ಬರದ ನಾಡಿನಲ್ಲಿ ನದಿ ಹೆಜ್ಜೆ ಗುರುತುಗಳೇ? ಹೀಗೊಂದು ಪ್ರಶ್ನೆ ಕೆದಕುತ್ತಾ ಹೋದಂತೆ ಕೊರಟಗೆರೆ ಕಣ್ಮುಂದೆ ತೇಲುತ್ತದೆ. ಜಿಲ್ಲೆಯ ಅತಿ ಚಿಕ್ಕ ತಾಲ್ಲೂಕು ಕೊರಟಗೆರೆ. ಕೇವಲ 244 ಚದರ ಮೈಲಿ ವಿಸ್ತೀರ್ಣದ ಈ ಪುಟಾಣಿ ಮಣ್ಣಿನಲ್ಲಿ ಬರೋಬರಿ ನಾಲ್ಕು ನದಿಗಳ ಸಂಗಮವಿದೆ.

ಈಗ ಏನೇನು ಇಲ್ಲದೇ ಒಣಗಿ ಬಿಳಿಚಿಕೊಡಂತೆ ಕಾಣುವ ಕೊರಟಗೆರೆ ಎಂಬ ಪುಟಾಣಿ ಊರು ಏಷ್ಯಾಖಂಡದ ನಕ್ಷೆಯಲ್ಲಿ `ಮಿನುಗುತಾರೆ~ಯ ದಾಖಲೆ ಹೊತ್ತಿದೆ ಎಂದರೆ ಅಚ್ಚರಿ ಅಲ್ಲವೇ?

ಕೊರಟಗೆರೆ ಸಮುದ್ರಮಟ್ಟಕ್ಕಿಂತ 2450 ಅಡಿ ಎತ್ತರದಲ್ಲಿದೆ. ಕೊರಟಗೆರೆ ಎಂದರೆ ತಕ್ಷಣಕ್ಕೆ ನೆನಪಿಗೆ ಬರುವುದು ಸಿದ್ಧರಬೆಟ್ಟ! ಆದರೆ ಸಿದ್ಧರಬೆಟ್ಟ ಮಾತ್ರ ಇಲ್ಲಿನ ಹೆಗ್ಗಳಿಕೆ ಅಲ್ಲ. ರಣಭೈರೇಗೌಡನ ಆಳ್ವಿಕೆಯ ಕಾರಣ ಒಕ್ಕಲಿಗ ಪಾಳೇಗಾರನ ಆಡಳಿತಕ್ಕೆ ಒಳಪಟ್ಟ ನಾಡೆಂಬ ದಾಖಲೆ ಹೊತ್ತಿದೆ.

ಜಿಲ್ಲೆಯ ಇತಿಹಾಸ ಭವ್ಯತೆ ಕಾಣುವುದು ಇಲ್ಲಿ ಆಳಿದ ಪಾಳೇಗಾರರಿಂದ. ಒಕ್ಕಲಿಗರು, ಲಿಂಗಾಯತರು ಮಾತ್ರವಷ್ಟೇ ಇದರ ಆಳ್ವಿಕೆ ನಡೆಸಿಲ್ಲ. ದಲಿತ ಸಮುದಾಯದ ಕುರಂಗರಾಜ ಆಳ್ವಿಕೆ ನಡೆಸಿದ ತಾಣ ಎಂಬ ಹೆಮ್ಮೆಯೂ ಜಿಲ್ಲೆಗೆ ಸೇರಿದೆ. ದಲಿತನೊಬ್ಬ ಪಾಳೆಪಟ್ಟು ನಡೆಸಲು ಅವಕಾಶ ಮಾಡಿಕೊಟ್ಟ ಕೀರ್ತಿ ಕೊರಟಗೆರೆಯ ಕುರಂಕೋಟೆಯದಾಗಿದೆ.

