ಶನಿವಾರ, ಮೇ 21, 2022
23 °C

ಪ್ರೇರಣಾ ವಂತಿಗೆ ಹಗರಣ: ಲೋಕಸಭೆಯಲ್ಲಿ ಭಾರಿ ಕೋಲಾಹಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಪುತ್ರರಿಬ್ಬರು ಟ್ರಸ್ಟಿಗಳಾಗಿರುವ ‘ಪ್ರೇರಣಾ ಶಿಕ್ಷಣ ಮತ್ತು ಸಾಮಾಜಿಕ ಟ್ರಸ್ಟ್’ ಕೆಲವು ಕಾರ್ಪೋರೇಟ್ ಸಂಸ್ಥೆಗಳಿಂದ ಪಡೆದಿರುವ ಅಕ್ರಮ ವಂತಿಗೆ ಹಗರಣ ಬುಧವಾರ ಲೋಕಸಭೆಯಲ್ಲೂ ಪ್ರತಿಧ್ವನಿಸಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಇದರಿಂದಾಗಿ 15 ನಿಮಿಷ ಕಲಾಪವನ್ನು ಮುಂದೂಡಲಾಯಿತು.ಶೂನ್ಯ ವೇಳೆಯಲ್ಲಿ ಸ್ಪೀಕರ್ ಮೀರಾ ಕುಮಾರ್ ಜೆಡಿಎಸ್ ಸದಸ್ಯ ಎಚ್. ಡಿ. ದೇವೇಗೌಡರ ಹೆಸರನ್ನು ಕರೆಯುತ್ತಿದ್ದಂತೆ ಬಿಜೆಪಿ ಸದಸ್ಯರು ಎದ್ದು ನಿಂತು ಗದ್ದಲ ಆರಂಭಿಸಿದರು. ಮಾಜಿ ಪ್ರಧಾನಿಗೆ ಮಾತನಾಡಲು ಬಿಡದೆ ಘೋಷಣೆಗಳನ್ನು ಕೂಗಿದರು. ಇದರಿಂದ ಕೆರಳಿದ ದೇವೇಗೌಡರು ‘ಸಂಖ್ಯಾಬಲದ ಆಧಾರದಲ್ಲಿ ಮನಸಿಗೆ ಬಂದಂತೆ ವರ್ತಿಸಲು ವಿರೋಧ ಪಕ್ಷಗಳ ಮುಖಂಡರಿಗೆ ಅವಕಾಶ ಕೊಡುವುದಿಲ್ಲ. ಸದನದಲ್ಲಿ ನನಗೆ ಮಾತನಾಡುವ ಹಕ್ಕಿದೆ’ ಎಂದು ಗುಡುಗಿದರು.‘ವಿರೋಧ ಪಕ್ಷದ ಒಂದು ಗುಂಪು ಮಾತ್ರ ವಿರೋಧ ಮಾಡುತ್ತಿದೆ. ಇದು ಶೋಭೆ ತರುವಂತಹದಲ್ಲ’ ಎಂದು ದೇವೇಗೌಡರು ಕುಟುಕಿದರು. ಸಮಾಜವಾದಿ ಪಕ್ಷದ ಮುಖಂಡ ಮುಲಾಯಂಸಿಂಗ್, ಆರ್‌ಜೆಡಿ ನಾಯಕ ಲಾಲೂ ಪ್ರಸಾದ್, ಸಿಪಿಎಂನ ಬಸುದೇವ ಆಚಾರ್ಯ, ಸಿಪಿಐನ ಗುರುದಾಸ್ ದಾಸ್‌ಗುಪ್ತ, ಕಾಂಗ್ರೆಸಿನ ಸಂಜಯ್ ನಿರುಪಮ್, ಜಗದಾಂಬಿಕ ಪಾಲ್ ಮುಂತಾದವರು ಗೌಡರ ಬೆಂಬಲಕ್ಕೆ ಧಾವಿಸಿದರು.