ಭಾನುವಾರ, ಏಪ್ರಿಲ್ 18, 2021
29 °C

ಬಿಜೆಪಿ ಹಿರಿಯರ ವೇದಿಕೆ ಬಿರುನುಡಿ; ನಾಟಕ ಬಿಡಿ, ಆಡಳಿತ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮನವೊಲಿಸುವ ಅಥವಾ ಪಕ್ಷದಲ್ಲಿ ಉಳಿಸಿಕೊಳ್ಳುವ ಬಗ್ಗೆ ನಾಟಕವಾಡುವುದನ್ನು ನಿಲ್ಲಿಸಿ, ಒಳ್ಳೆಯ ಆಡಳಿತ ನೀಡಿ~ ಎಂದು ಬಿಜೆಪಿ ಹಿರಿಯರ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ.ಶನಿವಾರ ಇಲ್ಲಿ ನಡೆದ ವೇದಿಕೆಯ ಮುಖಂಡರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಬಿ.ಬಿ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಅಣ್ಣ ವಿನಯಚಂದ್ರ, ಬರಗಾಲ, ಡೆಂಘೆ, ಕಸ ವಿಲೇವಾರಿ, ಕಾನೂನು ಸುವ್ಯವಸ್ಥೆ ಇತ್ಯಾದಿ ಸಮಸ್ಯೆಗಳಿಗೆ ಸ್ಪಂದಿಸುವ ಬದಲು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು, ಪ್ರಮುಖ ಸಚಿವರು ದೆಹಲಿ, ಬೆಂಗಳೂರಿನಲ್ಲಿ ಬೀಡುಬಿಟ್ಟು ಯಡಿಯೂರಪ್ಪನವರ ವಿಷಯದಲ್ಲಿ ತಲ್ಲೆನರಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.`ಯಡಿಯೂರಪ್ಪ ಪಕ್ಷ ತೊರೆದರೆ ಬಿಜೆಪಿಗೆ ಸ್ವಲ್ಪಮಟ್ಟಿಗೆ ತೊಂದರೆ ಆಗಬಹುದು, ಆದರೆ ಹಾನಿ ಆಗುವುದಿಲ್ಲ. ಅವರು ಪಕ್ಷದಲ್ಲಿ ಇರುವುದಾದರೆ ಇರಲಿ, ಹೋಗುವುದಾದರೆ ಹೋಗಲಿ. ಸುಮ್ಮನೇ ಹೆದರಿಸುವುದು ಸರಿಯಲ್ಲ~ ಎಂದು ನೇರವಾಗಿ ಹೇಳಿದರು.ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಂಪುಟದಲ್ಲಿ 20 ಮಂದಿ ಭ್ರಷ್ಟ ಸಚಿವರಿದ್ದಾರೆ. 15 ದಿನಗಳ ಒಳಗೆ ಅವರನ್ನು ಕೈಬಿಡದಿದ್ದರೆ ಜಯಪ್ರಕಾಶ ನಾರಾಯಣ ಅವರ ಸಮಗ್ರ  ಕ್ರಾಂತಿ ಮಾದರಿಯಲ್ಲಿ ಇದೇ 30ರಿಂದ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.`ಭ್ರಷ್ಟ ಸಚಿವರ ಪಟ್ಟಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು. ಅವರನ್ನು ಕೈಬಿಡುವುದರ ಜೊತೆಗೆ ಕಳಂಕಿತರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ. ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿರುವ  ಕಾರ್ಯಕರ್ತರಿಗೆ ಮಾತ್ರ ಟಿಕೆಟ್ ನೀಡುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಬೇಕು. ಇಲ್ಲದಿದ್ದರೆ ಜನಪರ ಆಂದೋಲನದ ಮೂಲಕ ಬದಲಾವಣೆಗೆ ನಾಂದಿ ಹಾಡುತ್ತೇವೆ~ ಎಂದರು.