ಗುರುವಾರ , ಜೂನ್ 24, 2021
25 °C

ಬೇರೆ ಬೇರೆ ‘ಕ್ಷೇತ್ರ’ದವರಿಗೆ ಮಣೆ

ಗಾಣಧಾಳು ಶ್ರೀಕಂಠ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ರಾಜಕೀಯಕ್ಕೆ ಹೊಸಬರಾದರೂ, ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿದರೆ ಸಾಕು. ಅಂಥವರ ಬಗ್ಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರಿಗೆ ಅನುಕಂಪ ಜಾಸ್ತಿ. ಗೆಲ್ಲಿಸಿ, ದೆಹಲಿಗೆ ಕಳುಹಿಸುತ್ತಾರೆ. ಇದು ಈ ಕ್ಷೇತ್ರದಲ್ಲಿ ಕಳೆದ 4–5 ಚುನಾವಣೆಗಳಿಂದ ಸಂಪ್ರದಾಯ­ದಂತೆ ನಡೆದು­­ಕೊಂಡು ಬಂದಿದೆ. ಪ್ರತಿ ಚುನಾವಣೆಯಲ್ಲಿ ಕುತೂಹಲ, ಅಭಿವೃದ್ಧಿಯ ಕಲ್ಪನೆಯಲ್ಲಿ ಮತದಾರರು ಮತ ಚಲಾಯಿ­ಸುತ್ತಾ, ಹೊಸ ವ್ಯಕ್ತಿಗಳಿಗೆ ರಾಜಕೀಯ ಹುಟ್ಟು ನೀಡಿದ್ದಾರೆ.ಖಾಕಿ ಖದರ್..: ಅದು 1996ರ ಲೋಕಸಭಾ ಚುನಾವಣೆ. ಜಾತ್ಯತೀತ ಜನತಾ ದಳದವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹುಡುಕಾಟದಲ್ಲಿದ್ದರು. ಅದೇ ವೇಳೆ ಹಿರಿಯ ಪೊಲೀಸ್‌ ಅಧಿಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದ ಪಿ.ಕೋದಂಡರಾಮಯ್ಯ ಕೂಡ ರಾಜಕೀಯ ಕ್ಷೇತ್ರ ಪ್ರವೇಶಕ್ಕೆ ಆಸಕ್ತರಾಗಿದ್ದರು. ಅವರು ಮೂಲತಃ ಆಂಧ್ರದವರು. ಆದರೆ ಈ ಭಾಗದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಯಾದವ (ಗೊಲ್ಲ) ಸಮುದಾಯದವರು. ಅವರನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪಕ್ಷಕ್ಕೆ ಆಹ್ವಾನಿಸಿದರು.ಗೌಡರ ಜೊತೆಗೂಡಿದ ಕೋದಂಡರಾಮಯ್ಯ ಚಿತ್ರದುರ್ಗದಲ್ಲಿ ಮೊದಲ ಬಾರಿ ರಾಜ್ಯ ಮಟ್ಟದ ಯಾದವ ಸಮಾವೇಶ ನಡೆಸಿ, ಚುನಾವಣೆಗೆ ಸ್ಪರ್ಧಿಸಿದರು. ಐಪಿಎಸ್ ಅಧಿಕಾರಿ ಎಂಬ ‘ವಿಶೇಷಣ’ ಪರಿಗಣಿಸಿದ ಮತದಾರರು, ಕ್ಷೇತ್ರದ ಪ್ರಗತಿಯ ಕನಸಿನೊಂದಿಗೆ ಅವರನ್ನು ಕಾಂಗ್ರೆಸ್‌ನ ಸಿ.ಪಿ.ಮೂಡಲ­ಗಿರಿಯಪ್ಪ ವಿರುದ್ಧ ಗೆಲ್ಲಿಸಿದರು!