 1967ರಲ್ಲಿ ಕೆಲಸ ಹುಡುಕಿಕೊಂಡು ಲಂಡನ್‌ಗೆ ವಲಸೆ ಹೋಗಿದ್ದ ಭಾರತದ ಚರಣಜಿತ್ ಸಿಂಗ್ ಬೋಪಾರ ಕನಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಆದರೆ ಈಗ ಪುತ್ರ ರವೀಂದ್ರ ಸಿಂಗ್ ಬೋಪಾರ ತಮ್ಮ ಮೂಲ ದೇಶದಲ್ಲಿಯೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಸೋತು ತೀವ್ರ ಟೀಕೆಗೆ ಗುರಿಯಾಗಿದ್ದ ಇಂಗ್ಲೆಂಡ್ ತಂಡದ ಮಾನ ಉಳಿಸಿದ್ದು ಭಾರತ ಮೂಲದ ಬೋಪಾರ. ವಿಶ್ವಕಪ್ ಗೆಲ್ಲುವ ಫೇವರಿಟ್‌ಗಳಲ್ಲಿ ಒಬ್ಬರು ಎನಿಸಿರುವ ದಕ್ಷಿಣ ಆಫ್ರಿಕಾ ವಿರುದ್ಧ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ರವೀಂದ್ರ ಗಳಿಸಿದ ಅರ್ಧ ಶತಕ ಇಂಗ್ಲಿಷ್ ಆಟಗಾರರಿಗೆ ಆರು ರನ್‌ಗಳ ಗೆಲುವು ತಂದುಕೊಟ್ಟಿತು.‘ಭಾರತದ ಮೂಲದ ಆಟಗಾರ ಎನಿಸಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ. ಆದರೆ ಉತ್ತಮ ಪ್ರದರ್ಶನ ತೋರುವ ಮೂಲಕ ನಾನು ಭಾರತದ ಕ್ರಿಕೆಟ್ ಪ್ರೇಮಿಗಳ ಮನ ಗೆಲ್ಲಬೇಕು’ ಎಂದು ಬೋಪಾರ ‘ಪ್ರಜಾವಾಣಿ’ಗೆ ತಿಳಿಸಿದರು.ಆಲ್‌ರೌಂಡರ್ ರವೀಂದ್ರ ಈಗ ಇಂಗ್ಲೆಂಡ್ ತಂಡದಲ್ಲಿರುವ ಎರಡನೇ ಸಿಖ್ ಆಟಗಾರ. ಲೆಗ್ ಸ್ಪಿನ್ನರ್ ಮಾಂಟಿ ಪನೇಸರ್ ಕೂಡ ಟೆಸ್ಟ್ ತಂಡದಲ್ಲಿದ್ದಾರೆ. ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ ಭಾರತ ಮೂಲದ ಆಟಗಾರರಾದ ನಾಸೀರ್ ಹುಸೇನ್, ವಿಕ್ರಮ್ ಸೋಲಂಕಿ ಹಾಗೂ ಪನೇಸರ್ ಅವರಂತೆ ಈಗ ಬೋಪಾರ ಕೂಡ ತಮ್ಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಐಪಿಎಲ್‌ನ ಮೊದಲ ಮೂರು ಆವೃತ್ತಿಗಳಲ್ಲಿ ತಮ್ಮೂರಿನ ತಂಡವಾದ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದು ವಿಶೇಷ.ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 15 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದಿದ್ದ ಅವರು ಅಮೂಲ್ಯ 60 ರನ್ ಗಳಿಸಿ ‘ಪಂದ್ಯ ಪುರುಷೋತ್ತಮ’ ಎನಿಸಿದರು.