ಮಂಗಳವಾರ, ಜೂನ್ 22, 2021
21 °C

ಮಡಕೆ, ಕುಡಿಕೆಗೆ ಭಾರಿ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ಮಹಾಶಿವರಾತ್ರಿ ಹಬ್ಬ ಮುಕ್ತಾಯಗೊಂಡ ಬೆನ್ನಲ್ಲೇ ತಾಲ್ಲೂಕಿನಲ್ಲಿ ಬಿಸಿಲಿನ ತಾಪ ದಿನೇ ದಿನೇ ತೀವ್ರವಾಗಿ ಏರುತ್ತಿದ್ದು, ಈಗ ಮಡಿಕೆ, ಕುಡಿಕೆಗಳಿಗೆ ಭಾರಿ ಬೇಡಿಕೆ ಬಂದಿದೆ.ಆಧುನಿಕತೆಯ ಸುಳಿಗೆ ಸಿಕ್ಕು ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ ಹಾಗೂ ಕರಕುಶಲ ವಸ್ತುಗಳ ತಯಾರಿಕೆ ಮೂಲೆಗುಂಪಾಗುತ್ತಿವೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಜೀವನ ನಡೆಸುವ ವೃತ್ತಿಯವರಿಗೆ ತೀವ್ರ ಹೊಡೆತ ಬಿದ್ದಿದೆ. ಈಗ ದಿನೇ ದಿನೇ ಬಿಸಿಲಿನ ತಾಪ ತೀವ್ರಗೊಳ್ಳುತ್ತಿದೆ. ಬಿಸಿಲಿನ ತಾಪಕ್ಕೆ ಹೊರಗಡೆ ರಸ್ತೆಗಳಲ್ಲಿ ಮಧ್ಯಾಹ್ನದ ಹೊತ್ತು ಜನರು ಸಂಚರಿಸುವುದು ವಿರಳವಾಗಿದೆ. ಎಲ್ಲಾ ಮನೆಗಳಲ್ಲೂ ಫ್ಯಾನ್‌ಗಳು ಬೆಳಗಿನಿಂದ ರಾತ್ರಿಯವರೆಗೂ ನಿರಂತರವಾಗಿ ತಿರುಗುತ್ತಲೇ ಇರುವಂತಾಗಿದೆ.ಏರುತ್ತಿರುವ ಬಿಸಿಲಿನ ತಾಪಕ್ಕೆ ತಂಪಾದ ಪಾನೀಯಗಳನ್ನು ಕುಡಿಯುವ ತವಕ ಜನರಲ್ಲಿ ಹೆಚ್ಚಿದೆ. `ಉಳ್ಳವರು ಶಿವಾಲಯವ ನಿರ್ಮಿಸುವರು~ ಎನ್ನುವ ವಚನ ಸಾರದಂತೆ ದುಡ್ಡಿದ್ದವರು, ಮನೆಗಳಲ್ಲಿ ಫ್ರಿಜ್‌ಗಳನ್ನು ಇಟ್ಟುಕೊಂಡಿರುವವರು ತಣ್ಣನೆಯ ನೀರನ್ನು ಕುಡಿಯುತ್ತಾರೆ.ಹಾಗೆಯೇ ಕೆಲವರು ಕಬ್ಬಿನಹಾಲು, ಎಳನೀರು ಮುಂತಾದ ತಂಪಾದ ಪಾನೀಯಗಳನ್ನು ಸೇವಿಸುವ ಮೂಲಕ ತಮ್ಮ ದಾಹವನ್ನು ಇಂಗಿಸಿಕೊಳ್ಳುವ ಯತ್ನ ಈಗ ಎಲ್ಲಾ ಕಡೆ ನಡೆದಿದೆ. ಆದರೆ ಜನಸಾಮಾನ್ಯರು ಈಗ ಮಡಿಕೆ, ಕುಡಿಕೆಗಳ ನೀರನ್ನು ಕುಡಿಯಲು ಮುಂದಾಗಿರುವುದರಿಂದ ಈಗ ಮಡಿಕೆ, ಕುಡಿಕೆಗಳಿಗೆ ಭಾರಿ ಬೇಡಿಕೆ ಬಂದಿದೆ.ಸಾಮಾನ್ಯವಾಗಿ ಪ್ಲಾಸ್ಟಿಕ್ ಮತ್ತು ಅಲ್ಯೂಮೀನಿಯಂ ಮುಂತಾದ ಅಧುನಿಕ ಸಾಮಗ್ರಿಗಳು ಬಂದ ಮೇಲೆ ನಮ್ಮ ಜನರು ಮಡಿಕೆ, ಕುಡಿಕೆಗಳನ್ನು ಮರೆತು ಬಿಟ್ಟಿದ್ದರು. ಈ ಕಾರಣದಿಂದ ಹಳ್ಳಿಗಳಲ್ಲಿ ಮಡಿಕೆ, ಕುಡಿಕೆಗಳನ್ನು ಮಾಡುವ ಕಾಯಕವನ್ನೇ ನಿಲ್ಲಿಸಿದ್ದರು. ತಾಲ್ಲೂಕಿನ ಕುಂಬಾರ ರಾಮಗೊಂಡನಹಳ್ಳಿ ಗ್ರಾಮದಲ್ಲಿ ಮಾತ್ರ ಮಡಿಕೆ, ಕುಡಿಕೆಗಳನ್ನು ತಯಾರು ಮಾಡುತ್ತಿದ್ದಾರೆ.

