ಶುಕ್ರವಾರ, ಜನವರಿ 24, 2020
21 °C

ಬತ್ತ ಖರೀದಿ ವಿಳಂಬ: ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಬತ್ತ ಖರೀದಿಯಲ್ಲಿ ವಿಳಂಬ, ಸಮಸ್ಯೆ ಗಮನಕ್ಕೆ ತಂದರೂ ಅಧಿಕಾರಿಗಳು ಗಮನಿ ಸುತ್ತಿಲ್ಲ ಎಂದು ಆಕ್ರೋಶಗೊಂಡ ರೈತರು ಹೆದ್ದಾರಿಯಲ್ಲಿಯೇ ಬತ್ತ ತುಂಬಿದ ಚೀಲಗಳಿದ್ದ ಟ್ರಾಕ್ಟರ್, ಎತ್ತಿನಗಾಡಿಗಳನ್ನು ನಿಲ್ಲಿಸಿ ಶುಕ್ರವಾರ ಮಧ್ಯಾಹ್ನ ನಗರದಲ್ಲಿ ಪ್ರತಿಭಟನೆ ನಡೆಸಿದರು.ಕಲ್ಲಹಳ್ಳಿಯ ಎಪಿಎಂಸಿ ಬಳಿ ಎತ್ತಿನಗಾಡಿ, ಲಾರಿ, ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿದ ಪರಿಣಾಮ ಸುಮಾರು ಮುಕ್ಕಾಲು ಗಂಟೆ ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯವಸ್ಥೆ ಅಸ್ತ್ಯವ್ಯಸ್ತ ಗೊಂಡಿದ್ದು, ಸ್ಥಳಕ್ಕೆ ಧಾವಿಸಿ ಪೊಲೀಸರು ಎತ್ತಿನಗಾಡಿಗಳನ್ನು ಎಪಿಎಂಸಿ ಪ್ರಾಂಗಣದಲ್ಲಿ ನಿಲ್ಲಿಸುವ ವ್ಯವಸ್ಥೆ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.ಖರೀದಿಸಿದ ಬತ್ತ ದಾಸ್ತಾನು ಮಾಡಲು ಗೋದಾಮುಗಳ ಕೊರತೆ, ನಿಗದಿತ ಪ್ರಮಾಣಕ್ಕಿಂತಲು ಹೆಚ್ಚಿನದಾಗಿ ಬತ್ತದ ಚೀಲಗಳಿದ್ದ ಎತ್ತಿನಗಾಡಿ ಬಂದುದು, ಕಳೆದ ಮೂರು ದಿನಗಳಿಂದ ಬತ್ತ ಖರೀದಿಸದೇ ಇದ್ದುದು ಈ ಗೊಂದಲಕ್ಕೆ ಕಾರಣವಾಯಿತು.ರಸ್ತೆಗೆ ಅಡ್ಡಲಾಗಿ ಎತ್ತಿನಗಾಡಿ, ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿದ ರೈತರು ಎಪಿಎಂಸಿ ಗೋದಾಮುನಲ್ಲಿ ಗುಂಪುಗೂಡಿ ಪ್ರತಿಭಟನೆಗೆ ಇಳಿದರು. ಸಮಸ್ಯೆ ಗಂಭೀರವಾಗಿದ್ದರೂ ಯಾವುದೇ ಅಧಿಕಾರಿ ಸ್ಥಳಕ್ಕೆ ಆಗಮಿಸುತ್ತಿಲ್ಲ; ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ, ಮೊದಲಿಗೆ ರಸ್ತೆಯಲ್ಲಿಯೇ ನಿಲ್ಲಿಸಿದ್ದ ಗಾಡಿ, ಟ್ರಾಕ್ಟರ್‌ಗಳನ್ನು ಎಪಿಎಂಸಿ ಆವರಣಕ್ಕೆ ಒಯ್ಯುವಂತೆ ಮನವೊಲಿಸಿದ್ದು, ರಸ್ತೆ ತೆರವುಗೊಳಿಸಿದರು.ಅಂತಿಮವಾಗಿ ಸ್ಥಳಕ್ಕೆ ಧಾವಿಸಿದ ಕೃಷಿ ಅಧಿಕಾರಿ ಹನುಮಂತಪ್ಪ ಅವರು, ರೈತರಿಂದ ದಾಖಲೆಗಳನ್ನು ಪರಿಶೀಲಿಸಿ ತಂದಿದ ಬತ್ತ ತುಂಬಿದ ಚೀಲಗಳನ್ನು ದಾಸ್ತಾನು ಮಾಡಿಸಲು ಕ್ರಮ ಕೈಗೊಂಡರು. ಅಧಿಕಾರಿ ಕುಳಿತಿದ್ದ ವೇ ಬ್ರಿಡ್ಜ್ ಬಳಿಯು ಸಾಕಷ್ಟು ಸಂಖ್ಯೆಯಲ್ಲಿ ರೈತರು ಗುಂಪುಗೂಡಿದ್ದರಿಂದಾಗಿ ಗೊಂದಲವಾಯಿತು. ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ಮುಂಜಾಗ್ರತಾ ಕ್ರಮವಾಗಿ ನಿಯೋಜಿಸಲಾಗಿತ್ತು.`1ವಾರ ಖರೀದಿ ಇರುವುದಿಲ್ಲ~

ಸ್ಥಳದಲ್ಲಿ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಹನುಮಂತಪ್ಪ ಅವರು, ಗೋದಾಮು ಕೊರತೆ ಹಿನ್ನೆಲೆಯಲ್ಲಿ ಪರ್ಯಾಯ ಕ್ರಮ ಗುರುತಿಸುವವರೆಗೂ ಒಂದು ವಾರ ಬತ್ತದ ಖರೀದಿ ಇರುವುದಿಲ್ಲ ಎಂದು ಪ್ರತಿಕ್ರಿಯಿಸಿದರು.ಕಳೆದ ಮೂರುದಿನದಿಂದ ಖರೀದಿಸದೇ ಇದ್ದುದು; ಗುರುವಾರ ರಜೆ ಇದ್ದುದು ಸಮಸ್ಯೆ ಹೆಚ್ಚಲು ಕಾರಣವಾಗಿದೆ. ಲಾರಿ, ಟ್ರಾಕ್ಟರ್, ಎತ್ತಿನಗಾಡಿ ಸೇರಿದಂತೆ ಇಂದು ಸುಮಾರು 70 ಲೋಡು ಉಳಿದಿದೆ. ಅದನ್ನು ತೆರವುಗೊಳಿಸಬೇಕಾಗಿದೆ ಎಂದು ಪ್ರತಿಕ್ರಿಯಿಸಿದರು.ಸದ್ಯಕ್ಕೆ ಖಾಸಗಿ ಕಲ್ಯಾಣಮಂಟವವನ್ನು ಗೊತ್ತುಪಡಿಸಿ ಗೋದಾಮಾಗಿ ಬಳಕೆ ಮಾಡಲಾಗುತ್ತಿದೆ. ಅಧಿಕಾರಿಗಳು ಪರ್ಯಾಯ ಮಾರ್ಗದ ಬಗೆಗೆ ಚಿಂತನೆ ನಡೆಸಲಿದ್ದು, ಅಲ್ಲಿಯವರೆಗೂ ಬಹುಶಃ ಒಂದು ವಾರ ಖರೀದಿ ಇರುವುದಿಲ್ಲ. ಈ ಬಗೆಗೆ ಫಲಕವನ್ನು ಹಾಕಲಿದ್ದೇವೆ ಎಂದರು.ಸಂಜೆಯವರೆಗೂ ಸಾಲುಗಟ್ಟಿದ್ದ ಲೋಡುಗಳನ್ನು ತೆರವುಗೊಳಿಸುವ ಕಾರ್ಯ ಮುಗಿದಿರಲಿಲ್ಲ. ಎತ್ತಿನಗಾಡಿಯಲ್ಲಿ ಅಂದಾಜು 15 ರಿಂದ 20 ಕ್ವಿಂಟಾಲ್, ಲಾರಿಯಲ್ಲಿ 150 ರಿಂದ 200 ಕ್ವಿಂಟಾಲ್ ಬತ್ತ ಲೋಡು ಇದ್ದಿರಬಹುದು ಎಂಬುದು ಅಂದಾಜು.ಮುತ್ತಗೆರೆಯ ಚಿಕ್ಕಯ್ಯ, ಚಿಕ್ಕಗಂಗವಾಡಿಯ ಅಜಯ್, ಉಮ್ಮಡಹಳ್ಳಿಯ ಮಹೇಶ್ ಸೇರಿದಂತೆ ಬತ್ತ ಮಾರಲು ಬಂದಿದ್ದ ಅನೇಕ ರೈತರು ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.ಬೆಂಬಲ ಬೆಲೆ ಘೋಷಣೆಗೆ ಮುನ್ನವೇ ದಲ್ಲಾಳಿಗಳು ರೈತರಿಂದ ಬತ್ತ ಖರೀದಿಸಿದ್ದಾರೆ. ಅವರೂ ಈ ಸಂದರ್ಭದಲ್ಲಿ ಬತ್ತ ಮಾರಲು ಬಂದಿರುವುದೇ ಸಮಸ್ಯೆಗೆ ಕಾರಣ. ಮದ್ಯವರ್ತಿಗಳಿಂದ ಇಲ್ಲಿಯೂ ರೈತರಿಗೆ ವಂಚನೆ ಆಗುತ್ತಿದೆ ಎಂಬ ಆರೋಪಗಳು ಕೇಳಿಬಂದವು.

ಪ್ರತಿಕ್ರಿಯಿಸಿ (+)