ಬ್ರಹ್ಮಾವರ: ಜಿಲ್ಲೆಯಲ್ಲಿ ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಅನೇಕ ಕಡೆ ಪ್ರವಾಹ ಪರಿಸ್ಥಿತಿ ತಲೆದೋರಿ ಹೇರೂರಿನ ತೂಗು ಸೇತುವೆ ಮತ್ತು ಆರೂರಿನ ಕಾಲುಸಂಕಕ್ಕೆ ಹಾನಿಯಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಗುರುವಾರ ರಾತ್ರಿಯಿಂದಲೇ ಸೀತಾ ನದಿ ಮತ್ತು ಮಡಿಸಾಲು ಹೊಳೆಗಳು ಉಕ್ಕಿ ಹರಿದಿದ್ದರಿಂದ ಬ್ರಹ್ಮಾವರ ಪರಿಸರದ ಮಡಿ, ಕುಕ್ಕೆಹಳ್ಳಿ, ಆರೂರು, ಬೆಳ್ಮಾರು, ಉಪ್ಪೂರು, ಬಾರ್ಕೂರು, ಕೋಟ ಮೂಡುಗಿಳಿಯಾರು, ಬನ್ನಾಡಿ, ಪಾಂಡೇಶ್ವರ ಪ್ರದೇಶಗಳಲ್ಲಿ ಅನೇಕ ಕುಟುಂಬಗಳು ರಾತ್ರಿ ಇಡೀ ಜಾಗರಣೆ ಮಾಡಬೇಕಾಯಿತು.

ಸೇತುವೆಗಳಿಗೆ ಹಾನಿ: ಮಳೆ, ಪ್ರವಾಹದಿಂದಾಗಿ ಉಪ್ಪೂರು ಉಗ್ಗೇಲ್ಬೆಟ್ಟನ್ನು ಸಂಪರ್ಕಿಸುವ ತೂಗು ಸೇತುವೆಗೆ ಹಾನಿಯಾಗಿದೆ. ಸೇತುವೆ ಮೇಲೆ ಮತ್ತು ಸುತ್ತಮುತ್ತ ನೆರೆ ನೀರು ಇರುವುದರಿಂದ ಎಷ್ಟು ಹಾನಿಯಾಗಿದೆ ಎನ್ನುವ ಬಗ್ಗೆ ನೆರೆ ಇಳಿದ ಮೇಲಷ್ಟೇ ಅಂದಾಜಿಸಬೇಕಾಗಿದೆ.

ಇನ್ನೊಂದೆಡೆ ಆರೂರು ಬೆಳ್ಮಾರನ್ನು ಸಂಪರ್ಕಿಸಲು ನಿರ್ಮಿಸಲಾದ ಕಾಲುಸಂಕ ಕಳೆದ ಮೂರು ವರ್ಷಗಳಿಂದ ಕುಸಿದಿದ್ದು, ಇದೀಗ ಪ್ರವಾಹದ ಕಾರಣ ಮತ್ತಷ್ಟು ಕುಸಿತ ಕಂಡಿದೆ. ಸೇತುವೆಯನ್ನು ಸಂಪರ್ಕಿಸುವ ರಸ್ತೆಯ ಮೇಲೆ ಸುಮಾರು 5 ಅಡಿ ನೀರು ಹರಿಯುತ್ತಿರುವುದರಿಂದ ಆರೂರು ಬೆಳ್ಮಾರು ಸಂಪರ್ಕ ಶುಕ್ರವಾರ ಇಡೀ ಕಡಿತಗೊಂಡಿತ್ತು. ಬೆಳ್ಮಾರು ಪ್ರದೇಶದ ಅನೇಕ ಮನೆಗಳಿಗೆ ಗುರುವಾರ ರಾತ್ರಿಯೇ ನೆರೆಯ ನೀರು ನುಗ್ಗಿದೆ. ಅನೇಕರ ಮನೆಯ ಜಾನುವಾರುಗಳನ್ನು ಸುರಕ್ಷಿತ ಪ್ರದೇಶಕ್ಕೆ ರಾತ್ರಿಯೇ ಸ್ಥಳಾಂತರಿಸಲಾಗಿತ್ತು.

ದ್ವೀಪವಾದ ಬೆಳ್ಮಾರು: ಕುಂಜಾಲು ಗ್ರಾ.ಪಂ ವ್ಯಾಪ್ತಿಯ ಆರೂರು ಗ್ರಾಮದ ಬೆಳ್ಮಾರು ಗುರುವಾರದಿಂದ ದ್ವೀಪವಾಗಿ ಪರಿಣಮಿಸಿದೆ. ಈ ಪ್ರದೇಶದ 50ಕ್ಕೂ ಹೆಚ್ಚು ಕುಟುಂಬಗಳು ಹೊರಗಡೆಯ ಸಂಪರ್ಕ ಕಳೆದುಕೊಂಡಿವೆ. ಕೊಳಲಗಿರಿ ಮತ್ತು ಆರೂರು ಎರಡೂ ಕಡೆಯ ರಸ್ತೆಗಳಲ್ಲಿ ನೆರೆ ನೀರು ಹರಿಯುತ್ತಿರುವುದರಿಂದ ಬೆಳ್ಮಾರಿನ ಜನತೆ ಶುಕ್ರವಾರ ದಿನವಿಡೀ ಮನೆಯಲ್ಲಿಯೇ ಕಳೆದರು. ಎಲ್ಲಿಯೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಸಮೀಪದ ಕಾರ್ತಿಬೈಲ್ನಲ್ಲಿ ಅನೇಕ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಸುಮಾರು 10 ವರ್ಷಗಳ ನಂತರ ಆರೂರು ವಿಷ್ಣುಮೂರ್ತಿ ದೇವಸ್ಥಾನದ ಒಳಗೆ ಪ್ರವಾಹದ ನೀರು ನುಗ್ಗಿದೆ.

