ಮಂಗಳವಾರ, ಮೇ 18, 2021
31 °C

ಬಿಡದ ಹುಲ್ಲಿನ ಮನೆ ಮೋಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಹುಲ್ಲಿನ ಮನೆಗಳು ಇನ್ನೂ ಅಸ್ತಿತ್ವದಲ್ಲಿವೆ ಎಂಬುದಕ್ಕೆ ಸ್ವಷ್ಟ ನಿದರ್ಶನವಾಗಿದೆ. ಸರ್ಕಾರ ವಿವಿಧ ವಸತಿ ಯೋಜನೆಗಳಡಿ ವಸತಿ ರಹಿತರಿಗೆ ಪಕ್ಕಾ ಮನೆ ನಿರ್ಮಿಸಿ ಕೊಟ್ಟಿದೆಯಾದರೂ, ಕೆಲವರು ತಾವು ಹಿಂದಿನಿಂದಲೂ ವಾಸಿಸುತ್ತಿದ್ದ ಹುಲ್ಲಿನ ಮನೆಗಳನ್ನು ಕೆಡವದೆ ಉಳಿಸಿಕೊಂಡಿರುವುದು ಒಂದು ವಿಶೇಷ.ಹಿಂದೆ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲೂ ಹುಲ್ಲಿನ ಮನೆಗಳು ಸಾಮಾನ್ಯವಾಗಿದ್ದವು. ಇಲ್ಲಿನ ಮಾವಿನ ತೋಟಗಳು ಹಾಗೂ ಕಾಡಿನಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಕಾಚಿ ಹುಲ್ಲನ್ನು ಕೊಯ್ದು ತಂದು ಈ ಮನೆ ನಿರ್ಮಿಸುತ್ತಿದ್ದರು. ಕಬ್ಬಿನ ಸೋಗೆಯನ್ನೂ ಈ ಮನೆಗಳ ಸೂರು ನಿರ್ಮಾಣಕ್ಕೆ ಬಳಸಲಾಗುತ್ತಿತ್ತು. ಇಂಥ ಮನೆಯನ್ನು ಸ್ಥಳೀಯವಾಗಿ `ಪೂರಿಲ್ಲು~ (ಬಡವರ ಮನೆ) ಎಂದು ಕರೆಯಲಾಗುತ್ತಿತ್ತು.ಇಂತಹ ಮನೆಗಳಲ್ಲಿಯೇ ಜನ ವಾಸಿಸುತ್ತಿದ್ದರು, ಹುಲ್ಲಿನ ಮನೆ ನಿರ್ಮಿಸುವುದರಲ್ಲಿ ಪರಿಣತಿ ಪಡೆದ ಜನರೂ ಇದ್ದರು. ಅವರು ಹುಲ್ಲಿನ ಮನೆಗಳನ್ನು ಕಲಾತ್ಮಕವಾಗಿ ನಿರ್ಮಿಸುತ್ತಿದ್ದರು. ಮಾಳಿಗೆ ನಿರ್ಮಾಣ ಎಷ್ಟು ಭದ್ರವಾಗಿದೆ ಎಂದರೆ, ಮಳೆಗೆ ಸೋರುವುದಿಲ್ಲ. ಹುಲ್ಲನ್ನು ಗಾಳಿ ಎತ್ತುವುದಿಲ್ಲ. ಆದರೂ ಬೆಂಕಿಯ ಭಯದಿಂದ ಮುಕ್ತವಾಗಿರಲಿಲ್ಲ.