ಬುಧವಾರ, ಜೂನ್ 16, 2021
28 °C

ಬರದ ಹೊಡೆತ: ದುಡಿಯುವ ಕೈಗಳಿಗೆ ಕೆಲಸವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಡೂರು: ತಾಲ್ಲೂಕಿನ ಜನರು ಬರದ ಹೊಡೆತ ತಾಳಲಾರದೆ ಗುಳೆ ಹೋಗುತ್ತಿದ್ದು ಊರುಗಳಲ್ಲಿರುವ ಜನರ  ದುಡಿದುಣ್ಣುವ ಕೈಗಳಿಗೆ ಕೆಲಸವಿಲ್ಲದಾಗಿದೆ.ಬರ ಪರಿಹಾರ ಕಾಮಗಾರಿಗಳು ಕೇವಲ ಇಲಾಖೆಗಳ ಕಡತಳಲ್ಲಿ ಮಾತ್ರ ಉಸಿರಾಡುತ್ತಿವೆ. ನಿರೀಕ್ಷೆಯ ಮಟ್ಟದಲ್ಲಿ  ಕೆಲಸಗಳು ಆಗುತ್ತಿಲ್ಲವೆಂಬ ದೂರು ಸಾರ್ವಜನಿಕರದ್ದು.ತಾಲ್ಲೂಕಿನಲ್ಲಿ 16,695 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗಿದ್ದು ಮಳೆಯಿಲ್ಲದೇ ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ.ತಾಲ್ಲೂಕಿನಲ್ಲಿರುವ ಅಂದಾಜು 70 ಸಾವಿರ ಜಾನುವಾರುಗಳಿಗೆ ಇನ್ನೂ 57 ವಾರಗಳಿಗಾಗುವಷ್ಟು ಮೇವು ಲಭ್ಯವಿದೆ. ಬರಗಾಲ ಮುಂದುವರಿದರೆ ತಾಲ್ಲೂಕಿನ ಕುರೇಕುಪ್ಪದಲ್ಲಿ ಗೋಶಾಲೆ ತೆರೆಯಲು ತೀರ್ಮಾನಿಸಿರುವುದಾಗಿ ಪಶುಸಂಗೋಪನಾ ಇಲಾಖೆ ತಿಳಿಸಿದೆ.ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ ಅನುದಾನದಲ್ಲಿ ಚೋರನೂರು, ಕಪಟ್ರಾಳ್, ತುಮಟಿತಾಂಡ, ಎಂ.ಲಕ್ಕಲಹಳ್ಳಿ, ಅಂತಾಪುರ ಕೊರಚರಹಟ್ಟಿ, ಕೊಡಾಲು, ಹೊಸ ದರೋಜಿ, ಮಾದಾಪುರ ಗ್ರಾಮಗಳಲ್ಲಿ ಕೆಲಸ ಆರಂಭಿಸಿರುವುದಾಗಿ  ಅಧಿಕಾರಿಗಳು ತಿಳಿಸಿದರು.ಆದರೆ ವಾಸ್ತವವಾಗಿ ತೋರಣಗಲ್ಲು, ವೆಂಕಟಗಿರಿ, ಸುಶೀಲಾನಗರ, ಚೋರನೂರು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ಅತಿಯಾಗಿದೆ.ನೆರವಿಗೆ ಬಾರದ ಉದ್ಯೋಗ ಖಾತ್ರಿ: ಈ ಯೋಜನೆಯಡಿ 2011-12ನೇ ಸಾಲಿನಲ್ಲಿ ತಾಲ್ಲೂಕಿನ ಜನರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ 8 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ರೂಪಿಸಿದ್ದೇವೆ. ಬರದ ಹಿನ್ನೆಲೆಯಲ್ಲಿ ಹೆಚ್ಚಿನ ಕಾಮಗಾರಿ ನಡೆಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ಕಾರ್ಯದರ್ಶಿಗಳಿಗೆ ಸೂಚಿಸಿದ್ದೇವೆ ಎಂದು ಕಾರ್ಯನಿರ್ವಾಹಕ ಅಧಿಕಾರಿ  ಅಭಿಪ್ರಾಯ ಪಡುತ್ತಾರೆ.