`ನಮ್ಮೂರು ಎಂದರೆ ರಸ್ತೆಯ ಉದ್ದಕ್ಕೂ ಕಾಣುವ ಸಾಲು, ಸಾಲು ಹುಣಸೆ ಮರಗಳ ಬೀಡು. ಸುವರ್ಣಮುಖಿ ನದಿ ಎಂದಷ್ಟೇ ಹೇಳಿ ಮಾತು ನಿಲ್ಲಿಸುವ ಮಂದಿಗೆ ಕೊರಟಗೆರೆಯ ಬಜೆ ಪ್ರಪಂಚದಲ್ಲೇ ಹೆಸರಾಗಿತ್ತು ಎಂಬುದು ಮರೆತೇ ಹೋಗಿದೆ. ಕೊರಟಗೆರೆ ಬೆಟ್ಟ, ಸಿದ್ಧರಬೆಟ್ಟ ಹಾಗೂ ಚನ್ನರಾಯನದುರ್ಗ ಇಲ್ಲಿನ ಪ್ರಮುಖ ಬೆಟ್ಟಗಳು.

ಕೊರಟಗೆರೆ ಬೆಟ್ಟದ ಬುಡದಲ್ಲಿ ವೆಂಕಟರಮಣ ದೇವಾಲಯವಿದ್ದರೆ, ಮಧ್ಯದಲ್ಲಿ ಗಂಗಾಧರೇಶ್ವರ ದೇವಾಲಯವಿದೆ. ಶಿಖರದಲ್ಲಿ ಬಸವಣ್ಣನ ಗುಡಿ ಇದೆ. ಧಾರ್ಮಿಕವಾಗಿ ಗೊರವನಹಳ್ಳಿ ಮಹಾಲಕ್ಷ್ಮೀ ನಾಡಿನ ಪ್ರಸಿದ್ಧ ದೇವತೆಯಾಗಿದೆ.

ವಡ್ಡಗೆರೆ ವೀರನಾಗಮ್ಮ ದೇವರ ಕುರಿತು ಸಂಶೋಧನಾ ಗ್ರಂಥಗಳನ್ನೇ ಮಂಡಿಸಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದವರು ಇದ್ದಾರೆ. ಇದಕ್ಕೆ ಪೂರಕವಾಗಿ ಗರುಗದೊಡ್ಡಿ ಸಮೀಪದ ಮಧ್ಯಮಮ್ಮನಬೆಟ್ಟದಲ್ಲಿ ಮಧ್ಯಮದೇವಿ ದೇವಸ್ಥಾನ ಇದೆ. ಕಲ್ಯಾಣಿ ಕೂಡ ಇದೆ. ಭಕ್ತಾದಿಗಳ ಅನ್ನಸಂತರ್ಪಣೆಗೆ ಇದು ಹೆಸರಾಗಿದೆ. ವೀರಕ್ಯಾತರಾಯನ ದನದ ದೊಡ್ಡಿ ಇಲ್ಲಿತ್ತು ಎಂಬುದು ಇಲ್ಲಿನ ಮತ್ತೊಂದು ವಿಶೇಷ ಎನ್ನುತ್ತಾರೆ ಗರುಗದೊಡ್ಡಿಯ ನಟರಾಜ್.

ಗರುಗದೊಡ್ಡಿ, ಕಲ್ಕೆರೆ, ಭಕ್ತರಹಳ್ಳಿ, ಹಾಳೇನಹಳ್ಳಿ, ವಡ್ಡಗೆರೆ, ಗೊರವನಹಳ್ಳಿ, ಮಾರಪ್ಪನಹಳ್ಳಿ ಗ್ರಾಮಗಳ ವೀರನಾಗಮ್ಮನ ಭಕ್ತರು ಇಂದಿಗೂ ಮೇಕೆ ಮಾಂಸ ತಿನ್ನುವುದಿಲ್ಲ. ಮತ್ತೊಂದು ವಿಶೇಷ ಎಂದರೆ ತುಂಬಾಡಿ ಗ್ರಾಮಕ್ಕೆ ಬಂದರೆ ಈ ಗ್ರಾಮಗಳ ಜನ ಏನನ್ನೂ ತಿನ್ನುವುದಿಲ್ಲ. ಉಗುಳು ನುಂಗಲು ಹಿಂದೆಮುಂದೆ ನೋಡುವ ಹಿಂದೆ ದೊಡ್ಡ ಜಾನಪದ ಕಥೆಯೇ ಇದೆ.

