ಶನಿವಾರ, ಫೆಬ್ರವರಿ 27, 2021
21 °C

ಮರಕ್ಕೆ ಸೀರೆ ರಕ್ಷೆ

ಸಂಧ್ಯಾ ಹೆಗಡೆ ಆಲ್ಮನೆ Updated:

ಅಕ್ಷರ ಗಾತ್ರ : | |

ಮರಕ್ಕೆ ಸೀರೆ ರಕ್ಷೆ

ಹಸಿರು ಸಾಲಿನ ನಡುವೆ ಕಾಂಕ್ರೀಟ್ ಹಾದಿಯಲ್ಲಿ ತಣ್ಣನೆ ಸೋಂಕುವ ಗಾಳಿಯಲ್ಲಿ ವಿಹರಿಸುತ್ತ ಸಾಗಿದರೆ ಧುತ್ತನೆ ಎದುರಾಗುತ್ತಾರೆ ವನಸ್ತ್ರೀಯರು. ಸೀರೆಯುಟ್ಟು, ರವಿಕೆ ತೊಟ್ಟು ಬಣ್ಣದ ಬಳೆಯ ಕಿಣಿ ಕಿಣಿ ಸದ್ದಿನೊಂದಿಗೆ ಹಸಿರ ನಗೆ ಬೀರುತ್ತಾರೆ.ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಅಂಡಗಿ ಬಳಿಯ ಕ್ಯಾದಗಿಕೊಪ್ಪ, ನಾಮಧಾರಿ ಸಮುದಾಯದ ಪವಿತ್ರ ಕ್ಷೇತ್ರ. ಇಲ್ಲೊಂದು ಮಠ ಇದೆ. ಈ ಗುರುಮಠಕ್ಕೆ ಭೇಟಿ ನೀಡುವ ಭಕ್ತರನ್ನು ಸ್ವಾಗತಿಸುವವರು ವನಸ್ತ್ರೀಯರು.

 

