ಬುಧವಾರ, ಜೂನ್ 16, 2021
23 °C

ಬಜೆಟ್: ಆಶಾವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಜೆಟ್: ಆಶಾವಾದ

ಸ್ವಂತ ಮನೆ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಸದ್ಯದಲ್ಲೇ ಮಂಡನೆಯಾಗಲಿರುವ ಕೇಂದ್ರ ಬಜೆಟ್ ಬಗ್ಗೆ ಮನೆ ಖರೀದಿದಾರರು ಸಾಕಷ್ಟು ಆಶಾಭಾವನೆ ಹೊಂದಿದ್ದು, ಬಜೆಟ್‌ನಲ್ಲಿ ತೆಗೆದುಕೊಳ್ಳಲಾಗುವ ನಿರ್ಣಯಗಳು ಆಸ್ತಿ ಮಾರುಕಟ್ಟೆಯ ಮೇಲೆ ಉತ್ತಮ ಪರಿಣಾಮವನ್ನುಂಟು ಮಾಡುತ್ತದೆ ಎಂದೇ ಭಾವಿಸಿದ್ದಾರೆ.ದೇಶದ ಗೃಹ ಖರೀದಿ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುವಂತಹ ಬಜೆಟ್ ಅನ್ನೇ ಹಣಕಾಸು ಸಚಿವರು ತೆಗೆದುಕೊಳ್ಳಲಿದ್ದಾರೆ ಎಂದು ಬಹುವಾಗಿ  ನಿರೀಕ್ಷಿಸಲಾಗಿದೆ. ಆಸ್ತಿ ಕುರಿತ ವೆಬ್‌ಸೈಟ್‌ಗಳಲ್ಲಿ ಪ್ರಮುಖವಾದ `ಮಕಾನ್‌ಡಾಟ್‌ಕಾಂ~ ಇತ್ತೀಚೆಗೆ ಈ ಕುರಿತಂತೆ ಆನ್‌ಲೈನ್ ಮೂಲಕ ಸಮೀಕ್ಷೆಯೊಂದನ್ನು ನಡೆಸಿತ್ತು.ಭಾರತದ ಒಂದು ಮತ್ತು ಎರಡನೇ ಶ್ರೇಣಿಯ ನಗರಗಳ ಮನೆ ಖರೀದಿಸುವ ನಿರೀಕ್ಷೆ ಹೊಂದಿದ ಸುಮಾರು 3728 ಮಂದಿ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. `ರೋಟಿ ಕಪಡಾ ಔರ್ ಮಕಾನ್~ ಎಂದು ಹೆಸರಿಸಲಾದ ಈ ಸಮೀಕ್ಷೆಯ ಪ್ರಮುಖ ಸಂಗತಿಗಳು ಈ ಕೆಳಗಿನಂತಿವೆ.ಬಜೆಟ್: ಜನರ ನಿರೀಕ್ಷೆ ಏನಿವೆ?


ಸಮೀಕ್ಷೆಯಲ್ಲಿ ಭಾಗವಹಿಸಿದ ಸುಮಾರು ಶೇ 53ರಷ್ಟು ಮಂದಿ, ಕೇಂದ್ರ ಸರ್ಕಾರದ 2012-13ನೇ ಸಾಲಿನ ಬಜೆಟ್, ರಿಯಲ್ ಎಸ್ಟೇಟ್ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಶೇ 31 ರಷ್ಟು ಜನರು ಬಜೆಟ್‌ನಿಂದ ಹೆಚ್ಚಿನದೇನನ್ನೂ ನಿರೀಕ್ಷಿಸುವುದಿಲ್ಲ, ಉಳಿದ ಶೇ 16 ರಷ್ಟು ಮಂದಿ ಯಾವುದನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ.ಒಟ್ಟಾರೆಯಾಗಿ ಹೇಳುವುದಾದಲ್ಲಿ ಈ ಸಮೀಕ್ಷೆಯು ಮನೆ ಖರೀದಿದಾರರು ಬಜೆಟ್ ಬಗ್ಗೆ ಸಕಾರಾತ್ಮಕ ಭಾವನೆಯನ್ನೇ ತಳೆದಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಕಳೆದ ವರ್ಷ ಇದೇ ವಿಷಯಕ್ಕೆ ಸಂಬಂಧಿಸಿ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಶೇ 41ರಷ್ಟು ಮಂದಿ ಮಾತ್ರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಅಂದರೆ, ಕಳೆದ ವರ್ಷಕ್ಕಿಂತ ಶೇ 12ರಷ್ಟು ಹೆಚ್ಚು ಮಂದಿ ಈ ಬಾರಿ ಆಶಾವಾದಿಗಳಾಗಿದ್ದಾರೆ ಎಂಬುದನ್ನು ಇದು ಧ್ವನಿಸುತ್ತದೆ.ಹಣಕಾಸು ಸಚಿವರು ಈ ಬಾರಿ ಕೈಗೆಟುಕುವ ದರದಲ್ಲಿ ಮನೆ ಖರೀದಿ ವಿಷಯದಲ್ಲಿ ಸೂಕ್ತ ಹೆಜ್ಜೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಮಂಡಿಸುತ್ತಾರೆ ಎಂದು ನಿರೀಕ್ಷಿಸುತ್ತೀರಾ?