ಮಾವತ್ತೂರು ಅರಸಮ್ಮ, ಕೊರಟಗೆರೆ ಮಾರಮ್ಮ, ಬೊಮ್ಮಲಾದೇವಿ ಪುರದ ಮರಿ ದುರ್ಗಮ್ಮ. ಬುಕ್ಕಾಪಟ್ಟಣದ ಕಾವಲಮ್ಮ, ಸಿದ್ಧೆರಬೆಟ್ಟದ ಸಿದ್ದೇಶ್ವರ, ದೊಡ್ಡಸಾರಂಗಿಯ ಆಹೋಬಲ ನರಸಿಂಹ ದೇವರು ಇಲ್ಲಿನ ಪ್ರಸಿದ್ಧ ದೇವತೆಗಳಾಗಿವೆ.

ಕೊರಟಗೆರೆ ಮತ್ತೂ ಚೆಂದಾಗಿ ಕಾಣುವುದು ಇಲ್ಲಿ ಹುಟ್ಟುವ, ಹರಿಯುವ ನದಿಗಳಿಂದ. ಸಿದ್ಧರಬೆಟ್ಟದ ತಪ್ಪಲಿನಲ್ಲಿ ಹುಟ್ಟುವಂತಹ ಸುವರ್ಣಮುಖಿ ನದಿ ಅಕ್ಕಿರಾಂಪುರದ ಪಕ್ಕ ಜಯಮಂಗಲಿ ನದಿ ಸೇರುತ್ತದೆ. ಹೀಗೆ ಹರಿಯುತ್ತಾ ಸಾಗುವ ನದಿ ಕೊನೆಯಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೋರನಕಣಿವೆ ಜಲಾಶಯ ಒಡಲು ಸೇರುತ್ತದೆ. ಗರುಡಾಚಲ ನದಿ ಕೂಡ ಇಲ್ಲಿದೆ. ಇದು ಹೊಳವನಳ್ಳಿ ಬಳಿ ಜಯಮಂಗಲಿ ಸೇರುತ್ತದೆ.

ದೇವರಾಯನದುರ್ಗದಲ್ಲಿ ಹುಟ್ಟುವ ಜಯ ಮತ್ತು ಮಂಗಲಿ ಎಂಬ ಎರಡು ನದಿಗಳು ಕೊರಟಗೆರೆಯ ಇರಕಸಂದ್ರದ ಬಳಿ ಸೇರುವ ಮೂಲಕ ಜಯಮಂಗಲಿಯಾಗಿ ಹೊಸ ರೂಪು ಪಡೆದು ಮುಂದೆ ಹೊಳವನಹಳ್ಳಿ ಹತ್ತಿರ ಗರುಡಾಚಲ ನದಿ ಸೇರಿಕೊಂಡು ಅಕ್ಕಿರಾಂಪುರದ ಬಳಿ ಸುವರ್ಣಮುಖಿ ನದಿಯೊಂದಿಗೆ ಸಂಗಮವಾಗುತ್ತವೆ. ಈ ಸಂಗಮದ ನದಿ ನೀರು ಹರಿದು ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಬಳಿಯ ಹಳ್ಳಿಯೊಂದರ ಬಳಿ ಉತ್ತರ ಪಿನಾಕಿನಿ ನದಿ ಸೇರುವುದು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ತೀತಾ ಜಲಾಶಯವೂ ಕೊರಟಗೆರೆಯಲ್ಲಿದೆ.

