ಮಂಗಳವಾರ, ಮೇ 24, 2022
30 °C

ಭ್ರಷ್ಟ ವ್ಯವಸ್ಥೆಯಿಂದ ನಲುಗಿದ ಗ್ರಾಮಾಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮೀಣ ಜನರಿಗೆ ಕೃಷಿ ಚಟುವಟಿಕೆಗಳಿಂದ ಬಿಡುವಾಗಿದ್ದಾಗ ಅವರಿಗೆ ಉದ್ಯೋಗ ನೀಡುವ ಹಾಗೂ ಹಳ್ಳಿಯ ಯುವಕರು ಉದ್ಯೋಗ ಅರಸಿ ಪಟ್ಟಣಕ್ಕೆ ಹೋಗುವುದನ್ನು ತಪ್ಪಿಸುವ ಉದ್ದೆೀಶದಿಂದ ಆರಂಭವಾದದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ.ಈ ಯೋಜನೆಗೆ ಕೇಂದ್ರ ಸರ್ಕಾರ ಬೇಡಿಕೆ ಸಲ್ಲಿಸಿದಷ್ಟು ಹಣ ಬಿಡುಗಡೆ ಮಾಡುತ್ತದೆ.  ಪ್ರತಿವರ್ಷ ಗಾಂಧಿ ಜಯಂತಿಯಂದೇ ಈ ಯೋಜನೆಯ ವಾರ್ಷಿಕ ಕ್ರಿಯಾಯೋಜನೆಯನ್ನು ಗ್ರಾಮಸಭೆಗಳಲ್ಲಿ ದೇಶದಾದ್ಯಂತ ತಯಾರಿಸಲಾಗುತ್ತದೆ. ಈ ಯೋಜನೆಯಲ್ಲಿ ನಾನೊಬ್ಬ ಮೇಸ್ತ್ರಿಯಾಗಿ, ಕಾರ್ಮಿಕನಾಗಿ ಕಾರ್ಯನಿರ್ವಹಿಸಿದ್ದೆೀನೆ.ಸ್ಥಳೀಯ ಜನಪ್ರತಿನಿಧಿಗಳು ಈ ಯೋಜನೆಯಲ್ಲಿ ಕೆಲಸ ನಡೆಯದೇ ಇದ್ದರೂ ಸುಳ್ಳು ದಾಖಲೆ ಸೃಷ್ಟಿಸಿ ಬಿಲ್ಲು ತಯಾರಿಸಲು ಹಾಗೂ ತಾವು ಹೇಳಿದವರ ಖಾತೆಗೆ ಹಣ ಜಮಾ ಮಾಡಲು ಒತ್ತಡ ತರುವುದನ್ನು ಗಮನಿಸಿದ್ದೇನೆ.

 

ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಅದನ್ನು ಒಪ್ಪದಿದ್ದಾಗ ಅವರನ್ನು ಬೈಯ್ದು ಮಾನಸಿಕ ಹಿಂಸೆಗೆ ಒಳಪಡಿಸುವುದು ನಡೆಯುತ್ತಿದೆ. ಪಿಡಿಒಗಳು ಪೊಲೀಸರಿಗೆ ದೂರನ್ನು ನೀಡಿದಾಗ ಶಾಸಕರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು ಗ್ರಾಮ ಪಂಚಾಯಿತಿಯಿಂದ ವರ್ಗಾವಣೆಯ ಬೆದರಿಕೆಯೊಡ್ಡಿ ದೂರನ್ನು ಹಿಂದಕ್ಕೆ ಪಡೆದ ಘಟನೆಗಳಿಗೆ ನಾನು ಸಾಕ್ಷಿಯಾಗಿದ್ದೆೀನೆ.ಉದ್ಯೋಗ ಖಾತರಿ ಯೋಜನೆ ಸಂಪೂರ್ಣವಾಗಿ ಮಾನವಶ್ರಮವನ್ನು ಆಧರಿಸಿದ್ದು. ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಯಂತ್ರಗಳ ಬಳಕೆಗೆ ಅವಕಾಶವಿದೆ. ಆದರೆ ಜನಪ್ರತಿನಿಧಿಗಳು ಯಂತ್ರಗಳನ್ನು ಬಳಸಿಯೇ ಕಾಮಗಾರಿ ಮುಗಿಸಿ ಸುಳ್ಳು ದಾಖಲೆ ಸೃಷ್ಟಿಸಲು ಪಿಡಿಒ ಅವರ ಮೇಲೆ ಒತ್ತಡ ತರುತ್ತಾರೆ. ಅನೇಕ  ಸಂದರ್ಭಗಳಲ್ಲಿ  ಜಿಲ್ಲಾಪಂಚಾಯತಿಯ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿರುತ್ತಾರೆ.ಇಂತಹ ಅವ್ಯವಹಾರಗಳನ್ನು ತನಿಖೆ ಮಾಡಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರದಿಂದ ನಿಯೋಜಿತರಾದ ಒಂಬುಡ್ಸ್‌ಮನ್ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿಯೇ ಇರುತ್ತಾರೆ. ವಾಸ್ತವವಾಗಿ ಇವರು ತನಿಖೆ ಮಾಡಿ ಕ್ರಮ ತೆಗೆದುಕೊಂಡ ಉದಾಹರಣೆಯಂತು ಇಲ್ಲ.ನಾನು ಈ ಯೋಜನೆಯ ಒಂದು ಅವ್ಯವಹಾರದ ಬಗ್ಗೆ ದಾಖಲೆ ಸಮೇತ ಒಂಬುಡ್ಸ್‌ಮನ್ ಅವರಿಗೆ ದೂರು ಸಲ್ಲಿಸಿದ್ದಕ್ಕೆ ಕಾಟಾಚಾರದ ತನಿಖೆ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.ಇಂದಿರಾ ಆವಾಸ್ ಯೋಜನೆ ವಸತಿರಹಿತ ಬಡಕುಟುಂಬಗಳಿಗೆ ಮನೆಗಳನ್ನು ನೀಡುವ ಕೇಂದ್ರ ಸರ್ಕಾರದ ಯೋಜನೆ. ಈ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಗ್ರಾಮಸಭೆಯಾದರೂ ನಿಜವಾಗಿ  ಸ್ಥಳೀಯ ಜನಪ್ರತಿನಿಧಿಗಳು. ನಮ್ಮ ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್‌ನಲ್ಲಿ, ಸ್ವಂತ ಮನೆಯನ್ನು ಬಾಡಿಗೆಗೆ ಕೊಟ್ಟು ವಿದೇಶದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರಿಗೆ ಈ ಯೋಜನೆಯಡಿ ಮನೆ ನೀಡಿದ್ದಾರೆ.ಇದು ಗಮನಕ್ಕೆ ಬಂದಾಗ ಪಿ.ಡಿ.ಒ ಅವರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಮೇಲೆ ಪೊಲೀಸರಿಗೆ ದೂರು ನೀಡಿದರು. ಆಗ  ಇತರ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು ಪಿಡಿಒ ಮೇಲೆ ಒತ್ತಡ ತಂದು ದೂರನ್ನು ಹಿಂತೆಗೆದುಕೊಳ್ಳುವಂತೆ ಮಾಡಿದರು. ಜಿಲ್ಲಾ ಪಂಚಾಯತ್ ಅಧಿಕಾರಿಗಳಾಗಲೀ, ಒಂಬುಡ್ಸ್‌ಮನ್‌ರಾಗಲೀ ಘಟನೆಯ ವಿವರ ತಿಳಿದಿದ್ದರೂ ಪಿಡಿಒ ಅವರ ಬೆಂಬಲಕ್ಕೆ ಬರಲಿಲ್ಲ.ನಮ್ಮ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಅಧಿಕಾರದ ಅವಧಿ 2010ರ ಮಾರ್ಚ್ 31ಕ್ಕೆ ಮುಗಿದಿತ್ತು. ಎಪ್ರಿಲ್ 1 ರಿಂದ ಸರ್ಕಾರ ಇಲ್ಲಿಗೆ ಆಡಳಿತಾಧಿಕಾರಿಯನ್ನು ನೇಮಿಸಿತು. ಆದರೆ ಅಧ್ಯಕ್ಷರು ಮಾರ್ಚ್ 30, 2010 ರಂದು ವಿವಿಧ ಯೋಜನೆಗಳಿಗೆ ಸಂಬಂಧಿಸಿ 20 ಫಲಾನುಭವಿಗಳಿಗೆ ಒಟ್ಟು 1,95,000 ರೂಪಾಯಿಗಳನ್ನು  ತಮ್ಮ ಸಹಿಯೊಂದಿಗೆ ಚೆಕ್ ಮೂಲಕ ವಿತರಿಸಿದರು.