ಗುರುವಾರ , ಫೆಬ್ರವರಿ 25, 2021
20 °C
ನೆಲಸಿರಿ

ಪ್ರೀತಿಯ ಪಾವಿತ್ರ್ಯವೂ, ಆಕರ್ಷಣೆಯೂ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೀತಿಯ ಪಾವಿತ್ರ್ಯವೂ, ಆಕರ್ಷಣೆಯೂ...

ಶೃಂಗಾರ ಅತ್ಯಂತ ಮೋಹಕವಾದ ರಸ. ಆದರೆ ಔಚಿತ್ಯದ ಹದವಾಗದೆ ಅದನ್ನು ಅಭಿವ್ಯಕ್ತಿಸುವುದು ಅಷ್ಟು ಸುಲಭವಲ್ಲ. ಕೊಂಚ ಎಚ್ಚರ ತಪ್ಪಿದರೆ ಅದು ಅಶ್ಲೀಲವಾಗಿ ಬಿಡುತ್ತದೆ. ಹಾಗೆಯೆ ಪ್ರಜ್ಞಾಪೂರ್ವಕ ನಿಗಾ ವಹಿಸಿದರೆ ರಸ ಹದಗೆಟ್ಟು ನೀರಸವಾಗಿ ಬಿಡುತ್ತದೆ. ಒಂದು ನಿರ್ದಿಷ್ಟ ಹದದಲ್ಲಿ, ಅದರ ಸೊಗಸನ್ನು ಉಳಿಸಿಕೊಳ್ಳುತ್ತಲೇ ಗಾಂಭೀರರ್ಯಯದಿಂದ ನಿರ್ವಹಿಸಿದಾಗ ಮಾತ್ರ ಕಾವ್ಯದಲ್ಲಿ, ಬದುಕಿನಲ್ಲಿ ಅದಕ್ಕೆ ಮಹತ್ವದ ಸ್ಥಾನ.ಕನ್ನಡ ಕಾವ್ಯ ಪರಂಪರೆಯಲ್ಲಿ ಶೃಂಗಾರವನ್ನು ಹೀಗೆ ಹದವರಿತು ನಿರ್ವಹಿಸುವ ಉದಾಹರಣೆ ವಿರಳ. ಬೇಂದ್ರೆ ಹೇಳುತ್ತಾರೆ: `ಹಳೆಯ ಕಾಲದ ಕಾವ್ಯಗಳಲ್ಲಿಯ ಶೃಂಗಾರ ಪ್ರಸಂಗಗಳು ಎಷ್ಟೋ ಬಾರಿ ನಾಚಿಕೆಯಿಂದ ತಲೆತಗ್ಗಿಸುವಂತಾಗುತ್ತದೆ. ರಾಣಿವಾಸದ ವೇಶ್ಯಾವಾಟದ ಹಗರಣದ ಸರಸ ಇವೆಲ್ಲ ತುಂಬಿರುವ ಅಲ್ಲಿ ಶೃಂಗಾರ ಸೂಕ್ಷ್ಮ ಮರೆಯಾಗಿದೆ'. ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಶೃಂಗಾರಕ್ಕೆ ಹೆಚ್ಚು ಪ್ರಾಧಾನ್ಯತೆ ಸಿಕ್ಕಿಲ್ಲವೆಂಬುದು ನಿಜ.

ಆದರೆ ಬೇಂದ್ರೆಯವರೇ ಗಾಢ ಪ್ರಭಾವಕ್ಕೊಳಗಾಗಿರುವ ರತ್ನಾಕರವರ್ಣಿಯಲ್ಲಿ ಶೃಂಗಾರದ ಸೂಕ್ಷ್ಮಗಳೆಲ್ಲ ಸೊಗಸಾಗಿ ಅಭಿವ್ಯಕ್ತಿ ಪಡೆದಿವೆ. ಶೃಂಗಾರವನ್ನು ಹಾಗೆ ಅದರೆಲ್ಲ ಶಕ್ತಿ, ಪಾವಿತ್ರ್ಯಗಳೊಡನೆ ಸೂಕ್ಷ್ಮವಾಗಿ ಚಿತ್ರಿಸಿರುವ ಮತ್ತೊಂದು ಕೃತಿ ನಾಗವರ್ಮನ `ಕರ್ನಾಟಕ ಕಾದಂಬರಿ'. ಕನ್ನಡದಲ್ಲಿ ಮಾತ್ರವಲ್ಲ, ಜಾಗತಿಕ ಸಾಹಿತ್ಯದಲ್ಲಿ ಇದೊಂದು ವಿಶಿಷ್ಟ ಕೃತಿ.ಹತ್ತನೆಯ ಶತಮಾನ ಜೈನಧರ್ಮ, ಮಾರ್ಗಪರಂಪರೆ ಪ್ರಬಲವಾಗಿದ್ದ ಕಾಲ. ಪಂಪನಂಥ ಪ್ರತಿಭಾವಂತ ಕವಿ ಒಂದು ಮಾದರಿಯನ್ನು ರೂಪಿಸಿ ಉಳಿದವರು ಆ ಮಾದರಿಯನ್ನೇ ಅನುಸರಿಸುತ್ತಿದ್ದರು. `ಬೆಳಗುವೆನ್ಲ್ಲಿಲಿ ಲೌಕಿಕಮನ್ ಅ್ಲ್ಲಲಿ  ಜಿನಾಗಮಮೆಂ' ಎಂಬಂತೆ ಒಂದು ಲೌಕಿಕಕಾವ್ಯ - ಸಾಮಾನ್ಯವಾಗಿ ಮಹಾಭಾರತ, ರಾಮಾಯಣದ ಕತೆ - ಮತ್ತೊಂದು, ಜೈನಪುರಾಣ, ಅಲೌಕಿಕ ಕಾವ್ಯ, ಇದು ಆಗಿನ ಕಾಲದ ಕವಿಗಳ ಸಾಮಾನ್ಯ ಮಾದರಿ.

ಅದೇ ಕಾಲದಲ್ಲಿದ್ದ ನಾಗವರ್ಮ (ಕ್ರಿ. ಶ. 990) ಈ ಪರಂಪರೆಗಿಂತ ಭಿನ್ನವಾಗಿ ಕಾವ್ಯ ರಚಿಸಿದ್ದಾನೆ. ಈತ ಜೈನಧರ್ಮಕ್ಕೆ ಸೇರದೆ ಬ್ರಾಹ್ಮಣ ಕವಿಯಾದುದೂ ಇದಕ್ಕೆ ಕಾರಣವಿರಬಹುದು. ಕಾರಣವೇನೇ ಇರಲಿ, ಈತ ಆರಿಸಿಕೊಂಡ ಕಾವ್ಯವಸ್ತು ಮಾತ್ರ ಕನ್ನಡ ಪರಂಪರೆಯಲ್ಲಿಯೇ ವಿಶಿಷ್ಟವಾದುದು. ಪ್ರೀತಿಯ ಮಹಾಕತೆಯೊಂದನ್ನು ನಾಗವರ್ಮ ತನ್ನ `ಕರ್ನಾಟಕ ಕಾದಂಬರಿ'ಯಲ್ಲಿ ನಿರೂಪಿಸಿದ್ದಾನೆ.ನಾಗವರ್ಮನಿಗೆ ಮೂಲ ಸಂಸ್ಕೃತದಲ್ಲಿ ಬಾಣ ಬರೆದ `ಕಾದಂಬರಿ' . ಬಾಣ, ಕಾಳಿದಾಸರಿಗೆ  ಸಂಸ್ಕೃತದಲ್ಲಿ ವಿಶೇಷ ಸ್ಥಾನವಿದೆ. ಕನ್ನಡ ಕವಿಗಳಿಗೂ ಇವರು ಪ್ರಿಯ. `ಬಾಣ ಕಾಳಿದಾಸರೆಮಗಭಿವಂದ್ಯರ್' ಎಂದು ರನ್ನ ಹೇಳಿದ್ದಾನೆ. ಆದರೂ ಅವರ ಕೃತಿಗಳ ಬಗ್ಗೆ ಕನ್ನಡ ಮನಸ್ಸು ಆಸಕ್ತಿ ತಾಳಲಿಲ್ಲ. ಅಸಗ ಕುಮಾರ ಸಂಭವವನ್ನು ಕನ್ನಡಕ್ಕೆ ತಂದಿದ್ದಾನೆಂಬ ಮಾಹಿತಿಯಿದೆ. ಆದರೆ ಅದು ಉಪಲಬ್ಧವಿಲ್ಲ. ಕಾಳಿದಾಸ ಕನ್ನಡಕ್ಕೆ ಬರಲು ಇಪ್ಪತ್ತನೇ ಶತಮಾನದವರೆಗೆ ಕಾಯಬೇಕಾಯಿತು. ಆದರೆ ಹತ್ತನೆಯ ಶತಮಾನದಲ್ಲಿಯೇ ನಾಗವರ್ಮ ಬಾಣನನ್ನು ಕನ್ನಡಕ್ಕೆ ತಂದಿದ್ದಾನೆಂಬುದು ಗಮನಿಸಬೇಕಾದ ಸಂಗತಿ.ಬಾಣನ `ಕಾದಂಬರಿ' ಗದ್ಯದಲ್ಲಿದೆ. ನಾಗವರ್ಮ ಅದನ್ನು ಕನ್ನಡದಲ್ಲಿ ಚಂಪುವಿನಲ್ಲಿ ಪುನಾರಚಿಸಿದ್ದಾನೆ. ಇದೊಂದು ಕಲ್ಪಿತ ಕತೆ. ವಿಸೀ ಅವರು ಹೇಳುವಂತೆ `ಇವತ್ತು ಯಾವುದನ್ನು `ರೊಮಾನ್ಸ್' ಅಥವಾ `ರೊಮ್ಯಾಂಟಿಕ್', `ರೋಮಾಂಚಕಾರಿ ಕತೆ' ಎನ್ನುತ್ತಾರೋ ಆ ಜಾತಿಗೆ ಸೇರಿದ್ದು. ಭಾರತದ ಬೇರೆ ಬೇರೆ ಪ್ರಾಂತ ಸಾಹಿತ್ಯದಲ್ಲಿ  `ನಾವೆಲ್ - ರೊಮಾನ್ಸ್'  ಎಂಬ ಕಟ್ಟುಕತೆಯ  `ಫಿಕ್ಷನ್'  ಪ್ರಕಾರಕ್ಕೆ ಉಪನ್ಯಾಸ, ಪ್ರಬಂಧ, ಕತೆ ಮುಂತಾದ ಹೆಸರುಗಳನ್ನು ಕೊಟ್ಟಿದ್ದಾರೆ. ತೆಲುಗರು `ನವಲ' ಎಂದಿದ್ದಾರೆ. ನಮ್ಮಲ್ಲಿ ನಾಗವರ್ಮನ ಕಾದಂಬರಿಯ ಸ್ವರೂಪ ಲಕ್ಷಣವನ್ನು ಮನಸ್ಸಿನಲ್ಲಿಟ್ಟುಕೊಂಡು ಹೊಸ ಕಾಲದ  `ಫಿಕ್ಷನ್' ಗೆ `ಕಾದಂಬರಿ' ಎಂದು ಕರೆದಿದ್ದಾರೆ. ಆಧುನಿಕ ಕಾದಂಬರಿಯ ಮೂಲವನ್ನು ನಾವು ನಾಗವರ್ಮನಲ್ಲಿ ಗುರ್ತಿಸಬಹುದು.ಇದು ಮಹಾಶ್ವೇತೆ - ಪುಂಡರೀಕ, ಕಾದಂಬರಿ - ಚಂದ್ರಾಪೀಡರ ಪ್ರೇಮಕತೆ.  ಕಾದಂಬರಿ ಈ ಕೃತಿಯ ನಾಯಕಿಯಾದರೂ ನಮ್ಮ ಗಮನ ಸೆಳೆಯುವುದು ಮಹಾಶ್ವೇತೆಯ ಪಾತ್ರ. ಕುವೆಂಪು ಭಾಷೆಯಲ್ಲಿ ಹೇಳುವುದಾದರೆ ಇದು ಪ್ರೇಮದ ವಿಜಯ ಕತೆ. ವೈರಾಗ್ಯವು ಶೃಂಗಾರಕ್ಕೆ ಶರಣಾದ ಕತೆ. ಇಲ್ಲಿ ಶೃಂಗಾರವೂ ತಪೋಮಯವಾಗಿದೆ. ತಪಸ್ಸೂ ಶೃಂಗಾರ ಪೂರ್ಣವಾಗಿದೆ. ಇಲ್ಲಿ ಕವಿಯ ದರ್ಶನಕ್ಕೆ ಎರಡು ಕಣ್ಣುಗಳಿವೆ. ಒಂದು - ಸರಳ ಗಂಭೀರ ಅನಶ್ಲೀಲ ಸುಂದರ ಶೃಂಗಾರ. ಮತ್ತೊಂದು - ಸದ್ಯಃ ಫಲಾಕಾಂಕ್ಷಿಯಲ್ಲದ, ಜನ್ಮಜನ್ಮಾಂತರದವರೆಗೂ ಕಾಯುವ ಸಾಮರ್ಥ್ಯವೂ ತಾಳ್ಮೆಯೂ ಶ್ರದ್ಧೆಯೂ ಇರುವ, ಪ್ರೇಮದ ನೀರವಧ್ಯಾನಮಯವಾದ ತಪಸ್ಸು. ಇವೆರಡೂ ಒಂದು ಮತ್ತೊಂದಕ್ಕೆ ಪೂರಕ, ಪೋಷಕ. ಪ್ರೇಮವು ತಪಸ್ಸಿನಿಂದಲೇ ಶುದ್ಧವಾಗಿ ಶಾಶ್ವತವಾಗಿ ಸಾರ್ಥಕವಾಗುತ್ತದೆ.ಈ ಕೃತಿ ಜೈನ ಕಾವ್ಯ ಪರಂಪರೆಯ ಸಂದರ್ಭದಲ್ಲಿ ಆ ಕಾವ್ಯಗಳಂತೆಯೇ ಭೋಗದ ಶಕ್ತಿ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತದೆ. ಆದರೆ ಅ್ಲ್ಲಲಿ ಭೋಗದ ತುತ್ತತುದಿಯಲ್ಲಿ ವೈರಾಗ್ಯವಿದ್ದರೆ ಇಲ್ಲಿ ತಪಸ್ಸು ಮಾಡುವುದು ಪ್ರೇಮ ಫಲಿಸಲು. ಇಲ್ಲಿಯೂ ಜೈನಪುರಾಣಗಳಂತೆ ಜನ್ಮಾಂತರದ ಕತೆಯಿದೆ. ಅಲ್ಲಿಯ ಭವಾವಳಿ ಭೋಗ ನಿರಾಕರಣೆಯ ಪಥವಾದರೆ, ಇಲ್ಲಿ ಮತ್ತೆ ಮತ್ತೆ ಜನಿಸುವುದು ಪ್ರೀತಿ ಸಾರ್ಥಕ್ಯವಾಗಿ. ಇದು ಸಂಪೂರ್ಣ ಲೋಕಮುಖಿಯಾದ ಜೀವನ ಪ್ರೀತಿಯ ಕತೆ.`ಕಾದಂಬರಿ'ಯಲ್ಲಿ ಕತೆಯೊಳಗೆ ಕತೆ, ಅದರೊಳಗೆ ಮತ್ತೊಂದು ಕತೆ - ಹೀಗೆ ಇದರ ರಚನಾವಿನ್ಯಾಸ ಸಂಕೀರ್ಣವಾಗಿದೆ. ಮಹಾಶ್ವೇತೆ - ಪುಂಡರೀಕ ಹಾಗೂ ಕಾದಂಬರಿ - ಚಂದ್ರಾಪೀಡ ಇವರ ಪ್ರಣಯ ಕತೆ ಒಂದರೊಳಗೊಂದು ಹಾಸುಹೊಕ್ಕಾಗಿ ಸೇರಿಕೊಂಡಿದೆ. ಮಹಾಶ್ವೇತೆ, ಕಾದಂಬರಿ ಇವರಿಬ್ಬರೂ ಗಂಧರ್ವ ವಂಶದವರು; ಆಪ್ತಗೆಳತಿಯರು. ಮಹಾಶ್ವೇತೆ ತನ್ನ ಪ್ರಿಯಕರನನ್ನು ಪಡೆಯುವವರೆಗೂ ತಾನೂ ಕನ್ಯೆಯಾಗಿಯೇ ಇರುವೆನೆಂದು ಕಾದಂಬರಿ ನಿರ್ಧರಿಸಿದ್ದಾಳೆ; ಹಾಗಾಗಬಾರದೆಂದು ಮಹಾಶ್ವೇತೆ ಪ್ರಯತ್ನಿಸುತ್ತಾಳೆ. ಇವರ ಸ್ನೇಹದ ಪರಿ ಒಂದು ಮಾದರಿ. ಇವರಿಬ್ಬರನ್ನು ಪ್ರೀತಿಸಿದ ಪುಂಡರೀಕ, ಚಂದ್ರಾಪೀಡ ದೇವಾಂಶಸಂಭೂತರಾದರೂ ಮನುಷ್ಯ ಜನ್ಮಕ್ಕೆ ಸೇರಿದವರು. ಹೀಗಾಗಿ ಇವರು ಶಾಪ, ಪ್ರತಿಶಾಪಗಳಿಂದ ಬೇರೆ ಬೇರೆ ಜನ್ಮ ತಾಳುತ್ತಾರೆ.

