ಶನಿವಾರ, ಏಪ್ರಿಲ್ 10, 2021
32 °C

ಮರಣದಂಡನೆ ಮತ್ತು ಕ್ಷಮಾದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಷ್ಟೋ ಕೊಲೆಗಳನ್ನು ಮಾಡಿ, ಅಥವಾ ಮಾನವ ಹತ್ಯಾಕಾಂಡದ ಪ್ರಕರಣದ ವಿಚಾರಣೆ ನಡೆದು, ಅಪರಾಧಿ ಎಂದು ರುಜುವಾತಾದ ವ್ಯಕ್ತಿಗೆ, ಐ.ಪಿ.ಸಿ. ಕಲಂ 302ರ ಪ್ರಕಾರ ಮರಣದಂಡನೆ ವಿಧಿಸುವುದು ನ್ಯಾಯಾಂಗದ ಅಧಿಕಾರ. ಆದರೆ, ಅಂತಹ ಎಷ್ಟೋ ಅಪರಾಧಿಗಳಿಗೆ, ಅಥವಾ ಆಯ್ಕೆ ಮಾಡಲ್ಪಟ್ಟಂಥ ಕೆಲವು ಅಪರಾಧಿಗಳಿಗೆ, ಭಾರತ ಸಂವಿಧಾನದ 72ನೇ ಪರಿಚ್ಛೇದದ ಪ್ರಕಾರ ಕ್ಷಮಾದಾನ ನೀಡುವ ಅಧಿಕಾರವನ್ನು ಭಾರತದ ರಾಷ್ಟ್ರಪತಿಗಳಿಗೆ ನೀಡಲಾಗಿದೆ. ಅವರಿಗೆ ನೀಡಲಾಗಿರುವ ಈ ಅಧಿಕಾರ, ಭಾರತ ಸಂವಿಧಾನದತ್ತವಾದ ಅಧಿಕಾರವೇ ಆಗಿದ್ದು, ಅದು ಪ್ರಶ್ನಾತೀತ ಅಧಿಕಾರವೂ ಆಗಿದೆ.ಆದರೆ, ಮರಣದಂಡನೆಗೆ ಗುರಿಯಾದ ಅಪರಾಧಿಗಳಿಗೆ ಹಾಗೆ ಕ್ಷಮಾದಾನ ನೀಡುವ ಬಗೆಗೆ, ಈಗ ಸಾಕಷ್ಟು ಚರ್ಚೆ ಆರಂಭವಾಗಿದೆ. ಈ ವಿಷಯ ಈಗ ಸಾರ್ವಜನಿಕ ಚರ್ಚೆಗೆ ಒಳಗಾಗಿರುವುದು ಪ್ರಾಯಶಃ ಇದೇ ಮೊದಲ ಸಲವಿದ್ದೀತು. ಮರಣದಂಡನೆಗೆ ಗುರಿಯಾದ ಅಪರಾಧಿಗೆ ರಾಷ್ಟ್ರಪತಿಗಳು ಕ್ಷಮಾದಾನ ನೀಡುವುದು ಎಷ್ಟರ ಮಟ್ಟಿಗೆ ನ್ಯಾಯಸಮ್ಮತ ಎಂಬ ಪ್ರಶ್ನೆ ಮತ್ತು ಆ ಕುರಿತ ಚರ್ಚೆ ಸಾರ್ವಜನಿಕರಲ್ಲಿ ಈಗ ನಡೆಯುತ್ತಿದೆ. ಸರ್ವೋಚ್ಚ ನ್ಯಾಯಾಲಯದವರೆಗೂ ನಡೆದಿರಬಹುದಾದ ಆ ಕುರಿತ ವಿಚಾರಣೆಗಳ ಸಮಗ್ರ ದಾಖಲೆಗಳನ್ನೆಲ್ಲಾ ರಾಷ್ಟ್ರಪತಿಗಳು ಸಮಗ್ರವಾಗಿ ಅಧ್ಯಯನ ಮಾಡಿರಲು ಸಾಧ್ಯವೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಅಂತಹ ಕ್ಷಮಾದಾನದ ಪ್ರಕರಗಳ ಹಿಂದೆ, ರಾಜಕಾರಣಿಗಳ ಶಿಫಾರಸ್ಸಿನ ಷಡ್ಯಂತ್ರಗಳೇನೂ ನಡೆದಿರುವುದಿಲ್ಲವೆ ಎಂಬ ಪ್ರಶ್ನೆಯ ಬಗೆಗಂತೂ ತೀವ್ರವಾದ ಚರ್ಚೆಯೇ ನಡೆದಿಲ್ಲ.ಹಾಗಾಗಿ, ಮರಣದಂಡನೆಗೆ ಗುರಿಯಾದ ಅಪರಾಧಿಗೆ ರಾಷ್ಟ್ರಪತಿಗಳು ಕ್ಷಮಾದಾನ ನೀಡುವ ಭಾರತ ಸಂವಿಧಾನದ ಪ್ರಾವದಾನಗಳಿಗೆ, ಏನಿಲ್ಲವೆಂದರೂ, ರಾಷ್ಟ್ರಪತಿಗಳ ಸ್ಥಾನದ ಘನತೆಯನ್ನು ಸಂರಕ್ಷಿಸುವ ದೃಷ್ಟಿಯಲ್ಲಾದರೂ ಸೂಕ್ತ ಮತ್ತು ಅರ್ಥಪೂರ್ಣವಾದ ತಿದ್ದುಪಡಿ ಅಗತ್ಯವೆ? ಅಥವಾ ಅದರ ಅಗತ್ಯ ಇಲ್ಲವೆ? ಎಂಬ ಬಗೆಗೆ, ದೇಶಾದ್ಯಂತ ಪ್ರಜ್ಞಾವಂತರು ಚರ್ಚೆಯಲ್ಲಿ ತೊಡಗಿ, ಆ ಬಗ್ಗೆ ಸೂಕ್ತವೂ ಅಂತಿಮವೂ ಆದಂತಹ ತೀರ್ಮಾನ ತಲುಪುವ ಔಚಿತ್ಯವಿದೆ ಎಂದೆನಿಸುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.