ಮುಮ್ಮುಖವಾಗಿರುವ ಕ್ಯಾಮೇನಹಳ್ಳಿಯ ಆಂಜನೇಯ ಪ್ರಖ್ಯಾತಿ ಪಡೆದಿದೆ. ಇಲ್ಲಿನ ದನದ ಜಾತ್ರೆ, ಅಕ್ಕಿರಾಂಪುರದ ಕುರಿ, ಕೋಳಿ, ಮೇಕೆ ಸಂತೆ ಕೂಡ ದಾಖಲೆ ನಿರ್ಮಿಸಿವೆ.

ತೋವಿನಕೆರೆಯಲ್ಲಿರುವ ಚಂದ್ರನಾಥ ಬಸದಿ, ಅಕ್ಕಿರಾಂಪುರದ ಅನಂತಪದ್ಮನಾಭ ಬಸದಿ ಇದು ಜೈನರ ನಾಡಾಗಿತ್ತು ಎಂಬುದಕ್ಕೆ ಸಾಕ್ಷಿ ಒದಗಿಸುತ್ತವೆ. ವಿಶೇಷ ಔಷಧ ಸಸ್ಯಗಳಿಗೆ ಹೆಸರಾಗಿರುವ ಸಿದ್ಧರಬೆಟ್ಟ ಅವಧೂತರ ನೆಲೆಯಾಗಿತ್ತು. ಸಿದ್ಧರು, ತತ್ವಪದಕಾರರು ಇಲ್ಲಿದ್ದರು. ಸಿದ್ಧರಬೆಟ್ಟ ಈ ಹಿಂದೆ ಜೈನ, ಬೌದ್ಧರ ಕೇಂದ್ರವಾಗಿತ್ತು. ಪ್ರವಾಸಿಗ ಬುಖಾನನ್ ತನ್ನ ಬರಹದಲ್ಲಿ ಇಲ್ಲಿನ ಕೆರೆಗಳ ಸೊಬಗು ಕುರಿತು ವರ್ಣಿಸಿದ್ದಾನೆ.

ಇಲ್ಲಿನ ವೆಂಕಾವಧೂತರು ಬಹಳ ಪ್ರಸಿದ್ಧಿ ಪಡೆದಿದ್ದರು. ಇರಕಸಂದ್ರ ಕಾಲೋನಿ, ಕಲ್ಲೇನಹಳ್ಳಿ, ಗೊಲ್ಲರಹಟ್ಟಿ, ತಣ್ಣೇನಹಳ್ಳಿ, ಥರಟಿ, ಪಾಲನಹಳ್ಳಿ, ಸೀಗೇಹಳ್ಳಿ,ಹೊನ್ನೇನಹಳ್ಳಿ, ಸಿದ್ಧರಬೆಟ್ಟದಲ್ಲಿ ಶಿಲಾಯುಗದಲ್ಲೇ ಜನರಿದ್ದರು.
ಇಲ್ಲಿರುವ ವೆಂಕಟರಮಣ ದೇವಾಲಯ 15ನೇ ಶತಮಾನದ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ.

17ನೇ ಶತಮಾನದ ಸ್ವರ ವಚನಕಾರರಾ ಅವಧೂತ ಮುರಹರಿ.18ನೇ ಶತಮಾನದ ಯಕ್ಷಗಾನಕವಿ ತೋವಿನಕೆರೆ ರಾಯಣ್ಣ ಆಗ ಬಹಳ ಪ್ರಸಿದ್ಧರು. ಈಗಲೂ ತೋವಿನಕೆರೆಯ ಒಂದು ಪ್ರದೇಶವು ಜನರ ಬಾಯಲ್ಲಿ ರಾಯಣ್ಣನವರ ಹೊಲ ಎಂದೇ ಕರೆಸಿಕೊಳ್ಳುತ್ತದೆ. ಇಲ್ಲಿದ್ದ ಚಂದ್ರಸಾಗರ ವರ್ಣಿ ಜೈನ ಕವಿ 50ಕ್ಕೂಹೆಚ್ಚು ಕೃತಿ ರಚಿಸಿದ್ದ.

