ಬುಧವಾರ, ಮೇ 19, 2021
26 °C

ಮತ್ತೆ ಬಂಡಾಯದ ಭೂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಕೆಲವು ಕಾಲ ತಣ್ಣಗಿದ್ದ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ ಬಿಸಿ ರಾಜ್ಯ ಬಿಜೆಪಿಗೆ ಈಗ ಮತ್ತೊಮ್ಮೆ ತಟ್ಟಲಾರಂಭಿಸಿದೆ.ಯಡಿಯೂರಪ್ಪ ಅವರಂತೆಯೇ ಲೋಕಾಯುಕ್ತ ವರದಿಯಲ್ಲಿ ದೋಷಾರೋಪಕ್ಕೆ ಒಳಗಾಗಿರುವ ಬಳ್ಳಾರಿಯ ರೆಡ್ಡಿ ಸಹೋದರರು ಈಗ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ. ತಮ್ಮನ್ನು ಕಡೆಗಣಿಸಿದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ತಮ್ಮ ನಿಕಟವರ್ತಿ ಬಿ. ಶ್ರೀರಾಮುಲು ಅವರ ರಾಜೀನಾಮೆ (ಶಾಸಕ ಸ್ಥಾನಕ್ಕೆ) ನಿರ್ಧಾರದ ಮೂಲಕ ಪಕ್ಷದ ಮುಖಂಡರಿಗೆ ರವಾನಿಸಿದ್ದಾರೆ.ಯಡಿಯೂರಪ್ಪ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ, ಪರಿಶಿಷ್ಟ ಪಂಗಡಕ್ಕೆ ಸೇರಿದ ಶ್ರೀರಾಮುಲು ಬಳ್ಳಾರಿ ಮಾತ್ರವಲ್ಲದೆ, ಉತ್ತರ ಕರ್ನಾಟಕದ ಕೊಪ್ಪಳ, ಗದಗ, ರಾಯಚೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲೂ ಸ್ವಲ್ಪಮಟ್ಟಿಗೆ ಜನಬೆಂಬಲ ಹೊಂದಿದ್ದಾರೆ. ಇವರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಓಬಳಾಪುರಂ ಮೈನಿಂಗ್ ಕಂಪೆನಿಯ ನಿರ್ದೇಶಕರಲ್ಲಿ ಒಬ್ಬರು.ರೆಡ್ಡಿ ಸಹೋದರರ ಅಣತಿಯಂತೆ ಬಿಜೆಪಿಯಲ್ಲಿ ನಡೆಯುತ್ತಿರುವ ಪ್ರಸಕ್ತ ಬಂಡಾಯ ಪ್ರಕರಣಕ್ಕೂ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಂದರ್ಭದಲ್ಲಿ ನಡೆದ ಘಟನೆಗಳಿಗೂ ಸಾಕಷ್ಟು ಸಾಮ್ಯತೆಗಳಿವೆ.ಯಡಿಯೂರಪ್ಪ ಅವರಂತೆಯೇ ರೆಡ್ಡಿ ಸಹೋದರರೂ ಪಕ್ಷದ ಮೇಲೆ ತಮಗಿದ್ದ ಪ್ರಭಾವವನ್ನು ಪುನಃ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ರೆಡ್ಡಿ ಸಹೋದರರು ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ, ಜಾತಿ ರಾಜಕಾರಣವನ್ನೂ ಮಾಡುತ್ತಿದ್ದಾರೆ.

 