ಚಂದ್ರ ಶಾಪಗ್ರಸ್ತನಾಗಿ ಚಂದ್ರಾಪೀಡನಾಗಿ  ಹುಟ್ಟಿ ಕಾದಂಬರಿಯನ್ನು ಪ್ರೀತಿಸುತ್ತಾನೆ. ಅವಳನ್ನು ಪಡೆಯುವ ಮುನ್ನವೇ ದೇಹತ್ಯಾಗ ಮಾಡುತ್ತಾನೆ. ನಂತರ ಶೂದ್ರಕನಾಗಿ ಹುಟ್ಟಿ, ಶಾಪ ವಿಮೋಚನೆಯ ನಂತರ ಚಂದ್ರಾಪೀಡನ ದೇಹವನ್ನು ಪಡೆದು ಕಾದಂಬರಿಯನ್ನು ವರಿಸುತ್ತಾನೆ. ಪುಂಡರೀಕ ಚಂದ್ರನ ಶಾಪಕ್ಕೆ ಗುರಿಯಾಗಿ ದೇಹ ತ್ಯಜಿಸಿ ವೈಶಂಪಾಯನನಾಗಿ ಜನಿಸುತ್ತಾನೆ. ಪೂರ್ವಜನ್ಮವಾಸನೆಯಿಂದ ಪ್ರೇರಿತನಾಗಿ ಮಹಾಶ್ವೇತೆಯನ್ನು ಮೋಹಿಸುತ್ತಾನೆ. ಅವನೇ ಪುಂಡರೀಕನೆಂದು ತಿಳಿಯದ ಮಹಾಶ್ವೇತೆ ಶಪಿಸುತ್ತಾಳೆ.