1927ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ತುಮಕೂರಿಗೂ ಭೇಟಿ ನೀಡಿದ್ದು ನಿಮಗೆ ನೆನಪಿರಬಹುದು. ಹೀಗೆ ತುಮಕೂರಿಗೆ ಬಂದಿದ್ದ ಗಾಂಧೀಜಿ ನಂತರ ಮಧುಗಿರಿಗೆ ಭೇಟಿ ನೀಡುವ ಮಾರ್ಗಮಧ್ಯೆದಲ್ಲಿ ತೋವಿನಕೆರೆಗೂ ಬಂದಿದ್ದರು. ತೋವಿನಕೆರೆಯ ಆದಿಕರ್ನಾಟಕ ಕೇರಿಗೆ ಭೇಟಿ ಕೊಟ್ಟಾಗ ಅಲ್ಲಿನ ಹರಿಜನರು ಆಗಿನ ಕಾಲಕ್ಕೆ ನೂರು ರೂಪಾಯಿ ಸಂಗ್ರಹ ಮಾಡಿ ಕೊಟ್ಟಿದ್ದು ದೊಡ್ಡ ದಾಖಲೆ.

ಕೊರಟಗೆರೆಯ ಐತಿಹಾಸಿಕ ಹಿನ್ನೆಲೆಯೂ ಕುತೂಹಲಕಾರಿಯಾಗಿದೆ. ಕೊರಟಗೆರೆ ಊರಿನ ಸುತ್ತ ಏಳು ಸುತ್ತಿನ ಕೋಟೆ ಇತ್ತಂತೆ. ಈಗ ಕೋಟೆಯ ಅವಶೇಷ ಅಲ್ಲಲ್ಲಿ ಕಾಣಬಹುದು. ಊರೊಳಗಿನ ಮೊದಲ ಸುತ್ತಿನ ಕೋಟೆಯಲ್ಲಿ ಉದ್ಭವ ಗಣಪತಿ, ಕೋಟೆ ಮಾರಮ್ಮ, ಕೊಲ್ಲಾಪುರದಮ್ಮ, ಆಹೋಬಲ ನರಸಿಂಹ ದೇವಾಲಯಗಳಿವೆ. ಎರಡನೇ ಸುತ್ತಿನ ಕೋಟೆಯಲ್ಲಿರುವ ಗೌತಮರಾಮನ ಗುಡಿಯ ಕಂಬ ಗೋಡೆಗಳ ಮೇಲಿರುವ ಶಿಲ್ಪಗಳು ಕರ್ನಾಟಕ ವಾಸ್ತು ಶಿಲ್ಪದ ದಾಖಲೆಗೆ ಸೇರಿದೆ.

ಕೊರಟಗೆರೆ ಬೆಟ್ಟದ ನಡುವೆ ಇರುವ ಉದ್ಭವ ಲಿಂಗದ ಮೇಲೆ ಗಂಗೆಯ ಹನಿಗಳು ತೊಟ್ಟಿಕುತ್ತಿದ್ದು ಆ ನೀರಿನಿಂದಲೇ ಇಲ್ಲಿರುವ ಕಲ್ಯಾಣಿ ಆಗಿದೆ ಎಂಬ ನಂಬಿಕೆ ಇದೆ. ಇಲ್ಲಿ ನೀರು ಎಂದೂ ಬತ್ತೇ ಇಲ್ಲ ಎಂಬುದು ಇಲ್ಲಿನ ಜನರ ಹೇಳಿಕೆ. ಕಲ್ಯಾಣಿಯೊಳಗೆ ಕಲ್ಲಿನ ಬಸವಣ್ಣನ ಮೂರ್ತಿ ಇದ್ದು, ಅದು ಮುಳುಗುವ ಮಟ್ಟಕ್ಕೆ ನೀರು ಬಂದಾಗ ಲೋಕ ಪ್ರಳಯ ಎಂಬುದು ಇಲ್ಲಿನವರ ನಂಬಿಕೆ.