ತಾವು ಹೇಳಿದಂತೆ ಡಿ.ವಿ.ಸದಾನಂದ ಗೌಡ ಅವರನ್ನೇ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು ಯಡಿಯೂರಪ್ಪ ಅವರು ಅನುಸರಿಸಿದ ತಂತ್ರವೂ ಇದೇ ಆಗಿತ್ತು.ಯಡಿಯೂರಪ್ಪ ಅವರು ತಮ್ಮನ್ನು ಲಿಂಗಾಯತ ಸಮುದಾಯದ ನಾಯಕ ಎಂದು ಬಿಂಬಿಸಿಕೊಂಡರೆ, ರೆಡ್ಡಿ ಸಹೋದರರು ಶ್ರೀರಾಮುಲು ಅವರನ್ನು ಮುಂದಿಟ್ಟುಕೊಂಡು ಪರಿಶಿಷ್ಟ ಸಮುದಾಯದ ಮೇಲೆ ತಮಗೆ ಹಿಡಿತ ಇದೆ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿಯನ್ನು ಆಡಳಿತಕ್ಕೆ ತರುವಲ್ಲಿ ತಮ್ಮ ಪಾತ್ರ ಮಹತ್ವದ್ದು ಎಂದು ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರಿಬ್ಬರೂ ಹೇಳಿಕೊಳ್ಳುತ್ತಿದ್ದಾರೆ.ಯಡಿಯೂರಪ್ಪ ಅವರು ಲೋಕಾಯುಕ್ತ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ತಕ್ಷಣವೇ ತಮ್ಮ ಪ್ರಭಾವ ಪ್ರದರ್ಶಿಸಿದರೆ, ರೆಡ್ಡಿ ಸಹೋದರರು ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ಒಂದು ತಿಂಗಳ ನಂತರ ಬಂಡಾಯವೆದ್ದಿದ್ದಾರೆ. ಆದರೆ ಈ ಸಂದರ್ಭದಲ್ಲಿ ರೆಡ್ಡಿ ಸಹೋದರರು ಯಡಿಯೂರಪ್ಪ ಅವರ ಜೊತೆ ಉತ್ತಮ ಸಂಬಂಧ ಹೊಂದಿಲ್ಲ.ಡಿ.ವಿ.ಸದಾನಂದ ಗೌಡರ ಸಂಪುಟಲ್ಲಿ ಸ್ಥಾನ ಸಿಗದಿರುವುದೂ ಸೇರಿದಂತೆ ತಮ್ಮ ರಾಜಕೀಯ ಭವಿಷ್ಯದ ಕುರಿತು ರೆಡ್ಡಿ ಸಹೋದರರು ಚಿಂತಾಕ್ರಾಂತರಾಗಿದ್ದಾರೆ ಎಂದು ಮೂಲಗಳು ಹೇಳುತ್ತವೆ. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಅವರಲ್ಲಿ ಮೂಡಿದೆ. ರೆಡ್ಡಿ ಸಹೋದರರು `ತಾಯಿ~ ಎಂದೇ ಕರೆಯುತ್ತಿದ್ದ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಕೂಡ ಇತ್ತೀಚಿನ ದಿನಗಳಲ್ಲಿ ಅವರನ್ನು ನಿರ್ಲಕ್ಷಿಸುತ್ತಿದ್ದಾರೆ.ಇವೆಲ್ಲ ಕಾರಣದಿಂದ, ತಾವು ರಾಜಕೀಯವಾಗಿ ಇಂದಿಗೂ ಪ್ರಬಲವಾಗಿಯೇ ಇದ್ದೇವೆ ಎಂಬ ಸಂದೇಶವನ್ನು ಪಕ್ಷದ ಮುಖಂಡರಿಗೆ ರವಾನಿಸಲು ರೆಡ್ಡಿ ಸಹೋದರರು ನಿರ್ಧರಿಸಿದ್ದಾರೆ.ಸಂಪುಟದಲ್ಲಿ ಸ್ಥಾನ ಕೇಳುತ್ತಿರುವ ರೆಡ್ಡಿ ಸಹೋದರರನ್ನು ಸಮಾಧಾನಪಡಿಸುವುದು ಬಿಜೆಪಿಯ ಪಾಲಿಗೆ ಸವಾಲಿನ ಕೆಲಸ ಎಂದು ಮೂಲಗಳು ಹೇಳುತ್ತವೆ.ಅವರ ಬೇಡಿಕೆಗಳಿಗೆ ಮಣಿದರೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ. ಗಣಿ ಧಣಿಗಳ ಜೊತೆ ಸುಮಾರು 15 ಶಾಸಕರು ಇದ್ದಾರೆ ಎನ್ನಲಾಗಿದ್ದು, ಅವರ ಬೇಡಿಕೆಗಳಿಗೆ ಮಣಿಯದಿದ್ದರೆ ಸರ್ಕಾರವೇ ತೊಂದರೆಗೆ ಸಿಲುಕಿಕೊಳ್ಳಲಿದೆ.ಬಿಜೆಪಿಯಲ್ಲಿ ತಮ್ಮ ಕಾಲ ಮುಗಿದಿದೆ. ಈ ಹಿನ್ನೆಲೆಯಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದು ಒಳ್ಳೆಯದು ಎಂಬ ಯೋಚನೆಯೂ ಗಣಿ ಧಣಿಗಳ ಮನಸ್ಸಿನಲ್ಲಿದೆ ಎಂದು ಮೂಲಗಳು ತಿಳಿಸಿವೆ. ಶ್ರೀರಾಮುಲು ಅವರನ್ನು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುವಂತೆ ಮಾಡಿ ತಮ್ಮ ಪ್ರಭಾವ ಎಷ್ಟಿದೆ ಎಂಬುದನ್ನು ಪರೀಕ್ಷಿಸಲು ರೆಡ್ಡಿ ಸಹೋದರರು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.