ಶನಿವಾರ, ಜೂನ್ 19, 2021
21 °C

ಬಜೆಟ್: ಜನರಿಂದ ಮಿಶ್ರ ಪ್ರತಿಕ್ರಿಯೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ ಕರ್ನಾಟಕ ಸೇರಿ ಉತ್ತರ ಕರ್ನಾಟಕದ ಪ್ರದೇಶಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಿಲ್ಲ. ಉದ್ಯೋಗ ಸೃಷ್ಟಿಯಾಗುವಂತಹ ಯೋಜನೆಗಳೂ ಕಾಣಿಸುತ್ತಿಲ್ಲ. ಇದರಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಬಹುದು. ಆದರೆ, ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ರೈತರಿಗೆ ಹೆಚ್ಚಿನ ಅನುದಾನ ನೀಡಿರುವುದು ಶ್ಲಾಘನೀಯ. ಕೃಷಿ ವಲಯದಲ್ಲಿ ಅಭಿವೃದ್ಧಿಯಾದರೆ, ಅದು ಆರ್ಥಿಕ ಪ್ರಗತಿಗೆ ನಾಂದಿಯಾಗಲಿದೆ. ಒಟ್ಟಾರೆ 2012-13ರ ರಾಜ್ಯ ಬಜೆಟ್ ಜನಪರವಾಗಿದೆ.

-ಡಾ. ಎಸ್.ಸಿ. ಹೆಗಾಡಿ, ಆರ್ಥಿಕ ತಜ್ಞ

ಬಜೆಟ್ ಹಿಂದುಳಿದ ವರ್ಗಗಳ ಪರವಾಗಿದೆ. ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಅದರ ಅಭಿವೃದ್ಧಿಗೆ 10 ಕೋಟಿ ರೂಪಾಯಿ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಬೆಂಗಳೂರಿನಲ್ಲಿ ಕನಕ ಭವನ ನಿರ್ಮಾಣಕ್ಕೆ ಎರಡು ಕೋಟಿ ಹಾಗೂ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿನ ಕನಕ ಅಧ್ಯಯನ ಪೀಠಕ್ಕೆ ಒಂದು ಕೋಟಿ ರೂಪಾಯಿ ಅನುದಾನ ನೀಡುವ ಮೂಲಕ ಜನಪರ ಬಜೆಟ್ ಎಂಬುದನ್ನು ಸಾಬೀತುಪಡಿಸಿದ್ದಾರೆ

-ಭೋಜರಾಜ ಕರೂದಿ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ

ತೆರಿಗೆ ಹೊರೆಯಿಂದ ಸಾಮಾನ್ಯ ಜನರನ್ನು ಹೊರಗಿಡುವ ಪ್ರಯತ್ನ ಒಳ್ಳೆಯದು. ಡೀಸೆಲ್ ರೀತಿಯಲ್ಲೇ ಪೆಟ್ರೋಲ್ ಮೇಲಿನ ತೆರಿಗೆ ಕಡಿಮೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಉದ್ಯೋಗ ಸೃಷ್ಟಿಗೆ ಇನ್ನಷ್ಟು ಒತ್ತು ಕೊಟ್ಟಿದ್ದರೆ ನಿರುದ್ಯೋಗ ಸಮಸ್ಯೆ ನೀಗಿಸಬಹುದಾಗಿತ್ತು.

-ಪ್ರಭಯ್ಯ, ನಾಗರಬಾವಿ ನಿವಾಸಿ

ಸಿಗರೇಟ್, ಬೀಡಿ, ಬೀಯರ್ ಮೇಲೆ ತರಿಗೆ ಹೆಚ್ಚಳ ಮಾಡಿದ್ದು ಒಳ್ಳೆಯ ಬೆಳವಣಿಗೆ. ಆದರೆ, ಇದು ಹಳೆಯ ಬಾಟಲಿಯಲ್ಲಿ ಹೊಸ ಮದ್ಯ ಅನ್ನುವ ರೀತಿಯ ಬಜೆಟ್ ಆಗಿದೆ. ಕಳೆದ ವರ್ಷದ ಬಜೆಟ್‌ನ ಅಂಕಿ, ಅಂಶಗಳಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿದಂತೆ ಕಾಣುತ್ತಿದೆ. ಅಷ್ಟು ಬಿಟ್ಟರೆ ಮತ್ತೆ ಇನ್ಯಾವ ಹೊಸತನವೂ ಇಲ್ಲ.