ತೋವಿನಕೆರೆ ಸಮೀಪದ ಕಬ್ಬಗೆರೆ ಗೊತ್ತಲ್ಲ. ಕಬ್ಬಗೆರೆ ಏಷ್ಯಾಖಂಡದ ಪ್ರತಿಷ್ಠಿತ ಪತ್ರಿಕೆಗಳಿಗೆಲ್ಲ ದೊಡ್ಡ ಸುದ್ದಿಯಾದ ಊರಿದು. ಹಲವು ದೇಶಗಳ ಪತ್ರಕರ್ತರೆಲ್ಲರೂ ಈ ಊರಿಗೆ ಬಂದು ಇಲ್ಲಿರುವ ಬಯೋಮಾಸ್ ಎನರ್ಜಿ ಫಾರ್ ರೂರಲ್ ಇಂಡಿಯಾ ಕುರಿತು ವರದಿ ಮಾಡಿದ್ದರು. ಇದು ಸೌದೆಯಲ್ಲಿ ವಿದ್ಯುತ್ ತಯಾರಿಕಾ ಘಟಕ. ಸೌದೆಯಲ್ಲಿ ವಿದ್ಯುತ್ ಉತ್ಪಾದನೆಯ ಈ ಘಟಕ ಪ್ರಪಂಚದಲ್ಲೇ ಕೌತುಕ ಮೂಡಿಸಿತ್ತು. ಜಗತ್ತಿನೆಲ್ಲಡೆ ಸುದ್ದಿಯಾದ ಈ ಊರೀಗ ಏನೇನು ಇಲ್ಲದಂತೆ ಮೌನವಾಗಿದೆ.

ಬಹಳ ಪ್ರಾಚೀನ ನೀರಿನ ಮೂಲಗಳಾದ ತಲಪರಿಗೆಗೆ ತೋವಿನಕೆರೆ ಪ್ರಸಿದ್ಧಿ ಪಡೆದಿತ್ತು. ಈಗಲೂ ತಾಲ್ಲೂಕಿನಲ್ಲಿ ಏನಿಲ್ಲವೆಂದರೂ 10ಕ್ಕೂ ಹೆಚ್ಚು ತಲಪರಿಗೆ ಜೀವಂತವಾಗಿವೆ! ಮಲ್ಲಕಾವು, ಕಟ್ಲಗೊಲ್ಲಹಳ್ಳಿ, ಸೂಳೆಕೆರೆಯ ತಲಪರಿಗೆಗಳಲ್ಲಿ ನೀರು ಈಗಲೂ ಜಿನುಗುತ್ತಾ ಕೌತುಕ ಮೂಡಿಸುತ್ತವೆ.

ಶೇಂಗಾ ಬಿಟ್ಟರೆ ರಾಗಿ, ಮುಸುಕಿನಜೋಳ ಬೆಳೆಯುವ ಇಲ್ಲಿಯ ರೈತರ ಬದುಕು ಮಾತ್ರ ಸಹನೀಯವಾಗಿಲ್ಲ. ಬಜೆಗೆ ಕೊರಟಗೆರೆ ಏಷ್ಯಾಖಂಡದಲ್ಲೇ ಪ್ರಸಿದ್ಧಿ ಪಡೆದಿತ್ತು. ಏಷ್ಯಾಖಂಡದ ಪ್ರಮುಖ ದೇಶಗಳಿಗೆಲ್ಲ ಬಜೆ ಅಗ್ರಹಾರ (ಈಗ ಜಟ್ಟಿ ಅಗ್ರಹಾರ ಎಂದಾಗಿದೆ), ಥರಟಿ , ಅಜ್ಜಿಹಳ್ಳಿ ಗ್ರಾಮಗಳ ಸುತ್ತಲು ಬೆಳೆದ ಬಜೆ ವಿವಿಧ ದೇಶಗಳಿಗೆ ರಫ್ತು ಆಗುತ್ತಿತ್ತು. ಆದರೆ ಈಗ ಬಜೆ ಇಲ್ಲ. ಹೂವಿನ ಬೆಳೆಗೆ ಹೆಸರುವಾಸಿಯಾಗ ತೊಡಗಿದೆ.

