ಶುಕ್ರವಾರ, ಜೂನ್ 25, 2021
30 °C

ಭಾನುವಾರ, 18-3-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರಿಕ್ಷ ಶೋಧನೆ ಕ್ಷೇತ್ರದಲ್ಲಿ ಅಮೆರಿಕ-ರಷ್ಯ ಸಹಕಾರ

ವಾಷಿಂಗ್ಟನ್, ಮಾ. 17- ಹವಾಮಾನ ಮುನ್ಸೂಚನೆಗಾಗಿ ಜತೆಗೂಡಿ ಅಂತರಿಕ್ಷ ಯಾನದ ಉಪಗ್ರಹಗಳನ್ನು ಹಾರಿ ಬಿಡುವುದೂ ಸೇರಿ ಆರು ಅಂಶಗಳ ಅಂತರಿಕ್ಷ ಯಾನ ಸಹಕಾರ ಕಾರ್ಯಕ್ರಮವೊಂದನ್ನು ಅಧ್ಯಕ್ಷ ಕೆನೆಡಿಯವರು ರಷ್ಯಾ ಪ್ರಧಾನಮಂತ್ರಿ ನಿಕಿಟಾ ಖ್ರುಶ್ಚೋವರಿಗೆ ಸೂಚಿಸಿದ್ದಾರೆ.ಅಧ್ಯಕ್ಷರು ಈ ಸಲಹೆಗಳನ್ನುಳ್ಳ ಪತ್ರವನ್ನು ಖ್ರುಶ್ಚೋವರಿಗೆ ಮಾರ್ಚ್ 7 ರಂದು ಕಳಿಸಿದರೆಂದೂ ಶ್ವೇತಭವನವು ಇಂದು ತಿಳಿಸಿತು.ಕರ್ನಲ್ ಜಾನ್‌ಗ್ಲೆನ್‌ರ ಯಶಸ್ವಿ ಅಂತರಿಕ್ಷ ಯಾನಕ್ಕಾಗಿ ಅಭಿನಂದಿಸಿ ಅಂತರಿಕ್ಷ ಕಾರ್ಯಕ್ರಮಗಳಲ್ಲಿ ರಷ್ಯ-ಅಮೆರಿಕ ಸಹಕಾರವಿರಲೆಂದು ಸೂಚಿಸಿದ್ದ ಖ್ರುಶ್ಚೋವರ ಪತ್ರಕ್ಕೆ ಉತ್ತರವಾಗಿ ಅಧ್ಯಕ್ಷರು ಈ ಪತ್ರವನ್ನು ಕಳಿಸಿದ್ದಾರೆ.

ಅಣು ಪ್ರಯೋಗಗಳು ಬೇಡ ಎಂದು ರಾಷ್ಟ್ರಗಳಿಗೆ ಒತ್ತಾಯ

ಜಿನೀವಾ, ಮಾ. 17- ಕೊನೇ ಪಕ್ಷ ಸಮ್ಮೇಳನದ ಅವಧಿಯಲ್ಲಾದರೂ ಅಣು ಶಕ್ತಿಶಾಲಿ ದೇಶಗಳು ಪ್ರಯೋಗಗಳನ್ನು ನಡೆಸಬಾರದೆಂದು 17 ರಾಷ್ಟ್ರಗಳ ನಿಶ್ಶಸ್ತ್ರೀಕರಣ ಸಮ್ಮೇಳನದ ತಟಸ್ಥ ರಾಷ್ಟ್ರಗಳು ಮುಂದಿನ ವಾರ ಪ್ರತ್ಯೇಕವಾಗಿ ಕರೆ ಕೊಡುವ ನಿರೀಕ್ಷೆಯಿದೆ.ಸಮ್ಮೇಳನದ ಎಂಟು ತಟಸ್ಥ ರಾಷ್ಟ್ರಗಳ ನಡುವೆ ಈ ವಾರಾಂತ್ಯದಲ್ಲಿ ಬಿರುಸಿನಿಂದ ಸಮಾಲೋಚನೆಗಳು ನಡೆಯುತ್ತಿವೆ.ಈ ಸಮಾಲೋಚನೆಗಳಲ್ಲಿ ಭಾರತದ ರಕ್ಷಣಾ ಸಚಿವ ಶ್ರಿ ವಿ. ಕೆ. ಕೃಷ್ಣಮೆನನ್ ಪ್ರಮುಖ ಪಾತ್ರ ಹೊಂದಿದ್ದಾರೆ. ವಿದ್ಯುಕ್ತ ಮಹಾಧಿವೇಶನಗಳ ಜತೆಗೆ ಮುಂದಿನ ವಾರ ಖಾಸಗಿ ಸಭೆಗಳೂ ನಡೆಯಲು ಸಮ್ಮೇಳನ ಒಪ್ಪುವಂತೆ ಮಾಡುವುದರಲ್ಲಿ ಶ್ರಿ ಮೆನನ್ನರೇ ನಿನ್ನೆ ಹಿರಿಯ ಪಾತ್ರ ನಿರ್ವಹಿಸಿದರು.