ಪರಿಣಾಮವಾಗಿ ಗಿಳಿಯ ಜನ್ಮ ತಾಳುತ್ತಾನೆ. ಶಾಪ ವಿಮೋಚನೆಯ ನಂತರ ಮತ್ತೆ ಪುಂಡರೀಕನ ಶರೀರ ಪಡೆದು ಮಹಾಶ್ವೇತೆಯನ್ನು ಮದುವೆಯಾಗುತ್ತಾನೆ. ಕಾದಂಬರಿ, ಮಹಾಶ್ವೇತೆ ಅದೇ ಜನ್ಮದಲ್ಲಿದ್ದು (ಗಂಧರ್ವರಾದುದರಿಂದ) ಪ್ರೀತಿಯ ನಿರೀಕ್ಷೆಯಲ್ಲಿದ್ದರೆ, ಚಂದ್ರಾಪೀಡ ಪುಂಡರೀಕ ಬೇರೆ ಬೇರೆ ಜನ್ಮ ತಳೆದು (ಮನುಷ್ಯರಾದುದರಿಂದ) ಕಡೆಗೆ ಅವರನ್ನು ಪಡೆಯುತ್ತಾರೆ. ಕತೆಯ ಸ್ವರೂಪ ಗಮನಿಸಿದಾಗ ಮರ್ತ್ಯಕ್ಕೆ  ಅಮರ್ತ್ಯದ ಹಂಬಲ, ಅಮರರಿಗೆ ಈ ನೆಲದ ಮೋಹ, ಆಕರ್ಷಣೆ ಮಿಳಿತವಾಗಿರುವುದು ಕಾಣಿಸುತ್ತದೆ.ಕಾದಂಬರಿಯ ಕತೆಯಲ್ಲಿ ನೇರ ನಿರೂಪಣೆಯಿಲ್ಲ. ಕತೆ ಆರಂಭವಾಗುವುದು ಚಂದ್ರಾಪೀಡ ಶೂದ್ರಕನಾಗಿಯೂ, ಪುಂಡರೀಕ ಗಿಳಿಯಾಗಿಯೂ ಜನಿಸಿದ್ದ ಕಾಲದಲ್ಲಿ. ಆರಂಭ ಭಾಗದ ಕತೆಯನ್ನು ಕವಿ ತಾನೇ ಹೇಳುತ್ತಾನೆ. ನಂತರದ ಕತೆಯನ್ನು ಶೂದ್ರಕನಿಗೆ ಗಿಳಿಯು ಹೇಳುತ್ತದೆ. ಗಿಳಿಯ ಪೂರ್ವವೃತ್ತಾಂತವನ್ನು ಜಾಬಾಲಿ ಮುನಿಗಳು ಹೇಳುತ್ತಾರೆ. ಅದರಲ್ಲಿಯ ಕೆಲವು ಭಾಗವನ್ನು ಮಹಾಶ್ವೇತೆ ಹೇಳುತ್ತಾಳೆ, ಇನ್ನು ಕೆಲವು ಭಾಗವನ್ನು ಪುಂಡರೀಕನ ಗೆಳೆಯ ಕಪಿಂಜಲ ಹೇಳುತ್ತಾನೆ. ಆರಂಭದಂತೆ ಕತೆಯ ಭಾಗವನ್ನು ಕವಿಯೇ ಹೇಳುತ್ತಾನೆ.

