ಸೋಮವಾರ, ಮೇ 23, 2022
20 °C

ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈಗೊಳ್ಳುವ ಮೂಲಕ ವೈದಿಕಶಾಹಿ ಪದ್ಧತಿಯನ್ನು ಮುಂದುವರೆಸಲು ಹೊರಟಿದೆ. ದಲಿತರು, ಆದಿವಾಸಿಗಳ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರ ಈ ನಿರ್ಧಾರದ ಹಿಂದೆ ಅಡಗಿದೆ~ ಎಂದು ವಕೀಲ ಪ್ರೊ.ರವಿವರ್ಮಕುಮಾರ್ ಕಟುವಾಗಿ ಟೀಕಿಸಿದರು.ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ದಸಂಸ), ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ದಲಿತ ಮಹಿಳಾ ಒಕ್ಕೂಟಗಳ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ `ಬುದ್ಧನೆಡೆಗೆ ಮರಳಿ ಮನೆಗೆ~ ರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.`ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಈ ತೀರ್ಮಾನ ತೆಗೆದುಕೊಂಡಿರಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚುವ   ಮೂಲಕ ಖಾಸಗೀಕರಣಕ್ಕೆ ಅದು ಭೂಮಿಕೆಯನ್ನು ಸಿದ್ಧಪಡಿಸಿದೆ. ಇದು ಭ್ರಷ್ಟಾಚಾರಕ್ಕೂ ಅವಕಾಶ ಮಾಡಿಕೊಡಲಿದೆ~ ಎಂದು ಆತಂಕ ವ್ಯಕ್ತಪಡಿಸಿದರು.ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ, `ರಾಷ್ಟ್ರೋತ್ಥಾನ ಸಾಹಿತ್ಯವು ಶನಿವಾರ ನಗರದಲ್ಲಿ ಬಿಡುಗಡೆ ಮಾಡಿದ ಅಂಬೇಡ್ಕರ್ ಬಗೆಗಿನ ಕೃತಿ ಹಸಿ ಸುಳ್ಳುಗಳಿಂದ ಕೂಡಿದೆ. ಈ ಕೃತಿಯನ್ನು ಅನುವಾದಿಸಿದ ಚಂದ್ರಶೇಖರ ಭಂಡಾರಿ ಹೇಳಿದ ಹಸಿಸುಳ್ಳುಗಳನ್ನು ಸಹಿಸುವುದಿಲ್ಲ. ಇದಕ್ಕೆ ಪರ್ಯಾಯವಾಗಿ ಸತ್ಯದ ಘಟನೆಗಳುಳ್ಳ ಕೃತಿಯನ್ನು ಹೊರತರಲಾಗುವುದು. ಸಂಘ ಪರಿವಾರದ ಲೇಖಕರು ಅಂಬೇಡ್ಕರರ ವ್ಯಕ್ತಿತ್ವ ತಿರುಚುವ ಪ್ರವೃತ್ತಿ ಬಿಡಬೇಕು~ ಎಂದು ಎಚ್ಚರಿಸಿದರು.ಮಾಜಿ ಸಚಿವ ಆರ್.ಬಿ.ತಿಮ್ಮಾಪುರ, ಲೇಖಕ ಮಂಗ್ಳೂರು ವಿಜಯ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಉಪಸ್ಥಿತರಿದ್ದರು.ನಿರ್ಣಯ ಅಂಗೀಕಾರ: ಸರ್ಕಾರಿ ಶಾಲೆಗಳನ್ನು ಮುಚ್ಚುವ ಆದೇಶವನ್ನು ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು ಮತ್ತು ಲೋಕಾಯುಕ್ತ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂಬ ಎರಡು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.