ಸೋಮವಾರ, ಮೇ 23, 2022
21 °C

ಬೆಂಕಿಯಲ್ಲಿ ಸಂಶಯದ ಹೊಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರ ಕಚೇರಿಗಳೂ ಈಗ ಸುರಕ್ಷಿತ ಅಲ್ಲ. ಮಹಾರಾಷ್ಟ್ರದ ಸಚಿವಾಲಯಕ್ಕೆ ಬಿದ್ದ ಬೆಂಕಿಯಲ್ಲಿ ಅಲ್ಲಿನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಕಚೇರಿಗಳು  ಸುಟ್ಟುಹೋಗಿವೆ. ಅದನ್ನು ಜನತೆ ಮರೆಯಬೇಕೆನಿಸುವಷ್ಟರಲ್ಲಿ ಹೊಸದೆಹಲಿಯ ನಾರ್ತ್‌ಬ್ಲಾಕ್‌ನಲ್ಲಿರುವ ಕೇಂದ್ರ ಗೃಹ ಸಚಿವರ ಕಚೇರಿಯ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರಕಚೇರಿಯಲ್ಲಿಯೂ ಬೆಂಕಿ ಅಪಘಾತ ಸಂಭವಿಸಿತ್ತು.  ಒಂದಾದ ಮೇಲೊಂದರಂತೆ ಬಯಲಾಗುತ್ತಿರುವ  ಭ್ರಷ್ಟಾಚಾರದ ಹಗರಣಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಂಭವಿಸುತ್ತಿರುವ ಬೆಂಕಿ ಅನಾಹುತಗಳಿಗೆ ನೇರವಾದ ಸಂಬಂಧ ಇಲ್ಲದೆಯೂ ಇರಬಹುದು.ಆದರೆ ಅಂತಹದ್ದೊಂದು ಗುಮಾನಿ ಸಾರ್ವತ್ರಿಕವಾಗಿ ಹುಟ್ಟಿಕೊಂಡಿದೆ. ಬೆಂಕಿ ಅನಾಹುತಗಳಿಗೆ ಮುಖ್ಯವಾಗಿ ಎರಡು ಕಾರಣಗಳು. ಮೊದಲನೆಯದು ಸುರಕ್ಷತಾ ಕ್ರಮದ ಬಗೆಗಿನ ನಿರ್ಲಕ್ಷ್ಯ, ಎರಡನೆಯದು ದುರುದ್ದೇಶಪೂರಿತ ಸಂಚು. ಮುಂಬೈ ಮತ್ತು  ಬೆಂಗಳೂರುಗಳಲ್ಲಿ ಬೆಂಕಿ ಅಪಘಾತಗಳು ನಡೆದಾಗ ಎರಡನೆಯ ಕಾರಣದ ಬಗ್ಗೆಯೇ ಹೆಚ್ಚು ಚರ್ಚೆ ನಡೆದಿದೆ.ಮುಂಬೈ ಸಚಿವಾಲಯದ ಕಚೇರಿಗಳು ಬೆಂಕಿಗೆ ಆಹುತಿಯಾದಾಗ ಆದರ್ಶ ಹೌಸಿಂಗ್ ಸೊಸೈಟಿ ಹಗರಣವನ್ನೇ ಎಲ್ಲರೂ ನೆನಪು ಮಾಡಿಕೊಂಡದ್ದು. ಅದೇ ರೀತಿ ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಅಪಘಾತ ಸಂಭವಿಸಿದಾಗ ಆತಂಕ ವ್ಯಕ್ತವಾಗಿದ್ದು ನಕಲಿಬಿಲ್‌ಗಳ ಮೂಲಕ ನಡೆಸಿದ್ದ 1539 ಕೋಟಿ ರೂಪಾಯಿ ಹಗರಣದ ಕಡತಗಳ ಬಗ್ಗೆ.  ಬಹಳಷ್ಟು ಭ್ರಷ್ಟಾಚಾರದ ಹಗರಣಗಳಲ್ಲಿ ಆರೋಪಿಗಳು ಖುಲಾಸೆಯಾಗುವುದು ಸಾಕ್ಷ್ಯಗಳ ಕೊರತೆಯಿಂದ ಎನ್ನುವುದನ್ನು ಮರೆಯಲಾಗದು.