ಹುಣಸೆಯ ಬೀಡು...
ಪ್ರವಾಸಿಗ ಬುಖಾನನ್ ಹೇಳುವಂತೆ ಇಲ್ಲಿ ಹಿಂದೆ ತೋಟಗಳಿಗೆ ಪ್ರಸಿದ್ಧವಾಗಿತ್ತಂತೆ. ನದಿಗಳ ನಾಡಿನ ಕೊರಟಗೆರೆ ಈಗ ಹುಣಸೆ ಬೀಡಿನ ನಾಡಾಗಿರುವುದು ಇತಿಹಾಸದ ವ್ಯಂಗ್ಯ. ನದಿಗಳ ಕಾರಣ ಅಚ್ಚ ಹರಿಸಿನ ನಾಡಾಗಿ ಕಂಗೊಳಿಸಬೇಕಾದ ಕೊರಟಗೆರೆ ಈಗ ಮೌನವಾಗಿದೆ. ಮರಳು ಗಣಿಗಾರಿಕೆ ನದಿಯ ನೀರೆಲ್ಲವೂ ಬತ್ತಿ ಈಗ ಬರದ ನಾಡಾಗಿಸಿದೆ.

ರಾಜ್ಯದ ಮೊದಲ ದಲಿತ ಮಂತ್ರಿ
ಸ್ವಾತಂತ್ರ್ಯ ನಂತರ ಮೈಸೂರು ರಾಜ್ಯದ ಮೊಟ್ಟ ಮೊದಲ ದಲಿತ ಮಂತ್ರಿ ಚನ್ನಿಗರಾಮಯ್ಯ ಕೊರಟಗೆರೆಯವರು. ಮೈಸೂರು ಚಾಮಂಡಿ ಬೆಟ್ಟಕ್ಕೆ ಹೋದಾಗ ಅಲ್ಲಿ ಪ್ರವೇಶ ನಿರಾಕರಣೆ ಮಾಡಲಾಗುತ್ತದೆ. ಪ್ರತಿಭಟನೆ ಮಾಡಿ ವಾಪಸ್ ಬಂದವರು ಇವರು. ದೊಡ್ಡ ಸ್ವಾತಂತ್ತ್ಯ ಹೋರಾಟಗಾರರೂ ಆಗಿದ್ದರು. ಹೆಂಡದ ನಿರಾಕರಣೆ ಚಳವಳಿ ಮೊದಲು ನಡೆದಿದ್ದು ಕೂಡ ಕೊರಟಗೆರೆಯಲ್ಲೇ.

ತತ್ವಪದಕಾರರು ಹೇರಳವಾಗಿರುವ ಜಿಲ್ಲೆಯ ಪ್ರದೇಶ ಇದು. ಬರಹಗಾರರಾದ ಪಿ.ವಿ.ನಾರಾಯಣ ಮತ್ತು ಪ್ರಧಾನ ಗುರುದತ್ತ ಅಕ್ಕಿರಾಂಪುರದವರು. ಅಗ್ರಹಾರ ಕೃಷ್ಣಮೂರ್ತಿ ಜಟ್ಟಿ ಅಗ್ರಹಾರದವರು. ತೋವಿನಕೆರೆಯಲ್ಲಿ ಸೀತಾರಾಮ ಜೋಯಿಸರ `ನೆನಪಿನಂಗಳದಲ್ಲಿ~ ನೆನಪುಗಳ ಕಥಾನಕ ಇಲ್ಲಿನ ಆ ಕಾಲಘಟ್ಟವನ್ನು ವರ್ಣಿಸಿದೆ. ಕುವೆಂಪು ಅವರ ಆಶಯಗಳನ್ನು ಮೈಸೂರು ಪ್ರಸಾರಾಂಗದ ಮೂಲಕ ಜಾರಿಗೆ ತಂದ ಕೀರ್ತಿಗೆ ಪಾತ್ರರಾದ ಜಿ.ಹನುಮಂತರಾವ್ ಕೊರಟಗೆರೆಯವರು.

