ಗುರುವಾರ , ಜೂಲೈ 9, 2020
28 °C

ಮರದ ಮೇಲೆ ಮಂಗಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರದ ಮೇಲೆ ಮಂಗಟ್ಟೆ

ಕಾಡಿನ ದಾರಿಯ ಹೆಜ್ಜೆ ಅಳಿಸಿಹೋಗುವ ಮುನ್ನ ಆ ಹಕ್ಕಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಬೇಕೆನ್ನುವ ಕನಸು ನನ್ನದಾಗಿತ್ತು. ವರ್ಷಗಳಿಂದ ಹುಡುಕುತ್ತಿದ್ದ ಚಿತ್ರಗಳು ದಾಂಡೇಲಿಯ ದಟ್ಟ ಅರಣ್ಯದಲ್ಲಿ ಕಣ್ಣಿಗೆ ಬಿದಿದ್ದೇ ತಡ, ಫೋಟೋ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು.  ನನ್ನ ಕ್ಯಾಮೆರಾದ ಮೆಮೋರಿ ಕಾರ್ಡ್ ಖಾಲಿಯಾಗಿದ್ದೇ ಗೊತ್ತಾಗಲಿಲ್ಲ. ಅಷ್ಟೆಲ್ಲ ಆಸಕ್ತಿಯಿಂದ ತೆಗೆದ ಫೋಟೋ ಹಾರ್ನ್‌ಬಿಲ್ (ಮಂಗಟ್ಟೆ) ಪಕ್ಷಿಯದು.ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿಯೇ ವಿಶಿಷ್ಟವಾದ ಈ ದಾಂಡೇಲಿ ಅಭಯಾರಣ್ಯ ಪ್ರದೇಶ, ಎಲೆಯುದುರಿಸುವ ತೇವಾಂಶದ ಅರೆ ಹರಿದ್ವರ್ಣ ಸಸ್ಯ ವರ್ಗಗಳಿಂದ ಶ್ರೀಮಂತವಾದುದು. ಭಾರತದಲ್ಲಿ ಅಪರೂಪವಾದ  ಹಾರ್ನ್‌ಬಿಲ್‌ಗಳ ಒಂಬತ್ತು ಜಾತಿಗಳಿದ್ದು, ಪೂರ್ವಾಂಚಲದಲ್ಲಿ ಐದು ಹಾಗೂ ಪಶ್ಚಿಮ ಘಟ್ಟದ ಕಾಡುಗಳಲ್ಲಿ ನಾಲ್ಕು ರೀತಿಯ ಹಾರ್ನ್‌ಬಿಲ್ ಕಂಡು ಬರುತ್ತವೆ. ದಾಂಡೇಲಿಯ ಕಾಡಿನಲ್ಲಿ ಮಲಬಾರ್ ಗ್ರೇ, ಗ್ರೇಟ್ ಪೈಡ್, ಕಾಮನ್ ಗ್ರೇ, ಮಲಬಾರ್ ಪೈಡ್ ಹಾರ್ನ್‌ಬಿಲ್ ಸೇರಿ ಸುಮಾರು ಒಂದುನೂರು ಹಕ್ಕಿಗಳು ಕಂಡು ಬರುತ್ತವೆ.ಈ ಪಕ್ಷಿಗಳು ನೋಡುವುದಕ್ಕೆ ಮಾಮೂಲಿ ಹದ್ದಿಗಿಂತ ದೊಡ್ಡವು, ರಣಹದ್ದಿಗಿಂತ ಚಿಕ್ಕದಾಗಿರುತ್ತವೆ. ಇವುಗಳ ತಲೆ, ಕೊಕ್ಕು, ಕತ್ತು ಹಳದಿಯಿಂದ ಕೂಡಿರುತ್ತದೆ. ಕಣ್ಣಿನ ಭಾಗದಲ್ಲಿ ಅಗಲವಾದ ಕಪ್ಪು ಅಡ್ಡ ಪಟ್ಟಿ ಕಂಡುಬರುತ್ತದೆ.