ಬೆಂಕಿ ಅಪಘಾತಗಳ ವಿರುದ್ಧದ ಸುರಕ್ಷತಾಕ್ರಮಗಳಿಗೆ ಸಂಬಂಧಿಸಿದಂತೆ ಭಾರತ ಇನ್ನೂ ಹಿಂದುಳಿದಿದೆ. ಈ ನಿರ್ಲಕ್ಷ್ಯವನ್ನು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳೆರಡರಲ್ಲೂ ಕಾಣಬಹುದು. ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ಮಾಣಗೊಂಡಿರುವ ಬಹುಮಹಡಿ ಕಟ್ಟಡಗಳು, ಗಾಳಿಗೆ ತೂರಲಾದ ಸುರಕ್ಷತಾ ಕ್ರಮಗಳು, ವಾಹನಗಳು ಪ್ರವೇಶಿಸಲು ಸಾಧ್ಯವೇ ಇಲ್ಲದಂತಹ ಇಕ್ಕಟ್ಟಾದ ರಸ್ತೆಗಳು, ಸಿಬ್ಬಂದಿ-ಸಲಕರಣೆ-ತರಬೇತಿ ಕೊರತೆಯಿಂದ ನರಳುತ್ತಿರುವ ಅಗ್ನಿಶಾಮಕ ದಳ..ಹೀಗೆ ಸಮಸ್ಯೆಗಳು ಹಲವಾರು.ಮುಂಬೈನ ಸಚಿವಾಲಯಕ್ಕೆ ಹತ್ತಿದ ಬೆಂಕಿ ಮತ್ತು ಅದನ್ನು ನಂದಿಸಲು ಆಗಿರುವ ವಿಳಂಬಕ್ಕೆ ಇವೆಲ್ಲವೂ ಕಾರಣ. ಸರ್ಕಾರದ ಎಲ್ಲ ಕಚೇರಿಗಳಲ್ಲಿ ಪ್ರತಿವರ್ಷ `ಬೆಂಕಿ ಅಪಘಾತ ಪರಿಶೋಧನೆ~ಯನ್ನು ಕಡ್ಡಾಯವಾಗಿ ನಡೆಸಬೇಕೆಂಬ ಕಾನೂನು ಇದ್ದರೂ ಸರ್ಕಾರವೇ ಅದನ್ನು ಪಾಲಿಸುತ್ತಿಲ್ಲ. ಕಾಗದದ ಮೇಲಿರುವ ಈ ಎಲ್ಲ  ಕ್ರಮಗಳ ಹೊರತಾಗಿಯೂ ಸರ್ಕಾರಿ ಇಲಾಖೆಗಳ ಕಡತಗಳು ಸಂಪೂರ್ಣ ಸುರಕ್ಷಿತ ಅಲ್ಲ. ಇದಕ್ಕಾಗಿ ಈ ಕಡತಗಳನ್ನು ಸಮಗ್ರವಾಗಿ ಡಿಜಿಟೈಸ್ ಮಾಡುವ ಕೆಲಸ ನಡೆಯಬೇಕಾಗಿದೆ.ಆಡಳಿತದ ಕಂಪ್ಯೂಟರೀಕರಣ ಪ್ರಾರಂಭವಾಗಿ ವರ್ಷಗಳೇ ಕಳೆದರೂ ಅದನ್ನು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗಿಲ್ಲ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿಯೇ ಕಂದಾಯ ಇಲಾಖೆಯೊಂದನ್ನು ಹೊರತುಪಡಿಸಿ ಬೇರೆ ಇಲಾಖೆಗಳ ದಾಖಲೆಪತ್ರಗಳು ಇನ್ನೂ ಕಡತಗಳಲ್ಲಿಯೇ ಇವೆ. ಬೆಂಕಿ ಬಿದ್ದಾಗ ಬಾವಿ ತೋಡುವ ಹಳೆಯ ಜಾಯಮಾನಕ್ಕೆ ಜೋತುಬೀಳದೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಚೇರಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.