ಭಾನುವಾರ, ಏಪ್ರಿಲ್ 18, 2021
33 °C

ಮಳೆಗಾಲ ಎದುರಿಸಲು ಪಾಲಿಕೆ ಸನ್ನದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಮಳೆಗಾಲ ಸನ್ನಿಹಿತವಾಗಿದ್ದು ಸಂಭಾವ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅವಳಿನಗರದಲ್ಲಿ ಪಾಲಿಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ’ ಎಂದು ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮಳೆಗಾಲದ ಪರಿಸ್ಥಿತಿಯನ್ನು ನಿಭಾಯಿಸಲು ಪಾಲಿಕೆ ಕೈಗೊಂಡ ಕ್ರಮಗಳ ಮಾಹಿತಿ ಒದಗಿಸಿದರು. ‘ನಾಲಾಗಳ ಹೂಳನ್ನು ಮೇಲೆತ್ತಲಾಗುತ್ತಿದ್ದು, ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಇದರಿಂದ ಮಳೆ ನೀರಿನ ಹರಿವು ಸರಾಗವಾಗಿ ಅನಾಹುತಗಳು ತಪ್ಪಲಿವೆ’ ಎಂದು ಹೇಳಿದರು.‘ಅವಳಿನಗರದ ಚರಂಡಿ ವ್ಯವಸ್ಥೆ ತುಂಬಾ ಹಳೆಯದಾಗಿದ್ದರಿಂದ ಮಳೆಗಾಲದಲ್ಲಿ ಚರಂಡಿಗಳು ತುಂಬಿ ನೀರು ಹರಿಯುತ್ತದೆ. ತಗ್ಗು ಪ್ರದೇಶಗಳಲ್ಲಿ ಇದರಿಂದ ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದಲೇ ಮಳೆ ಆರಂಭವಾಗುವ ಮುನ್ನವೇ ಪಾಲಿಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದರು. ‘ಅವಳಿನಗರದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ಗುರುತಿಸುವ ಕಾರ್ಯ ನಡೆದಿದ್ದು, ಅರಣ್ಯ ಇಲಾಖೆಯ ಒಪ್ಪಿಗೆ ಪಡೆದು ಅವುಗಳನ್ನು ಕತ್ತರಿಸಲಾಗುತ್ತದೆ. ವಿದ್ಯುತ್ ತಂತಿಗಳಿಗೆ ತೊಂದರೆ ಕೊಡುವ ಟೊಂಗೆಗಳನ್ನು ತೆಗೆದು ಹಾಕಲಾಗುತ್ತದೆ’ ಎಂದು ಅವರು ತಿಳಿಸಿದರು.‘ಜನ್ನತನಗರ, ಲಕ್ಷ್ಮಿಸಿಂಗನಕೆರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆ ಸಂಪೂರ್ಣ ಮುಗ್ಗರಿಸಿದ್ದು, ನೀರಿನ ಹರಿವಿಗಾಗಿ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗುತ್ತಿದೆ. ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಮರ ಕತ್ತರಿಸುವ ಯಂತ್ರ ಸೇರಿದಂತೆ ಎಲ್ಲ ಬಗೆಯ ಉಪಕರಣಗಳನ್ನು ಹೊಂದಿದ ವಾಹನಗಳನ್ನು ಪ್ರತಿ ವಲಯ ಕಚೇರಿಯಲ್ಲೂ ಸನ್ನದ್ಧಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.‘ಕೆಲವು ಕಡೆಗಳಲ್ಲಿ ಚರಂಡಿ ಮೇಲೆ ಸ್ಲ್ಯಾಬ್ ಹಾಕಿ ಅತಿಕ್ರಮಣ ಮಾಡಿಕೊಂಡು ಕಟ್ಟಡ ನಿರ್ಮಿಸಲಾಗಿದೆ. ಅಂತಹ ಅತಿಕ್ರಮಣಗಳನ್ನು ತೆರವುಗೊಳಿಸಿ, ಸ್ಲ್ಯಾಬ್‌ಗಳನ್ನು ಒಡೆದು ಹಾಕಲಾಗುವುದು. ಇದರಿಂದ ನಾಲಾ ಸ್ವಚ್ಛಗೊಳಿಸಲು ಅನುಕೂಲವಾಗುತ್ತದೆ’ ಎಂದ ಅವರು, ‘ಸಾಂಕ್ರಾಮಿಕ ರೋಗ ಹರಡದಂತೆ ಸ್ಪ್ರೇಯಿಂಗ್ ಹಾಗೂ ಫಾಗಿಂಗ್ ಮಾಡುವ ಕಾರ್ಯ ನಡೆದಿದೆ. ಮಳೆಗಾಲದ ಅವಧಿಯಲ್ಲಿ ಈ ಕಾರ್ಯವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು’ ಎಂದು ಹೇಳಿದರು.