ಬುಧವಾರ, ಜೂನ್ 16, 2021
28 °C

ಬಾಲಿವುಡ್ ನಿರ್ಮಾಪಕಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳೆಯರು ಚಿತ್ರ ನಿರ್ಮಾಣ ಮಾಡುವುದು ಹೊಸ ಸಂಗತಿಯೇನಲ್ಲ. ಆದರೆ ಬಾಲಿವುಡ್‌ನಂತಹ ವಿಲಾಸಿ ಮತ್ತಷ್ಟೇ ದುಬಾರಿ ಚಿತ್ರರಂಗದಲ್ಲಿ ನಿನ್ನೆವರೆಗೂ ಹೀರೊಯಿನ್‌ ಆಗಿ ಮೆರೆದವರು ಚಿತ್ರ ನಿರ್ಮಾಣಕ್ಕಿಳಿಯುವುದು ಸಾಹಸವೇ ಸರಿ. ಅಂತಹ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ್ದಷ್ಟೇ ಅಲ್ಲ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಗಳನ್ನೂ ಹೊಂದಿರುವ ಕೆಲವು ಬಾಲಿವುಡ್‌ ಬೆಡಗಿಯರು ಯಾರು ಯಾರು ನೋಡೋಣ.ಒಂದು ಮಗುವಿನ ತಾಯಿಯಾದರೂ ತನ್ನ ಹಳೆಯ ಅಂಗಸೌಷ್ಠವ ಕಾಯ್ದುಕೊಳ್ಳುವ ಮೂಲಕ ಇಡೀ ಬಿ–ಟೌನ್‌ ನಿಬ್ಬೆರಗಾಗುವಂತೆ ಮಾಡಿರುವವರು ಸಿಂಹಕಟಿಯ ಸುಂದರಿ ಶಿಲ್ಪಾ ಶೆಟ್ಟಿ. ಫಿಟ್‌ನೆಸ್‌ ಎಕ್ಸ್‌ಪರ್ಟ್‌ ಹಾಗೂ ಮಹಿಳಾ ಉದ್ಯಮಿಯಾಗಿಯೂ ಅವರು ಈಗಾಗಲೇ ಯಶಸ್ವಿಯಾಗಿದ್ದಾರೆ.ಇಂತಿಪ್ಪ ಶಿಲ್ಪಾ ಶೆಟ್ಟಿ ನಿರ್ಮಾಣದ ‘ಡಿಷ್ಕಿಯಾಂ’ ಇದೇ 28ರಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ. ಶಿಲ್ಪಾ ಜತೆ ಮತ್ತೊಬ್ಬ ನಿರ್ಮಾಪಕ ಸುನಿಲ್‌ ಲಲ್ಲಾ ಬಂಡವಾಳ ಹೂಡಿದ್ದು, ಹರ್ಮನ್‌ ಬವೇಜಾ ಮತ್ತು ಹೊಸ ಮುಖ ಆಯೇಷಾ ಖನ್ನಾ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ವಯಸ್ಸಾದ ಮೇಲೂ ನಟಿಸುತ್ತಿರುವ  ಸನ್ನಿ ದೇವಲ್‌ ಸಹ ‘ಡಿಷ್ಕಿಯಾಂ’ ಚಿತ್ರದ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ.ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ತಮ್ಮದೇ ಚಿತ್ರದಲ್ಲಿ ತಾವೇ ಐಟಂ ಸಾಂಗ್‌ವೊಂದಕ್ಕೆ ಶಿಲ್ಪಾ ಹೆಜ್ಜೆಹಾಕಿರುವುದು. ಒಟ್ಟಾರೆಯಾಗಿ ಇದೊಂದು ಮನರಂಜನೆ ಮತ್ತು ಮಸಾಲಾ ಚಿತ್ರವಾಗಿ ಮೂಡಿಬಂದಿದೆ ಎಂದೂ ಶಿಲ್ಪಾ ಹೇಳಿಕೊಂಡಿದ್ದಾರೆ.ಪೂಜಾ ಭಟ್