 

ಉದಯಪುರದಲ್ಲಿ ಶ್ರಿಮತಿ ಕೆನೆಡಿಗೆ ಭವ್ಯ ಸ್ವಾಗತ

ಉದಯಪುರ, ಮಾ. 17- ಶುಕ್ರವಾರ ಇಲ್ಲಿಗೆ ಆಗಮಿಸಿದ ಅಮೆರಿಕಾದ ಪ್ರಥಮ ಮಹಿಳೆ ಶ್ರಿಮತಿ ಕೆನೆಡಿ ಅವರಿಗೆ ಭವ್ಯ ಸ್ವಾಗತ ನೀಡಲಾಯ್ತು.ಸುಂದರ ನಗರವಾದ ಉದಯಪುರಕ್ಕೆ ಮುಂಚಿತವಾಗಿಯೇ ಆಗಮಿಸಬೇಕಾಗಿದ್ದ ಶ್ರಿಮತಿ ಕೆನೆಡಿಯವರು ಪುರಾತನ ಭಾರತದ ದರ್ಶನಕ್ಕಾಗಿ ಕಾಶಿಗೆ ಭೇಟಿ ಕೊಡಲು ಕಾರ್ಯಕ್ರಮವನ್ನು ಬದಲಾಯಿಸಿದರು.ಸಂಜೆ ಆಗಮಿಸಿದ ಶ್ರಿಮತಿ ಕೆನೆಡಿಯವರನ್ನು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಶ್ರಿ ಮೋಹನ್‌ಲಾಲ್ ಸುಖಾಡಿಯಾ, ಶ್ರಿಮತಿ ಸುಖಾಡಿಯಾ ಹಾಗೂ ಉದಯಪುರದ ಮಹಾರಾಜರೂ ಸ್ವಾಗತಿಸಿದರು.ಶ್ರಿಮತಿ ಕೆನೆಡಿಯವರು ಕಾಶಿಯಿಂದ ಪ್ರಯಾಣ ಮಾಡುವುದಕ್ಕೆ ಮುಂಚೆ ಪ್ರಸಿದ್ಧ ಬೌದ್ಧ ವಿಹಾರವಾದ ಸಾರನಾಥಕ್ಕೂ ಭೇಟಿ ಕೊಟ್ಟರು.

 

ನಾಳೆ ಅಂತ್ಯಘಟ್ಟ ತಲಪುವ ನಿರೀಕ್ಷೆ

ಬೆಂಗಳೂರು, ಮಾ. 17- ರಾಜ್ಯದಲ್ಲಿ ಉಳಿದ 5 ಮಂದಿ ಸಚಿವರು ಹಾಗೂ 8 ಮಂದಿ ಉಪಸಚಿವರ ನೇಮಕ ಸಂಬಂಧದಲ್ಲಿ ಮುಖ್ಯಮಂತ್ರಿ ಶ್ರಿ ಎಸ್.ಆರ್. ಕಂಠಿ ಅವರು ನಾಳೆ ಸೋಮವಾರದ ಹೊತ್ತಿಗೆ ತೀರ್ಮಾನ ಕೈಗೊಳ್ಳುವ ಘಟ್ಟವನ್ನು ತಲುಪುವರೆಂದು ಪಕ್ಷದ ವಲಯಗಳಲ್ಲಿ ನಿರೀಕ್ಷಿಸಲಾಗಿದೆ.ಇಂದು ಸಂಜೆ ಭೇಟಿ ಮಾಡಿದ ವರದಿಗಾರರು ಮಂತ್ರಿಮಂಡಲ ರಚನೆಯ ಕಾರ್ಯವನ್ನು ಪೂರೈಸುವ ಬಗ್ಗೆ ಕೇಳಿದಾಗ ಮುಖ್ಯಮಂತ್ರಿಗಳು “ಆ ಪ್ರಯತ್ನದಲ್ಲಿದ್ದೇನೆ” ಎಂದು ಮಾತ್ರ ಹೇಳಿದರು. ಹೆಚ್ಚಿನ ವಿವರಗಳನ್ನು ನೀಡಬಯಸಲಿಲ್ಲ.ಹೈಕಮಾಂಡಿನ ಸಲಹೆಯಂತೆ ವಿಶಾಲ ತಳಹದಿಯ ಮಂತ್ರಿಮಂಡಲ ರಚಿಸುವ ಆಸಕ್ತಿ ಮುಖ್ಯಮಂತ್ರಿಗಳಿರುವುದು ಅವರ ಹೇಳಿಕೆಗಳಿಂದ ವ್ಯಕ್ತವಾಗಿದೆ. ಆದರೆ ಈ ಪ್ರಯತ್ನದಲ್ಲಿ ಅವರಿನ್ನೂ ಯಶಸ್ಸು ಗಳಿಸಿಲ್ಲದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.