ಶುಕ್ರವಾರ, ಮೇ 14, 2021
22 °C

ಭೂಕಂಪ: ಬಿರುಸಿನ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಾನ್ (ಸಿಕ್ಕಿಂ) (ಪಿಟಿಐ): ಭೂಕಂಪ ಪೀಡಿತ ಸಿಕ್ಕಿಂನಲ್ಲಿ ಭೂಕುಸಿತ ಹಾಗೂ ಮನೆಗಳ ಅವಶೇಷಗಳ ಅಡಿ ಸಿಲುಕಿದ್ದ ಸುಮಾರು 3,000 ಜನರನ್ನು ರಕ್ಷಿಸುವಲ್ಲಿ ಸೇನಾಪಡೆ ಯಶಸ್ವಿಯಾಗಿದೆ.ಭಾನುವಾರ ಸಂಭವಿಸಿದ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 92ಕ್ಕೆ ಏರಿದ್ದು, ಸಿಕ್ಕಿಂ ಒಂದರಲ್ಲೇ 53 ಜನರು ಪ್ರಾಣ ಕಳೆದುಕೊಂಡಿದ್ದಾರೆ.ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡ ಕಾರಣ ಪರ್ಯಾಯ ಮಾರ್ಗವನ್ನು ನಿರ್ಮಾಣ ಮಾಡಲಾಯಿತು. ಇದರಿಂದಾಗಿ ಪರಿಹಾರ ಕಾರ್ಯಚರಣೆಯಲ್ಲಿ ತೊಡಗಿದ್ದ ಸೇನಾಪಡೆ ನಿಗದಿತ ಸ್ಥಳಗಳಿಗೆ ತೆರಳಲು ಅನುಕೂಲವಾಯಿತು. ಅವಶೇಷಗಳ ಅಡಿ ಸಿಲುಕಿದ್ದ ಜನರನ್ನು ರಕ್ಷಿಸಲು ಪಡೆ ತೀವ್ರ ಪ್ರಯಾಸ ಪಡಬೇಕಾಯಿತು.ಭಯಭೀತರಾಗಿರುವ ಜನರು ಬಿರುಕು ಬಿಟ್ಟಿರುವ, ವಾಲಿಕೊಂಡಿರುವ ಮನೆಯೊಳಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಮತ್ತೆ ಭೂಕಂಪ ಸಂಭವಿಸುವ ಹೆದರಿಕೆಯಿಂದ ರಸ್ತೆ ಪಕ್ಕದ ಬಯಲಿನಲ್ಲಿಯೇ ವಾಸಿಸುತ್ತಿದ್ದಾರೆ.ಕಾರ್ಯಾಚರಣೆಗೆ ಸುಮಾರು 13 ಹೆಲಿಕಾಪ್ಟರ್‌ಗಳು, ಸರಕು ಸಾಗಣೆ ವಿಮಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸೇನಾಪಡೆಯ 281 ತುಕಡಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಅವಶೇಷಗಳ ಅಡಿ ಸಿಲುಕಿರಬಹುದಾದ ಜನರಿಗಾಗಿ ಇನ್ನೂ ಹುಡುಕಾಟ ನಡೆದಿದೆ. ಚಿಕಿತ್ಸೆ ನೀಡಲು ವೈದ್ಯಕೀಯ ತಂಡಗಳು ಸ್ಥಳದಲ್ಲಿ ಬೀಡುಬಿಟ್ಟಿವೆ. ಮನೆ, ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಜನರಿಗೆ ಹೆಲಿಕಾಪ್ಟರ್ ಮೂಲಕ ಆಹಾರದ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ.ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಸೇನೆಯ 35 ಯಂತ್ರೋಪಕರಣಗಳನ್ನು ತರಲಾಗಿದೆ. ಸುಮಾರು 62 ಗ್ರಾಮಗಳಲ್ಲಿ 20 ವೈದ್ಯಕೀಯ ಕೇಂದ್ರಗಳನ್ನು ತೆರೆಯಲಾಗಿದ್ದು 370ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ. 8 ಪರಿಹಾರ ಕೇಂದ್ರ ತೆರೆದು 2700 ನಿರಾಶ್ರಿತರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ.ಭೂಕಂಪ ಸಂಭವಿಸಿದ ದಿನದಂದು ನಾಪತ್ತೆಯಾದ 22 ಪ್ರಯಾಣಿಕರಿದ್ದ ಬಸ್ ಇನ್ನೂ ಪತ್ತೆಯಾಗಿಲ್ಲ. ಶೋಧ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ ವಾತಾವರಣ ಸಹಜ ಸ್ಥಿತಿಗೆ ಬರುತ್ತಿದ್ದು, ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ.

   

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.