 

ನೆರೆಯ ಚಿತ್ರದುರ್ಗ ಜೆಲ್ಲೆ ಹೊಳಲ್ಕೆರೆ ತಾಲ್ಲೂಕಿನ ಬಿದುರ್ಗ ಗ್ರಾಮದಲ್ಲಿ ಹೆಚ್ಚಾಗಿ ಮಡಿಕೆ, ಕುಡಿಕೆಗಳನ್ನು ತಯಾರು ಮಾಡುತ್ತಾರೆ. ಪ್ರಸ್ತುತ ಸಣ್ಣ ಗಾತ್ರದ ಮಡಿಕೆಗೆ ರೂ. 50 ದರ ಇದೆ. ರೂ. 50ರಿಂದ ಹಿಡಿದು  ರೂ. 150 ದರ ಮಡಿಕೆಗಳಿಗೆ ಗಾತ್ರದ ಮೇಲೆ ಇದೆ.ಇತ್ತೀಚಿನ ದಿನಗಳಲ್ಲಿ ಮಡಿಕೆ, ಕುಡಿಕೆಗಳಿಗೆ ಬೇಸಿಗೆಯಲ್ಲಿ ಮಾತ್ರ ಭಾರಿ ಬೇಡಿಕೆ ಇರುತ್ತದೆ. ಬೇಸಿಗೆಕಾಲ ಮುಗಿದ ನಂತರ ಇವುಗಳನ್ನು ಕೇಳುವವರೇ ಇಲ್ಲದಂತಾಗುತ್ತದೆ. ಅನೇಕ ವರ್ಷಗಳಿಂದ ಈ ಕುಲಕಸುಬನ್ನು ಮುಂದುವರಿಸಿಕೊಂಡು ಬಂದಿರುವ ನಮಗೆ ಈ ವೃತ್ತಿಯೇ ಜೀವನಾಧಾರವಾಗಿದೆ. ನಷ್ಟವೋ, ಕಷ್ಟವೋ ಈ ವೃತ್ತಿಯನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಬೇಸಿಗೆಯಲ್ಲಿ ಒಂದಿಷ್ಟು ಮಡಕೆ, ಕುಡಿಕೆಗಳನ್ನು ಮಾರಿ ಜೀವನ ನಡೆಸುತ್ತಿದ್ದೇವೆ ಎನ್ನುತ್ತಾರೆ ಬಿ. ದುರ್ಗ ಗ್ರಾಮದ ರತ್ನಮ್ಮ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.