ಶುಕ್ರವಾರ, ಮೇ 20, 2022
20 °C

ಮನಸ್ಸಿನ ಹತೋಟಿಯಿಂದ ಚಟದಿಂದ ದೂರ: ಅನಿಲ್ ಕುಂಬ್ಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಚಂಚಲವಾದ ಮನಸ್ಸನ್ನು ಹತೋಟಿಯಲ್ಲಿಡುವ ಮೂಲಕ ಮಾದಕ ವಸ್ತುಗಳ ಚಟದಿಂದ ದೂರವಿರಲು ಸಾಧ್ಯ~ ಎಂದು ಕರ್ನಾಟಕ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಅನಿಲ್ ಕುಂಬ್ಳೆ ಹೇಳಿದರು.ನಗರದಲ್ಲಿ ಮಂಗಳವಾರ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಆಯೋಜಿಸಿದ್ದ `ಮಾದಕ ವಸ್ತುಗಳ ಮಾಯೆ ಕುರಿತ ಅರಿವಿನ ಸಪ್ತಾಹ~ದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಮಾನವನ ಮನಸ್ಸು ಬೆಳಕಿಗಿಂತಲೂ ವೇಗವಾಗಿ ಚಲಿಸುವಂಥದ್ದು. ಅಂತಹ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡರೆ ಮಾದಕ ವಸ್ತುಗಳ ಚಟದಿಂದ ದೂರವಿರಬಹುದು. ಆದರೆ ಮನೋನಿಗ್ರಹಕ್ಕೆ ಬಹಳಷ್ಟು ತಾಳ್ಮೆ, ಪರಿಶ್ರಮದ ಅಗತ್ಯವಿದೆ. ಮಾದಕ ವಸ್ತಗಳ ಬಗೆಗಿನ ಕುತೂಹಲ ಹಾಗೂ ಒತ್ತಡಗಳ ನಡುವೆಯೂ ಸಂಯಮ ಸಾಧಿಸಬೇಕಾದ್ದು ಅಗತ್ಯ~ ಎಂದು ಅವರು ನುಡಿದರು.`ಯುವ ಶಕ್ತಿಯಿಂದ ಎಂತಹ ಸಾಧನೆಯಾದರೂ ಸಾಧ್ಯವಿದೆ. ಕ್ರಿಕೆಟ್ ಆಟಗಾರ ಸುನಿಲ್ ಜೋಷಿ ಇದಕ್ಕೆ ಉತ್ತಮ ಉದಾಹರಣೆ. ಛಲಬಿಡದ ಪರಿಶ್ರಮದಿಂದ ಅವರು ರಾಜ್ಯ ಹಾಗೂ ರಾಷ್ಟ್ರೀಯ ಕ್ರಿಕೆಟ್ ಆಟಗಾರರಾಗಿ ಬೆಳೆದರು.ಯುವ ಜನರಿಗೆ ಇಂತಹ ವ್ಯಕ್ತಿಗಳು ಸ್ಪೂರ್ತಿಯಾಗಬೇಕು. ಯುವ ಜನರು ಚಟಕ್ಕೆ ಮನಸ್ಸು ಕೊಡದೇ ಛಲದ ಕಡೆಗೆ ಗಮನ ಹರಿಸಿದರೆ ಅದು ದೇಶಕ್ಕೆ ದೊಡ್ಡ ಶಕ್ತಿಯಾಗಲಿದೆ. ಈ ಬಗ್ಗೆ ಯುವ ಜನರು ಆಲೋಚಿಸಬೇಕು~ ಎಂದು ಅವರು ಕರೆ ನೀಡಿದರು.ಮನೋವೈದ್ಯ ಡಾ.ಅ.ಶ್ರೀಧರ ಮಾತನಾಡಿ, `ಕುತೂಹಲ ಹಾಗೂ ಒತ್ತಡಗಳ ಕಾರಣಕ್ಕೆ ಯುವ ಜನರು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಾರೆ. ಪರೀಕ್ಷೆಗಳ ಒತ್ತಡದಿಂದ ಹೊರಬರಲು ವಿದ್ಯಾರ್ಥಿಗಳು ಮಾದಕ ವಸ್ತುಗಳ ಕಡೆಗೆ ಹೆಚ್ಚು ಆಸಕ್ತಿ ತೋರುತ್ತಾರೆ. ಗೆಳೆಯರ ಕೂಟಗಳಿಂದ ಅಂಟಿಕೊಳ್ಳುವ ಚಟಗಳ ಬಗ್ಗೆ ವಿದ್ಯಾರ್ಥಿಗಳು ಎಚ್ಚರದಿಂದಿರಬೇಕು~ ಎಂದರು.