ಕಾಲಾನುಕ್ರಮದ ಕತೆ ಇಲ್ಲಿಲ್ಲ. ಪ್ರೀತಿ ಕಾಲವನ್ನು ಇಲ್ಲಿ ಧಿಕ್ಕರಿಸುತ್ತದೆ. `ಕಾದಂಬರಿ'ಯ ತಂತ್ರ ಅತ್ಯಂತ ಆಧುನಿಕವಾದುದು. ಇಂದಿನ ಎಲ್ಲ ಸಂಗತಿಗಳಿಗೆ ಪಾಶ್ಚಾತ್ಯರ ಕಡೆ ಕಣ್ಣು ಹಾಯಿಸುವ ಕನ್ನಡ ಮನಸ್ಸು ನಮ್ಮ ಪರಂಪರೆಯನ್ನು ಒಮ್ಮೆ ಮುಕ್ತಮನಸ್ಸಿನಿಂದ ನೋಡುವುದು ಸಾಧ್ಯವಾಗಬೇಕು. ಚಂದ್ರಾಪೀಡ ಪುಂಡರೀಕರಂತೆ ನಮಗೂ ಶಾಪವಿಮೋಚನೆ ಆಗಬೇಕಿದೆ. ಆಗ ಈ ನೆಲದ ನಿಜವಾದ ಪ್ರೀತಿ ಸಾರ್ಥಕ್ಯ ಪಡೆದೀತು.`ಕಾದಂಬರಿ'ಯಲ್ಲಿ ಶೃಂಗಾರ ತನ್ನೆಲ್ಲ ಮೋಹಕಲಯದೊಂದಿಗೆ ಅತ್ಯಂತ ನವಿರಾಗಿ ಚಿತ್ರಿತವಾಗಿದೆ. ನಿದರ್ಶನಕ್ಕಾಗಿ ಒಂದು ಪ್ರಸಂಗವನ್ನು ನಾವು ಗಮನಿಸಬಹುದು: ಹಂಸನೆಂಬ ಗಂಧರ್ವ ಹಾಗೂ ಗೌರಿಯೆಂಬ ಅಪ್ಸರೆ ದಂಪತಿಯರ ಮಗಳು ಮಹಾಶ್ವೇತೆ ಅನುಪಮ ಚೆಲುವೆ. ತಾರುಣ್ಯದಲ್ಲಿ ಅವಳೊಮ್ಮೆ ಅಚ್ಛೋದ ಸರೋವರಕ್ಕೆ ಸ್ನಾನಕ್ಕೆಂದು ಬರುತ್ತಿರುವಾಗ ದಾರಿಯಲ್ಲಿ ಅತ್ಯಂತ ಸುಂದರವಾದ ಪುಂಡರೀಕನೆಂಬ ಋಷಿಕುಮಾರನನ್ನು  ಭೇಟಿಯಾಗುತ್ತಾಳೆ. ಗೆಳೆಯ ಕಪಿಂಜಲನೊಡನೆ ಬರುತ್ತಿದ್ದ ಪುಂಡರೀಕನನ್ನು ಕಂಡಾಕ್ಷಣ ಮಹಾಶ್ವೇತೆಗೆ ಪ್ರಥಮ ನೋಟದಲ್ಲೇ ಪ್ರಣಯಾಂಕುರವಾಗುತ್ತದೆ.ನವಯೌವನದೊಳ್ ಗುಣದೋ/ ಷವಿಚಾರಮನಿಂತು ಮಾಡಲೀಯದ ಭಾವೋ/ ದ್ಬ್ರವನಿಂ ಪರವಶೆಮಾದೆಂ/ ನವಕುಸುಮಾಸವದೆ ಸೊರ್ಕಿದಳಿನಿಯ ತೆರದಿಂ

ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಚನೆಯಿಲ್ಲದೆ ಯೌವನದ ಅಮಲಿನಲ್ಲಿ ಮನ್ಮಥ ಪರವಶಳಾಗಿ ಅರಳಿದ ಹೂವಿಗೆ ಆಕರ್ಷಿತವಾದ ದುಂಬಿಯಂತೆ ಮಹಾಶ್ವೇತೆ ಪುಂಡರೀಕನಿಂದ ಆಕರ್ಷಿತಳಾಗುತ್ತಾಳೆ. ಆದರೆ ತಕ್ಷಣ ಎಚ್ಚೆತ್ತುಕೊಂಡು ಮೈಮರೆಯುವ ಮುನ್ನ, ಲಘುವಾಗಿ ನಡೆದುಕೊಳ್ಳುವ ಮೊದಲು, ನನ್ನ ಈ ಮನ್ಮಥವಿಕಾರವನ್ನು ಆ ಮುನಿಕುಮಾರ ಕಂಡು ಕೋಪಗೊಂಡು ಶಾಪ ನೀಡುವ ಮೊದಲು ಅಲ್ಲಿಂದ ದೂರ ಹೋಗುವುದು ಒಳ್ಳೆಯದು ಎಂದು ಅವಳು ಯೋಚಿಸುತ್ತಾಳೆ.

ಪ್ರವೃತ್ತಿ ಮತ್ತು ಸಂಸ್ಕೃತಿಯ ನಡುವಿನ ಸಂಘರ್ಷವಿದು. ಆಕರ್ಷಣೆ ಮತ್ತು ಸಂಯಮದ ನಡುವಿನ ತಾಕಲಾಟ. ಹೋಗುವ ಮುನ್ನ ನಮಸ್ಕರಿಸಿ ಹೋಗಲು ಬಯಸಿ ಅವನ ಮುಖವನ್ನೇ ನೋಡುತ್ತ, ಋಷಿಕುಮಾರ ಪುಂಡರೀಕನಿಗೆ ನಮಸ್ಕರಿಸುತ್ತಾಳೆ. ಇದು ಇನ್ನೂ ಕೆಲವು ಕ್ಷಣ ಅಲ್ಲಿರುವ ಒಳ ಆಸೆಯೂ ಇರಬಹುದು. ಮನಸ್ಸು ಬಯಕೆಗೆ ತಕ್ಕಂತೆ ನೆಪಗಳನ್ನು ಕಲ್ಪಿಸಿಕೊಳ್ಳುತ್ತದೆ.ಮದನಂ ದುರ್ಜಯಂ ಇಂದ್ರಿಯಂಗಳನಿವಾರ್ಯಂಗಳ್  ವಸಂತಂ ಮದ/ಪ್ರದನಾ ಸ್ಥಾನವತಿರಮ್ಯಮೆನಗಂ  ದುಃಖಂಬರವೇಳ್ಳುಮಪ್ಪುದರಿಂ ಭಾವಿಸಿ  ಮದ್ವಿಕಾರಮನೆ ನೋಡುತಿರ್ಪುದುಂ ಗಾಳಿಗೊ/ ಡ್ಡಿದ ದೀಪಾಂಕುರದಂತೆ ತನ್ಮುನಿಯುಮಂ ಕಾಮಂ ಚಲಂ ಮಾಡಿದಂ

ಮನ್ಮಥನನ್ನು ಗೆಲುವುದು ಸುಲಭವಲ್ಲ. ಇಂದ್ರಿಯಾಪೇಕ್ಷೆ ಸಹಜ, ಅನಿವಾರ್ಯ. ವಸಂತ ಮತ್ತು ಬರಿಸುವಂಥವನು, ವಸಂತಋತು ಚೆಲುವಾಗಿರುತ್ತದೆ. ಆ ಸ್ಥಾನ ಅತಿ ಮನೋಹರವಾಗಿತ್ತು - ಇಂಥ ಪರಿಸರದಲ್ಲಿ ಎದುರಿಗೆ ಮಹಾಶ್ವೇತೆಯಂಥ ಚೆಲುವೆ! ಪುಂಡರೀಕನ ಸ್ಥಿತಿ ಏನಾಗಬೇಡ! ಉದ್ದೀಪನಗೊಳಿಸುವ ಚೆಲುವಾದ ಅವಳ ಪ್ರೀತಿಯ ನೋಟಕ್ಕೆ ಪುಂಡರೀಕನ ಮುನಿ ಮನಸ್ಸೂ ಚಂಚಲವಾಗುತ್ತದೆ.