ನಿರ್ಮಾಪಕರ ಕುಟುಂಬದ ಕುಡಿ ಪೂಜಾ ಭಟ್‌, ‘ಡ್ಯಾಡಿ’, ‘ದಿಲ್‌ ಹೈ ಕೆ ಮಾನ್ತಾ ನಹೀ’, ‘ಜಕ್ಮ್‌’ ಚಿತ್ರದ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದವರು. ಸ್ವಂತ ನಿರ್ಮಾಣ ಸಂಸ್ಥೆಯಾದ ‘ಫಿಶೆಯೆ ನೆಟ್‌ವರ್ಕ್’ನ ‘ತಮನ್ನಾ’ (1997) ಚಿತ್ರದಲ್ಲಿ ಪಾತ್ರವೊಂದನ್ನೂ ನಿರ್ವಹಿಸಿದ ಪೂಜಾ ನಂತರ ಬರೋಬ್ಬರಿ 10 ಚಿತ್ರಗಳನ್ನು ನಿರ್ಮಿಸಿದರು.ಅಮೀಷಾ ಪಟೇಲ್

‘ಕಹೋ ನಾ ಪ್ಯಾರ್ ಹೈ’ ಚಿತ್ರದ ಮೂಲಕ ಮಿಂಚಿದ ಅಮೀಷಾ ಮುಂದಿನ ಸಿನೆಮಾ ‘ಗದರ್‌– ಏಕ್‌ ಪ್ರೇಮ್‌ ಕಥಾ’ದಲ್ಲೂ ಯಶಸ್ಸು ಗಳಿಸಿದವರು. ನಂತರ ಅಭಿನಯಿಸಿದ ‘ಹಮ್ರಾಜ್’, ‘ಹನಿಮೂನ್‌ ಟ್ರಾವೆಲ್ಸ್‌ ಪ್ರೈವೇಟ್‌ ಲಿಮಿಟೆಡ್’ ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿತು. ಆದರೆ ಬಹಳ ದಿನ ಅದೇ ಖದರು ಉಳಿಯಲಿಲ್ಲವೆನ್ನಿ.ಆ ಹೊತ್ತಿಗೆ ಚಿತ್ರ ನಿರ್ಮಾಣದ ಅವರ ಕನಸು ಚಿಗುರೊಡೆಯಿತು. ಇದೀಗ ‘ದೇಸಿ ಮ್ಯಾಜಿಕ್‌’ ಚಿತ್ರದ ಮೂಲಕ ಅವರು ತಮ್ಮ ನಿರ್ಮಾಣದ ಕ್ಷೇತ್ರದಲ್ಲಿ ಅದೃಷ್ಟ ಒರೆಗೆಹಚ್ಚಲು ಮುಂದಾಗಿದ್ದಾರೆ. ಅತುಲ್ ಆಥಾ ನಿರ್ದೇಶನದ ‘ದೇಸಿ ಮ್ಯಾಜಿಕ್‌’ನಲ್ಲಿ ಜಾಯೇದ್‌ ಖಾನ್‌ ಮತ್ತು ಸಾಹಿಲ್‌ ಶ್ರಾಫ್‌ ನಟಿಸಲಿದ್ದಾರೆ.ಸುಷ್ಮಿತಾ ಸೇನ್

ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್‌ 2007ರಲ್ಲೇ ನಿರ್ಮಾಣದ ಕನಸಿಗೆ ರೆಕ್ಕೆ ಕಟ್ಟಿಕೊಂಡು ಇಂಗ್ಲಿಷ್‌ ಚಿತ್ರ ‘ಝಾನ್ಸಿ ಕಿ ರಾಣಿ’ಯ ತಯಾರಿಯಲ್ಲಿ ತೊಡಗಿಕೊಂಡರು. ಆದರೆ ಅದೇನಾಯಿತೋ, ಚಿತ್ರ ಸೆಟ್ಟೇರಲೇ ಇಲ್ಲ. ಇದೀಗ ಮತ್ತೆ ಚಿತ್ರದ ಬಗ್ಗೆ ಮಾತು ಕೇಳಿಬರುತ್ತಿದೆ. ವದಂತಿಗಳನ್ನೇ ನಂಬುವುದಾದರೆ ಈ ವರ್ಷ ಸುಷ್ಮಿತಾ ಸೇನ್‌ ನಿರ್ಮಾಪಕಿಯಾಗುವ ಕನಸು ನನಸಾಗಲಿದೆ. ಈಗಾಗಲೇ ಅವರು ಚಿತ್ರಕತೆಯನ್ನು ಬರೆದು ಮುಗಿಸಿದ್ದಾರೆ ಎನ್ನಲಾಗುತ್ತಿದೆ.ಪ್ರೀತಿ ಜಿಂಟಾ

ರೂಪದರ್ಶಿಯಾಗಿಯೂ, ನಟಿಯಾಗಿಯೂ ಗೆದ್ದ ಗುಳಿಕೆನ್ನೆಯ ಪ್ರೀತಿ ಜಿಂಟಾ ನೆನಪಿರಬೇಕಲ್ಲ?

‘ಸೋಲ್ಜರ್’ ಮತ್ತು ‘ಕಲ್‌ ಹೋ ನಾ ಹೋ’ ಹಿಟ್‌ ಆದ ಬಳಿಕ ಇನ್ನಷ್ಟು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ಮಧ್ಯೆ ಚಿತ್ರಯಾನಕ್ಕೊಂದು ಒಂದು ಬ್ರೇಕ್‌. ಐಪಿಎಲ್‌ನಲ್ಲಿ ತಮ್ಮ ಮಾಜಿ ಗೆಳೆಯ ನೆಸ್‌ ವಾಡಿಯಾ, ಮೋಹಿತ್‌ ಬರ್ಮನ್‌ ಮತ್ತು ಕರಣ್‌ ಪಾಲ್‌ ಜತೆಗೆ ಕಿಂಗ್ಸ್‌ ಇಲೆವೆನ್‌ ತಂಡದ ಸಹ ಮಾಲೀಕರಾಗಿ ಕ್ರಿಕೆಟ್‌ನಲ್ಲಿಯೂ ಸೋಲು–ಗೆಲುವಿನ ರುಚಿ ಕಂಡರು.ಆದರೆ 2013ರಲ್ಲಿ ನಿರ್ಮಾಣಕ್ಕಿಳಿದ ಸಂದರ್ಭ ಹಿತವಾಗಿರಲಿಲ್ಲ. ಅವರ ಮಹತ್ವಾಕಾಂಕ್ಷೆಯ ಚಿತ್ರ ‘ಇಷ್ಕ್‌ ಇನ್‌ ಪ್ಯಾರಿಸ್’ನಿಂದಾಗಿ ಅವರು ಕೈಸುಟ್ಟುಕೊಂಡರು.ಲಾರಾ ದತ್ತಾ

ಮಾಜಿ ಬ್ಯೂಟಿ ಕ್ವೀನ್‌ ಲಾರಾ ದತ್ತಾ  ‘ನೋ ಎಂಟ್ರಿ’ ಮತ್ತು ‘ಪಾರ್ಟ್ನರ್’ ಚಿತ್ರಗಳ ಮೂಲಕ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಿಕೊಟ್ಟರು. ನಂತರ ಅವರಿಗೆ ಚಿತ್ರ ನಿರ್ದೇಶಿಸುವ  ಮನಸ್ಸಾಯಿತು.‘ಪತಿ, ಟೆನಿಸ್‌ ತಾರೆ ಮಹೇಶ್‌ ಭೂಪತಿ ಜತೆ ‘ಬೀಜಿ ಬಸಂತಿ’ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ ಲಾರಾ, 2011ರಲ್ಲಿ ‘ಚಲೋ ದಿಲ್ಲಿ’ ನಿರ್ಮಿಸಿದ್ದಲ್ಲದೆ ಮೊದಲ ಯತ್ನದಲ್ಲೇ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗೆಲುವನ್ನೂ ಕಂಡರು.ಮನೀಷಾ ಕೊಯಿರಾಲ

ನೇಪಾಲದ ಸ್ನಿಗ್ಧ ಸುಂದರಿ ಮನೀಷಾ ಕೊಯಿರಾಲ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ನಿಂದ ಬಳಲಿ, ಚಿಕಿತ್ಸೆ ಪಡೆದು ಚೇತರಿಸಿಕೊಂಡರು.