-ಪ್ರಭು, ಕಾನೂನು ವಿದ್ಯಾರ್ಥಿ

 ಈ ಬಜೆಟ್ ಕಳೆದ ಬಜೆಟ್‌ನ ಮುಂದುವರಿದ ಭಾಗವಷ್ಟೇ ಆಗಿದೆ. ಆದರೆ, ಅದಕ್ಕೊಂದು ಸ್ಪಷ್ಟ ರೂಪ ಕೊಡುವ ಪ್ರಯತ್ನ ನಡೆದಿದೆ. ಎಲ್ಲಾ ಕ್ಷೇತ್ರಗಳಿಗೂ ಅನುದಾನ ಹಂಚಿಕೆ ನೀಡುವ ಪ್ರಯತ್ನ ಇದಾಗಿದ್ದು, ಕಳೆದ ಬಾರಿಗೆ ಹೋಲಿಸಿಕೊಂಡರೆ ಪರವಾಗಿಲ್ಲ ಎನಿಸುತ್ತದೆ.

-ಚಕ್ರವರ್ತಿ, ತ್ಯಾಗರಾಜನಗರ ನಿವಾಸಿ

`ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ಸಾಮಾನ್ಯ ಜನತೆಗೆ ಹೊರೆಯಾಗುವ ಯಾವ ಅಂಶಗಳೂ ಇಲ್ಲ. ಬಜೆಟ್‌ನಲ್ಲಿ ಹೊಸದಾದ ಯೋಜನೆಗಳಿಲ್ಲದಿದ್ದರೂ ಕೃಷಿ ಕ್ಷೇತ್ರ ಮತ್ತು ಮಧ್ಯಮ ವರ್ಗದ ಜನತೆಯ ಪರವಾದ ಬಜೆಟ್ ಇದಾಗಿದೆ~

-ವಿನಯ್, ಖಾಸಗಿ ಕಂಪೆನಿ ಉದ್ಯೋಗಿ

`ಈ ಬಾರಿಯ ಬಜೆಟ್‌ನಲ್ಲಿ ರಾಜಕೀಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೂ ಜಾತಿಗಳು ಹಾಗೂ ಮಠಗಳಿಗೆ ವಿಶೇಷ ಆದ್ಯತೆ ನೀಡುವ ಅಗತ್ಯವಿರಲಿಲ್ಲ~

-ಜಿ. ಮಂಜುನಾಥ್, ಕುಮಾರಪಾರ್ಕ್ ನಿವಾಸಿ

`ಕೇಂದ್ರ ಬಜೆಟ್ ಮಧ್ಯಮ ವರ್ಗವನ್ನು ಕಡೆಗಣಿಸಿತ್ತು. ಆದರೆ ರಾಜ್ಯದ ಬಜೆಟ್ ಮಧ್ಯಮ ವರ್ಗವೂ ಸೇರಿದಂತೆ ಎಲ್ಲ ವರ್ಗದ ಜನತೆಯನ್ನೂ ಗಣನೆಗೆ ತೆಗೆದುಕೊಂಡಿದೆ. ಹೊಸ ಮುಖ್ಯಮಂತ್ರಿಗಳು ಮಂಡಿಸಿದ ಮೊದಲ ಬಜೆಟ್ ಉತ್ತಮವಾಗಿದೆ.~

-ಸಂಜೀವ್, ಸ್ವಯಂ ಉದ್ಯೋಗಿ

ಈ ಬಜೆಟ್‌ನಿಂದ ಯಾವುದೇ ಅನುಕೂಲಗಳಾಗಿಲ್ಲ. ದೊಡ್ಡ ದೊಡ್ಡ ಯೋಜನೆಗಳಿಗೆ ಆದ್ಯತೆ ನೀಡುತ್ತಾ ಸಾಮಾನ್ಯ ವರ್ಗವನ್ನು ಕಡೆಗಳಿಸಿದ್ದಾರೆ. ಆಟೊ, ಕ್ಯಾಬ್ ಸೇರಿದಂತೆ ಚಾಲಕರನ್ನೆಲ್ಲಾ ಕಾರ್ಮಿಕರೆಂದು ಪರಿಗಣಿಸಿ ನಮಗೂ ಏನಾದರೂ ಯೋಜನೆಗಳನ್ನು ಮಾಡಿಕೊಡಬೇಕಿತ್ತು.