ಈ ಪ್ರಶ್ನೆಗೆ (ರೂ. 40 ಲಕ್ಷ ಮೌಲ್ಯದ ಮನೆ) ಶೇ 45ರಷ್ಟು ಮಂದಿ ಸಕಾರಾತ್ಮಕವಾಗಿ ಹೌದು ಎಂದಿದ್ದಾರೆ. ಇದು ಆಡಳಿತಾರೂಢ ಪಕ್ಷದ `ಆಮ್ ಆದ್ಮಿ~ ನೀತಿಯನ್ನೂ ಬೆಂಬಲಿಸುತ್ತದೆ. ಈ ಬಾರಿಯ ಬಜೆಟ್ ಸಾಮಾನ್ಯ ಜನರ ಮನೆ ಖರೀದಿ ಎನ್ನುವ ಕನಸನ್ನು ನನಸಾಗಿಸುತ್ತದೆ ಎಂದೇ ಎಲ್ಲೆಡೆ ಭಾವಿಸಲಾಗಿದೆ.

 

ಆದರೆ, ಈ ಕುರಿತು ಬಜೆಟ್ ಮೌನ ವಹಿಸಲಿದೆ ಎಂದು ಶೇ 37ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಶೇ 43ರಷ್ಟು ಮಂದಿ ಧನಾತ್ಮಕ ಅಭಿಪ್ರಾಯ ಹೊಂದಿದ್ದರು. ಇಲ್ಲೂ ಕೂಡ ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.ರೂ. 40 ಲಕ್ಷ ಮೌಲ್ಯದ ಮನೆ ಖರೀದಿಗೆ ಶೇ 2ರಷ್ಟು ಸಬ್ಸಿಡಿ ನೀಡುವುದು ಬಹುತೇಕ ಮಂದಿಯ ಕನಸಾಗಿದೆ. ಇದು ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಉತ್ತೇಜಿಸುತ್ತದೆ  ಎಂದು ಶೇ 30 ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.

 

ಗೃಹ ಸಾಲದ ಮೇಲಿನ ಬಡ್ಡಿ ದರ ಪ್ರಮಾಣದಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಈಗಿರುವ ರೂ.1.8 ಲಕ್ಷದಿಂದ ರೂ.3  ಲಕ್ಷಕ್ಕೆ ಏರಿಸಬೇಕು ಎನ್ನುವುದು ಶೇ 27ರಷ್ಟು ಮಂದಿ ಒತ್ತಾಯವಾಗಿದೆ.ದೇಶದ 1.22 ಶತಕೋಟಿ ಜನಸಂಖ್ಯೆಗೆ ವಸತಿ ಸೌಕರ್ಯ ಕಲ್ಪಿಸಿಕೊಡುವುದು ಸುಲಭದ ಕಾರ್ಯವಲ್ಲ. ಸ್ವಂತ ಮನೆ ಎನ್ನುವುದು ಮೂಲಭೂತ ಹಕ್ಕು ಎಂದು ಘೋಷಿಸಬೇಕು ಶೇ 27ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.ಇದೊಂದು ಉತ್ತಮ  ಶಿಫಾರಸಾಗಿದ್ದು ಇದರಿಂದ ರಿಯಲ್ ಎಸ್ಟೇಟ್ ಮಾರುಕಟ್ಟೆ ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ. ಈಗಿರುವ ಸೂಪರ್ ಏರಿಯಾ ಎಂಬ ಅಂಶಕ್ಕೆ ಬದಲಾಗಿ ಕಾರ್ಪೆಟ್ ಏರಿಯಾಕ್ಕೆ ಮಾತ್ರ ಬೆಲೆ ನಿಗದಿಪಡಿಸುವಂತೆ ಬಿಲ್ಡರ್‌ಗಳಿಗೆ ಶಿಫಾರಸು ಮಾಡಬೇಕು ಎಂದು ಶೇ 25ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.

 

ಇದೇ ವೇಳೆ ಖರೀದಿದಾರರ ಹಿತರಕ್ಷಣೆಗಾಗಿ ರಿಯಲ್ ಎಸ್ಟೇಟ್ ರಂಗದ ಮೇಲೆ ನಿಯಂತ್ರಣ ಹೇರಬೇಕು ಎಂದು  ಶೇ 21ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.ಗೃಹ ಸಾಲದ ಮೇಲಿನ ಹೆಚ್ಚಿದ ಬಡ್ಡಿ ದರ ಮತ್ತು ಆಸ್ತಿ ದರ ಹೆಚ್ಚಳದಿಂದಾಗಿ ಬಹುತೇಕರು ತಮ್ಮ ಮನೆ ಖರೀದಿ ಎಂಬ ಕನಸನ್ನು ಮೂಲೆಗೆ ತಳ್ಳುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಈ ಸಮಸ್ಯೆ ನಿವಾರಣೆಗೆಯಾ ಕ್ರಮ ತೆಗೆದುಕೊಳ್ಳಬೇಕು ಎಂಬ ಪ್ರಶ್ನೆಗೆ,  ಗೃಹ ಸಾಲಕ್ಕೆ ಶೇ 2 ಸಬ್ಸಿಡಿ ಬೇಕು ಎನ್ನುವ ಅಭಿಪ್ರಾಯವನ್ನು ಶೇ 27ರಷ್ಟು ಮಂದಿ ವ್ಯಕ್ತಪಡಿಸಿದ್ದಾರೆ.ಒಂದು ವೇಳೆ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿದಲ್ಲಿ ಮನೆ ಖರೀದಿಸಲು ಸಿದ್ಧ ಎಂದು ಶೇ 18ರಷ್ಟು ಮಂದಿ ಹೇಳಿದ್ದರೆ, ಗೃಹ ನಿರ್ಮಾಣ ಸಂಸ್ಥೆಗಳು ಕಾರ್ಪೆಟ್ ಏರಿಯಾಕ್ಕೆ ದರ ನಿಗದಿಪಡಿಸುವುದಾದಲ್ಲಿ ಮಾತ್ರ ಮನೆ ಖರೀದಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಶೇ 17ರಷ್ಟು ಮಂದಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.