‘ಸೌದಾಗರ್‌’, ‘1942–ಎ ಲವ್ ಸ್ಟೋರಿ’, ‘ಬಾಂಬೆ’ ಚಿತ್ರಗಳಲ್ಲಿನ ಅವರ ಅಮೋಘ ಅಭಿನಯ ಮರೆಯುವಂತಿಲ್ಲ. ಅವರು 10 ವರ್ಷಗಳ ಹಿಂದೆಯೇ  ‘ಪೈಸಾ ವಸೂಲ್‌’ ಮೂಲಕ ನಿರ್ಮಾಪಕಿಯಾದರೂ ಆ ಪ್ರಯತ್ನ ಅವರ ಕೈಹಿಡಿದಿರಲಿಲ್ಲ.ಹರ್ಷಿತಾ ಭಟ್

ಬಾಲಿವುಡ್‌ ಬಾದ್‌ಷಾ ಶಾರೂಖ್‌ ಖಾನ್‌ ಜತೆ ‘ಅಶೋಕಾ’ದಲ್ಲಿ ನಟಿಸಿದರೂ ಹೀರೊಯಿನ್‌ ಆಗಿ ಹರ್ಷಿತಾ ಬೆಳಗಲೇ ಇಲ್ಲ.

ಇದರಿಂದ ಸಹಜವಾಗಿ ಅವರು ಪರ್ಯಾಯ ಮಾರ್ಗದತ್ತ ಚಿಂತಿಸಬೇಕಾಯಿತು. ಕಂಡಿದ್ದು ನಿರ್ಮಾಣದ ಹಾದಿ ಆದರೆ ಹರ್ಷಿತಾ ನಿರ್ಮಾಣದ ‘ಶಕಲ್‌ ಪೆ ಮತ್‌ ಜಾ’ ಹಾಸ್ಯಪ್ರಧಾನ ಚಿತ್ರವೂ ಸೋಲುಂಡು ಅಲ್ಲಿಯೂ ಅವರಿಗೆ ಅದೃಷ್ಟ ಕೈಕೊಟ್ಟಿತು.ಜೂಹಿ ಚಾವ್ಲಾ

ಸ್ಯಾಂಡಲ್‌ವುಡ್‌ ಮತ್ತು ಬಾಲಿವುಡ್‌ನಲ್ಲಿ ಮಿಂಚಿದ ಮತ್ತೊಬ್ಬ ಭಾರತ ಸುಂದರಿ ಜೂಹಿ ಚಾವ್ಲಾ ‘ಫಿರ್‌ ಭಿ ದಿಲ್‌ ಹೈ ಹಿಂದೂಸ್ತಾನಿ’ ಮೂಲಕ 14 ವರ್ಷಗಳ ಹಿಂದೆಯೇ ನಿರ್ಮಾಪಕಿಯಾಗಿ ಹೆಸರು ಗಳಿಸಿದವರು.ಶಾರೂಖ್‌ ಖಾನ್‌, ಅಜೀಜ್‌ ಮಿರ್ಜಾ ಜತೆಗೂಡಿ ಜೂಹಿ ಆರಂಭಿಸಿದ ನಿರ್ಮಾಣ ಸಂಸ್ಥೆ ‘ಡ್ರೀಮ್ಸ್‌ ಅನ್‌ಲಿಮಿಟೆಡ್’. ಅದು ನಿರ್ಮಿಸಿದ ‘ಫಿರ್‌ ಭಿ ದಿಲ್‌ ಹೈ ಹಿಂದೂಸ್ತಾನಿ’ ಚಿತ್ರ ಠುಸ್ಸಾಯಿತು. ‘ಡ್ರೀಮ್ಸ್‌ ಅನ್‌ಲಿಮಿಟೆಡ್ ಮಹತ್ವಾಕಾಂಕ್ಷೆಯಿಂದ ಆರಂಭಿಸಿದ್ದ ಸಂಸ್ಥೆಯಾಗಿತ್ತು. ಆದರೆ ಒಂದು ದೊಡ್ಡ ಕನಸು ನನಸಾಗುವಲ್ಲಿ ಸೋತಿತು. ಜೀವನದಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ.ಮಾತ್ರವಲ್ಲ, ಅಂತಹುದೊಂದು ಸೋಲು ನಮಗೆ ದೊಡ್ಡ ಪಾಠವಾಗುತ್ತದೆ‘ ಎಂದು ಈ ಬಗ್ಗೆ ಜೂಹಿಯೇ ಹೇಳಿಕೊಂಡಿದ್ದರು.