`ಮಾದಕ ವಸ್ತುಗಳ ಸೇವನೆಗೆ ಪ್ರೇರೇಪಿಸುವ ಗೆಳೆಯರು ವಾಸ್ತವವಾಗಿ ಶತ್ರುಗಳು ಎಂಬ ಸತ್ಯವನ್ನು ವಿದ್ಯಾರ್ಥಿಗಳು ಅರಿಯಬೇಕು. ಕಲಿಕೆಯಲ್ಲಿ ಶ್ರದ್ಧೆ, ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯವನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕು. ಮಾದಕ ವಸ್ತುಗಳ ಬಗ್ಗೆ ಅರಿವಿನ ಆಂದೋಲನ ಕೇವಲ ಸಪ್ತಾಹದ ಆಚರಣೆಗೆ ಸೀಮಿತವಾಗದೇ ಅದರ ಆಶಯ ಆಚರಣೆಗೆ ಬರಬೇಕು~ ಎಂದು ಅವರು ಆಶಿಸಿದರು.ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಮಾತನಾಡಿ, `ಮಾದಕ ವಸ್ತುಗಳ ಸೇವನೆಯ ಚಟ ರಕ್ತಬೀಜಾಸುರ ಇದ್ದಂತೆ. ಸಮಾಜಕ್ಕೆ ಮಾರಕವಾದ ಚಟಗಳನ್ನು ನಿವಾರಿಸಲು ಇಡೀ ಸಮಾಜವೇ ಪಣತೊಡಬೇಕು. ಕೊಕೇನ್, ಹೆರಾಯಿನ್, ಗಾಂಜಾಗಳಲ್ಲದೇ ಇನ್ನಿತರ ನೂರಾರು ಮಾರ್ಗಗಳ ಮೂಲಕ ಚಟಕ್ಕೆ ಜನರು ಬಲಿಯಾಗುತ್ತಿದ್ದಾರೆ. ಕಾನೂನಿನ ವ್ಯಾಪ್ತಿಗೆ ಬರದ ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸುವ ಜವಾಬ್ದಾರಿಯೂ ನಾಗರಿಕ ಸಮಾಜದ ಮೇಲಿದೆ~ ಎಂದರು.`ವಿದ್ಯಾಸಂಸ್ಥೆಗಳ ಸಮೀಪದಲ್ಲಿ ಮಾದಕ ವಸ್ತುಗಳ ಮಾರಾಟ ಮೊದಲು ನಿಲ್ಲಬೇಕು. ವಿದ್ಯಾಸಂಸ್ಥೆಗಳ ಸಮೀಪದಲ್ಲಿ ಮಾದಕ ವಸ್ತುಗಳ ಮಾರಾಟ ಕಂಡು ಬಂದರೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು~ ಎಂದು ಅವರು ತಿಳಿಸಿದರು.`ಪ್ರಜಾವಾಣಿ~ಯ ಸಹ ಸಂಪಾದಕ ಗೋಪಾಲಕೃಷ್ಣ ಹೆಗಡೆ ಮಾತನಾಡಿ, `ಕ್ರೀಡಾ ಕ್ಷೇತ್ರದಲ್ಲಿ ಆಟಗಾರರು ಪ್ರಶಸ್ತಿ ಹಾಗೂ ಪದಕಗಳ ಆಸೆಗಾಗಿ ಮಾದಕ ವಸ್ತುಗಳ ಸೇವನೆ ಮಾಡುತ್ತಾರೆ. ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ಯುವ ಜನರು ಚಟಗಳಿಂದ ದೂರವಿರಬೇಕು~ ಎಂದರು.ರಾಷ್ಟ್ರೀಯ ನರರೋಗ ನಿಯಂತ್ರಣ ಸಮಿತಿಯ ಪ್ರಾದೇಶಿಕ ನಿರ್ದೇಶಕ ಉಮಾಕಾಂತ್ ಮಿಶ್ರಾ ಮಾತನಾಡಿ, `ಇತ್ತೀಚೆಗೆ ಮಕ್ಕಳು ಹೆಚ್ಚು ಔಷಧಗಳನ್ನು ಸೇವಿಸುವುದೇ ಒಂದು ಚಟವಾಗಿ ಬೆಳೆಯುತ್ತಿದೆ. ಈ ಬಗ್ಗೆ ಮಕ್ಕಳ ಪೋಷಕರು ಎಚ್ಚರ ವಹಿಸಬೇಕು.

 

ಚಟಗಳಿಗೆ ಬಲಿಯಾಗುವ ಮಕ್ಕಳು ಕ್ರಮೇಣ ಜೀವನಾಸಕ್ತಿಯನ್ನೇ ಕಳೆದುಕೊಳ್ಳುತ್ತಾರೆ~ ಎಂದರು. ಸಮಾರಂಭದಲ್ಲಿ ಗಾಂಧಿ ಭವನದ ಮುಖ್ಯಸ್ಥ ಹೊ.ಶ್ರೀನಿವಾಸಯ್ಯ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.