ಗುರುವಾರ , ಮೇ 19, 2022
20 °C

ಮಠದ ವ್ಯಾಪ್ತಿಯಲ್ಲಿ ಕಲ್ಲುಗಣಿ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದ ಕೆಂಚೇನಹಳ್ಳಿ ಬಳಿ ಇರುವ ಪ್ರಸಿದ್ಧ ಆದಿಚುಂಚನಗಿರಿ ಸಂಸ್ಥಾನ ಮಠದ 2.5 ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸದಂತೆ ಸರ್ಕಾರ ಹೊರಡಿಸಿರುವ ಆದೇಶವನ್ನು ಹೈಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ. ಸರ್ವೇ ನಂ. 63ರಲ್ಲಿರುವ ಜಾಗದಲ್ಲಿ ತಮಗೆ ಕಲ್ಲು ಗಣಿಗಾರಿಕೆ ನಡೆಸಲು ಗುತ್ತಿಗೆ ನೀಡಿದ್ದರೂ, ಗುತ್ತಿಗೆ ಅವಧಿಯನ್ನು ಮೊಟಕುಗೊಳಿಸಿ ಅದನ್ನು ನಡೆಸದಂತೆ ಆದೇಶಿಸಿರುವ ಕ್ರಮವನ್ನು ಪ್ರಶ್ನಿಸಿ ಬಾಲಕೃಷ್ಣ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಪಾಚ್ಚಾಪುರೆ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾ ಮಾಡಿದೆ.ಆದರೆ, ಗುತ್ತಿಗೆ ಅವಧಿಯನ್ನು ಮೊಟಕುಗೊಳಿಸಿರುವ ಕಾರಣ ಅವರಿಗೆ ಉಂಟಾದ ನಷ್ಟವನ್ನು ಭರಿಸುವಂತೆ ಆದೇಶಿಸಲು ಕೋರಿ ಸಂಬಂಧಿತ ಕೋರ್ಟ್‌ನಲ್ಲಿ ಅಥವಾ ಅಧಿಕಾರಿಗಳಲ್ಲಿ ಅರ್ಜಿಸಲ್ಲಿಸುವ ಅವಕಾಶವನ್ನು ಪೀಠ ಅರ್ಜಿದಾರರಿಗೆ ನೀಡಿದೆ. 2006ರಲ್ಲಿ ಐದು ವರ್ಷಗಳ ಅವಧಿಗೆ ಗಣಿಗಾರಿಕೆ ನಡೆಸಲು ಬಾಲಕೃಷ್ಣ ಅವರಿಗೆ ಅನುಮತಿ ನೀಡಲಾಗಿತ್ತು. ಆದರೆ ಅದನ್ನು 2008ರಲ್ಲಿಯೇ ಹಿಂದಕ್ಕೆ ಪಡೆದುಕೊಳ್ಳಲಾಗಿತ್ತು.ಈ ಜಾಗದಲ್ಲಿ ಕಲ್ಲುಗಣಿಗಾರಿಕೆ ನಡೆಸಿದರೆ ಮಠಕ್ಕೆ ತೊಂದರೆ ಇರುವುದಾಗಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದರು. 15ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಬಾರದು ಎನ್ನುವುದು ಸ್ವಾಮೀಜಿ ಮನವಿಯಾಗಿತ್ತು. ಆದರೆ ವ್ಯಾಪ್ತಿಯನ್ನು 2.5ಕಿ.ಮೀ.ಗೆ ಕಡಿತಗೊಳಿಸಿ ಸರ್ಕಾರ ಆದೇಶಿಸಿತ್ತು.‘ಗಣಿಗಾರಿಕೆ ನಡೆಸಲು ನೀಡಿರುವ ಅನುಮತಿಯನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಹಿಂದಕ್ಕೆ ಪಡೆಯುವ ಅಧಿಕಾರ ಸರ್ಕಾರಕ್ಕೆ ಇದೆ. ಕರ್ನಾಟಕ ಗಣಿ ಮತ್ತು ಖನಿಜ ಕಾಯ್ದೆಯ 8(3)ನೇ ಕಲಮಿನ ಅನ್ವಯ ಸರ್ಕಾರಕ್ಕೆ ಇರುವ ಅಧಿಕಾರವನ್ನು ಬಳಸಿಕೊಂಡು ಈ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆದೇಶದಲ್ಲಿ ಯಾವುದೇ ಲೋಪ ಇಲ್ಲ’ ಎಂದು ನ್ಯಾಯಮೂರ್ತಿಗಳು ತಿಳಿಸಿ ಅರ್ಜಿಯನ್ನು ವಜಾ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.