‘ಎಲ್ಲ ವಾರ್ಡ್‌ಗಳಲ್ಲಿ ಸಮಾನವಾಗಿ ಗಮನಹರಿಸಿ ತುರ್ತು ಕಾಮಗಾರಿ ನಡೆಸಲಾಗುವುದು. ಸಮಸ್ಯೆ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಲಾಗುವುದು. ಆರೋಗ್ಯ ಸಂಬಂಧಿ ಸಾಮಗ್ರಿಗಳ ದಾಸ್ತಾನು ಮಾಡಿಕೊಳ್ಳಲಾಗಿದ್ದು ಯಾವುದೇ ಪರಿಸ್ಥಿತಿ ಎದುರಿಸಲು ಪಾಲಿಕೆ ಸಿದ್ಧವಾಗಿದೆ’ ಎಂದರು. ‘ತುರ್ತು ಸಂದರ್ಭಗಳು ಒದಗಿದಲ್ಲಿ ಟಾರ್ಚ್‌ಲೈಟ್‌ಗಳು, ಜನರೇಟರ್ ಸೌಲಭ್ಯ ಹೊಂದಿದ ಮೊಬೈಲ್ ಲೈಟ್‌ಗಳು ಹಾಗೂ ತಕ್ಷಣಕ್ಕೆ ಬೇಕಾದ ಸಾಮಗ್ರಿಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಅವರು, ‘ದುರ್ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಪಾಲಿಕೆಯ ಮೊದಲ ಆದ್ಯತೆಯಾಗಿದೆ’ ಎಂದು ತಿಳಿಸಿದರು.‘ಯಾವುದೇ ವಾರ್ಡ್‌ನಲ್ಲಿ ಮಳೆಯಿಂದ ಅನಾಹುತ ಸಂಭವಿಸಿದರೆ ತಕ್ಷಣ ಪಾಲಿಕೆ ಸಹಾಯವಾಣಿಗೆ ಸಂಪರ್ಕಿಸಿ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದ ಅವರು, ‘ಇದರಿಂದ ಸಾರ್ವಜನಿಕರ ನೆರವಿಗೆ ತಕ್ಷಣ ಧಾವಿಸಲು ಪಾಲಿಕೆಗೆ ಸಾಧ್ಯವಾಗುತ್ತದೆ. ದಿನದ 24 ಗಂಟೆ ಕಾಲ ಸಹಾಯವಾಣಿ ಕೆಲಸ ಮಾಡುತ್ತದೆ’ ಎಂದು ಹೇಳಿದರು.‘ಅತಿಕ್ರಮಣ ವಿರುದ್ಧ ಕ್ರಮ’

ಹುಬ್ಬಳ್ಳಿ: ‘ನಗರದ ಉಣಕಲ್ ಕ್ರಾಸ್ ಬಳಿ ಖಾಸಗಿ ಮೋಟರ್ಸ್‌ ಸಂಸ್ಥೆಯೊಂದು ತನ್ನ ಕಟ್ಟಡ ನಿರ್ಮಾಣ ಮಾಡುವಾಗ ರಾಜ ಕಾಲುವೆಯನ್ನು ಅತಿಕ್ರಮಿಸಿದ ಬಗ್ಗೆ ದೂರುಗಳಿದ್ದು, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ತಿಳಿಸಿದ್ದಾರೆ. ‘ಈ ಸಂಸ್ಥೆಯ ವರ್ಕ್‌ಶಾಪ್‌ನಿಂದ ಶಬ್ದ ಮಾಲಿನ್ಯ ಆಗುತ್ತಿದೆ’ ಎಂಬ ದೂರೂ ಬಂದಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಾರದಲ್ಲಿ ನಿರಪೇಕ್ಷಣಾ ಪತ್ರ ತರುವಂತೆ ಮಾಲೀಕರಿಗೆ ಸೂಚಿಸಲಾಗಿದೆ.ಆ ಪತ್ರವನ್ನು ತರಲು ಸಂಸ್ಥೆ ವಿಫಲವಾದರೆ ಲೈಸನ್ಸ್ ರದ್ದುಗೊಳಿಸಲಾಗುವುದು. ಆಗ ಸಂಸ್ಥೆ ವಹಿವಾಟು ನಡೆಸುವಂತಿಲ್ಲ’ ಎಂದು ಅವರು ಹೇಳಿದರು. ‘ರಾಜಕಾಲುವೆಯನ್ನು ಬೇರೆಡೆ ತೋರಿಸಿ ಕಟ್ಟಡ ಕಟ್ಟಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆದಿದ್ದು, ಅತಿಕ್ರಮಣವಾಗಿದ್ದು ದೃಢಪಟ್ಟರೆ ಕಟ್ಟಡವನ್ನು ಒಡೆದು ಹಾಕಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.