ಬರಗಾಲ ಘೋಷಣೆಯಾದ ದಿನದಿಂದ ಇದುವರೆಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕೆಲಸಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ನೀಡಲು ಸಂಬಂಧಪಟ್ಟ ಇಲಾಖೆಯವರು ತಡವರಿಸುತ್ತಾರೆ.ಕ್ರಿಯಾಯೋಜನೆ: ತಾಲ್ಲೂಕು ಪಂಚಾಯತ್ ರಾಜ್ ಇಲಾಖೆಯಿಂದ 113 ಕುಡಿಯುವ ನೀರಿನ ಕಾಮಗಾರಿಗಳಿಗೆ 36.35 ಲಕ್ಷ, ಪಶುಸಂಗೋಪನೆ ಇಲಾಖೆಯಿಂದ 46.39 ಲಕ್ಷ, ಸಣ್ಣ ನೀರಾವರಿ ಇಲಾಖೆಯಿಂದ 56.80 ಲಕ್ಷ ರೂಪಾಯಿಗಳ ಒಟ್ಟು 2.50 ಕೋಟಿ ರೂಪಾಯಿ ಕ್ರಿಯಾ ಯೋಜನೆ ಅಂದಾಜು ಪಟ್ಟಿ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿತ್ತು. ಆದರೆ ಇದುವರೆಗೆ  ಜಿಲ್ಲಾಧಿಕಾರಿಗಳು ಕೇವಲ  ಕುಡಿಯುವ ನೀರಿನ 9 ಕಾಮಗಾರಿಗಳನ್ನು ಕೈಗೊಳ್ಳಲು (ರೂ. 17.91 ಲಕ್ಷ)  ಅನುಮೋದನೆ ನೀಡಿದ್ದು, ಮೊದಲ ಕಂತಿನ ಹಣವಾಗಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗಕ್ಕೆ 7 ಲಕ್ಷರೂಪಾಯಿ ಬಿಡುಗಡೆ ಮಾಡಿದ್ದಾರೆ ಎಂದು ಕಂದಾಯ ಅಧಿಕಾರಿ ಕಂಬಳಿ ತಿಳಿಸಿದರು.ಕುಡಿಯಲು ದನಕರುಗಳಿಗೆ ನೀರು ಇಲ್ಲದಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಬರಪರಿಹಾರದ ಕೆಲಸಗಳು ನಡೆಯತ್ತಿಲ್ಲ. ಹೊಲದಲ್ಲಿ ಜನರಿಗೆ  ಕೆಲಸಗಳಿಲ್ಲ, ಹೊಟ್ಟೆಬದುಕಲು ದೂರದ ಕಾಫಿ ದೇಶಗಳಿಗೆ ನಮ್ಮ ಗ್ರಾ.ಪಂ.ಯಿಂದಲೇ 3 ಸಾವಿರಕ್ಕೂ ಹೆಚ್ಚು ಜನರು ವಲಸೆ ಹೋಗಿದ್ದಾರೆಂದು ಗೊಲ್ಲಲಿಂಗಮ್ಮನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಬೊಮ್ಮಲಗುಂಡ ಹನುಮಂತಪ್ಪ ಹಾಗೂ ಮಾಜಿ ಗ್ರಾ.ಪಂ.ಸದಸ್ಯ ತೊಣಸಿಗೇರಿಯ ರಾಜಣ್ಣ, ವೆಂಕಟಗಿರಿ ತಾಂಡದ ರಾಮಲಿ ನಾಯ್ಕ `ಪ್ರಜಾವಾಣಿ~ಗೆ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.