ಇಂದು ಇಂಥ ಹುಲ್ಲಿನ ಮನೆಗಳ ನಿರ್ಮಾಣ ನಿಂತಿದೆ. ಆದರೆ ಹಿಂದೆ ನಿರ್ಮಿಸಲಾಗಿರುವ ಮನೆಗಳನ್ನು ಕೆಲವರು ಉಳಿಸಿಕೊಂಡಿದ್ದಾರೆ. ನೆಲವನ್ನು ಸಗಣಿಯಿಂದ ಸಾರಿಸುವುದು ಅದರ ಇನ್ನೊಂದು ವಿಶೇಷ. ಈ ರೀತಿಯ ಮನೆಗಳಲ್ಲಿ ಬೇಸಿಗೆಯಲ್ಲೂ ತಣ್ಣಗೆ ಇರುತ್ತದೆ. ಅಟ್ಟದ ಮೇಲೆ ಸಾಕಷ್ಟು ವ್ಯವಸಾಯ ಪರಿಕರ ಅಡಗಿಸಿಡಬಹುದು ಎಂಬುದು ನಿವಾಸಿಗಳ ಅನುಭವದ ಮಾತು.ಕೆಲವರು ಪಕ್ಕಾ ಮನೆ ನಿರ್ಮಿಸಿಕೊಂಡಿದ್ದರೂ; ಹುಲ್ಲಿನ ಮನೆ ಮೋಹ ಬಿಟ್ಟಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹುಲ್ಲಿನ ಮನೆಯಲ್ಲಿ ವಾಸ ಮಾಡುವುದು ಅಪರೂಪವಾದರೂ, ಅವುಗಳನ್ನು ದನದ ಕೊಟ್ಟಿಗೆಯಾಗಿ ಮತ್ತು ರಾತ್ರಿ ಹೊತ್ತಿನಲ್ಲಿ ಕುರಿ, ಮೇಕೆಗಳ ವಾಸಕ್ಕೆ ಬಳಸಲಾಗುತ್ತಿದೆ ಎಂಬುದು ವಾಸ್ತವ.ಗ್ರಾಮೀಣ ಪ್ರದೇಶದಲ್ಲಿ ಹುಲ್ಲಿನ ಮನೆ ಸಂಸ್ಕೃತಿ ಕೊನೆಗೊಳ್ಳುತ್ತಿದೆ. ಆದರೆ ನಗರ ಹಾಗೂ ಪಟ್ಟಣ ಪ್ರದೇಶದ ಅಂಚುಗಳಲ್ಲಿ ಹುಲ್ಲನ್ನು ಬಳಸಿದ ನಿರ್ಮಾಣಗಳು ತಲೆ ಎತ್ತುತ್ತಿವೆ. ಕೆಲವು ಕಡೆ ಡಾಬಾಗಳಲ್ಲಿ ಇಂಥ ಹುಲ್ಲಿನ ನಿರ್ಮಾಣ ಕಾಣಬಹುದು. ಕೆಲವರು ಕಾಚಿ ಹುಲ್ಲಿನಿಂದ ಕಲಾತ್ಮಕ ಕುಟೀರ ನಿರ್ಮಿಸಿಕೊಂಡಿದ್ದಾರೆ. ಇಂದು ಹುಲ್ಲಿನ ಮನೆ ಕಲೆಯ ಕಣ್ಣಲ್ಲೂ ಮಹತ್ವ ಪಡೆದಿದೆ.ವಿಶೇಷವಾಗಿ ಶ್ರೀನಿವಾಸಪುರ ತಾಲ್ಲೂಕಿನ ವಿಶಾಲವಾದ ಮಾವಿನ ತೋಟಗಳಲ್ಲಿ ಕಾಚಿ ಹುಲ್ಲು ನೈಸರ್ಗಿಕವಾಗಿ ಬೆಳೆಯುತ್ತಿತ್ತು. ಆದರೆ ಇಂದು ಮಾವಿನ ತೋಟಗಳನ್ನು ಉತ್ತು ಒಪ್ಪ ಮಾಡುತ್ತಿರುವುದರಿಂದ ಕಾಚಿ ಹುಲ್ಲು ಬೆಳೆಯುತ್ತಿಲ್ಲ. ಆದರೂ ಕೆಲವರು ಕಲಾತ್ಮಕ ಕುಟೀರ ನಿರ್ಮಿಸಲು ನೆರೆಯ ಆಂಧ್ರಪ್ರದೇಶದಿಂದ ತರಿಸಿಕೊಳ್ಳುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.