ಶನಿವಾರ, ಮೇ 15, 2021
24 °C
ಪೂರ್ಣ ಸರ್ಕಾರಿ ಒಡೆತನದ ಬ್ಯಾಂಕ್

ಮಹಿಳಾ ಬ್ಯಾಂಕ್ ನವೆಂಬರ್‌ಗೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳಾ ಬ್ಯಾಂಕ್ ನವೆಂಬರ್‌ಗೆ ಆರಂಭ

ನವದೆಹಲಿ(ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಮುಂಗಡಪತ್ರದಲ್ಲಿ ಪ್ರಸ್ತಾಪಿಸಿದಂತೆ ದೇಶದ ಮೊಟ್ಟ ಮೊದಲ ಸಮಗ್ರ ಸ್ವರೂಪದ `ಮಹಿಳಾ ಬ್ಯಾಂಕ್' ಮುಂದಿನ ನವೆಂಬರ್‌ನಲ್ಲಿ ಸ್ಥಾಪನೆ ಆಗಲಿದೆ. ಮಹಿಳಾ ಬ್ಯಾಂಕ್ ಆರಂಭಕ್ಕಾಗಿ ಕೇಂದ್ರ ಹಣಕಾಸು ಸಚಿವಾಲಯ `ಭಾರತೀಯ ರಿಸರ್ವ್ ಬ್ಯಾಂಕ್'(ಆರ್‌ಬಿಐ)ಗೆ ಪ್ರಸ್ತಾವನೆ ಸಲ್ಲಿಸಿದೆ.`ಸಮಗ್ರ ಸ್ವರೂಪದ ಮಹಿಳಾ ಬ್ಯಾಂಕ್'ನ ನೀಲನಕ್ಷೆ ಸಿದ್ಧಪಡಿಸಲು ರಚಿಸಲಾಗಿದ್ದ ಸಮಿತಿ ಅಂತಿಮ ವರದಿಯನ್ನು ಹಣಕಾಸು ಸಚಿವಾಲಯಕ್ಕೆ ಸಲ್ಲಿಸಿದೆ. ಬ್ಯಾಂಕ್ ಆರಂಭಕ್ಕೆ ಅಗತ್ಯ ಅನುಮತಿ ಕೋರಿ ಆರ್‌ಬಿಐಗೆ ಪ್ರಸ್ತಾವನೆಯನ್ನು ಕಳುಹಿಸಿಕೊಡಲಾಗಿದೆ' ಎಂದು ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಟಕ್ರು ಸುದ್ದಿಸಂಸ್ಥೆಗೆ ಭಾನುವಾರ ತಿಳಿಸಿದ್ದಾರೆ.ಸಂಪೂರ್ಣ ಕೇಂದ್ರ ಸರ್ಕಾರದ ಷೇರು (ಅಂದಾಜು ರೂ1,000 ಕೋಟಿ) ಬಂಡವಾಳದಿಂದಲೇ ಆರಂಭಗೊಳ್ಳಲಿರುವ `ಮಹಿಳಾ ಬ್ಯಾಂಕ್', ಮೊದಲ ಹಂತದಲ್ಲಿ ಆರು ಶಾಖೆಗಳೊಂದಿಗೆ ವಹಿವಾಟು ನಡೆಸಲಿದೆ. ದೇಶದ ಕೇಂದ್ರ ಭಾಗ, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಭಾಗದಲ್ಲಿ ಹಾಗೂ ಈಶಾನ್ಯ ರಾಜ್ಯವೊಂದರಲ್ಲಿ ತಲಾ ಒಂದು ಶಾಖೆ ಆರಂಭಿಸಲಾಗುವುದು. ಬ್ಯಾಂಕ್ ಉದ್ಘಾಟನೆ ನವೆಂಬರ್‌ನಲ್ಲಿ ನಡೆಯಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ಉದ್ದೇಶಿತ ಮಹಿಳಾ ಬ್ಯಾಂಕ್ ಪ್ರಮುಖವಾಗಿ ಮಹಿಳಾ ವಾಣಿಜ್ಯೋದ್ಯಮಿಗಳಿಗೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ, ಮಹಿಳೆಯರಿಗೆ ಸಾಲ ವಿತರಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.