ನಂತರ ಜೂಹಿ ಸುದ್ದಿ ಮಾಡಿದ್ದು ಪತಿ ಜೈ ಮೆಹ್ತಾ ಹಾಗೂ ಶಾರೂಖ್‌ ಖಾನ್‌ ಜತೆ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ಐಪಿಎಲ್‌ಗಾಗಿ ಖರೀದಿಸುವ ಮೂಲಕ.ದಿಯಾ ಮಿರ್ಜಾ

ರೂಪದರ್ಶಿಯಾಗಿದ್ದು ನಟಿಯಾಗಿ ಬಾಲಿವುಡ್‌ ಓಣಿಗೆ ಕಾಲಿಟ್ಟ ದಿಯಾ ಮಿರ್ಜಾ, ‘ಹಾಯ್‌ ಬೇಬಿ’, ‘ಶೂಟ್‌ಔಟ್‌ ಅಟ್‌ ಲೋಖಂಡವಾಲಾ’, ‘ಪರಿಣೀತಾ’ ಮತ್ತು ‘ಹನಿಮೂನ್‌ ಟ್ರಾವೆಲ್ಸ್‌...’ ಚಿತ್ರಗಳಲ್ಲಿ ನಟಿಸಿದವರು.ಮುಂದೆ ತಮ್ಮ ಗ್ರಾಫ್‌ ಇಳಿಯುತ್ತಲೇ ಜಾಯೇದ್‌ ಖಾನ್‌ ಜತೆಗೂಡಿ ‘ಬಾರ್ನ್‌ಫ್ರೀ’ ಎಂಬ ನಿರ್ಮಾಣ ಸಂಸ್ಥೆಯನ್ನು ತೆರೆದರು. ಮಾತ್ರವಲ್ಲ, ರೊಮ್ಯಾಂಟಿಕ್‌ ಕಾಮಿಡಿ ‘ಲವ್‌ ಬ್ರೇಕ್‌ಅಪ್ಸ್‌, ಜಿಂದಗಿ’ (2011) ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಅದು ಗೆಲ್ಲದಿದ್ದರೂ ಇದೀಗ ಸ್ಪೈ ಥ್ರಿಲ್ಲರ್‌ ಕತೆಯುಳ್ಳ ‘ಬಾಬ್ಬಿ ಜಸೂಸ್‌’ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಅದರಲ್ಲಿ ಪತ್ತೇದಾರಿ ಪಾತ್ರದಲ್ಲಿ ವಿದ್ಯಾ ಬಾಲನ್‌ ಕಾಣಿಸಿಕೊಳ್ಳಲಿದ್ದಾರೆ. ‘ಬಾಬ್ಬಿ ಜಸೂಸ್‌’ ಗೆಲ್ಲುವ ಆತ್ಮವಿಶ್ವಾಸ ದಿಯಾ ಮಿರ್ಜಾ ಅವರದ್ದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.