ಕೊರಟಗೆರೆ ಒಂದು, ಹೆಸರು ಮೂರು
ಕೊರಟಗೆರೆಯ ಬೆಟ್ಟ ತೆಂಗಿನ ಚಿಪ್ಪಿನಂಥ ಆಕಾರದಲ್ಲಿದೆ. ತೆಂಗಿನ ಚಿಪ್ಪನ್ನು ಕರಟ ಎಂದು ಕರೆಯುತ್ತಾರೆ. ಕರಟದಂತೆ ಇರುವುದರಿಂದ ಕರಟಗಿರಿ, ಕೊರಟಗೆರೆ ಆಯಿತು ಎಂದೂ ಹೇಳಲಾಗಿದೆ.

ಬೆಟ್ಟದಲ್ಲಿ ಈಶ್ವರ ಲಿಂಗವಿದೆ. ಕೂರಿಗೆಯಂತೆ ಲಿಂಗ ಇದೆ. ಕೂರಿಗೆ ಇರುವ ಗಿರಿಯು ಮುಂದೆ ಕೂರಿಗೆಗಿರಿ ಆಗಿ ಮುಂದೆ ಕೊರಟಗೆರೆ ಆಗಿದೆ ಎಂಬ ಅಭಿಪ್ರಾಯವೂ ಇದೆ. ಬ್ರಹ್ಮಕಪಾಲ ಹಿಡಿದ ಈಶ್ವರ ಬ್ರಹ್ಮಹತ್ಯೆ ಮಾಡಿದ ಪಾಪ ನಿವಾರಣೆಗೆ ಇಲ್ಲಿ ಬಂದು ನೆಲಿಸಿದ. ಅವರನ್ನು ಕಪದ್ರಿ ಎಂದು ಕರೆಯುತ್ತಾರೆ. ಕಪದ್ರಿ ಇರುವ ಗಿರಿ ಕಪದ್ರಗಿರಿ ಆಗಿ ಕೊರಟಗೆರೆ ಆಯಿತು ಎಂದೂ ಹೇಳಲಾಗುತ್ತದೆ.

ರಣಭೈರೇಗೌಡನ ಕಥೆ
ಬೆಂಗಳೂರು ಯಲಹಂಕ ನಾಡ ಪ್ರಭುಗಳ ಒಂದು ತಂಡ ಹೊಳವನಹಳ್ಳಿಗೆ ಬರುತ್ತದೆ. ಈ ತಂಡದ ನಾಯಕನೆ ರಣಭೈರೇಗೌಡ. ಈತ ಹೊಳವನಹಳ್ಳಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿಕೊಂಡಿದ್ದನು.

ಶಿರಾದ ನವಾರು, ಹೆಬ್ಬೂರು ನಾಡಗೌಡರ ವಿರುದ್ಧ ಯುದ್ಧ ಮಾಡಿ ಸೋಲಿಸಿ ಇವುಗಳನ್ನು ತನ್ನ ಆಳ್ವಿಕೆ ಸೇರಿಸಿಕೊಂಡಿದ್ದನು. ಇದಾದ ನಂತರ ಹೊಳವನಹಳ್ಳಿಯಿಂದ ಕೊರಟಗೆರೆಗೆ ಸ್ಥಳಾಂತರಗೊಂಡನು. ಕೊರಟಗೆರೆಯ ಕೋಟೆಯನ್ನು ಈತನೇ ಕಟ್ಟಿಸಿದ್ದು. ಇಲ್ಲಿನ ಗಂಗಾಧರೇಶ್ವರ ದೇವಸ್ಥಾನ ಕೂಡ ಈತನ ನಿರ್ಮಾಣವೇ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.