-ರಂಗಪ್ಪ, ಆಟೊ ಚಾಲಕ, ಯಲಹಂಕ

`ಅಬಕಾರಿ ವಸ್ತುಗಳ ಮೇಲೆ ಅಷ್ಟೆ ಹೆಚ್ಚಿನ ಸುಂಕ ವಿಧಿಸಿರುವುದರಿಂದ ಕುಡುಕರಿಗಷ್ಟೇ ಈ ಬಜೆಟ್‌ನಿಂದ ನೋವಾಗಿದೆ. ಮಿಕ್ಕಂತೆ ರಾಜ್ಯ ಬಜೆಟ್ ಉತ್ತಮವಾಗಿದೆ. ರಾಜಕೀಯ ಅನಿಶ್ಚಿತತೆಯ ನಡುವೆಯೂ ಸದಾನಂದ ಗೌಡರು ಜನಪರವಾದ ಬಜೆಟ್ ಮಂಡಿಸಿದ್ದಾರೆ~

-ಕೊಂಡಾರೆಡ್ಡಿ, ನಂದಿನಿ ಲೇಔಟ್ ನಿವಾಸಿ

ಚಿನ್ನಾಭರಣ ವಸ್ತುಗಳ ಮೇಲಿನ ಸುಂಕವನ್ನು ಕಡಿಮೆ ಮಾಡಿರುವ ಸರ್ಕಾರ, ಸಾಮಾನ್ಯ ಜನರಿಗೆ ಅಗತ್ಯವಾದ ಆಹಾರ ಉತ್ಪನ್ನಗಳ ಮೇಲಿನ ಸುಂಕವನ್ನೂ ಇನ್ನೂ ಕಡಿತಗೊಳಿಸಿದ್ದರೆ ಇದೊಂದು ಪರಿಪೂರ್ಣ ಬಜೆಟ್ ಎನಿಸಿಕೊಳ್ಳುತ್ತಿತ್ತು.

-ವಾಸು, ಹಲಸೂರು ನಿವಾಸಿ

ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರೆತಿದೆ. ರಸ್ತೆ ಕಾಮಗಾರಿ, ಮೆಟ್ರೊ ಸಂಚಾರ ವಿಸ್ತರಣೆ, ವಾಹನ ನಿಲುಗಡೆ ಸಮುಚ್ಚಯಗಳಿಗೆ ಅನುದಾನ ದೊರೆತಿದೆ. ಬಹು ಮುಖ್ಯವಾಗಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಆರಂಭಿಸಲು ಹಾಗೂ ಉದ್ಯಾನಗಳ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿರುವುದರಿಂದ ಮುಂದಿನ ದಿನಗಳಲ್ಲಿ ನಗರದ ಸೌಂದರ್ಯ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

-ಪ್ರಕಾಶ್ ಶೆಟ್ಟಿಗಾರ್, ಚಾಮರಾಜಪೇಟೆ ನಿವಾಸಿ

ಮುಖ್ಯವಾಗಿ ಕೃಷಿ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಪ್ರಗತಿಗೆ ಕಾರಣವಾಗಲಿದೆ. ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಹೆಚ್ಚಳ ಮಾಡಲಾಗಿದೆ. ಆದರೆ, ಇದು ಪ್ರಾಮಾಣಿಕವಾಗಿ ಹಂಚಿಕೆಯಾಗಬೇಕು. ಒಟ್ಟಾರೆ ಈ ವರ್ಷದ ಬಜೆಟ್ ಸಮತೋಲನದಿಂದ ಕೂಡಿದೆ.

-ಮೇಘನಾ, ಬಸವೇಶ್ವರನಗರ

`ಯುವಕರ ಸಲುವಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಭರವಸೆ ನೀಡಿದ್ದ ಸದಾನಂದ ಗೌಡರು ಆ ನಿಟ್ಟಿನಲ್ಲಿ ವಿಫಲರಾಗಿದ್ದಾರೆ. ಯುವಕರ ಸಲುವಾಗಿ ಹೊಸ ಯೋಜನೆಗಳನ್ನೂ ಪ್ರಕಟಿಸಿಲ್ಲ. ಹೀಗಾಗಿ ಇದೊಂದು ಕೇವಲ ಜನವಿರೋಧಿ ಮಾತ್ರವಲ್ಲ ಯುವಕರ ವಿರೋಧಿ ಕೂಡ~

-ಎ.ಪಿ.ಬಸವರಾಜು, ಸಹಕಾರ ನಗರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.