ಶನಿವಾರ, ಫೆಬ್ರವರಿ 27, 2021
19 °C

ಬ್ಯಾಸ್ಕೆಟ್‌ಬಾಲ್: ಫೈನಲ್‌ಗೆ ಉತ್ತರಾಖಂಡ, ರೈಲ್ವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಸ್ಕೆಟ್‌ಬಾಲ್: ಫೈನಲ್‌ಗೆ ಉತ್ತರಾಖಂಡ, ರೈಲ್ವೆ

ಮೈಸೂರು: ಹಾಲಿ ಚಾಂಪಿಯನ್‌ ಉತ್ತರಾಖಂಡ ತಂಡದವರ ಗೆಲುವಿನ ನಾಗಾಲೋಟ ಮುಂದುವರಿದಿದೆ. ಕೊನೆಯ ಕ್ಷಣದಲ್ಲಿ ಚಾಣಾಕ್ಷ ಆಟದ ಮೂಲಕ ಸತತ ಎರಡನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಾ ಸಾಗಿದ ಪಂದ್ಯದಲ್ಲಿ ಗೆಲುವಿನ ರೂವಾರಿ ಎನಿಸಿದ್ದು ನಾಯಕ ವಿಶೇಷ್‌ ಭೃಗುವಂಶಿ.ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ 66ನೇ ರಾಷ್ಟ್ರೀಯ ಸೀನಿಯರ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಸೆಮಿಫೈನಲ್‌ನಲ್ಲಿ ಶುಕ್ರವಾರ ಉತ್ತರಾಖಂಡ 71–69 ಪಾಯಿಂಟ್‌ ಗಳಿಂದ ತಮಿಳುನಾಡು ತಂಡವನ್ನು ಮಣಿಸಿತು. ಲೀಗ್ ಪಂದ್ಯಗಳಲ್ಲಿ ತೋರಿದ ಅಮೋಘ ಪ್ರದರ್ಶನದಿಂದ ತಮಿಳು ನಾಡು ತಂಡದ ಮೇಲೆ ಹೆಚ್ಚು ಭರವಸೆ ಇಡಲಾಗಿತ್ತು. ಆದರೆ, ಮಹತ್ವದ ಪಂದ್ಯದ ಕೊನೆಯಲ್ಲಿ ಎಡವಟ್ಟು ಮಾಡಿಕೊಂಡರು.ಉತ್ತರಾಖಂಡದ ಆಕ್ರಮಣಕಾರಿ ಹಾಗೂ ಯೋಜನಾಬದ್ಧ ಆಟದ ಎದುರು ತಮಿಳುನಾಡು ತಂಡದ ತಂತ್ರ ಆರಂಭದಲ್ಲಿ ಯಶಸ್ಸು ಕಂಡಿತು. ಮೊದಲ ಎರಡು ಕ್ವಾರ್ಟರ್‌ಗಳಲ್ಲಿಯೇ ಅದು ಗೊತ್ತಾಯಿತು. ಏಕೆಂದರೆ ವಿರಾಮದ ವೇಳೆಗೆ ತಮಿಳುನಾಡು ತಂಡದವರು 38–33 ಪಾಯಿಂಟ್‌ ಗಳಿಂದ ಮುಂದಿದ್ದರು. ಮೂರನೇ ಕ್ವಾರ್ಟರ್‌ನಲ್ಲೂ ತಮಿಳುನಾಡು ತಂಡದವರದ್ದೇ ಮೇಲುಗೈ. ಈ ತಂಡದ ರಿಕಿನ್‌ (20 ಪಾಯಿಂಟ್‌), ಪ್ರಥಮ್‌ ಸಿಂಗ್ (15 ಪಾಯಿಂಟ್‌) ಎದುರಾಳಿಯ ಕೋಟೆ ಯನ್ನು ಸೀಳಿ ಉತ್ತಮ ಪ್ರದರ್ಶನ ತೋರಿದರು. ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ಪಂದ್ಯದ ಹಣೆಬರಹವೇ ಬದಲಾಗಿ ಹೋಯಿತು.57–47 ಪಾಯಿಂಟ್‌ಗಳಿಂದ ಮುಂದಿದ್ದ ತಮಿಳುನಾಡು ಒಮ್ಮೆಲೇ ಎಡವಿತು. ಇದಕ್ಕೆ ಕಾರಣವಾಗಿದ್ದು ರಾಷ್ಟ್ರೀಯ ತಂಡದ ನಾಯಕರೂ ಆಗಿರುವ ಉತ್ತರಾಖಂಡದ ವಿಶೇಷ್‌ ಭೃಗುವಂಶಿ ಹಾಗೂ ಯದ್ವಿಂದರ್‌ ಸಿಂಗ್‌. ಇವರಿಬ್ಬರು ಪದೇಪದೇ ಎದುರಾಳಿಯ ಆವರಣದೊಳಗೆ ಲಗ್ಗೆ ಇಟ್ಟು ತಲಾ 21 ಪಾಯಿಂಟ್‌ ಕಲೆ ಹಾಕಿದರು. ಕೊನೆಯ ಕ್ವಾರ್ಟರ್‌ನಲ್ಲಿ 24 ಪಾಯಿಂಟ್‌ ಗಳಿಸಿ ಗೆಲುವು ಒಲಿಸಿ ಕೊಂಡರು. ಈ ಹಂತದಲ್ಲಿ ತಮಿಳು ನಾಡು ಗಳಿಸಿದ್ದು ಕೇವಲ 12 ಪಾಯಿಂಟ್‌. ಮತ್ತೊಂದು ಸೆಮಿಫೈನಲ್‌ ಪಂದ್ಯ ದಲ್ಲಿ ಸರ್ವೀಸಸ್‌ ತಂಡದವರು 83–66 ಪಾಯಿಂಟ್‌ಗಳಿಂದ ಪಂಜಾಬ್‌ ತಂಡವನ್ನು ಮಣಿಸಿ ಅಂತಿಮ ಘಟ್ಟ ಪ್ರವೇಶಿಸಿದರು. ತೆಲಂಗಾಣದ ಹೋರಾಟ ಅಂತ್ಯ: ಮಹಿಳೆಯರ ವಿಭಾಗದಲ್ಲಿ ರೈಲ್ವೆ ತಂಡ ದವರು 78–50 ಪಾಯಿಂಟ್‌ ಗಳಿಂದ ಗೆದ್ದು ಫೈನಲ್‌ ಪ್ರವೇಶಿಸಿದರು. ಅಮೋಘ ಪ್ರದರ್ಶನದ ಮೂಲಕ ಟೂರ್ನಿಯಲ್ಲಿ ಮಿಂಚು ಹರಿಸಿದ್ದ ತೆಲಂಗಾಣ ತಂಡದವರು ಸೆಮಿಫೈನಲ್‌ ನಲ್ಲಿ ಎಡವಿದರು.38–33 ಪಾಯಿಂಟ್‌ ಗಳಿಂದ ಮುಂದಿದ್ದ ರೈಲ್ವೆ ತಂಡದವರು ದ್ವಿತೀಯಾರ್ಧದಲ್ಲೂ ಪಾರಮ್ಯ ಮೆರೆದರು. ಈ ತಂಡದ ಅನಿತಾ ಪಾಲ್‌ (20 ಪಾಯಿಂಟ್‌) ಉತ್ತಮ ಗುರಿ ಎಸೆತದ ಪ್ರದರ್ಶನ ನೀಡಿದರು. ತೆಲಂಗಾಣ ತಂಡದ ಪಿ. ದಿವ್ಯಾ (21)  ಪ್ರಯತ್ನ ಸಾಕಾಗಲಿಲ್ಲ.ಇಂದಿನ ಫೈನಲ್‌: ಪುರುಷರು: ಸರ್ವೀಸಸ್‌ ಹಾಗೂ ಉತ್ತರಾಖಂಡ. ಮಹಿಳೆಯರು: ರೈಲ್ವೆ ಹಾಗೂ ಕೇರಳ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.