ಆದರೆ ಆ ‘ಪಂದ್ಯ ಪುರುಷೋತ್ತಮ’ ಪ್ರಶಸ್ತಿಯನ್ನು ಬೋಪಾರ ತಂಡದ ವೇಗಿ ಸ್ಟುವರ್ಟ್ ಬ್ರಾಡ್‌ಗೆ ಅರ್ಪಿಸಿದರು. ‘ತಂಡದ ಈ ಗೆಲುವಿಗೆ ನಾನು ಕೂಡ ಕಾರಣ ಎನ್ನುವುದು ಖುಷಿ ನೀಡುತ್ತಿದೆ. ಆದರೆ ಬ್ರಾಡ್ ಪಂದ್ಯಕ್ಕೆ ತಿರುವು ನೀಡಿದರು. ಅವರಿಗೆ ಈ ಗೌರವ ಸಲ್ಲಬೇಕು’ ಎಂದರು.25 ವರ್ಷ ವಯಸ್ಸಿನ ಬೋಪಾರ ಮೂಲತಃ ಪಂಜಾಬ್‌ನವರು. ಆದರೆ ಅವರ ಕುಟುಂಬ 1967ರಲ್ಲಿಯೇ ಲಂಡನ್‌ಗೆ ವಲಸೆ ಹೋಗಿತ್ತು. 54 ವರ್ಷ ವಯಸ್ಸಿನ ತಂದೆ ಚರಣಜಿತ್ ಅಪ್ಪಟ ಕ್ರಿಕೆಟ್ ಅಭಿಮಾನಿ. ‘ನನ್ನ ಕುಟುಂಬದವರು ಭಾರತದವರು. ಹಾಗಾಗಿ ಭಾರತದ ನೆಲದಲ್ಲಿ ಆಡುವುದು ತುಂಬಾ ವಿಶೇಷ’ ಎಂದು ಬೋಪಾರ ನುಡಿಯುತ್ತಾರೆ. ಆದರೆ ಬೆಂಗಳೂರಿನಲ್ಲಿ ನಡೆದ ಭಾರತ ವಿರುದ್ಧ ಪಂದ್ಯದಲ್ಲಿ ಅವರಿಗೆ ಸ್ಥಾನ ಲಭಿಸಿರಲಿಲ್ಲ.ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘15 ರನ್‌ಗಳಿಗೆ 3 ವಿಕೆಟ್ ಪತನವಾದಾಗ ಕ್ರೀಸ್‌ಗೆ ಹೋಗಬೇಕಾಗುತ್ತದೆ ಎಂದು ನಾನು ಯೋಚಿಸಿರಲಿಲ್ಲ. ಆದರೆ ರನ್ ಗಳಿಸಲು ಪಿಚ್ ತುಂಬಾ ಕಷ್ಟವಾಗಿದೆ ಎಂಬುದು ನನಗೆ ಹಾಗೂ ಜೊನಾಥನ್ ಟ್ರಾಟ್‌ಗೆ ಗೊತ್ತಾಯಿತು. ಈ ಕಾರಣ ಎಚ್ಚರಿಕೆಯಿಂದ ಆಡಲು ನಿರ್ಧರಿಸಿದೆವು. ಕಡಿಮೆ ಮೊತ್ತ ಗಳಿಸಿದರೂ ಬೌಲರ್‌ಗಳು ನಮ್ಮ ನೆರವಿಗೆ ಬಂದರು’ ಎಂದರು.ಈ ಪಂದ್ಯದಲ್ಲಿ ಬೋಪಾರ ಹಾಗೂ ಟ್ರಾಟ್ ನಾಲ್ಕನೇ ವಿಕೆಟ್‌ಗೆ ಅಮೂಲ್ಯ 99 ರನ್ ಸೇರಿಸಿದ್ದರು. ಬೋಪಾರ ಆಟಕ್ಕೆ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.‘ಬೋಪಾರ ಅವಕಾಶಕ್ಕಾಗಿ ಕಾಯುತ್ತಿದ್ದರು. ಈಗ ಸಿಕ್ಕಿದ ಅವಕಾಶವನ್ನು ಬಾಚಿ ತಬ್ಬಿಕೊಂಡಿದ್ದಾರೆ. ಅವರೀಗ ಅನುಭವಿ ಕ್ರಿಕೆಟಿಗ. ತಮ್ಮ ಜವಾಬ್ದಾರಿಯ ಅರಿವಿದೆ. ಇದಕ್ಕೆ ಅವರು ಅರ್ಹರು’ ಎಂದಿದ್ದಾರೆ.ರವಿ ಈಗ ಕೌಂಟಿಯಲ್ಲಿ ಎಸೆಕ್ಸ್ ತಂಡದ ಪರ ಆಡುತ್ತಾರೆ. 10 ಟೆಸ್ಟ್ ಹಾಗೂ 56 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಅದರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹ್ಯಾಟ್ರಿಕ್ ಶತಕ ಗಳಿಸಿದ್ದನ್ನು ಮರೆಯುವಂತಿಲ್ಲ.  ಬೋಪಾರ ಅವರ ಪ್ರತಿಭೆ ಬಗ್ಗೆ ಒಮ್ಮೆ ಸಚಿನ್ ತೆಂಡೂಲ್ಕರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರು ತೆಂಡೂಲ್ಕರ್ ಅಭಿಮಾನಿ ಕೂಡ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.