ಸದನದಲ್ಲಿ ಆರೋಪ-ಪ್ರತ್ಯಾರೋಪಗಳ ವಿನಿಮಯವಾಗುತ್ತಿದ್ದಂತೆ ಸ್ಪೀಕರ್, ‘ನಿಮ್ಮ ಮಾತುಗಳು ದಾಖಲೆಗೆ ಹೋಗುವುದಿಲ್ಲ. ದಯವಿಟ್ಟು ಕುಳಿತುಕೊಳ್ಳಿ. ಶೂನ್ಯ ವೇಳೆ ನಡೆಯಲು ಬಿಡಿ’ ಎಂದು ಬಿಜೆಪಿ ಸದಸ್ಯರಿಗೆ ಪದೇ ಪದೇ ಮನವಿ ಮಾಡಿದರು. ‘ನೀವು ಮಾತನಾಡಿ’ ಎಂದು ದೇವೇಗೌಡರಿಗೆ ಹೇಳಿದರು.ಸ್ಪೀಕರ್ ಮನವಿಯನ್ನು ಕಿವಿ ಮೇಲೆ ಹಾಕಿಕೊಳ್ಳದ ಬಿಜೆಪಿ ಸದಸ್ಯರು ಗದ್ದಲ ಮುಂದುವರಿಸಿದರು. ಸಭಾಧ್ಯಕ್ಷರ ಪೀಠದ ಮುಂದಿನ ಆವರಣಕ್ಕೆ ಬಂದು ‘ದೆವ್ವದ ಬಾಯಲ್ಲಿ ಭಗವದ್ಗೀತೆ’ ಎಂಬ ಘೋಷಣೆ ಕೂಗಿದರು. ಆರ್‌ಜೆಡಿ ಸದಸ್ಯ ರಘುವಂಶ ಪ್ರಸಾದ್ ದನಿ ಏರಿಸುತ್ತ ಗೌಡರ ಆಸನದ ಬಳಿ ಬಂದು ಬಿಜೆಪಿ ಸದಸ್ಯರ ಜತೆ ಚಕಮಕಿಗಿಳಿದರು.ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಒಳಗೊಂಡಂತೆ ಮುಂದಿನ ಸಾಲಿನಲ್ಲಿ ಕುಳಿತಿದ್ದ ಯಾವೊಬ್ಬ ನಾಯಕರೂ ಚಕಾರ ಎತ್ತದೆ ಮೌನವಾಗಿದ್ದರು. ಚರ್ಚೆ ವೇಳೆ ಅನಂತ ಕುಮಾರ್ ಗೈರುಹಾಜರಿ ಎದ್ದು ಕಂಡಿತು. ಮುಖ್ಯಮಂತ್ರಿ ಪುತ್ರ ಬಿ. ವೈ. ರಾಘವೇಂದ್ರ ಕೂಡಾ  ಸಹೊದ್ಯೋಗಿಗಳ ಜತೆ ಬಾವಿಗೆ ಬಂದು ಪ್ರತಿಭಟಿಸಿದರು.ಸದನದಲ್ಲಿ ಗದ್ದಲ ಜೋರಾಗಿ ಯಾರು ಏನು ಹೇಳುತ್ತಿದ್ದಾರೆ ಎಂದು ಕೇಳಿಸುತ್ತಿರಲಿಲ್ಲ. ಮೇಲಿಂದ ಮೇಲೆ ಮಾಡಿದ ಮನವಿಗೆ ಬಿಜೆಪಿ ಸದಸ್ಯರು ಕಿವಿಗೊಡದಿದ್ದರಿಂದ ಸ್ಪೀಕರ್ ಕಲಾಪವನ್ನು 15ನಿಮಿಷ ಮುಂದೂಡಿದರು. ಸದನ ಮುಂದೂಡಿದರೂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿತ್ತು.ಸದನ 12.30ಕ್ಕೆ ಮತ್ತೆ ಸೇರಿದಾಗ ಬಿಜೆಪಿ ಸದಸ್ಯರು ಗಲಾಟೆ ಮುಂದುವರಿಸಿದರು. ‘ಶೂನ್ಯ ವೇಳೆಯಲ್ಲಿ ಸದಸ್ಯರ ಮಾತಿಗೆ ಅಡ್ಡಿ ಮಾಡುವುದು ಸತ್ಸಂಪ್ರದಾಯವಲ್ಲ’ ಎಂದು ಮೀರಾ ಕುಮಾರ್ ಕಿವಿ ಮಾತು ಹೇಳಿದರು. ‘ನೀವು ಮಾತು ಮುಂದುವರಿಸಿ’ ಎಂದು ಗೌಡರಿಗೆ ಸೂಚಿಸಿದರು.