ಮಂಗಳವಾರ, ಏಪ್ರಿಲ್ 20, 2021
24 °C

ಬಗೆಹರಿದ ಮದುವೆ ಜಗಳ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಸ್ಪರ ಹೊಡೆದಾಟದ ಹಿನ್ನೆಲೆಯಲ್ಲಿ ವೈದ್ಯರಾದ ಡಾ.ಅಮಿತ್ ವಿ.ರೊಳ್ಳಿ ಮತ್ತು ಡಾ.ಬಿ.ಪಿ.ಶ್ವೇತಾ ಅವರ ಮದುವೆ ಮುರಿದು ಬಿದ್ದ ನಂತರ ಎರಡೂ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಿಸದೇ ಮಾತುಕತೆ ಮೂಲಕ ಜಗಳ ವಿವಾದ ಬಗೆಹರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.ಆರತಕ್ಷತೆ ಪ್ರಾರಂಭವಾಗುವ ಮುನ್ನವೇ ಹವಾನಿಯಂತ್ರಿತ ಕೊಠಡಿಗಳನ್ನು ಕಲ್ಪಿಸಿಕೊಡಲಿಲ್ಲವೆಂಬ ಕಾರಣಕ್ಕೆ ವರನ ತಾಯಿ ಮತ್ತು ಸಂಬಂಧಿಕರು ಜಗಳ ಮಾಡಿದರು. ಇದರಿಂದ ಎರಡೂ ಕುಟುಂಬಗಳು ಮದುವೆ ಆರತಕ್ಷತೆಯಲ್ಲೇ ಹೊಡೆದಾಡಿಕೊಂಡಿದ್ದರು. ಈ ನಡುವೆ ಮದುವೆ ಮಾಡಿಕೊಳ್ಳಲು ನಿರಾಕರಿಸಿದ ವರನಿಗೆ, ವಧುವಿನ ಕಡೆಯವರು ಥಳಿಸಿದ್ದರು. ಪರಿಣಾಮ ಮದುವೆ ಮುರಿದು ಬಿದ್ದಿತ್ತು.ಬಳಿಕ ಡಾ.ಅಮಿತ್ ವಿ.ರೊಳ್ಳಿ ಮತ್ತು ಆತನ ತಾಯಿ ಚಂದ್ರಕಲಾ ರೊಳ್ಳಿ ಅವರನ್ನು ವಶಕ್ಕೆ ಪಡೆದಿದ್ದ ಬಸವೇಶ್ವರನಗರ ಪೊಲೀಸರು ಠಾಣೆಗೆ ಕರೆದೊಯ್ದಿದ್ದರು.

ಘಟನೆ ಸಂಬಂಧ ವಧು-ವರನ ಕುಟುಂಬಗಳು ಯಾವುದೇ ದೂರು ದಾಖಲಿಸಿಲ್ಲ. ಎರಡೂ ಕುಟುಂಬಗಳು ಪರಸ್ಪರ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಬ್ಬಳ್ಳಿಯ ವೀರಪ್ಪ ರೊಳ್ಳಿ ಮತ್ತು ಚಂದ್ರಕಲಾ ರೊಳ್ಳಿ ಅವರ ಪುತ್ರ ಡಾ.ಅಮಿತ್ ವಿ.ರೊಳ್ಳಿ ಹಾಗೂ ಬಸವೇಶ್ವರನಗರ 4ನೇ ಹಂತದ ಬಿ.ಎಸ್.ಪುಟ್ಟಚನ್ನಪ್ಪ ಅವರ ಪುತ್ರಿ ಡಾ.ಬಿ.ಪಿ.ಶ್ವೇತಾ ಅವರ ವಿವಾಹವು ರಾಜಾಜಿನಗರದ ಮಂಜುನಾಥನಗರದಲ್ಲಿರುವ ಸಿದ್ಧಗಂಗಾ ಸಾಮೂಹಿಕ ಭವನದಲ್ಲಿ ಬುಧವಾರ (ಮಾ.09) ನಿಶ್ಚಯವಾಗಿತ್ತು. ಅದರಂತೆ ಮಂಗಳವಾರ (ಮಾ.08) ಆರತಕ್ಷತೆಗೆ ಸಿದ್ಧತೆ ನಡೆಯುತ್ತಿದ್ದ ವೇಳೆ ಜಗಳವಾಗಿತ್ತು.ಇದೇ ಮದುವೆ ಮನೆಯಲ್ಲಿ ಸಾವು: ಒಂದೆಡೆ ವಧು-ವರನ ಕುಟುಂಬಗಳ ನಡುವೆ ಉಂಟಾದ ಜಗಳದಿಂದ ಮದುವೆ ಮುರಿದು ಬಿದ್ದರೆ, ನಾದಸ್ವರ ನುಡಿಸಲು ಬಂದಿದ್ದ ಎಂ.ರೇವಣ್ಣ (50) ಎಂಬುವರು ಕಲ್ಯಾಣ ಮಂಟಪದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ.ಮಂಜುನಾಥನಗರದ 1ನೇ ಹಂತದಲ್ಲಿ ವಾಸವಿದ್ದ ಅವರು ಶುಭ ಸಮಾರಂಭಗಳಲ್ಲಿ ನಾದಸ್ವರ ನುಡಿಸುತ್ತಿದ್ದರು.ಮದ್ಯ ವ್ಯಸನಿಯಾಗಿದ್ದ ರೇವಣ್ಣ ಅವರು ಇತ್ತೀಚೆಗೆ ಕುಡಿಯುವುದನ್ನು ಬಿಟ್ಟಿದ್ದರು. ಸಂಜೆ 5 ಗಂಟೆ ಸುಮಾರಿಗೆ ರಕ್ತ ವಾಂತಿ ಮಾಡಿಕೊಂಡಿದ್ದ ಅವರು ಚಿಕಿತ್ಸೆ ಪಡೆದಿದ್ದರು. ನಂತರ ಮದುವೆ ಸಮಾರಂಭಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ರೇವಣ್ಣ ಅವರು ರಾತ್ರಿ 12 ಗಂಟೆ ಸುಮಾರಿಗೆ ಶೌಚಾಲಯಕ್ಕೆ ಹೋಗುವುದಾಗಿ ಸ್ನೇಹಿತರಿಗೆ ತಿಳಿಸಿ ಹೋಗಿದ್ದರು. ಮದುವೆಯಲ್ಲಿ ಜಗಳ ನಡೆಯುತ್ತಿದ್ದರಿಂದ ಯಾರೂ ಅವರ ಬಗ್ಗೆ ಗಮನ ಹರಿಸಿರಲಿಲ್ಲ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಶೌಚಾಲಯಕ್ಕೆ ಹೋಗಿ ನೋಡಿದಾಗ ಅವರು ಮೃತಪಟ್ಟಿದ್ದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.