ಸಿನಿಮಾ ರಂಗು..: 1999ರ ಲೋಕಸಭಾ ಚುನಾವಣೆ ಬಂತು. ಆಗ ಸಂಯುಕ್ತ ಜನತಾ ದಳದವರು ಚಿತ್ರದುರ್ಗ ಕ್ಷೇತ್ರಕ್ಕೆ ಅಭ್ಯರ್ಥಿ ಹುಡುಕಾಟದಲ್ಲಿದ್ದರು. ಅದೇ ವೇಳೆ ಚಿತ್ರದುರ್ಗದ ತುರುವನೂರು ರಸ್ತೆಯಲ್ಲಿನ ವೆಂಕಟರಮಣ ದೇವಸ್ಥಾನದಲ್ಲಿ ನಟ ಶಶಿಕುಮಾರ್ ‘ಹಾಲಪ್ಪ’ ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಸಿನಿಮಾ ಪ್ರೀತಿಯ ಜೆಡಿಯು ಮುಖಂಡ­ರಾದ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಜೀವರಾಜ್ ಆಳ್ವ ಮುಂತಾದವರು ನಟ ಶಶಿಕುಮಾರ್ ಸಿನಿಮಾ ಜನಪ್ರಿಯತೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ತೀರ್ಮಾನಿ­ಸಿ­ದರು. ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಿದರು.ನಾಯಕ ಸಮುದಾಯದ ಶಶಿ­ಕುಮಾರ್ ಅವರ ಸಿನಿಮಾ ಜನಪ್ರಿಯ­ತೆಗೆ ಮನಸೋತ ಕ್ಷೇತ್ರದ ಜನತೆ ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿದರು.ನಿವೃತ್ತ ನ್ಯಾಯಮೂರ್ತಿ: 2003ರ ಆಸುಪಾಸು. ಒರಿಸ್ಸಾದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ಆಗಷ್ಟೇ ನಿವೃತ್ತಿ­ಯಾದ ಎನ್.ವೈ.ಹನುಮಂತಪ್ಪ ತವರು ಜಿಲ್ಲೆಗೆ (ಚಿತ್ರದುರ್ಗ) ವಾಪಸಾ­ಗಿದ್ದರು. ಆಗ ಎಸ್.ಎಂ.ಕೃಷ್ಣ ಮುಖ್ಯ­ಮಂತ್ರಿ. ಅವರು ಒಳಮೀಸಲಾತಿ ಆಯೋ­ಗದ ಅಧ್ಯಕ್ಷರಾಗಿ ಹನುಮಂತಪ್ಪ ಅವ­ರನ್ನು ನೇಮಿಸಿದರು. ಮುಂದೆ 2004ರ ಲೋಕಸಭಾ ಚುನಾವಣೆ­ಯಲ್ಲಿ ಅವರಿಗೇ ಟಿಕೆಟ್‌ ನೀಡಿದರು. ‘ಹೈಕೋರ್ಟ್ ನ್ಯಾಯಮೂರ್ತಿ, ನಾಯಕ ಜನಾಂಗ­ದವರು, ಪ್ರತಿಭಾನ್ವಿ­ತರು, ಅಭಿವೃದ್ಧಿ ಪರ ಚಿಂತಕರು’ ಎಂಬ ವಿಶೇಷಣದೊಂದಿಗೆ ಹನುಮಂತಪ್ಪ ಗೆದ್ದರು.‘ಟೆಕ್ಕಿ’ಗೂ ರತ್ನಗಂಬಳಿ: 2009 ಚುನಾವಣೆಯಲ್ಲಿ ಬಿಜೆಪಿ ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿತ್ತು. ಇದೇ ವೇಳೆ ಅಮೆರಿಕ­ದಲ್ಲಿ ಎಂಜಿನಿಯರ್ ಆಗಿದ್ದ ಜನಾರ್ದನ ಸ್ವಾಮಿ ಮರಳಿ ಬಂದು ಬಿಜೆಪಿ ನಾಯಕರಿಗೆ ಪರಿಚಯವಾದರು. ಇವರು ಮೂಲತಃ ಚಿತ್ರದುರ್ಗ ಸಮೀಪದ ಮಾನಂಗಿಯವರು. ಭೋವಿ ಸಮುದಾ­ಯದ ವ್ಯಕ್ತಿ, ವಿದ್ಯಾವಂತ, ವಿದೇಶ­ದಲ್ಲಿದ್ದವರು ಎಂಬುದು ಅವರಿಗೆ ವರವಾಯಿತು.