ಶನಿವಾರ, ಮೇ 8, 2021
26 °C
ನಗರ ಸಂಚಾರ

ಪ್ರೌಢಶಾಲೆಗೆ ಕೊಳಚೆ ನೀರಿನ ಕಾಟ

ಪ್ರಜಾವಾಣಿ ವಾರ್ತೆ/ ಎನ್.ಎಲ್. ಬಸವರಾಜ್ Updated:

ಅಕ್ಷರ ಗಾತ್ರ : | |

ಹಿರಿಯೂರು: ನೂತನ ಬಡಾವಣೆಗಳನ್ನು ನಿರ್ಮಿಸುವಾಗ ವೈಜ್ಞಾನಿಕವಾಗಿ ಚಿಂತನೆ ನಡೆಸಿ ಯೋಜನೆಗಳನ್ನು ರೂಪಿಸದಿದ್ದರೆ, ಭವಿಷ್ಯದಲ್ಲಿ ಸಾರ್ವಜನಿಕರ ಜೀವನದ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ತಾಜಾ ಉದಾಹರಣೆ ನಗರದ ವೇದಾವತಿ ಬಡಾವಣೆ.ಸುಮಾರು ನಲವತ್ತು ವರ್ಷದ ಹಿಂದೆ ಜಪಾನ್ ದೇಶದಲ್ಲಿರುವ ನಗರಗಳ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದ ವೇದಾವತಿ ಬಡಾವಣೆ, ಎಲ್ಲೆಂದರಲ್ಲಿ ಒತ್ತುವರಿಯ ಕಾರಣ ತನ್ನ ಮೂಲ ವಿನ್ಯಾಸವನ್ನು ಕಳೆದುಕೊಂಡಿದೆ. ಇದಕ್ಕೆ ಪುರಸಭೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವರ್ಗ.ಬಡಾವಣೆಯಲ್ಲಿದ್ದ 100 ಅಡಿ ರಸ್ತೆ, ಜೋಡಿ ರಸ್ತೆಗಳು ಒತ್ತುವರಿಗೆ ಒಳಗಾಗಿವೆ. ಯೋಜಿತವಾಗಿ ಚರಂಡಿ ನಿರ್ಮಿಸದ ಕಾರಣಕ್ಕೆ ಮಳೆ ಬಂದಾಗ ನೀರು ಎಲ್ಲೆಂದರಲ್ಲಿ ನುಗ್ಗಿ ದೊಡ್ಡ ಅವಾಂತರ ಸೃಷ್ಟಿಸುತ್ತದೆ. ಬಡಾವಣೆಯ ಅರ್ಧ ಭಾಗದ ಚರಂಡಿಗಳ ನೀರನ್ನು ನೇರವಾಗಿ ವಾಣಿ ವಿಲಾಸ ನಾಲೆಗೆ ಬಿಡುತ್ತಿರುವುದರಿಂದ ಇಡೀ ನಾಲೆ ಕೊಳಚೆ ಗುಂಡಿಯಾಗಿದೆ. ಇನ್ನರ್ಧ ಭಾಗದ ನೀರು ನಾಲೆಯ ಕಡೆಗೂ ಹರಿಯದೆ, ಬೇರೆ ಕಡೆಗೆ ಹರಿದು, ಕೊಳಚೆ ಸಾಮ್ರಾಜ್ಯವನ್ನು ಸೃಷ್ಠಿಸುತ್ತದೆ  ಎನ್ನುವುದು ನಾಗರಿಕರ ಆರೋಪ.ಬಡಾವಣೆಯಲ್ಲಿರುವ ವೇದಾವತಿ ಪ್ರೌಢಶಾಲೆಯ ಮೇಲ್ಭಾಗದ ಕೊಳಚೆನೀರು, ಸಂತ ಅನ್ನಮ್ಮ ಪ್ರೌಢಶಾಲೆ ಕಡೆಗೆ ಹರಿಯುತ್ತದೆ. ಪುರಸಭೆ ವತಿಯಿಂದ ನಿರ್ಮಿಸಿರುವ ಚರಂಡಿ ಶಾಲೆಯ ಆವರಣಕ್ಕೆ ಕೊನೆಯಾಗುತ್ತದೆ. ಹೀಗಾಗಿ, ಅಲ್ಲಿಂದ ಮುಂದಕ್ಕೆ ಹೋಗಲು ಅವಕಾಶವಿಲ್ಲದ ತ್ಯಾಜ್ಯ ನೀರು ಶಾಲೆಯ ಆವರಣದ ಸುತ್ತ ನಿಲ್ಲುವ ಕಾರಣದಿಂದ ಇಡೀ ಪ್ರದೇಶ ಸಾಂಕ್ರಾಮಿಕ ರೋಗಗಳ ತವರಿನಂತೆ ಕಾಣುತ್ತದೆ. ಸ್ವಚ್ಛತೆ ಕಾಪಾಡುವಂತೆ ಶಿಕ್ಷಕರ ಹಿತೋಪದೇಶ ಕೇಳುವ ವಿದ್ಯಾರ್ಥಿಗಳು ಪ್ರತಿನಿತ್ಯ ಕೊಳಚೆ ಪ್ರದೇಶದ ದರ್ಶನ ಪಡೆದ ನಂತರವೇ ಶಾಲೆಯನ್ನು ಪ್ರವೇಶಿಸುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.ಇಲ್ಲಿನ ಅವ್ಯವಸ್ಥೆಯ ಬಗೆಗೆ ಪುರಸಭೆ ಆಡಳಿತ ನಡೆಸುವವರಿಗೆ ಹಲವು ಬಾರಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಶಾಲಾ ಆಡಳಿತ ಮಂಡಳಿಯವರು ಇದು ಆವರಣದ ಹೊರಗಿನ ಸಮಸ್ಯೆ ಎಂದು ಮೌನ ತಾಳಿದ್ದಾರೆ. ಶಾಲೆಯ ಸುತ್ತಮುತ್ತ ವಾಸಿಸುತ್ತಿರುವ ನಾಗರಿಕರ ಗೋಳು ಕೇಳುವವರಿಲ್ಲ. ಆರೋಗ್ಯ ಇಲಾಖೆಯವರು ಒಮ್ಮೆ ಈ ಪ್ರದೇಶಕ್ಕೆ ಭೇಟಿ ನೀಡಿ, ಡೆಂಗೆ, ಮಲೇರಿಯಾ ಹರಡುವ ಮೊದಲು ಸಂಬಂಧಿಸಿದವರಿಂದ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.