ನೆತ್ತಿಯಿಂದ ಕೊಕ್ಕಿನ ಮಧ್ಯದವರೆಗೆ ಹಳದಿ ಟೋಪಿ ಇರುತ್ತದೆ. ಕತ್ತಿನ ತಳಭಾಗದ ದೇಹ ಹಾಗೂ ರೆಕ್ಕೆ ಕಪ್ಪಿನಿಂದ ಕೂಡಿದ್ದು, ಹೊಟ್ಟೆ ಹಾಗೂ ಬಾಲ ಬಿಳಿ ಬಣ್ಣದಿಂದ ಕೂಡಿರುತ್ತದೆ. ಬಾಲದ ಮೇಲೆ ಅಗಲವಾದ ಕಪ್ಪು ಪಟ್ಟಿ ಮತ್ತು ಕಪ್ಪು ರೆಕ್ಕೆಯ ಮೇಲೆ ಬಿಳಿ ಪಟ್ಟಿ ಕಂಡು ಬರುತ್ತದೆ. ಇವುಗಳು ಎರಡು ಮರಿಗಳಿಗೆ ಜನ್ಮ ನೀಡುತ್ತವೆ. ಹುಳು ಹುಪ್ಪಟ್ಟೆಗಳನ್ನು ತಿಂದರೂ, ಕಾಡಿನಲ್ಲಿ ಸಿಗುವ ಹತ್ತಿಮರ, ಕಸರಕ, ಕಾಡು ಬೇಲಿ, ಬೈನೆಮರದ ಹಣ್ಣೆಂದರೆ ಇವುಗಳಿಗೆ ಬಹಳ ಇಷ್ಟ.ವರ್ಷ ಪೂರ್ತಿ ಹಣ್ಣು ಸಿಗುವ ಕಾಡುಗಳಲ್ಲಿ ಇವುಗಳ ಬಿಡಾರ. ‘ಹಾರ್ನ್‌ಬಿಲ್ ಎಲ್ಲಿ ಕಂಡುಬರುತ್ತದೆಯೋ ಆ ಕಾಡು ಜೀವವೈವಿಧ್ಯದಲ್ಲಿ ಶ್ರೀಮಂತವಾಗಿದೆ ಎಂದೇ ಅರ್ಥ’ ಎನ್ನುವುದು ಅರಣ್ಯಾಧಿಕಾರಿ ಕುಮಾರಸ್ವಾಮಿ ಅವರ ಅನಿಸಿಕೆ.ಮಂಗಟ್ಟೆಗಳ ಪ್ರೇಮಾಯಣ

ಹಾರ್ನ್‌ಬಿಲ್‌ಗಳ ಪ್ರೇಮ ಪ್ರಸಂಗ ಕುತೂಹಲಕರ. ‘ಒಮ್ಮೆ ಗಂಡು ಹಾರ್ನ್‌ಬಿಲ್ ತನಗೆ ಇಷ್ಟವಾದ ಹೆಣ್ಣನ್ನು ಬಯಸಿದರೆ ಮುಗಿಯಿತು. ಅಂದೇ ಅವುಗಳು ಸತಿ-ಪತಿಯರು; ಜೀವನದ ಕೊನೆತನಕ ಒಟ್ಟಿಗೆ ಇರುತ್ತವೆ! ಜೋಡಿಯಲ್ಲಿ ಯಾವುದಾದರೂ ಒಂದು ಸತ್ತುಹೋದರೆ ಸಂಗಾತಿಯ ಕೊರಗಿನಲ್ಲಿ ಮತ್ತೊಂದು ಸಹ ಸಾಯುತ್ತದೆ’ ಎನ್ನುತ್ತಾರೆ ಉಪ ಅರಣ್ಯ ಅಧಿಕಾರಿ ಮನೋಜ್‌ಕುಮಾರ್.ದಟ್ಟ ಬೇಸಿಗೆಯಲ್ಲಿ ಕಾಡೆಲ್ಲ ಬರಿದಾಗಿರುವ ಸಮಯದಲ್ಲಿ ಈ ಪಕ್ಷಿ ಸಂತಾನೋತ್ಪತ್ತಿ ಮಾಡುತ್ತದೆ. ಮರಿ ಹಾಕಲು ಇನ್ನೂ 30-40 ದಿನಗಳಿವೆ ಎನ್ನುವಾಗ ಮರದಲ್ಲಿ ದೊಡ್ಡ ಪೊಟರೆ ಮಾಡುತ್ತದೆ. ಕಸ, ಮಣ್ಣನ್ನು ತಂದು ಗೂಡಿನ ರಚನೆಯಲ್ಲಿ ತನ್ನ ಕೊಕ್ಕು ಮಾತ್ರ ಹೊರಬರುವಂತೆ ಮಾಡಿ ಉಳಿದ ಭಾಗವನ್ನು ಮುಚ್ಚಿ ಬಿಡುತ್ತದೆ. ಹೆಣ್ಣು ಹಾರ್ನ್‌ಬಿಲ್ ಗೂಡಿನ ಒಳಗೆ ಮರಿಗಳಿಗೆ ಮೆತ್ತಗಿರಲು ತನ್ನ ಗರಿಗಳನ್ನು ಉದುರಿಸಿ ಹಾಸಿಗೆ ಸಿದ್ಧಪಡಿಸಿ, ಮೊಟ್ಟೆ ಹಾಕುತ್ತದೆ. ಈ ಹೆಣ್ಣಿಗೆ ಹೊರ ಜಗತ್ತಿನ ಜಂಜಾಟವೇ ಇರುವುದಿಲ್ಲ. ಹೆಂಡತಿ ಮಕ್ಕಳಿಗಾಗಿ ಗಂು ಪಕ್ಷಿಯು ಆಹಾರ ಹುಡುಕಿಕೊಂಡು ದಾಂಡೇಲಿಯಿಂದ ಹೊನ್ನಾವರದ ತನಕ ಹಾರಿಹೋಗಿ ನೀರಿನಂಶವಿರುವ  ಹಣ್ಣುಗಳನ್ನು ತಂದು ಉಣಿಸುತ್ತದೆ.ಒಲೆಗೆ ಉರುವಲು ಕಟ್ಟಿಗೆ ಕಡಿಯುವುದರಿಂದ ಇವುಗಳಿಗೆ ಆಹಾರದ ಕೊರತೆ ಉಂಟಾಗುತ್ತದೆ. ಆಹಾರವನ್ನು ಹುಡುಕಿಕೊಂಡು ಹೊರಟ ಗಂಡು ಹಕ್ಕಿಗೆ ಬೇಟೆಗಾರರ ವಕ್ರ ದೃಷ್ಟಿ ಬಿದ್ದರೆ ಮುಗಿಯಿತು. ತಾಯಿ - ಮರಿಗಳು ಪೊಟರೆಯಿಂದ ಹೊರ ಬರಲಾಗದೇ, ಆಹಾರವಿಲ್ಲದೇ ಗೂಡಿನಲ್ಲಿಯೇ ಸತ್ತು ಹೋಗುತ್ತವೆ. ತಾಯಿ ಹಾರ್ನ್‌ಬಿಲ್ ಕಷ್ಟಪಟ್ಟು ಹೊರಬಂದರೂ ಪ್ರಯೋಜವಾಗುವುದಿಲ್ಲ. ಏಕೆಂದರೆ ತನ್ನ ಗರಿಗಳನ್ನೆಲ್ಲ ಮರಿಗಳ ಹಾಸಿಗೆಗೆ ಹೊಂದಿಸಿರುವ ಅದಕ್ಕೆ ಹಾರಲು ಆಗದು. ಹೀಗೆ ಅದರ ಸಾವು ಸಂಭವಿಸುತ್ತದೆ. ಅಸಹಜ ಸಾವು ಉಂಟಾಗದಿದ್ದಲ್ಲಿ ಈ ಪಕ್ಷಿಗಳು ಸುಮಾರು 35 ವರ್ಷ ಬದುಕಬಲ್ಲವು.‘ಪ್ರವಾಸಿಗರು ಹಾಗೂ ಪಕ್ಷಿ ಪ್ರಿಯರಿಗಾಗಿ ದಾಂಡೇಲಿಯಲ್ಲಿ ಅರಣ್ಯ ಇಲಾಖೆಯಿಂದ 3 ಕಿ.ಮೀ. ವ್ಯಾಪ್ತಿಯವರೆಗೆ ಹಾರ್ನ್‌ಬಿಲ್ ಕಾಲುದಾರಿಯಿದೆ. ಈ ಅಪರೂಪದ ಪಕ್ಷಿಗಳನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದು’ ಎನ್ನುತ್ತಾರೆ ಉಪ ಅರಣ್ಯ ಅಧಿಕಾರಿ ಸುನೀಲ್ ಪವಾರ್. ಹೌದಲ್ಲವೇ, ಈ ಜಗತ್ತು ಹಾರ್ನ್ ಬಿಲ್‌ಗಳಿಗೂ ಸೇರಿದ್ದು!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.