ಆ ವೇಳೆಗೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಚಿತ್ರದುರ್ಗ­ದಿಂದ ಜನಾರ್ದನ ಸ್ವಾಮಿ ಅವರಿಗೆ ಟಿಕೆಟ್‌ ಕೊಟ್ಟರು. ಆಗ ‘ಭದ್ರಾ ಮೇಲ್ದಂಡೆ ಯೋಜನೆ’ ಚರ್ಚೆ­ಯಲ್ಲಿತ್ತು. ‘ಯೋಜನೆಗೆ ಹಣ ಬಿಡುಗಡೆಗೆ ಸಹಿ ಹಾಕಿದ್ದೇನೆ. ಜನಾರ್ದನ ಸ್ವಾಮಿ ಗೆಲ್ಲಿಸಿದರೆ, ಯೋಜನೆ ತ್ವರಿತಗತಿಯಲ್ಲಿ ಆರಂಭವಾಗುತ್ತದೆ’ ಎಂದು ಯಡಿಯೂರಪ್ಪ ಪ್ರಚಾರ ಭಾಷಣ ಮಾಡಿದರು. ‘ನೀರಾವರಿಯ ಭರವಸೆ, ಅಮೆರಿಕದ ಎಂಜಿನಿಯರ್ ಕ್ಷೇತ್ರವನ್ನು ಬದಲಾಯಿಸ­ಬಹುದೆಂಬ ನಂಬಿಕೆ, ಜೊತೆ­ಗೊಂದಿಷ್ಟು ಕುತೂಹಲ­ದಿಂದ ಕ್ಷೇತ್ರಕ್ಕೆ ಪರಿಚಯ­ವಿರದ ಅಭ್ಯರ್ಥಿ ಜನಾರ್ದನ ಸ್ವಾಮಿ ಅವರನ್ನು ಮತದಾರರು 1,35,656 ಮತಗಳ ಅಂತರ­ದಿಂದ ಗೆಲ್ಲಿಸಿದರು.– ಹೀಗೆ ಕ್ಷೇತ್ರಕ್ಕೆ ಅಪರಿಚಿತರಾಗಿರುವ­ವರನ್ನು ಗೆಲ್ಲಿಸಿದರೂ ಅವರು ಕ್ಷೇತ್ರಕ್ಕೆ ನೀಡಿರುವ ಅಭಿವೃದ್ಧಿ ಕೊಡುಗೆಗಳ ಬಗ್ಗೆ ಮತ­ದಾರ­ರಿಗೆ ಅಷ್ಟೇನೂ ಸಮಾಧಾನವಿಲ್ಲ. ನಟ ಶಶಿಕುಮಾರ್ ಜಿಲ್ಲೆಯ ವಿವಿಧ ಕಡೆ ಬಸ್ ನಿಲ್ದಾಣಗಳನ್ನು ನಿರ್ಮಿಸಿರು­ವು­ದನ್ನು ಕೆಲವರು ನೆನಪಿಸಿಕೊಳ್ಳುತ್ತಾರೆ. ಚಳ್ಳಕೆರೆ­ಯಲ್ಲಿ ‘ವಿಜ್ಞಾನ ನಗರ’ ಸ್ಥಾಪನೆ ಹಾಗೂ ದಾವಣಗೆರೆ–ಬೆಂಗ­ಳೂರು ನೇರ ರೈಲು ಮಾರ್ಗ ಯೋಜನೆಗೆ ಚುರುಕು ನೀಡಿದ ವಿಚಾರ­ದಲ್ಲಿ ಜನಾರ್ದನ ಸ್ವಾಮಿ ಅವರ ಹೆಸರನ್ನು ಪ್ರಸ್ತಾಪಿ­ಸು­ತ್ತಾರೆ.ತನ್ನದಲ್ಲದ ಯೋಜನೆಗಳನ್ನು ತಾನೇ ತಂದಿರುವುದಾಗಿ ಹೇಳಿ­­­­ಕೊ­­ಳ್ಳು­ತ್ತಾರೆಂದೂ ಹಾಲಿ ಸಂಸದರನ್ನು ಅಣಕಿಸುವವರೂ ಇದ್ದಾರೆ. ಈ ಸಲ ಕಾಂಗ್ರೆಸ್‌ ಟಿಕೆಟ್‌ ಪಡೆದ ಬಿ.ಎನ್‌. ಚಂದ್ರಪ್ಪ ಕೂಡ ಕ್ಷೇತ್ರದ ಹೊರಗಿನವರು. ಚಿಕ್ಕಮಗಳೂರು ಜಿಲ್ಲೆಯ ಮೂಡಿ­ಗೆರೆಯವರು.ಈ ಕ್ಷೇತ್ರದ ಇನ್ನೊಂದು ವಿಶೇಷ ಎಂದರೆ 1996ರ ನಂತರ ಇಲ್ಲಿ ಗೆದ್ದವರಿಗೆಲ್ಲ ಎರಡನೇ ಬಾರಿ ಅವಕಾಶ ಸಿಕ್ಕಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.