ಜೆಡಿಎಸ್ ವರಿಷ್ಠರಿಗೆ ಸಮಾನ ಮನಸ್ಕ ಪಕ್ಷಗಳ ನಾಯಕರು ಹೆಗಲು ಕೊಟ್ಟು ನಿಂತರು. ರಾಘವೇಂದ್ರ, ಬಿಜೆಪಿ ಸದಸ್ಯರಿಗೆ ಕೆಲವು ದಾಖಲೆಗಳನ್ನು ವಿತರಿಸಿದರು. ಪುನಃ ಸಭಾಧ್ಯಕ್ಷರ ಪೀಠದ  ಮುಂದಿನ ಆವರಣಕ್ಕೆ ಬಂದ ವಿರೋಧ ಪಕ್ಷದ ಸದಸ್ಯರು ಈ ದಾಖಲೆಗಳನ್ನು ಪ್ರದರ್ಶಿಸುತ್ತಾ ಘೋಷಣೆ ಕೂಗಿದರು. ಗೌಡರ ಮಾತಿಗೆ ಕ್ರಿಯಾ ಲೋಪ ಎತ್ತಲು ಕೆಲವರು ಪ್ರಯತ್ನಿಸಿದರು. ಸ್ಪೀಕರ್ ಅದಕ್ಕೆ ಅವಕಾಶ ಕೊಡಲಿಲ್ಲ.‘ಮಹಾರಾಷ್ಟ್ರ ಮುಖ್ಯಮಂತ್ರಿ ಎ. ಆರ್. ಅಂತುಳೆ ‘ವಂತಿಗೆ ಹಗರಣ’ವನ್ನು ಆಗಿನ ವಿರೋಧ ಪಕ್ಷದ ನಾಯಕ ಎ.ಬಿ. ವಾಜಪೇಯಿ ಸದನದಲ್ಲಿ ಪ್ರಸ್ತಾಪ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇವೆ’ ಎಂದು ಗೌಡರು ಏರು ದನಿಯಲ್ಲಿ ಹೇಳಿದರು.ಬಿಜೆಪಿ ಸದಸ್ಯರ ಗಲಾಟೆಯಿಂದ ಕೆರಳಿದ ಗೌಡರು, ‘ಸದನ ವಿರೋಧ ಪಕ್ಷದ ಸದಸ್ಯರ ಕೃಪಾ ಕಟಾಕ್ಷದಲ್ಲಿ ನಡೆಯುತ್ತಿದೆಯೇ?’ ಎಂದು ಪ್ರಶ್ನಿಸಿದರು. ‘ಸಂಖ್ಯಾ ಬಲದ ಮೇಲೆ ಮನಸೋ ಇಚ್ಛೆ ವರ್ತಿಸಲು ಅವಕಾಶ ಕೊಡುವುದಿಲ್ಲ’ ಎಂದು ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ಚುಚ್ಚಿದರು. ಮುಖ್ಯಮಂತ್ರಿ ಯಡಿಯೂರಪ್ಪ ಮಕ್ಕಳು ಟ್ರಸ್ಟಿಗಳಾಗಿರುವ ಪ್ರೇರಣಾ ಟ್ರಸ್ಟ್ ಕೆಲವು ಕಾರ್ಪೊರೇಟ್ ಸಂಸ್ಥೆಗಳಿಂದ 27 ಕೋಟಿ ರೂ. ವಂತಿಗೆ ಪಡೆದಿದೆ ಎಂದು ಆರೋಪಿಸಿದರು.ಯಾವ್ಯಾವ ಸಂಸ್ಥೆಗಳು ಎಷ್ಟು ಹಣ ಪಾವತಿಸಿವೆ ಎಂದು ಪಟ್ಟಿ ಕೊಟ್ಟರು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸದನದ ಮುಂದೆ ಇಟ್ಡರು. ಯಡಿಯೂರಪ್ಪ ಅವರಿಂದ ಲಾಭ ಪಡೆಯುವ ಉದ್ದೇಶದಿಂದಲೇ ಈ ಕಂಪೆನಿಗಳು ಹಣ ಕೊಟ್ಟಿವೆ. ಈ ಕಂಪೆನಿಗಳ ಮೂಲ ಬಂಡವಾಳ ಕೇವಲ 1ಲಕ್ಷ. ನಷ್ಟದಲ್ಲಿರುವ ಕಂಪೆನಿಗಳೂ ಹಣ ನೀಡಿವೆ. ಮುಖ್ಯ ಮಂತ್ರಿ ಹಾಗೂ ಅಧಿಕಾರಿಗಳು ಇದರಲ್ಲಿ ಷಾಮೀಲಾಗಿದ್ದಾರೆ. ಕಂಪೆನಿಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಕೈಗೊಂಡಿರುವ ಕೆಲವು ತೀರ್ಮಾನ ನ್ಯಾಯಾಲಯ ನಿಂದನೆ ಆಗಲಿದೆ ಎಂದು ಪ್ರತಿಪಾದಿಸಿದರು.ವೈಯಕ್ತಿಕ ಲಾಭಕ್ಕಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಕುರ್ಚಿಯಲ್ಲಿ ಮುಂದುವರಿಯುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಈ  ಹಗರಣ ಸುಮಾರು 20 ನಿಮಿಷ ಕಾವೇರಿದ ವಾತಾವರಣಕ್ಕೆ ಕಾರಣವಾಯಿತು.ಆನಂತರ ಕಾಂಗ್ರೆಸ್ ಸದಸ್ಯ ಜಗದಾಂಬಿಕ ಪಾಲ್ ಸರದಿ. ಕರ್ನಾಟಕ ಮುಖ್ಯಮಂತ್ರಿ 27 ಕೋಟಿ ಅಕ್ರಮ ವಂತಿಗೆ ಪಡೆದಿರುವುದು  ಮೇಲ್ನೋಟಕ್ಕೆ ಸಾಬೀತಾಗಿದೆ. ಯಡಿಯೂರಪ್ಪನವರ ಕುಟುಂಬ ಸದಸ್ಯರು. ಸಂಬಂಧಿಕರು ಲಾಭ ಮಾಡಿಕೊಂಡಿದ್ದಾರೆ. ಇದರಿಂದ ಬೊಕ್ಕಸಕ್ಕೆ 180 ಕೋಟಿ ನಷ್ಟ ಮಾಡಲಾಗಿದೆ. ಕಪ್ಪು ಹಣ ವಾಪಸ್ ತರುವ ಮಾತನಾಡುವ ಜನ ಈ ವಿಷಯವನ್ನು ಯಾಕೆ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಕೇಳಿದರು.ಪಾಲ್ ಅವರಿಗೂ ಬಿಜೆಪಿ ಸದಸ್ಯರು ಅಡ್ಡಿ ಮಾಡಿದರು. ಶೂನ್ಯ ವೇಳೆಯಲ್ಲಿ ಎರಡೆರಡು ಸಲ ಈ ವಿಷಯ ಪ್ರಸ್ತಾಪ ಮಾಡುವುದಕ್ಕೆ ಅವಕಾಶ ಕೊಟ್ಟಿರುವುದರ ಹಿಂದಿನ ಔಚಿತ್ಯವನ್ನು ವಿರೋಧ ಪಕ್ಷದ ಸದಸ್ಯರು ಪ್ರಶ್ನಿಸಿದರು. ಇದಕ್ಕೂ ಮೊದಲು ದೇವೇಗೌಡರು, ಎಡಪಕ್ಷಗಳು, ಟಿಡಿಪಿ, ಎಐಎಡಿಎಂಕೆ ಸದಸ್ಯರ ಜತೆಗೂಡಿ ಪ್ರಶ್ನೋತ್ತರ ಅವಧಿ ರದ್ದು ಮಾಡಿ ಪ್ರೇರಣಾ ಟ್ರಸ್ಟ್ ವಿಷಯ ಪ್ರಸ್ತಾಪಕ್ಕೆ ಅವಕಾಶ ಕೊಡಬೇಕು ಎಂದು ನೋಟಿಸ್ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.