`ಯಾವುದೇ ಪಕ್ಷದಲ್ಲಿ ಇರುವ ಕೆಟ್ಟವರಿಗೆ ಮತ ನೀಡಬೇಡಿ, ಒಳ್ಳೆಯವರು ಯಾವ ಪಕ್ಷದಲ್ಲಿ ಇದ್ದರೂ ಅಂತಹವರಿಗೆ ಮತ ನೀಡಿ~ ಎಂದು ಆಂದೋಲನದ ಮೂಲಕ ಜನರಿಗೆ ಕರೆ ನೀಡಲಾಗುವುದು. ಇದು ಪಕ್ಷಾತೀತವಾದ ಜನಪರ ಆಂದೋಲನವಾಗಿರುತ್ತದೆ ಎಂದರು.`ಬಿಜೆಪಿ ಮೂಲಕವೇ ಶಾಸಕ, ವಿರೋಧ ಪಕ್ಷದ ನಾಯಕ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರು ಪಕ್ಷವನ್ನು ಹಾಳು ಮಾಡಲು ಹೊರಟಿರುವುದು ಸರಿಯಲ್ಲ. ಪಕ್ಷಕ್ಕೆ ದ್ರೋಹ ಬಗೆದರೆ ತಾಯಿಗೆ ದ್ರೋಹ ಮಾಡಿದಂತೆ ಎಂದು ಯಡಿಯೂರಪ್ಪ ಹಲವು ಬಾರಿ ಹೇಳಿದ್ದರು. ಅದನ್ನು ಈಗ ಅವರೇ ನೆನಪಿಸಿಕೊಳ್ಳಲಿ~ ಎಂದು ಮಾರ್ಮಿಕವಾಗಿ ಹೇಳಿದರು.ಬಿಜೆಪಿ ಶಿಸ್ತಿನ ಪಕ್ಷ, ಇತರ ಪಕ್ಷಗಳಿಗಿಂತ ಭಿನ್ನವಾಗಿದೆ ಎಂದು ಹಿಂದೆ ಹೇಳುತ್ತಿದ್ದೇವು. ಆದರೆ ಈಗ ಶಿಸ್ತು ಎಲ್ಲಿದೆ ಎಂದು ಹುಡುಕಬೇಕಾಗಿದೆ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದರು. ಬೇರೆ ಯಾವ ಪಕ್ಷದ ಮುಖ್ಯಮಂತ್ರಿಯೂ ಜೈಲಿಗೆ ಹೋಗಿರಲಿಲ್ಲ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧವೇ ಭ್ರಷ್ಟಾಚಾರದ ಆರೋಪಗಳಿವೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿಯನ್ನು ಭಿನ್ನ ಪಕ್ಷ ಎಂದು ಕರೆಯಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.ಆರೋಪ ಬಂದ ಕೂಡಲೇ ಗಡ್ಕರಿ ಅವರು ರಾಜೀನಾಮೆ ನೀಡಬೇಕಾಗಿತ್ತು. ಕಳಂಕಿತರು ಪಕ್ಷದ ಅಧ್ಯಕ್ಷರಾಗಿರುವುದು ಸರಿಯಲ್ಲ ಎಂದ ಅವರು, ರಾಜ್ಯದಲ್ಲಿನ ಆರ್‌ಎಸ್‌ಎಸ್ ಮುಖಂಡರು ಬಿಗಿಯಾಗಿದ್ದರೆ ಯಡಿಯೂರಪ್ಪ ದಾರಿ ತಪ್ಪುತ್ತಿರಲಿಲ್ಲ ಎಂದು ತಿಳಿಸಿದರು.5 ವರ್ಷ ಅವಕಾಶ ನೀಡಿದ್ದರೆ ಅಭಿವೃದ್ಧಿಯಲ್ಲಿ ಗುಜರಾತ್ ಮೀರಿಸುತ್ತಿದ್ದೆ ಎಂದು ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಪ್ಪ, ಅನ್ನದ ಒಂದು ಅಗುಳು ನೋಡಿದರೆ ಸಾಕು ಬೆಂದಿದ್ದೇಯೊ, ಇಲ್ಲವೊ ಎಂಬುದನ್ನು ಹೇಳಬಹುದು. ಮೂರು ವರ್ಷ ಏನೂ ಮಾಡದವರಿಗೆ ಇನ್ನೂ ಎರಡು ವರ್ಷ ಬೇಕಾಗಿತ್ತಾ ಎಂದು ವ್ಯಂಗ್ಯವಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.