ಅವರೇ ಇಲ್ಲಿನ ದ್ವಾರ ಪಾಲಕಿಯರು. ಮಠದ ಆವರಣದಲ್ಲಿ ಗಾಳಿ ಬಂದಾಗೊಮ್ಮೆ ಬಳುಕುತ್ತ ನಿಂತ ಈ ಹಸಿರ ನೀರೆಯರು ನವೀನ ವಸ್ತ್ರ ತೊಟ್ಟು ಕಣ್ಸೆಳೆಯುತ್ತಾರೆ. ಪ್ರತೀ ಅಮಾವಾಸ್ಯೆಯಂದು ಇಲ್ಲಿ ಜನ ಜಾತ್ರೆ. ಬಂದವರೆಲ್ಲ ಹೊಸ ಬಟ್ಟೆ ತರುತ್ತಾರೆ, ವನಸ್ತ್ರೀಯರು ಅದನ್ನು ತೊಟ್ಟು ಮತ್ತೆ ಕಂಗೊಳಿಸುತ್ತಾರೆ.ತಾಲ್ಲೂಕು ಕೇಂದ್ರದಿಂದ 20 ಕಿಮೀ ದೂರದಲ್ಲಿರುವ ಗುರುಮಠ ಹಸಿರು ಪ್ರೀತಿ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ನಿರ್ದಿಷ್ಟ ವೃಕ್ಷಗಳಿಗೆ ಪೂಜೆ ಸಲ್ಲಿಸುವದು ಭಾರತೀಯ ಸಂಸ್ಕೃತಿಯಲ್ಲಿ ಸಾಮಾನ್ಯ. ಆದರೆ ಸಾಮೂಹಿಕವಾಗಿ ವೃಕ್ಷಗಳನ್ನು ಪೂಜಿಸುವ ಅಪರೂಪದ ಪದ್ಧತಿ ಇಲ್ಲಿದೆ. ಮಠದ ಸುತ್ತಲಿನ ಎಲ್ಲ ಮರಗಳಿಗೆ ಸೀರೆ- ರವಿಕೆ ತೊಡಿಸಿ ಪ್ರಕೃತಿ ಮಾತೆಯನ್ನು ಸಂರಕ್ಷಿಸಲಾಗಿದೆ.ಹೀಗೆ ವೃಕ್ಷ ರಕ್ಷಣೆಗೆ ಹೆಗಲುಕೊಟ್ಟು ಹಳ್ಳಿಗರಲ್ಲಿ ಹಸಿರಿನ ಹುಚ್ಚು ಹಚ್ಚಿಸಿದವರು ಒಬ್ಬ ಕಾವಿಧಾರಿ. ಅವರೇ ಶ್ರೀ ಸದ್ಗುರು ಅವಧೂತ ಕಲ್ಲೇಶ್ವರ ಸ್ವಾಮಿಗಳು. ದಶಕದ ಹಿಂದೆ ಅಂಡಗಿಗೆ ಬಂದು ನೆಲೆಯೂರಿ ನಿಂತಿದ್ದ ಸ್ವಾಮೀಜಿ ಕಾಡು, ಗಿಡಮರಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು.ಆಧ್ಯಾತ್ಮಿಕ ಸಾಧನೆಯ ಜತೆಜತೆಗೇ ಮರಗಿಡಗಳಲ್ಲಿ ದೈವತ್ವ ಕಂಡರು. ಭಕ್ತರು ದೇವರಿಗೆ ಅರ್ಪಿಸುವ ಸೀರೆ- ರವಿಕೆಗಳನ್ನು ಕಾಡಿನ ಮರಗಳಿಗೆ ತೊಡಿಸಿದರು. ಆ ಮೂಲಕ ಮಠದ ಭಕ್ತರಲ್ಲಿ ಪರಿಸರ ರಕ್ಷಣೆ ಅರಿವು ಮೂಡಿಸಿದರು.ಸ್ವಾಮೀಜಿ ಐಕ್ಯರಾಗಿ ಐದು ವರ್ಷ ಕಳೆದಿವೆ. ಆದರೆ ಅವರು ಹಾಕಿಕೊಟ್ಟ ವೃಕ್ಷ ಪೂಜೆ ಪರಂಪರೆ ಚಾಚೂ ತಪ್ಪದೆ ಮುಂದುವರಿದಿದೆ. ಪ್ರತೀ ಅಮಾವಾಸ್ಯೆಗೆ ಜಾತಿಭೇದವಿಲ್ಲದೆ ಸಹಸ್ರಾರು ಭಕ್ತರು ಗುರುಮಠಕ್ಕೆ ಬರುತ್ತಾರೆ.

 

ಭಕ್ತರು ಹರಕೆ ರೂಪದಲ್ಲಿ ಸಲ್ಲಿಸುವ ರವಿಕೆ ಬಟ್ಟೆ, ಸೀರೆ, ಗಾಜಿನ ಬಳೆಗಳನ್ನು ಮಠದ ಪ್ರಮುಖರು ಬ್ರಹ್ಮೈಕ್ಯ ಸ್ವಾಮೀಜಿಗಳ ಆಶಯದಂತೆ ಮರಗಳಿಗೆ ತೊಡಿಸಿ ಅವುಗಳಲ್ಲಿ ದೇವತೆಯನ್ನು ಕಾಣುತ್ತಾರೆ. ಹೀಗಾಗಿ ಇಲ್ಲಿರುವ ಮರಗಳು ಕೊಡಲಿ ಏಟಿನ ಭಯದಿಂದ ಮುಕ್ತವಾಗಿವೆ. ಕೊಡಲಿ ಹಿಡಿಯುವವರು ಸಹ ಸೀರೆ ಧರಿಸಿದ ವೃಕ್ಷಗಳಿಗೆ ಕೈ ಮುಗಿದು ಹೋಗುತ್ತಾರೆ.ಭಕ್ತರ ನೆರವಿನಿಂದ ನಾಮಧಾರಿ ಗುರುಮಠ ಅಭಿವೃದ್ಧಿ ಸಂಘ ಕಟ್ಟಡ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ. ಸ್ವಾಮೀಜಿ ಆಶಯದಂತೆ ಸುಂದರ ಶಿಲೆಯಲ್ಲಿ ಗುರುಮಠ ತಲೆ ಎತ್ತುತ್ತಿದೆ. ಮಠದ ಆವರಣದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಿಸಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಉದ್ದೇಶ ಹೊಂದಿದೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.