ಅವನಿಗೂ ತನ್ನ ಬಗ್ಗೆ ಆಸಕ್ತಿಯಿದೆ ಎಂದು ಗ್ರಹಿಸಿದ ಮಹಾಶ್ವೇತೆ ಅಲ್ಲಿಂದ ಹೊರಡಬೇಕೆಂದಿದ್ದವಳು ಹೊರಡದೆ ಅಲ್ಲೇ ನಿಲ್ಲುತ್ತಾಳೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ. ಸ್ತ್ರೀ ಸಹಜ ಸಂಕೋಚದಿಂದ ನೇರವಾಗಿ ಆತನೊಡನೆ ಮಾತನಾಡದೆ, ಅವನನ್ನೇ ಗುರಿಯಾಗಿಟ್ಟುಕೊಂಡು, ಆತ ಮುಡಿದಿದ್ದ ಅಪರೂಪದ ಹೂ ಗೊಂಚಲ  ಬಗ್ಗೆ ಆತನ ಗೆಳೆಯ ಕಪಿಂಜಲನೊಡನೆ ಪ್ರಸ್ತಾಪಿಸುತ್ತಾಳೆ. ಮಾತನಾಡಲು ನೆಪಬೇಕಲ್ಲ!ತಕ್ಷಣವೇ ಪುಂಡರೀಕ ಅವಳಿಗೆ ಹೂಗೊಂಚಲಿನ ಬಗ್ಗೆ ಅಪೇಕ್ಷೆಯಿದೆ ಎಂದು ತಿಳಿದು, ಕಿಂಚಿತ್ತೂ ಯೋಚಿಸದೆ ಆ ಹೂ ತೆಗೆದು ಅವಳಿಗೆ ಮುಡಿಸಲು ಮುಂದಾಗುತ್ತಾನೆ. ಒಲಿದ ಮನಸ್ಸನ್ನು ತಣಿಸುವ ಹಂಬಲ. ಹಾಗೆ ಹೂ ಮುಡಿಸುವಾಗ ಆತನ ಕೈ ಅಕಸ್ಮಾತ್ತಾಗಿ ಅವಳ ಕೆನ್ನೆಗೆ ತಾಕುತ್ತದೆ. ಹೆಣ್ಣಿನ ಕದಪಿನ ಮೊದಲ ಸ್ಪರ್ಶ!ಇಂ ಪೇಳ್ವುದೇನನೆನ್ನ ಕ/ ದಂಪಿನ  ನಸು ಸೋಂಕಿನೊಂದು ಸುಖದಿಂದಾವಂ/ ಕಂಪಿಸುತಿದೆ ಕರತಾಳದಿಂ/ ದಂ ಪೋದತ್ರಕ್ಷಮಾಲೆ ನಾಣ್ಬೆರಸಾಗಳ್

ರೋಮಾಂಚನಗೊಂಡ ಪುಂಡರೀಕನ ಕೈಯಿಂದ ಆತನ ಕೈಯಲ್ಲಿದ್ದ ಜಪಮಾಲೆ ಜಾರಿ ಕೆಳಕ್ಕೆ ಬೀಳುತ್ತದೆ. ನಾಚಿಕೆಯ ಸಹಿತ ಎಂಬ ಮಾತು ಇಲ್ಲಿ ಮುಖ್ಯ. ಅವನಿಗೆ ಅದರ ಅರಿವೇ ಇಲ್ಲ. ಅಷ್ಟೊಂದು ಆತ ಮೈ ಮರೆತಿರುತ್ತಾನೆ. ಮಹಾಶ್ವೇತೆ ತಕ್ಷಣ ಆ ಜಪಮಾಲೆ ಕೆಳಗೆ ಬೀಳದಂತೆ ಹಿಡಿದು ತನ್ನ ಕೊರಳಲ್ಲಿ ಧರಿಸುತ್ತಾಳೆ - ಪುಂಡರೀಕನನ್ನೇ ಧರಿಸಿದಂತೆ ಭಾವಿಸಿ.ಸಖಿಯ ಸೂಚನೆಯಂತೆ ಹೊರಡಲಾರದೆ ಮಹಾಶ್ವೇತೆ ಅಲ್ಲಿಂದ ಹೊರಡುತ್ತಾಳೆ. ಪುಂಡರೀಕನೂ ಹೊರಡುತ್ತಾನೆ. ಆಗ ಗೆಳೆಯ ಕಪಿಂಜಲ ಪುಂಡರೀಕನ ಈ ಮನ್ಮಥ ವಿಕಾರವನ್ನು ಗಮನಿಸುತ್ತಿದ್ದವನು `ಮುನಿಕುಮಾರನಾದ ನಿನಗೆ ಅವಳಲ್ಲಿ ಅದೆಂಥ ಆಕರ್ಷಣೆ! ನಿನ್ನ ಜಪಮಾಲೆಯನ್ನು ಅವಳು ತೆಗೆದುಕೊಂಡು ಹೋಗುತ್ತಿದ್ದರೂ ನಿನಗೆ ಪ್ರಜ್ಞೆ ಇಲ್ಲವಲ್ಲಾ!' ಎಂದು ಆಕ್ಷೇಪಿಸುತ್ತಾನೆ.

