ಶನಿವಾರ, ಮಾರ್ಚ್ 6, 2021
32 °C

ಬೆಳ್ಳೂರಿನಲ್ಲಿ ಈಗ ಕೊಕ್ಕರೆಗಳ ಕಲರವ

ಬಸವರಾಜ ಹವಾಲ್ದಾರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ಳೂರಿನಲ್ಲಿ ಈಗ ಕೊಕ್ಕರೆಗಳ ಕಲರವ

ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂ­ಕಿನ ಕೊಕ್ಕರೆ ಬೆಳ್ಳೂರಿನಲ್ಲಿ ಈಗ ಕೊಕ್ಕರೆ­ಗಳ ಕಲರವ ಜೋರಾ­ಗಿದೆ. ದೇಶ, ವಿದೇಶ­ಗಳಿಂದ ಬಂದ ಅತಿಥಿ­ಗಳು ಸಂತಾನಾ­ಭಿವೃದ್ಧಿಗಾಗಿ ಗೂಡು ಕಟ್ಟಿ­ಕೊ­ಳ್ಳುವ ಕೆಲಸದಲ್ಲಿ ನಿರತವಾಗಿವೆ.ಕೊಕ್ಕರೆಗಳು ಬಂದಿರುವ ಸುದ್ದಿ ತಿಳಿ­ದಿ­ರುವ ಪ್ರವಾ­ಸಿ­­ಗರು ಕೊಕ್ಕರೆ ಬೆಳ್ಳೂರಿಗೆ ಲಗ್ಗೆ ಇಡುತ್ತಿ­ದ್ದಾರೆ. ಶನಿವಾರ ಹಾಗೂ ಭಾನುವಾರ ಪ್ರವಾಸಿ­ಗರ ಸಂಖ್ಯೆ ಹೆಚ್ಚುತ್ತಿದ್ದು, ಅವುಗಳನ್ನು ವೀಕ್ಷಿಸು­ವು­ದಲ್ಲದೇ, ಕ್ಯಾಮೆರಾಗಳಲ್ಲಿ ಸೆರೆ ಹಿಡಿದು­ಕೊಂಡು ಆನಂದಿಸುತ್ತಿದ್ದಾರೆ.ಹೆಜ್ಜಾರ್ಲೆ (ಪೆಲಿಕಾನ್‌) ಹಾಗೂ ಬಣ್ಣದ ಕೊಕ್ಕರೆ (ಪೆಂಟೆಡ್‌ ಸ್ಟಾರ್ಕ್‌), ಬೂದು ಕೊಕ್ಕರೆ (ಹೆರಾನ್ಸ್) ಸೇರಿದಂತೆ ಹಲವಾರು ಬಗೆಯ ಹಕ್ಕಿ­ಗಳು ಜೈಪುರ, ಜೋಧಪುರ ಅಲ್ಲದೇ ಸೈಬೇ­ರಿಯಾ, ಆಸ್ಟ್ರೇಲಿಯಾದಿಂದಲೂ ಇಲ್ಲಿಗೆ ವಲಸೆ ಬರುತ್ತವೆ.ಗ್ರಾಮದಲ್ಲಿನ ಮರಗಳಲ್ಲಿ ನೋಡಿದ­ಲ್ಲೆಲ್ಲಾ ಹಕ್ಕಿ­ಗಳೇ ಕಾಣಸಿಗುತ್ತಿವೆ. ಸಾವಿರಕ್ಕೂ ಹೆಚ್ಚು ಹಕ್ಕಿ­ಗ­ಳು ಬೀಡು ಬಿಟ್ಟಿವೆ. ಪ್ರತಿ ವರ್ಷದಂತೆ ಹಕ್ಕಿಗಳು ಬಂದಿ­­­ರು­ವುದು ಗ್ರಾಮಸ್ಥರಲ್ಲಿಯೂ ಸಂತಸ ತಂದಿದೆ.ಪ್ರತಿ ವರ್ಷ ಚಳಿಗಾಲದ ಡಿಸೆಂಬರ್‌­ನಿಂದ ಬರುವ ಕೊಕ್ಕರೆಗಳು ಜೂನ್‌­ವರೆಗೂ ಇರುತ್ತವೆ. ನಂತರವೂ ಕೆಲವು ಬಿಡಯಾಗಿ ಕಾಣಿಸಿಕೊಳ್ಳುವು­ದುಂಟು. ಗ್ರಾಮದಲ್ಲಿರುವ ಹುಣಸೆ, ಆಲದ ಮರಗಳೇ ಇವುಗಳ ವಾಸಸ್ಥಾನಗಳು.