ಅನುಮಾನಗೊಂಡ ನಾನು ತನಿಖೆ ಮಾಡಿದಾಗ ತಿಳಿದ ಸಂಗತಿಯೆಂದರೆ ಮಾರ್ಚ್ 30, 2010 ರಂದು ವಿತರಿಸಲಾದ ಚೆಕ್ಕುಗಳು ಇದ್ದ ಚೆಕ್ ಬುಕ್ಕನ್ನು ಬ್ಯಾಂಕ್ ಗ್ರಾಮ ಪಂಚಾಯಿತಿಗೆ ನೀಡಿದ್ದು ಏಪ್ರಿಲ್ 7, 2010 ರಂದು. ಅಂದರೆ ಗ್ರಾಮ ಪಂಚಾಯತಿ ಅಧ್ಯಕ್ಷರು ತಮ್ಮ ಅಧಿಕಾರದ ಅವಧಿ ಮುಗಿದ ಎಂಟು ದಿನಗಳ ನಂತರ ಹಿಂದಿನ ದಿನಾಂಕವನ್ನು ನಮೂದಿಸಿ ಈ ಚೆಕ್ಕುಗಳನ್ನು ವಿತರಿಸಿದ್ದರು.ಈ ಸಂದರ್ಭದಲ್ಲಿ ಈ ಚೆಕ್ಕುಗಳಿಗೆ ಸಹಿ ಹಾಕಲು ನಿರಾಕರಿಸಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯ ಮೇಲೆ ತೀವ್ರತರವಾದ ಒತ್ತಡವನ್ನು ಹಾಕಲಾಗಿತ್ತು. ಈ ಕಾನೂನುಬಾಹಿರ ಕೃತ್ಯದ ವಿರುದ್ಧ ಪೊಲೀಸರಿಗೆ ದೂರು ನೀಡದಿರುವುದರ ಬಗ್ಗೆ ನಾನು ಪಿಡಿಒ ಅವರಲ್ಲಿ ಲಿಖಿತವಾಗಿ ಪ್ರಶ್ನಿಸಿದಾಗ ನನ್ನ ಅರ್ಜಿಯ ಮೇಲೆ `ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ನನಗೆ ಹಿರಿಯ ಅಧಿಕಾರಿಗಳು ಅನುಮತಿಯನ್ನು ನೀಡಿರುವುದಿಲ್ಲ~ ಎಂಬ ಒಕ್ಕಣೆಯ ಹಿಂಬರಹವನ್ನು ನೀಡಿದರು.ಈ ಕುರಿತು ನಾನು ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರನ್ನು ಪ್ರಕರಣ ಬೆಳಕಿಗೆ ಬಂದ ದಿನದಿಂದ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತಿದ್ದೆ. ಒಂದೂವರೆ ವರ್ಷಗಳಿಂದ ಸತತವಾಗಿ ಆಗ್ರಹಿಸುತ್ತಾ, ಹೋರಾಟದ ಕಟು ಎಚ್ಚರಿಕೆ ನೀಡಿದ ನಂತರ ಕಳೆದ ವಾರವಷ್ಟೆ (ಅಕ್ಟೋಬರ್ 19, 2011ರಂದು) ಅವರು ಹೊಸನಗರ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗೆ `ಜ್ಞಾಪನ~ ಪತ್ರ ನೀಡಿದರು.ಅದರಲ್ಲಿ ಅವರು ಕೊಟ್ಟ ಸೂಚನೆ ಇಂತಿದೆ: `....ಈ ಬಗ್ಗೆ ನಿಯಮಾನುಸಾರ ಸದರಿಯವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವುದು~.`ನಿಯಮಾನುಸಾರ ಸದರಿಯವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದ್ದಲ್ಲಿ~ ಎಂಬ ಮಾತಿನ ಅರ್ಥವೇನು? ಒಬ್ಬ ಜಿಲ್ಲಾಮಟ್ಟದ ಅಧಿಕಾರಿಗೆ ಈ ಪ್ರಕರಣ ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಕ್ತವಾಗಿದೆಯೇ ಇಲ್ಲವೇ ಎಂಬ ಕಾನೂನು ಪರಿಜ್ಞಾನವೂ ಇರುವುದಿಲ್ಲವೇ? ಇದು ಕೇವಲ ಸಮಯ ಹಾಳು ಮಾಡುವ ತಂತ್ರವೇ ಅಥವಾ ಎಲ್ಲವನ್ನೂ ತನ್ನ ಕೆಳಗಿನ ಅಧಿಕಾರಿ ತಲೆಗೆ ಕಟ್ಟುವ ಹುನ್ನಾರವೇ?ನಾನು ಗಮನಿಸಿದಂತೆ ಈಗ ಬಂದಿರುವ ಹೊಸ ತಲೆಮಾರಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಲ್ಲಿ ಹೆಚ್ಚಿನವರು ಲಂಚದ ಆಮಿಷಕ್ಕೆ ಗುರಿಯಾಗದವರು. ಇದಕ್ಕೆ ಲಂಚ ಕೊಡದೆಯೇ ನೇರ ನೇಮಕಾತಿಯ ಮೂಲಕ ಆಯ್ಕೆಯಾಗಿ ಬಂದದ್ದೂ ಒಂದು ಕಾರಣವಿರಬಹುದು. ಇವರಲ್ಲಿ ಹೆಚ್ಚಿನವರಿಗೆ ಪ್ರಾಮಾಣಿಕವಾಗಿ ದುಡಿಯುವ ಉತ್ಸಾಹವಿದೆ.