ಹೇರೂರು ಮತ್ತು ಉಪ್ಪೂರು ಗ್ರಾಮದ ನೂರಾರು ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಕೆಲವೊಂದು ಮನೆಯೊಳಗೆ ನೀರು ನುಗ್ಗಿ ಕುಸಿಯುವ ಭೀತಿಯಲ್ಲಿವೆ. ಗ್ರಾಮಸ್ಥರು ಜಲಾವೃತಗೊಂಡ ಮನೆಯೊಳಗೆ ಭೀತಿಯಿಂದ ಕಾಲ ಕಳೆಯುವಂತಾಗಿದೆ. ನದೀ ತೀರದ ಅನೇಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ನೆರೆ ಪೀಡಿತ ಉಪ್ಪೂರು ಪ್ರದೇಶಕ್ಕೆ ಶಾಸಕ ರಘುಪತಿ ಭಟ್ ಮತ್ತು ಅಸಿಸ್ಟೆಂಟ್ ಕಮಿಷನರ್ ಸದಾಶಿವ ಪ್ರಭು ಭೇಟಿ ನೀಡಿ ಪರಿಹಾರ ಕಾರ್ಯದಲ್ಲಿ ತೊಡಗಿದವರಿಗೆ ಸಹಾಯದ ಭರವಸೆ ನೀಡಿದರು.

ನೀಲಾವರದ ಮಧ್ಯಸ್ಥರ ಬೆಟ್ಟು, ಸೊನೆಗಾರ ಬೆಟ್ಟು, ಕರ್ದಾಡಿ ಎಳ್ಳಂಪಳ್ಳಿ ಪ್ರದೇಶಗಳಲ್ಲಿ ಅನೇಕ ಮನೆಗಳಿಗೆ ಸೀತಾನದಿಯ ನೀರು ನುಗ್ಗಿದೆ. ಸಾಸ್ತಾನ, ಬೇಳೂರು, ಸಾಲಿಗ್ರಾಮ, ಪಾರಂಪಳ್ಳಿ, ಕೋಟ, ಮೂಡುಗಿಳಿಯಾರು ಪ್ರದೇಶದಲ್ಲಿಯೂ ಅನೇಕ ಮನೆಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಸಂತ್ರಸ್ಥರಿಗೆ ಬೆಳ್ಮಾರಿನಲ್ಲಿ ಗಂಜಿ ಕೇಂದ್ರ ಸ್ಥಾಪಿಸಲಾಗಿದೆ.

ಪೇತ್ರಿ ಮಡಿಯಲ್ಲಿ ಪ್ರವಾಹದ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಚೇರ್ಕಾಡಿ ಪೇತ್ರಿ ಮತ್ತು ಕುಕ್ಕೆಹಳ್ಳಿಗೆ ಸಂಪರ್ಕ ಕಡಿತಗೊಂಡಿದೆ. ಮಡಿಯಲ್ಲಿ ಪ್ರವಾಹದ ನೀರು ಅನೇಕ ಮನೆಗಳಿಗೆ ನುಗ್ಗಿದ ಬಗ್ಗೆ ವರದಿಯಾಗಿದೆ. ನೆರೆ ಪೀಡಿತ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ಹೋಗಲು ದೋಣಿಯ ವ್ಯವಸ್ಥೆ ಇಲ್ಲದೇ ಜನರು ಪರದಾಡುವಂತಾಗಿದೆ.

ಕುಕ್ಕೆಹಳ್ಳಿ ಗ್ರಾಮದ ಬಾಯರ್ಬೆಟ್ಟು ಎಂಬಲ್ಲಿ ಗುರುವಾರ ರಾತ್ರಿ ಬೀಸಿದ ಗಾಳಿಗೆ ಅನೇಕ ವಿದ್ಯುತ್ ಕಂಬಗಳು ಧರೆಗುರುಳಿವೆ. ಬಾರ್ಕೂರು ಪರಿಸರದ ಬಂಡೀಮಠ, ಹಂದಾಡಿಯಲ್ಲಿಯೂ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಬಾರ್ಕೂರು ಕಚ್ಚೂರಿನ ಮಾಲ್ತೀದೇವಿ ದೇವಸ್ಥಾನದ ಒಳಗೆ ನೀರು ನುಗ್ಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.