ಆಗ ಪುಂಡರೀಕ ಜಾಗೃತನಾಗಿ ಹುಸಿಕೋಪದಿಂದ ಮಹಾಶ್ವೇತೆಯನ್ನು ಉದ್ದೇಶಿಸಿ ಜಪಮಾಲೆಯನ್ನು ಕೊಟ್ಟು ಹೋಗುವಂತೆ ಹೇಳುತ್ತಾನೆ. ಮಹಾಶ್ವೇತೆಯೂ ಮೈಮರೆತಿದ್ದುದರಿಂದ ಕೊರಳಲ್ಲಿ ಹಾಕಿದ್ದ ಜಪಮಾಲೆಗೆ ಬದಲಾಗಿ ತಾನು ಧರಿಸಿದ್ದ ಹಾರವನ್ನು ತೆಗೆದು ಕೊಡುತ್ತಾಳೆ. ಪುಂಡರೀಕನೂ ಅವಳ ಮುಖವನ್ನೇ ಆಸೆಗಣ್ಣುಗಳಿಂದ ನೋಡುತ್ತಿದ್ದವನು ಅವಳ ಹಾರವನ್ನೇ ಜಪಮಾಲೆಯೆಂದು ಭಾವಿಸಿ ತೆಗೆದುಕೊಳ್ಳುತ್ತಾನೆ. ಇದು ಶೃಂಗಾರದ ಅತ್ಯಂತ ನವಿರಾದ ಸೂಕ್ಷ್ಮಸನ್ನಿವೇಶ ಮಾತ್ರವಲ್ಲ, ಧ್ವನಿಪೂರ್ಣವಾದುದೂ ಹೌದು.

ಮುನಿಕುಮಾರನಾದ ಪುಂಡರೀಕನ ಜಪಮಾಲೆ ಮಹಾಶ್ವೇತೆಯ ಕೊರಳ ಆಭರಣವಾಗುತ್ತದೆ. ಅವಳ ಕೊರಳ ಸರ ಪುಂಡರೀಕನ ಧ್ಯಾನದ ಜಪಮಾಲೆಯಾಗುತ್ತದೆ. ಈ ಅದಲು ಬದಲು ಸಾಂಕೇತಿಕವಾಗಿದೆ. ಮುಂದೆ ಪುಂಡರೀಕನ ಮನಸ್ಸು ತಪಸ್ಸು ಮರೆತು ಅನುರಕ್ತಿಯಲ್ಲಿ ಅದ್ದಿ ಹೋದರೆ, ಪುಂಡರೀಕನನ್ನು ಪಡೆಯಲಾಗದ ಮಹಾಶ್ವೇತೆ ಅರಮನೆ ತ್ಯಜಿಸಿ ವಲ್ಕಲ ಧರಿಸಿ ಪ್ರೇಮ ತಪಸ್ವಿನಿಯಾಗುತ್ತಾಳೆ.ಶೃಂಗಾರದ ನವಿರು ಭಾವಗಳನ್ನು ಇಷ್ಟು ಸೂಕ್ಷ್ಮವಾಗಿ, ಸಮರ್ಥವಾಗಿ, ಧ್ವನಿಪೂರ್ಣವಾಗಿ ಅಭಿವ್ಯಕ್ತಿಸಿರುವ ಸನ್ನಿವೇಶ ಜಾಗತಿಕ ಸಾಹಿತ್ಯದಲ್ಲಿಯೂ ಅತ್ಯಂತ ವಿರಳ. `ಕಾದಂಬರಿ' ಯನ್ನು ಓದಿ ಮುಗಿಸಿದಾಗ ಗಂಡು ಹೆಣ್ಣಿನ ಆಕರ್ಷಣೆ ಕ್ಷಣಿಕ ಲೋಲುಪತೆಯಲ್ಲ. ಸಾಧಿಸಿ ಪಡೆಯಬೇಕಾದ ಜೀವಶಕ್ತಿ ಎಂಬ ಅರಿವು ಮೂಡುತ್ತದೆ.

ಒಂದು ಹೆಣ್ಣಿಗೊಂದು ಗಂಡು/ ಹೇಗೊ ಸೇರಿ ಹೊಂದಿಕೊಂಡು/ ಕಾಣದೊಂದು ಕನಸ ಕಂಡು/ ಮಾತಿಗೊಲಿಯದಮೃತವುಂಡು/ದುಃಖ ಹಗುರವೆನುತಿರೆ/  ಪ್ರೇಮವೆನಲು ಹಾಸ್ಯವೇ?

-ನರಹಳ್ಳಿ ಬಾಲಸುಬ್ರಹ್ಮಣ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.