ಸಂತಾನಾಭಿವೃದ್ಧಿ: ಸಂತಾನ ಅಭಿವೃದ್ಧಿಗಾಗಿಯೇ ದೂರದ ನಾಡಿನಿಂದ ಕೊಕ್ಕರೆಗಳು ಇಲ್ಲಿಗೆ ಬರು­ತ್ತವೆ. ಡಿಸೆಂಬರ್‌ನಲ್ಲಿ ಬರಲಾರಂಭಿ­ಸುವ ಅವು­ಗಳು, ನಂತರ ಮರಗಳಲ್ಲಿ ಗೂಡು­ಗಳನ್ನು ಕಟ್ಟಿ­ಕೊಳ್ಳು­ತ್ತವೆ. ಮರಿ­ಗಳಿಗೆ ಜನ್ಮ ನೀಡಿ, ಅವು ಸ್ವಲ್ಪ ದೊಡ್ಡ­ವಾಗುತ್ತಿ­ದ್ದಂತೆಯೇ ಅವುಗಳೊಂದಿಗೆ ಮರಳಿ ಹೊರಡುತ್ತವೆ.ಗ್ರಾಮದಲ್ಲಿಯೇ ವಾಸ್ತವ್ಯ: ಜನ ವಸತಿ ಇರುವ ಕಡೆ ಹಕ್ಕಿಗಳು ದೂರ ಗೂಡು ಕಟ್ಟುವುದು ಸಾಮಾನ್ಯ. ಆದರೆ, ಇಲ್ಲಿ ಗ್ರಾಮದ ಹೊರಗಡೆ ಪ್ರದೇಶ­ದಲ್ಲಿ ಸಾಕಷ್ಟು ಮರಗಳಿದ್ದರೂ, ಕೊಕ್ಕರೆ­ಗಳು ಅಲ್ಲಿ ಗೂಡು ಕಟ್ಟುವುದಿಲ್ಲ. ಗ್ರಾಮದ ಮಧ್ಯ­ದ­ಲ್ಲಿ­ರುವ ಮರಗಳಲ್ಲಿಯೇ ವಾಸಿಸುತ್ತವೆ. ಗ್ರಾಮದ ಜನರ ನಡುವೆಯೇ ಗೂಡು ಕಟ್ಟಿಕೊಳ್ಳು­ವುದು ವಿಶೇಷ.‘ಹಲವಾರು ವರ್ಷಗಳಿಂದ ಬರುತ್ತಿರುವ ಕೊಕ್ಕರೆ­ಗಳು ನಮ್ಮೊಂದಿಗೆ ಒಂದಾಗಿವೆ. ಅವುಗಳಿಗೆ ನಮ್ಮೂರಿನ ಯಾರೂ ತೊಂದರೆ ನೀಡುವುದಿಲ್ಲ. ಅವು­ಗಳೂ ತಮ್ಮಷ್ಟಕ್ಕೆ ತಾವಿರುತ್ತವೆ. ಪ್ರವಾಸಿ­ಗರೂ ತೊಂದರೆ ನೀಡದಂತೆ ನೋಡಿಕೊಳ್ಳುತ್ತೇವೆ’ ಎನ್ನುತ್ತಾರೆ ಗ್ರಾಮದ ಕುಮಾರ್‌.ಎಲ್ಲಿದೆ ಬೆಳ್ಳೂರು: ಬೆಂಗಳೂರು–ಮೈಸೂರಿಗೆ ಹೋಗುವ ಮಾರ್ಗದಲ್ಲಿ ಮದ್ದೂರಿಗಿಂತ ಮುಂಚೆಯೇ ಎಡಗಡೆ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ಎಂಬ ಫಲಕ ಕಾಣುತ್ತದೆ. ಅಲ್ಲಿಂದ 12 ಕಿ.ಮೀ. ದೂರ ಸಾಗಿದರೆ, ಕೊಕ್ಕರೆ ಬೆಳ್ಳೂರು ಸಿಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.