ಶನಿವಾರ, ಏಪ್ರಿಲ್ 17, 2021
27 °C

ಬರ: ರೂ. 11,489 ಕೋಟಿಗೆ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಲ್ಪಾವಧಿ ಬರ ಪರಿಹಾರ ಕಾಮಗಾರಿಗಳಿಗೆ ರೂ. 7,672 ಕೋಟಿ  ಮತ್ತು ದೀರ್ಘಾವಧಿ ಬರ ಪರಿಹಾರ ಕಾಮಗಾರಿಗಳಿಗೆ ರೂ. 3,817 ಕೋಟಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಎರಡು ಪ್ರತ್ಯೇಕ ಮನವಿಗಳನ್ನು ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಒಟ್ಟು ರೂ. 11,489 ಕೋಟಿ   ನೆರವು ಕೋರಿ ಎರಡು ಮನವಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬರ ಪರಿಸ್ಥಿತಿಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ಅಧಿಕಾರಿಗಳ ಸಮಿತಿ ನಮ್ಮ ಮನವಿಗಳನ್ನು ಪರಿಶೀಲಿಸಿ, ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ~ ಎಂದು ಹೇಳಿದರು.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೆಳೆ ಹಾನಿಗೆ ತುರ್ತು ಪರಿಹಾರ ಒದಗಿಸುವುದಕ್ಕೆ ರೂ. 1,106 ಕೋಟಿ  ಮತ್ತು ತುರ್ತು ಬೆಳೆ ಯೋಜನೆಗೆ ರೂ. 241 ಕೋಟಿಗಳನ್ನು ಅಲ್ಪಾವಧಿ ಕ್ರಮಗಳ ಅಡಿ ಒದಗಿಸುವಂತೆ ಕೋರಲಾಗಿದೆ. ದೀರ್ಘಾವಧಿ ಕ್ರಮಗಳಿಗಾಗಿ ರೂ. 596 ಕೋಟಿ ನೀಡುವಂತೆ ಮನವಿ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಯಲ್ಲಿ ಕುಡಿಯುವ ನೀರು ಒದಗಿಸಲು ಅಲ್ಪಾವಧಿ ಕಾರ್ಯಕ್ರಮದ ಅಡಿ ರೂ. 458 ಕೋಟಿ ಕೋರಲಾಗಿದೆ. ಗುಂಪು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗಳಿಗೆ ದೀರ್ಘಾವಧಿ ಪರಿಹಾರವಾಗಿ ರೂ. 1,525 ಕೋಟಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ವಿವರಿಸಿದರು.

ಪಶು ಸಂಗೋಪನಾ ಇಲಾಖೆ ವ್ಯಾಪ್ತಿಯಲ್ಲಿ ಅಲ್ಪಾವಧಿಗೆ ರೂ. 466 ಕೋಟಿ ಮತ್ತು ದೀರ್ಘಾವಧಿಗೆ ರೂ. 829 ಕೋಟಿ ನೆರವಿಗೆ ಬೇಡಿಕೆ ಸಲ್ಲಿಸಲಾಗಿದೆ. 200 ಗೋಶಾಲೆಗಳನ್ನು ತೆರೆಯುವುದು, ಮೇವು ಬೆಳೆಯುವುದು, ಮಿನಿ ಕಿಟ್‌ಗಳ ವಿತರಣೆ, ಜಾನುವಾರುಗಳ ಆರೋಗ್ಯ ರಕ್ಷಣೆ ಅಲ್ಪಾವಧಿ ಕಾರ್ಯಕ್ರಮಗಳಲ್ಲಿ ಸೇರಿವೆ. ದೀರ್ಘಾವಧಿಯಲ್ಲಿ ಹಾಲಿನ ಡೇರಿಗಳನ್ನು ಬಲಪಡಿಸುವ ಗುರಿ ಹೊಂದಲಾಗಿದೆ ಎಂದರು.

ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಲು ಇತ್ತೀಚೆಗೆ ಬಂದಿದ್ದ ಕೇಂದ್ರ ಸಚಿವರಾದ ಶರದ್ ಪವಾರ್ ಮತ್ತು ಜೈರಾಂ ರಮೇಶ್ ಅವರ ಸೂಚನೆಯಂತೆ ಎರಡು ಪ್ರತ್ಯೇಕ ಮನವಿಗಳನ್ನು ಸಲ್ಲಿಸಲಾಗಿದೆ. ಬರ ಪರಿಹಾರ ಕಾಮಗಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಉನ್ನತಮಟ್ಟದ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ ಶೀಘ್ರದಲ್ಲೇ ಸಭೆ ಸೇರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಗಳನ್ನು ಪರಿಶೀಲನೆ ನಡೆಸಲಿದೆ ಎಂಬ ವಿಶ್ವಾಸವಿದೆ. ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ನಿರೀಕ್ಷಿಸಲಾಗಿದೆ ಎಂದರು.

`ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಬರ ಮಾತ್ರ ಇತ್ತು. ಈಗ ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಸಮಸ್ಯೆ ಸೃಷ್ಟಿಯಾಗಿದೆ. ಬರ ಮತ್ತು ನೆರೆಯನ್ನು ಒಟ್ಟಿಗೆ ಎದುರಿಸಬೇಕಿದೆ. ಕೆಲವೆಡೆ ಉತ್ತಮ ಮಳೆ ಬೀಳುತ್ತಿದೆ. ಆದರೆ, ವಾಡಿಕೆಗಿಂತ ಹೆಚ್ಚೇನೂ ಬಿದ್ದಿಲ್ಲ. ಕೊರತೆಯ ಪ್ರಮಾಣದಲ್ಲಿ ಕಡಿಮೆ ಆಗುತ್ತಿದೆ~ ಎಂದು ಶೆಟ್ಟರ್ ಹೇಳಿದರು.

ರಾಜ್ಯದಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 74.70 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಆಗಬೇಕಿತ್ತು.  ಮಳೆ ಕೊರತೆ ಕಾರಣದಿಂದ 35.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ನೀರಿನ ಕೊರತೆಯಿಂದ 2.37 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಒಣಗಿಹೋಗಿವೆ. ಬರ ಪರಿಹಾರ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವ ಮೂಲಕ ರೈತರು ಮತ್ತು ಗ್ರಾಮೀಣ ಪ್ರದೇಶದ ನೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೇಂದ್ರಕ್ಕೆ ಒತ್ತಾಯ: ಬರದಿಂದ ಕಂಗೆಟ್ಟಿರುವ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ರೂ. 25,000 ವರೆಗಿನ ಬೆಳೆ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದೆ. ಇದೇ ರೀತಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ಒಂದು ಮಿತಿಯೊಳಗೆ ಮನ್ನಾ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು. ಶೀಘ್ರದಲ್ಲಿ ದೆಹಲಿಗೆ ತೆರಳಿ ಪ್ರಧಾನಿ ಮತ್ತು ಪ್ರಮುಖ ಸಚಿವರನ್ನು ಭೇಟಿಮಾಡಿ ಒತ್ತಡ ಹೇರಲಾಗುವುದು ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.