 

ಭ್ರಷ್ಟಾಚಾರದ ವಿರುದ್ಧ ಅಸಹನೆಯಿದೆ. ಇವರನ್ನು ಸರ್ಕಾರ ಸರಿಯಾಗಿ ಬಳಸಿಕೊಂಡಲ್ಲಿ ಹಳ್ಳಿಗಳಿಗೆ ಸರ್ಕಾರದಿಂದ ಹರಿದು ಬರುವ ಸೌಲಭ್ಯಗಳು ಅರ್ಹರನ್ನು ತಲುಪುತ್ತವೆ. ಜನಪ್ರತಿನಿಧಿಗಳು ತಮ್ಮ ಸ್ವಾರ್ಥ ಬಿಟ್ಟು ಪಿಡಿಒಗಳು ಸ್ವತಂತ್ರವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಜನರೂ ಪ್ರಾಮಾಣಿಕ ಅಧಿಕಾರಿಗಳ ಪರ ನಿಲ್ಲಬೇಕು.

 

ಜಿಲ್ಲಾಮಟ್ಟದ ಅಧಿಕಾರಿಗಳು ಪಿಡಿಒಗಳ ಕಾನೂನುಬದ್ದ ಕೆಲಸಗಳನ್ನು ಬೆಂಬಲಿಸುತ್ತ ಅವರ ನೈತಿಕಸ್ಥೈರ್ಯವನ್ನು ಕಾಪಾಡಬೇಕು. ಹೀಗಾದಾಗ ಮಾತ್ರ ಹಳ್ಳಿಗಳಲ್ಲಿ ಪ್ರಾಮಾಣಿಕ ಅಧಿಕಾರಿಗಳು ಸೇವೆ ಸಲ್ಲಿಸಲು ಸಾಧ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.